ಅಂದು ಬ್ರಿಟಿಷರು, ಇಂದು ಕಾಂಗ್ರೆಸ್ ಈ ವಿಷಯದಲ್ಲಿ ಒಂದೇ ಎಂದ ಮೋದಿ
ಪ್ರಧಾನಿ ನರೇಂದ್ರ ಮೋದಿ ಅವರು ಮತ್ತೊಮ್ಮೆ ಕರ್ನಾಟಕ ಕಾಂಗ್ರೆಸ್ ಸರ್ಕಾರವನ್ನು ಟೀಕಿಸಿದ್ದಾರೆ. ಕರ್ನಾಟಕದಲ್ಲಿ ಗಣೇಶ ಮೂರ್ತಿಯನ್ನು ಕಂಬಿಗಳ ಹಿಂದೆ ಇರಿಸಲಾಗಿದೆ ಎಂದು ಹೇಳಿದ್ದಾರೆ. ಈಚೆಗೆ ಪ್ರತಿಭಟನಾಕಾರರಿಂದ ಗಣೇಶ ಮೂರ್ತಿಯನ್ನು ಪೊಲೀಸರು ವಶಪಡಿಸಿಕೊಂಡಿದ್ದರು. ಅಲ್ಲದೇ ಪೊಲೀಸ್ ವ್ಯಾನ್‌ನಲ್ಲಿ ಗಣೇಶ ಮೂರ್ತಿ ಇರುವ ಪೋಟೋ ಹಾಗೂ ವಿಡಿಯೋಗಳು ಸಾಕಷ್ಟು ವೈರಲ್ ಆಗಿತ್ತು. ಈ ಸಂಬಂಧ ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ಅವರು ವಾಗ್ದಾಳಿ ನಡೆಸಿದ್ದರು. ಇದೀಗ ಮತ್ತೊಮ್ಮೆ ಇದರ ಬಗ್ಗೆ ಮಾತನಾಡಿದ್ದಾರೆ.
ಗಣೇಶ ಪೂಜೆಯಲ್ಲಿ ನಾನು ಭಾಗವಹಿಸಿರುವುದಕ್ಕೆ ಕಾಂಗ್ರೆಸ್ ಹಾಗೂ ಅದರ ಬಳಗ ಅಸಮಾಧಾನಿತವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ. ಈಚೆಗೆ ಪ್ರಧಾನಿ ನರೇಂದ್ರ ಮೋದಿ ಅವರು, ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್ ಅವರ ಮನೆಗೆ ಭೇಟಿ ನೀಡಿದ್ದರು. ಮುಖ್ಯ ನ್ಯಾಯಮೂರ್ತಿ ಅವರ ಮನೆಯಲ್ಲಿ ನಡೆದಿದ್ದ ಗಣೇಶ ಪೂಜೆಯಲ್ಲಿ ಡಿ.ವೈ ಚಂದ್ರಚೂಡ್ ಹಾಗೂ ಮೋದಿ ಅವರು ಸೇರಿ ದೇವರ ಆರತಿ ಬೆಳಗಿದ್ದರು. ಇದು ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು. ಈ ಬೆಳವಣಿಗೆಯನ್ನು ಕಾಂಗ್ರೆಸ್ ಹಾಗೂ ಶಿವಸೇನೆ ವಿರೋಧಿಸಿತ್ತು. ನ್ಯಾಯಮೂರ್ತಿಗಳು ಪಕ್ಷಗಳಿಂದ ಅಂತರ ಕಾಪಾಡಿಕೊಳ್ಳಬೇಕು. ಸಂವಿಧಾನ ಹುದ್ದೆಯಲ್ಲಿ ಇರುವವರು ರಾಜಕೀಯ ಪಕ್ಷಗಳೊಂದಿಗೆ ಗುರುತಿಸಿಕೊಳ್ಳಬಾರದು. ಈ ರೀತಿ ಗುರುತಿಸಿಕೊಂಡರೆ, ನಮಗೆ ಸುಪ್ರೀಂ ಕೋರ್ಟ್‌ನ ಮೇಲೆ ಭರವಸೆ ಇರಿಸುವುದು ಹೇಗೆ ಎಂದು ಪ್ರಶ್ನೆ ಮಾಡಿದ್ದವು. ಇದೀಗ ಮೋದಿ ಅವರು ಇದೇ ವಿಷಯವನ್ನು ಕರ್ನಾಟಕದಲ್ಲಿ ನಡೆದಿರುವ ಘಟನೆಯನ್ನು ಉಲ್ಲೇಖಿಸಿ ಟಾಂಗ್ ನೀಡಿದ್ದಾರೆ.

