ದೆಹಲಿ ಅಬಕಾರಿ ನೀತಿ ಪ್ರಕರಣ; ಜಾಮೀನು ಸಿಕ್ಕ ಬಳಿಕ ತಿಹಾರ್ ಜೈಲಿನಿಂದ ಬಿಆರ್‌ಎಸ್ ನಾಯಕಿ ಕೆ. ಕವಿತ ಬಿಡುಗಡೆ
ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಬಂಧಿತರಾಗಿದ್ದ ಬಿಆರ್‌ಎಸ್ ನಾಯಕಿ ಕೆ ಕವಿತಾ ಅವರಿಗೆ ಸುಪ್ರೀಂ ಕೋರ್ಟ್ ಜಾಮೀನು ಮಂಜೂರು ಮಾಡಿದ್ದು, ಮಂಗಳವಾರ ಸಂಜೆ ತಿಹಾರ್ ಜೈಲಿನಿಂದ ಹೊರಬಂದಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಅಕ್ರಮ ಹಣ ವರ್ಗಾವಣೆ ತನಿಖೆಯಲ್ಲಿ ಬಿಆರ್‌ಎಸ್ ನಾಯಕಿ ಕೆ ಕವಿತಾ ಅವರನ್ನು ಜಾರಿ ನಿರ್ದೇಶನಾಯಲ ಮಾರ್ಚ್‌ನಲ್ಲಿ ಬಂಧಿಸಿತ್ತು.
ತಿಹಾರ್ ಜೈಲಿನಿಂದ ಹೊರಬಂದ ನಾಯಕಿಯನ್ನು ಸ್ವಾಗತಿಸಲು ಹೊರಗೆ ನೂರಾರು ಬಿಆರ್‌ಎಸ್ ಕಾರ್ಯಕರ್ತರು, ಬೆಂಬಲಿಗರು ಜಮಾಯಿಸಿದ್ದರು. ಬೆಂಬಲಿಗರು ಡ್ರಮ್ ಬಾರಿಸಿ, ಪಟಾಕಿ ಸಿಡಿಸುವ ಮೂಲಕ ಕವಿತಾರನ್ನು ಸ್ವಾಗತಿಸಿದರು. ಕವಿತಾ ಅವರ ಸಹೋದರ ಹಾಗೂ ಬಿಆರ್‌ಎಸ್ ಕಾರ್ಯಾಧ್ಯಕ್ಷ ಕೆ ಟಿ ರಾಮರಾವ್ ಉಪಸ್ಥಿತರಿದ್ದರು.

ಐದು ತಿಂಗಳು ಸೆರೆವಾಸ
ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕವಿತಾ ಅವರನ್ನು ಮಾರ್ಚ್‌ನಲ್ಲಿ ಜಾರಿ ನಿರ್ದೇಶನಾಲಯ ಬಂಧಿಸಿತ್ತು. ಕಳೆದ ಐದು ತಿಂಗಳಿನಿಂದ ತಿಹಾರ್‌ನ ಜೈಲು ಸಂಖ್ಯೆ 6 ರಲ್ಲಿ ಕವಿತಾರನ್ನು ಇರಿಸಲಾಗಿತ್ತು. ಕವಿತಾರನ್ನು ಹೈದರಾಬಾದ್‌ನ ಬಂಜಾರಾ ಹಿಲ್‌ನ ನಿವಾಸದಿಂದ ಜಾರಿ ನಿರ್ದೇಶನಾಯಲಯ ಅಧಿಕಾರಿಗಳು ಬಂಧಿಸಿದ್ದರು, ಅದಾದ ಬಳಿಕ ಸಿಬಿಐ ಈ ವರ್ಷದ ಏಪ್ರಿಲ್‌ನಲ್ಲಿ ತಿಹಾರ್ ಜೈಲಿನಲ್ಲಿ ಬಂಧಿಸಿತ್ತು.
ಜೈಲಿನಿಂದ ಹೊರ ಬಂದ ಬಳಿಕ ಅಪಾರ ಸಂಖ್ಯೆಯ ಬೆಂಬಲಿಗರು ಮತ್ತು ಬಿಆರ್‌ಎಸ್ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಕೆ ಕವಿತಾ ತಮ್ಮ ಮೇಲಿನ ಆರೋಪಗಳಿಗೆ ಪಕ್ಷವು ಕಾನೂನು ಬದ್ಧವಾಗಿ ಉತ್ತರ ಕೊಡಲಿದೆ ಎಂದು ಹೇಳಿದರು.
