ಹೊರ ಬರುತ್ತಲೇ ಇವೆ ಮಣಿಪುರ ಹಿಂಸಾಚಾರ, ಕಿರುಕುಳದ ಕರಾಳ ಘಟನೆಗಳು!
ಇಂಫಾಲ, ಜುಲೈ. 25: ಜನಾಂಗೀಯ ಹಿಂಸಾಚಾರ ಪೀಡಿತ ಮಣಿಪುರದಲ್ಲಿ ಬಗೆದಷ್ಟು ಹಿಂಸಾಚಾರ, ಕಿರುಕುಳದ ಘಟನೆಗಳು ಹೊರ ಬರುತ್ತಲೇ ಇವೆ. ಇದರ ಸಾಲಿಗೆ ಮಹಿಳೆಯೊಬ್ಬರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದ ಆರೋಪದಲ್ಲಿಗ ಡಿ ಭದ್ರತಾ ಪಡೆ (ಬಿಎಸ್‌ಎಫ್) ಯೋಧನನ್ನು ಅಮಾನತು ಮಾಡಲಾಗಿದೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ. ಮಹಿಳೆಗೆ ಕಿರುಕುಳ ನೀಡುತ್ತಿರುವ ಘಟನೆ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಇಂಫಾಲ್ ಪಶ್ಚಿಮ ಜಿಲ್ಲೆಯ ಕಿರಾಣಿ ಅಂಗಡಿಯಲ್ಲಿ ಕಳೆದ ವಾರ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ. ಆನ್‌ಲೈನ್‌ನಲ್ಲಿ ವೈರಲ್ ಆಗಿರುವ, ಆಪಾದಿತ ಕಿರುಕುಳದ ವಿಡಿಯೋದಲ್ಲಿ ಹೆಡ್ ಕಾನ್‌ಸ್ಟೆಬಲ್ ಸತೀಶ್ ಪ್ರಸಾದ್ ಸಮವಸ್ತ್ರದಲ್ಲಿ ಮತ್ತು INSAS ರೈಫಲ್ ಅನ್ನು ಹೊತ್ತುಕೊಂಡು ಮಹಿಳೆಯ ಮೇಲೆ ದೌರ್ಜನ್ಯ ಮಾಡುತ್ತಿರುವುದು ಕಂಡು ಬಂದಿದೆ.

"ಇಂಫಾಲ್‌ನಲ್ಲಿ ಜುಲೈ 20 ರಂದು ಪೆಟ್ರೋಲ್ ಪಂಪ್ ಬಳಿಯ ಅಂಗಡಿಯಲ್ಲಿ ಈ ಘಟನೆ ನಡೆದಿದೆ. ಆರೋಪಿಯನ್ನು ಹೆಡ್ ಕಾನ್‌ಸ್ಟೆಬಲ್ ಸತೀಶ್ ಪ್ರಸಾದ್ ಎಂದು ಗುರುತಿಸಲಾಗಿದೆ. ಅವರನ್ನು ಅಮಾನತುಗೊಳಿಸಲಾಗಿದೆ ಮತ್ತು ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ" ಎಂದು ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ತಿಳಿಸಿದ್ದಾರೆ.
ಅಧಿಕಾರಿಯ ಪ್ರಕಾರ, ಬಿಎಸ್ಎಫ್ ದೂರು ಸ್ವೀಕರಿಸಿದ ನಂತರ ಆರೋಪಿಗಳ ವಿರುದ್ಧ ಆಂತರಿಕ ತನಿಖೆಯನ್ನು ಪ್ರಾರಂಭಿಸಿದೆ. "ಅವರನ್ನು ನಿಕಟ ಬಂಧನದಲ್ಲಿ ಇರಿಸಲಾಗಿದೆ ಮತ್ತು ಅವರ ವಿರುದ್ಧ ಇಲಾಖಾ ಪ್ರಕ್ರಿಯೆಗಳನ್ನು ಪ್ರಾರಂಭಿಸಲಾಗಿದೆ" ಎಂದು ಅಧಿಕಾರಿ ಹೇಳಿದ್ದಾರೆ.
ಕಳೆದ ವಾರ, ಸಾಮೂಹಿಕ ಅತ್ಯಾಚಾರ ಮಾಡಲಾಗಿದೆ ಎಂದು ಆರೋಪಿಸಲಾಗಿರುವ ಇಬ್ಬರು ಮಹಿಳೆಯರನ್ನು ರಾಜ್ಯದ ಥೌಬಲ್ ಜಿಲ್ಲೆಯಲ್ಲಿ ಬೆತ್ತಲೆಯಾಗಿ ಮೆರವಣಿಗೆ ಮಾಡಿದ ವಿಡಿಯೋ ವೈರಲ್ ಆಗಿ, ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು. ಪ್ರಕರಣದಲ್ಲಿ ಇದುವರೆಗೆ ಏಳು ಮಂದಿಯನ್ನು ಬಂಧಿಸಲಾಗಿದ್ದು, ಅವರಲ್ಲಿ ಒಬ್ಬರು ಬಾಲಾಪರಾಧಿಯಾಗಿದ್ದಾರೆ.

