ಬಿಆರ್‌ಎಸ್ ಶಾಸಕರ ಖರೀದಿ ಪ್ರಕರಣ: ಬಿಜೆಪಿಯ ಉನ್ನತ ನಾಯಕನಿಗೆ ಎಸ್‌ಐಟಿ ಸಮನ್ಸ್
ಹೈದರಾಬಾದ್, ನವೆಂಬರ್ 18: ಭಾರತ್ ರಾಷ್ಟ್ರ ಸಮಿತಿಯ (ಬಿಆರ್‌ಎಸ್) ಶಾಸಕರ ಖರೀದಿ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಿ ಎಲ್ ಸಂತೋಷ್ ಅವರಿಗೆ ನವೆಂಬರ್ 21 ರಂದು ಪೊಲೀಸರ ಮುಂದೆ ಹಾಜರಾಗುವಂತೆ ನೋಟಿಸ್ ನೀಡಿದೆ.
ಬಿಜೆಪಿಯು ಬಿಆರ್‌ಎಸ್ ಪಕ್ಷದ ಶಾಸಕರನ್ನು ಖರೀದಿಸಲು ಮುಂದಾಘಿದೆ ಎಂಬ ಆರೋಪ ಕೇಳಿ ಬಂದಿದ್ದು, ಈ ಕುರಿತು ತನಿಖೆ ನಡೆಸಲು ಕೆ.ಚಂದ್ರಶೇಖರ ರಾವ್ ನೇತೃತ್ವದ ತೆಲಂಗಾಣ ಸರ್ಕಾರವು ಏಳು ಸದಸ್ಯರನ್ನೊಳಗೊಂಡ ವಿಶೇಷ ತಂಡ(ಎಸ್‌ಐಟಿ) ರಚಿಸಿತ್ತು.
ಈ ತಂಡ ಸೆಕ್ಷನ್ 41 (ಎ) ಅಡಿಯಲ್ಲಿ ಬಿ ಎಲ್ ಸಂತೋಷ್ ಅವರಿಗೆ ನೋಟಿಸ್ ನೀಡಿದೆ. ಸಂತೋಷ್ ಅವರು ಹೇಳಿದ ದಿನಾಂಕ ಮತ್ತು ಸಮಯದಂದು ಎಸ್‌ಐಟಿ ಮುಂದೆ ಹಾಜರಾಗಲು ವಿಫಲವಾದರೆ ಅವರನ್ನು ಬಂಧಿಸಲಾಗುವುದು ಎಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ.

ಬಿಜೆಪಿ ವಿರುದ್ಧ ಮನೀಶ್ ಸಿಸೋಡಿಯಾ ವಾಗ್ದಾಳಿ
ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರ ಟಿಆರ್‌ಎಸ್ ಪಕ್ಷದ (ಈಗ ಬಿಆರ್‌ಎಸ್) ನಾಲ್ಕು ಮಂದಿ ಶಾಸಕರನ್ನು ಬಿಜೆಪಿಗೆ ಸೆಳೆದುಕೊಳ್ಳಲು ಲಂಚ ನೀಡಲು ಮುಂದಾಗಿದ್ದರು ಎಂಬ ಆರೋಪ ಮಾಡಲಾಗಿದೆ. ಈ ಪ್ರಕರಣದಲ್ಲಿ ಹೈದರಾಬಾದ್‌ನ ಫಾರ್ಮ್ ಹೌಸ್ ಒಂದರಲ್ಲಿ ಮೂವರನ್ನು ಬಂಧಿಸಲಾಗಿತ್ತು. ಇದರಲ್ಲಿ ಇಬ್ಬರು ಸ್ವಾಮಿಗಳು ಸೇರಿದ್ದರು.
ತೆಲಂಗಾಣ ರಾಷ್ಟ್ರ ಸಮಿತಿ(ಟಿಆರ್‌ಎಸ್)ಯ ಕೆಲವು ಶಾಸಕರಿಗೆ ಲಂಚ ನೀಡಿ ಅವರನ್ನು ಬಿಜೆಪಿಗೆ ಕರೆತರಲು ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ನಾಯಕತ್ವದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದ ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರು, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಬಂಧಿಸುವಂತೆ ಒತ್ತಾಯಿಸಿದ್ದರು.