ನಾವು ಹೋರಾಟಗಾರರು, ಕಾನೂನಾತ್ಮಕವಾಗಿ ಮತ್ತು ರಾಜಕೀಯವಾಗಿ ಹೋರಾಟ ಮಾಡುತ್ತೇವೆ ಹೇಳಿದರು. ತನ್ನ ವಿರುದ್ಧ ಜಾರಿ ನಿರ್ದೇಶನಾಲಯ ಮಾಡಿರುವ ಆರೋಪಗಳು ಸುಳ್ಳು ಎಂದು ಅವರು ಹೇಳಿದ್ದಾರೆ. ರಾಜಕೀಯ ದುರುದ್ದೇಶದಿಂದ ನನ್ನನ್ನು ಬಂಧಿಸಲಾಗಿದೆ ಎನ್ನುವುದು ಇಡೀ ದೇಶಕ್ಕೆ ಗೊತ್ತಾಗಿದೆ ಎಂದಿದ್ದಾರೆ.
ಮಂಗಳವಾರ, ಹಣ ವರ್ಗಾವಣೆ ಪ್ರಕರಣದಲ್ಲಿ ಕೆ ಕವಿತಾಗೆ ಸುಪ್ರೀಂ ಕೋರ್ಟ್ ಜಾಮೀನು ನೀಡಿದೆ. ₹ 10 ಲಕ್ಷ ಮೊತ್ತದ ಜಾಮೀನು ಬಾಂಡ್‌ಗಳನ್ನು ಒದಗಿಸಿದ ಮೇಲೆ ಕವಿತಾರನ್ನು ತಕ್ಷಣವೇ ಜಾಮೀನಿನ ಮೇಲೆ ಬಿಡುಗಡೆ ಮಾಡಲು ನಿರ್ದೇಶಿಸಲಾಗಿದೆ ಎಂದು ಪೀಠ ಹೇಳಿದೆ.
ನ್ಯಾಯಮೂರ್ತಿಗಳಾದ ಬಿಆರ್ ಗವಾಯಿ ಮತ್ತು ಕೆವಿ ವಿಶ್ವನಾಥನ್ ಅವರನ್ನೊಳಗೊಂಡ ಸುಪ್ರೀಂ ಕೋರ್ಟ್ ಪೀಠ, ಪ್ರಕರಣದಲ್ಲಿ ಕವಿತಾ ಭಾಗಿಯಾಗಿದ್ದಾರೆ ಎಂದು ಸಾಬೀತುಪಡಿಸಲು ಇಡಿ ಮತ್ತು ಸಿಬಿಐ ಯಾವ ಸಾಕ್ಷಿಗಳನ್ನು ಹೊಂದಿದೆ ಎಂದು ಪ್ರಶ್ನೆ ಮಾಡಿದೆ. ಕೇಂದ್ರದ ತನಿಖಾ ಸಂಸ್ಥೆಗಳ ಪರ ವಾದ ಮಾಡಿದ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್‌ವಿ ರಾಜು, ಕವಿತಾ ಅವರು ಫೋನ್ ಫಾರ್ಮ್ಯಾಟ್ ಮಾಡಿದ್ದಾರೆ ಮತ್ತು ಅವರ ವರ್ತನೆ ಸಾಕ್ಷ್ಯವನ್ನು ತಿರುಚುವಂತಿದೆ ಎಂದು ಹೇಳಿದರು.
ಕೆ.ಕವಿತಾ ಅವರ ಪರ ವಾದ ಮಂಡಿಸಿದ ಹಿರಿಯ ವಕೀಲ ಮುಕುಲ್ ರೋಹಟಗಿ, ಬಿಆರ್‌ಎಸ್ ನಾಯಕಿ ಅವರ ವಿರುದ್ಧದ ತನಿಖೆ ಈಗಾಗಲೇ ಪೂರ್ಣಗೊಂಡಿದೆ ಎಂದು ವಾದಿಸಿ ಜಾಮೀನು ಕೋರಿದ್ದರು. ಅವರ ಮನವಿಯನ್ನು ಪುರಸ್ಕರಿಸಿದ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.












Click it and Unblock the Notifications