ಪ್ರಕರಣದಲ್ಲಿ ಭಾಗಿಯಾಗಿರುವ ಶಂಕಿತರ ಅಡಗುತಾಣಗಳ ಮೇಲೆ ದಾಳಿ ಮಾಡುವ ಮೂಲಕ ಉಳಿದ ಆರೋಪಿಗಳನ್ನು ಬಂಧಿಸಲು ರಾಜ್ಯ ಪೊಲೀಸರು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದ್ದಾರೆ ಎಂದು ತನಿಖೆಯ ಉಸ್ತುವಾರಿ ವಹಿಸಿರುವ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇತ್ತ, ಲೈಂಗಿಕ ದೌರ್ಜನ್ಯದ ಪ್ರಕರಣಗಳ ಕುರಿತು ಹಲವಾರು ಶೂನ್ಯ ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ. ಆದರೆ ಸಂತ್ರಸ್ತರು ಇನ್ನೂ ತನಿಖೆಗೆ ಸೇರದ ಕಾರಣ ತನಿಖೆಯಲ್ಲಿ ಯಾವುದೇ ಪ್ರಗತಿ ಕಂಡುಬಂದಿಲ್ಲ ಎಂದು ಮಣಿಪುರ ಪೊಲೀಸರು ಹೇಳಿದ್ದಾರೆ.
ಸುಳ್ಳು ಸುದ್ದಿ ಹಬ್ಬಿಸುವವರ ವಿರುದ್ಧವೂ ಕ್ರಮ
ಮ್ಯಾನ್ಮಾರ್‌ನಲ್ಲಿ ಶಸ್ತ್ರಸಜ್ಜಿತ ವ್ಯಕ್ತಿಗಳು ಮಹಿಳೆಯೊಬ್ಬರನ್ನು ಹತ್ಯೆ ಮಾಡಲು ಮಣಿಪುರ ಕಾರಣವೆಂದು ವಿಡಿಯೋ ಹಂಚಿಕೊಳ್ಳಲಾಗಿದೆ. ಹಿಂಸಾಚಾರ ಪೀಡಿತ ಈಶಾನ್ಯ ರಾಜ್ಯದಲ್ಲಿ ಅಶಾಂತಿಯನ್ನು ಪ್ರಚೋದಿಸಲು ಇದು ಕಾರಣವಾಗುತ್ತಿದೆ ಎಂದು ರಾಜ್ಯ ಪೊಲೀಸರು ಸೋಮವಾರ ಪ್ರಕರಣ ದಾಖಲಿಸಿದ್ದಾರೆ. ಸೈಬರ್ ಕ್ರೈಂ ಪೊಲೀಸ್ ಠಾಣೆ (ಸಿಸಿಪಿಎಸ್) ಎಫ್‌ಐಆರ್ ದಾಖಲಿಸಿದೆ ಮತ್ತು ವಿಡಿಯೋವನ್ನು ಪ್ರಸಾರ ಮಾಡಿದವರ ಐಪಿ ವಿಳಾಸಗಳನ್ನು ಪತ್ತೆಹಚ್ಚಲು ತನಿಖೆಯನ್ನು ಪ್ರಾರಂಭಿಸಿದೆ.
ಈ "ನಕಲಿ ಸುದ್ದಿ" ಯ ಹಿಂದೆ ಇರುವವರನ್ನು ಬಂಧಿಸಲು ಅಧಿಕಾರಿಗಳು ನಿರ್ಧರಿಸಿದ್ದಾರೆ ಮತ್ತು ಜನಾಂಗೀಯ ಸಂಘರ್ಷಕ್ಕೆ ಸಾಕ್ಷಿಯಾಗಿರುವ ರಾಜ್ಯದಲ್ಲಿ ಸಾರ್ವಜನಿಕ ನೆಮ್ಮದಿಗೆ ಭಂಗ ತರಲು, ಹಿಂಸಾಚಾರವನ್ನು ಪ್ರಚೋದಿಸಲು ಮತ್ತು ಕಾನೂನು ಮತ್ತು ಸುವ್ಯವಸ್ಥೆಗೆ ಭಂಗ ತರುವ ಪ್ರಯತ್ನಕ್ಕಾಗಿ ಅವರನ್ನು ಬಂಧಿಸಲು ನಿರ್ಧರಿಸಲಾಗಿದೆ.












Click it and Unblock the Notifications