ಗಣೇಶ ಚತುರ್ಥಿ ಎನ್ನುವುದು ನಮ್ಮ ದೇಶದ ಹಬ್ಬ ಮಾತ್ರವಲ್ಲ. ಭಾರತದ ಸ್ವಾತಂತ್ರ್ಯ ಚಳವಳಿಯಲ್ಲಿ ಗಣೇಶ ಹಬ್ಬವು ನಿರ್ಣಾಯಕ ಪಾತ್ರವನ್ನು ವಹಿಸಿದೆ. ಅಂದು ನಮ್ಮ ದೇಶದಲ್ಲಿ, ದೇಶವನ್ನು ಒಡೆದು ಆಳುತ್ತಿದ್ದ ಬ್ರಿಟಿಷರು ದ್ವೇಷ ಮಾಡುತ್ತಿದ್ದರು. ಆದರೆ, ದುರಂತವೆಂದರೆ ಈಗ ಅಧಿಕಾರದ ದುರಾಸೆ ಇರುವವರು, ನಮ್ಮ ಸಮಾಜವನ್ನು ಒಡೆದು ಆಳುತ್ತಿರುವವರಿಗೆ ಗಣೇಶ ಪೂಜೆ ಸಮಸ್ಯೆಯಾಗಿ ಕಾಣಿಸುತ್ತಿದೆ. ಕಾಂಗ್ರೆಸ್ ಮತ್ತು ಅದರ ಬಳಗಕ್ಕೆ ನಾನು ಗಣೇಶ ಪೂಜೆಯಲ್ಲಿ ಭಾಗವಹಿಸಿದ್ದನ್ನು ಸಹಿಸಿಕೊಳ್ಳಲು ಆಗುತ್ತಿಲ್ಲ ಎಂದು ಕಿಡಿಕಾರಿದ್ದಾರೆ. ಇದೇ ಸಂದರ್ಭದಲ್ಲಿ ಕರ್ನಾಟಕದಲ್ಲಿ ಗಣೇಶ ಮೂರ್ತಿಯನ್ನು ಕಂಬಿಗಳ ಹಿಂದೆ ಇರಿಸಲಾಗಿತ್ತು ಎಂದಿದ್ದಾರೆ.
ಕರ್ನಾಟಕದಲ್ಲೂ ವಿರೋಧ ವ್ಯಕ್ತವಾಗಿತ್ತು
ಪೊಲೀಸ್ ವ್ಯಾನ್‌ನಲ್ಲಿ ಗಣೇಶ ಮೂರ್ತಿಯನ್ನು ಇರಿಸಿದ್ದ ವಿಚಾರಕ್ಕೆ ಸಂಬಂಧಿಸಿದಂತೆ ಕರ್ನಾಟಕದಲ್ಲೂ ವಿರೋಧ ವ್ಯಕ್ತವಾಗಿತ್ತು. ಸಾರ್ಜನಿಕರು ಸಹ ಈ ಬೆಳವಣಿಗೆಗೆ ಖಂಡನೆ ವ್ಯಕ್ತಪಡಿಸಿದ್ದರು. ಕಾಂಗ್ರೆಸ್ ಸರ್ಕಾರ ಹೆಚ್ಚು ದಿನ ಉಳಿಯುವುದಿಲ್ಲ ಎನ್ನುವ ಮಾತುಗಳು ಕೇಳಿ ಬಂದಿತ್ತು.












Click it and Unblock the Notifications