ಅಮಿತ್ ಶಾ ಭಾಗಿ ಆರೋಪ
ಬಿಜೆಪಿಯೇತರ ಆಡಳಿತವಿರುವ ರಾಜ್ಯಗಳಲ್ಲಿ ಸರ್ಕಾರಗಳನ್ನು ಉರುಳಿಸಲು 'ಆಪರೇಷನ್ ಕಮಲ' ಎಂದು ಕರೆಯಲಾಗುವ ಕಾರ್ಯದಲ್ಲಿ ಅಮಿತ್ ಶಾ ಭಾಗಿಯಾಗಿದ್ದಾರೆ ಎಂದು ಆಪ್ ನಾಯಕ ಆರೋಪಿಸಿದ್ದರು. ಈ ಹಿಂದೆ ದೆಹಲಿ, ಪಂಜಾಬ್ ಮತ್ತು ಇತರ ಎಂಟು ರಾಜ್ಯಗಳಲ್ಲಿ ಶಾಸಕರ ಖರೀದಿಗೆ ಬಿಜೆಪಿ ಪ್ರಯತ್ನ ಮಾಡಿತ್ತು. ಈ ಬಾರಿ ತೆಲಂಗಾಣದಲ್ಲಿ ಬಿಜೆಪಿಯ ಡರ್ಟಿ ಗೇಮ್ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ ಎಂದು ಆಮ್ ಆದ್ಮಿ ಪಕ್ಷದ(ಎಎಪಿ) ನಾಯಕ ದೂರಿದ್ದರು.
ಬಿಜೆಪಿಗೆ ಸೇರಲು ಕೆಲವು ಟಿಆರ್‌ಎಸ್ ಶಾಸಕರಿಗೆ ಲಂಚ ನೀಡಲು ಪ್ರಯತ್ನಿಸುತ್ತಿರುವ ಮೂವರು ವ್ಯಕ್ತಿಗಳ ನಡುವಿನ ಸಂಭಾಷಣೆಯ ಆಡಿಯೊ ಕ್ಲಿಪ್ ಅನ್ನು ಉಲ್ಲೇಖಿಸಿದ ಸಿಸೋಡಿಯಾ, ಅದರಲ್ಲಿ ಒಬ್ಬ ವ್ಯಕ್ತಿ "ಶಾಹ್ ಜಿ" ಎಂದು ಹೇಳಲಾಗಿದೆ ಎಂದು ಶ್ರೀ ಸಿಸೋಡಿಯಾ ಹೇಳಿದ್ದಾರೆ.

ಶಾ ಆರೋಪಿ ಆಡಿಯೋ ರಿಲೀಸ್
"ಶಾಹ್ ಜಿ' ಹೆಸರು ನಿಜವಾಗಿಯೂ ಪ್ರಸ್ತಾಪ ಆಗಿದ್ದರೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಬೇಕು. ಯಾಕೆಂದರೆ ಒಬ್ಬ ದಲ್ಲಾಳಿ, ಶಾಸಕರೊಬ್ಬರನ್ನು ಖರೀದಿಸಲು ಹೋಗಿ ಸಿಕ್ಕಿಬಿದ್ದರೆ ಮತ್ತು ದೇಶದ ಗೃಹ ಸಚಿವರ ಹೆಸರು ಅದರಲ್ಲಿ ಕೇಳಿ ಬಂದರೆ ಅದು ಇಡೀ ದೇಶಕ್ಕೆ ತುಂಬಾ ಅಪಾಯಕಾರಿ ಎಂದಿದ್ದರು.

ಕೆಸಿಆರ್ ವಿರುದ್ಧ ಬಿಜೆಪಿ ಕಿಡಿ
ಆದರೆ ಈ ಆರೋಪವನ್ನು ಬಿಜೆಪಿ ತಳ್ಳಿ ಹಾಕಿತ್ತು. ಈ ಆರೋಪದ ಬಗ್ಗೆ ಸಿಬಿಐ ತನಿಖೆಗೆ ಆದೇಶಿಸಬೇಕು ಎಂದು ಕೋರಿ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಗುಜ್ಜುಲ ಪ್ರೇಮೇಂದರ್ ರೆಡ್ಡಿ ತೆಲಂಗಾಣ ಹೈಕೋರ್ಟ್ ಮೆಟ್ಟಿಲೇರಿದ್ದರು. ಬಿಜೆಪಿಗೆ ಕಳಂಕ ತರಲು ಕೆಸಿಆರ್ ಅವರ ಪಕ್ಷ ಮಾಡಿರುವ ಸಂಚು ಇದಾಗಿದ್ದು, ಸಿಬಿಐ ಅಥವಾ ಕೋರ್ಟ್ ಆದೇಶಿಸುವ ವಿಶೇಷ ತನಿಖಾ ತಂಡದಂತಹ ತಟಸ್ಥ ಸಂಸ್ಥೆಯಿಂದ ಈ ಪ್ರಕರಣದ ತನಿಖೆ ನಡೆಯಬೇಕು ಎಂದು ಕೋರಿದ್ದರು. ಕೇಂದ್ರದ ಯಾವುದೇ ಹಸ್ತಕ್ಷೇಪವನ್ನು ತಡೆಯಲು ತೆಲಂಗಾಣ ಸಿಎಂ ಕೆಸಿಆರ್, ಸಿಬಿಐಗೆ ನೀಡಿದ್ದ ಸಮ್ಮತಿಯನ್ನು ಹಿಂದಕ್ಕೆ ಪಡೆದಿದ್ದಾರೆ. ಇದು ಚರ್ಚೆಗೆ ಗ್ರಾಸವಾಗಿದೆ. ಸಿಬಿಐ ತನಿಖೆ ನಡೆದರೆ ತಮ್ಮ ಹುಳುಕು ಬಯಲಾಗುತ್ತದೆ ಎಂಬ ಭಯದಿಂದ ಕೆಸಿಆರ್ ಈ ಕ್ರಮ ಕೈಗೊಂಡಿದ್ದಾರೆ ಎಂದು ಬಿಜೆಪಿ ಆರೋಪಿಸಿತ್ತು.












Click it and Unblock the Notifications