ವರನ ನರ್ತನ ನೋಡಿ ಲಗ್ನವಾಗಲ್ಲ ಎಂದ ವಧು!
ಶಹಜಹಾನ್ಪುರ (ಉತ್ತರಪ್ರದೇಶ), ಜೂನ್ 30 : ಅನುಭವ್ ಮಿಶ್ರಾನ ಅರ್ಧಾಂಗಿಯಾಗಲು ಪ್ರಿಯಾಂಕಾ ತ್ರಿಪಾಠಿ ಸರ್ವಾಲಂಕಾರಭೂಷಿತೆಯಾಗಿ ಕುಳಿತಿದ್ದಳು. ಎರಡೂ ಕುಟುಂಬದಲ್ಲಿ ಹರ್ಷದ ಹೊನಲು ಹರಿದಿತ್ತು. ಎಲ್ಲ ಕಾರ್ಯಕ್ರಮಗಳು ಸಾಂಪ್ರದಾಯಿಕವಾಗಿ ಜರುಗುತ್ತಿದ್ದವು.
ಆ ಹಾಡು ಆರಂಭವಾಯಿತು ನೋಡಿ. ಮದುವೆ ಛತ್ರದಲ್ಲಿರುವ ಇಡೀ ಚಿತ್ರಣವೇ ಬದಲಾಗಿ ಹೋಯಿತು. ಸಂತೋಷದ ಹೊನಲು ದುಃಖದ ಕಡಲಾಗಿ ಪರಿವರ್ತಿತವಾಯಿತು. ಪ್ರಿಯಾಂಕಾ ತ್ರಿಪಾಠಿ ತಾನು ಸತ್ರೂ ಈ ಯಪ್ಪನನ್ನು ಮದುವೆಯಾಗುವುದಿಲ್ಲವೆಂದು ಪಟ್ಟುಹಿಡಿದು ಕುಳಿತಳು.

ಪ್ರಿಯಾಂಕಾ ಇದ್ದಕ್ಕಿದ್ದಂತೆ ಈ ಕಠಿಣ ನಿರ್ಧಾರಕ್ಕೆ ಬರಲು ಕಾರಣ ಆ ಹಾಡಿಗೆ ಗಂಡನಾಗಲಿರುವವನು ಮಾಡಿದ ನರ್ತನ. ಭರ್ಜರಿಯಾಗಿ ಗುಂಡು ಹಾಕಿ ಅಮಲೇರಿಸಿಕೊಂಡಿದ್ದ ಅನುಭವ್ ಮಿಶ್ರಾ 'ನಾಗಿನ ನಾಗಿನ' ಎಂಬ ಹಾಡಿಗೆ ಹಾವಿನಂತೆಯೇ ಕುಣಿಯಲು ಪ್ರಾರಂಭಿಸಿದ...
ಗಂಡಿನವರನ್ನು ಸ್ವಾಗತಿಸಲು ಮಂಗಳೆಯರು ಕಲಶ ಹಿಡಿದು ನಿಂತಿದ್ದರು. ವಧುವಿನ ತಂದೆ ಕೈಯಲ್ಲಿ ಹಾರ ಹಿಡಿದು ವರನನ್ನು ಸ್ವಾಗತಿಸಲು ನಿಂತಿದ್ದ. ಆಗ ಡಿಜೆ ಮಾಡಿದ ಯಡವಟ್ಟಿನಿಂದ ಮದುವೆ ಮಂಟಪ ಅಲ್ಲೋಲಕಲ್ಲೋಲವಾಯಿತು. ಹಾಡು ಕೇಳುತ್ತಿದ್ದಂತೆ ಹಾರ ಹಾಕಿಸಿಕೊಳ್ಳುವ ಬದಲು ವರ ನರ್ತಿಸಲು ಆರಂಭಿಸಿದ.
ಸಾಲದೆಂಬಂತೆ ಆತ ಗುಂಡನ್ನೂ ಏರಿಸಿದ್ದ. ಇಂಥ ಅಸಭ್ಯವಾಗಿ ವರ್ತಿಸುವ ಗಂಡ ನನಗೆ ಬೇಡವೇಬೇಡ ಎಂದು ಪ್ರಿಯಾಂಕಾ ನಿರ್ಧಾರಕ್ಕೆ ಬಂದಳು. ಎರಡೂ ಕಡೆಯವರು ಆಕೆಯ ಮನವೊಲಿಸಲು ಎಷ್ಟೇ ಪ್ರಯತ್ನಿಸಿದರೂ ಪ್ರಿಯಾಂಕಾ ಮಣಿಯಲೇ ಇಲ್ಲ.
ಉತ್ತರ ಭಾರತದಲ್ಲಿ ಮದುವೆಯ ಸಂದರ್ಭದಲ್ಲಿ ಹಾಡುವುದು, ಕುಣಿಯುವುದು ಸರ್ವೇಸಾಮಾನ್ಯ. ಸಂಗೀತ್ ಕಾರ್ಯಕ್ರಮಕ್ಕೆ ಭಾರೀ ಮಹತ್ವವಿರುತ್ತದೆ. ಚಿಕ್ಕವರು ದೊಡ್ಡವರೆಲ್ಲ ಕುಣಿದು ಕುಪ್ಪಳಿಸುತ್ತಾರೆ. ಆದರೆ, ಅನುಭವ್ ಸರೀ ಎಣ್ಣೆಯೇರಿಸಿಕೊಂಡು ನಾಗಿನ್ ಹಾಡಿದೆ ಹಾವಿನಂತೆ ಕುಣಿದಿದ್ದು ಪ್ರಿಯಾಂಕಾಗೆ ಸರಿಹೋಗಲಿಲ್ಲ.
ಆದರೆ, ಇಷ್ಟೆಲ್ಲ ರಾದ್ಧಾಂತವಾದ ಮೇಲೆ ಆಗಿದ್ದೇನೆಂದರೆ, ಅದೇ ಮಂಟಪದಲ್ಲಿ, ಅದೇ ಮುಹೂರ್ತದಲ್ಲಿ ಪ್ರಿಯಾಂಕಾಗೆ ಮತ್ತೊಬ್ಬನಾರೋ ತಾಳಿ ಕಟ್ಟಿದನಂತೆ!











Click it and Unblock the Notifications