ಕೇಂದ್ರ ಕಾನೂನು ಸಚಿವರ ನೇಮಕ ದಿನವೇ ಇಲಾಖೆಯಲ್ಲಿ ಲಂಚಾವತಾರ, ಬಂಧನ
ನವದೆಹಲಿ, ಮೇ 18: ನವದೆಹಲಿಯಲ್ಲಿ ಕೇಂದ್ರ ಕಾನೂನು ಸಚಿವರಾಗಿ ಅರ್ಜುನ್ ರಾಮ್ ಮೇಘವಾಲ್ ಅವರು ಗುರುವಾರ ಅಧಿಕಾರ ಸ್ವೀಕರಿಸಿದ ದಿನವೇ ಇತ್ತ ಇಲಾಖೆಯಲ್ಲಿ ಲಂಚ ಪಡೆದ ಪ್ರಕರಣ ಕಂಡು ಬಂದಿದ್ದು, ಈ ಸಂಬಂಧ ಕೇಂದ್ರ ಸರ್ಕಾರದ ಹೆಚ್ಚುವರಿ ಕಾನೂನು ಸಲಹೆಗಾರನ ಬಂಧನವೂ ಆಗಿದೆ.
ನೋಟರಿ ವಕೀಲರನ್ನು ನೇಮಕ ಮಾಡಲು ಲಂಚ ಪಡೆಯುತ್ತಿದ್ದ ಆರೋಪದಡಿ ಕಾನೂನು ಮತ್ತು ನ್ಯಾಯ ಸಚಿವಾಲಯದ ಕಾನೂನು ವ್ಯವಹಾರದ ವಿಭಾಗದ ಹೆಚ್ಚುವರಿ ಕಾನೂನು ಸಲಹೆಗಾರ ಟಿ.ಕೆ. ಮಲಿಕ್ ಅವರನ್ನು ಸಿಬಿಐ ಅಧಿಕಾರಿಗಳು ಬಂಧಿಸಿದ್ದಾರೆ. ಮಲಿಕ್ 50 ಸಾವಿರ ಲಂಚಕ್ಕೆ ಬೇಡಿಕೆಯಿಟ್ಟು, ಮುಂಗಡವಾಗಿ ₹ 25,000 ಪಡೆಯುತ್ತಿದ್ದ ಎನ್ನಲಾಗಿದೆ.

ಬೆಂಗಳೂರನ ಕಚೇರಿಯಲ್ಲಿ ಕೆಲಸ ಮಾಡುವ ಮಲಿಕ್, ಅಧಿಕಾರ ದುರುಪಯೋಗಪಡಿಸಿಕೊಂಡು ಲಂಚ ಪಡೆದು ನೋಟರಿ ನೀಡುತ್ತಿದ್ದ. ಇದಕ್ಕೆ ಸಹಕರಿಸುತ್ತಿದ್ದ ಬೆಂಗಳೂರಿನ ವಕೀಲರಾದ ಜಿ.ಕೆ. ವಾಣಿ ಎಂಬುವವರನ್ನೂ ಸೆರೆ ಹಿಡಿಯಲಾಗಿದೆ. ಇಬ್ಬರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಸಿಬಿಐ ಮೂಲಗಳು ಹೇಳಿವೆ.
ಕೇಂದ್ರ ಸರ್ಕಾರದ ನೋಟರಿ ನೇಮಕ ಮಾಡುವ ಜವಾಬ್ದಾರಿಯನ್ನು ಕಾನೂನು ವ್ಯವಹಾರ ವಿಭಾಗಕ್ಕೆ ನೀಡಲಾಗಿದೆ. ಸಿಬಿಐ ಅಧಿಕಾರಿಗಳು ಮಲಿಕ್‌ನನ್ನು 25,000 ಪಡೆಯುತ್ತಿದ್ದ ಸಂದರ್ಭದಲ್ಲಿ ದಾಳಿ ಮಾಡಿ ಬಂಧಿಸಿದ್ದಾರೆ. ಇದೇ ವೇಳೆ ಆತನ ಬಳಿ 4.32 ಲಕ್ಷ ರೂಪಾಯಿ ನಗದು ಸಿಕ್ಕಿದ್ದು, ಅದು ಸಹ ಲಂಚದ ಹಣವಾಗಿರುವ ಸಾಧ್ಯತೆ ಇದೆ. ಇದಲ್ಲದೆ ಬೆಂಗಳೂರು ಹಾಗೂ ಗಾಜಿಯಾದಾಬ್‌ನಲ್ಲಿರುವ ಆರೋಪಿಗೆ ಸೇರಿದ್ದ ಎರಡು ಸ್ಥಳಗಳ ಮೇಲೂ ದಾಳಿ ಮಾಡಿ 34 ಲಕ್ಷ ರೂಪಾಯಿ ಹಣವನ್ನು ಜಪ್ತಿ ಮಾಡಲಾಗಿದೆ. ಆರೋಪಿ ನೀಡಿದ್ದ ಮಾಹಿತಿಯಂತೆ ಬೆಂಗಳೂರಿನಲ್ಲಿ ವಾಣಿ ಎಂಬುವವರನ್ನು ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ.

ಮಹತ್ವದ ಪ್ರಕರಣಗಳಲ್ಲಿ ಎದುರಾಳಿ ವಕೀಲರ ಜೊತೆಗೂ ಮಲಿಕ್ ಒಡನಾಟವಿಟ್ಟುಕೊಂಡು ಪ್ರಕರಣ ಗೆಲ್ಲಲು ಸಹಕಾರ ನೀಡುತ್ತಿದ್ದ ಬಗ್ಗೆ ಮಾಹಿತಿ ಇದೆ. ದೇಶದ ಹಲವು ರಾಜ್ಯಗಳ ವಕೀಲರಿಗೆ ಅಕ್ರಮವಾಗಿ ನೋಟರಿ ನೀಡಿರುವ ಸಂಶಯವೂ ಇದೆ. ಈ ಬಗ್ಗೆ ತನಿಖೆ ಮುಂದುವರಿಸಲಾಗಿದೆ ಎಂದು ವರದಿಗಳು ತಿಳಿಸಿವೆ.












Click it and Unblock the Notifications