ಹಾಲು, ಗಂಗಾಜಲ ಹಾಕಿ ಅಂಬೇಡ್ಕರ್ ಪ್ರತಿಮೆ ಶುದ್ಧೀಕರಣ!
ಮೀರತ್, ಆಗಸ್ಟ್ 11: ಬಿಜೆಪಿ ಮುಖಂಡರು ಮಾಲಾರ್ಪಣೆ ಮಾಡಿದ ಅಂಬೇಡ್ಕರ್ ಪ್ರತಿಮೆಯನ್ನು ದಲಿತ ವಕೀಲರು ಶುದ್ಧೀಕರಿಸಿದ ಘಟನೆ ಉತ್ತರ ಪ್ರದೇಶದ ಮೀರತ್ ನಲ್ಲಿ ನಡೆದಿದೆ.
ಬಿಜೆಪಿ ರಾಜ್ಯ ಕಾರ್ಯದರ್ಶಿ ಸುನಿಲ್ ಬನ್ಸಾಲ್ ಅವರು ಮೀರತ್ ನಲ್ಲಿ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಗೌರವ ಸಲ್ಲಿಸಿದ್ದರು.
ಈ ಕಾರ್ಯಕ್ರಮ ಮುಗಿಯುತ್ತಿದ್ದಂತೆಯೇ ಮೀರತ್ ನ ದಲಿತ ವಕೀಲರು ಪ್ರತಿಮೆ ಬಳಿ ತೆರಳಿ 'ಗಂಗಾಜಲ' ಮತ್ತು'ಹಾಲನ್ನು' ಹಾಕಿ ಅಂಬೇಡ್ಕರ್ ಪ್ರತಿಮೆಯನ್ನು ಶುದ್ಧೀಕರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ವಕೀಲರೊಬ್ಬರು, 'ನಾವು ಈ ಪ್ರತಿಮೆಯನ್ನು ಸ್ವಚ್ಛಗೊಳಿಸುತ್ತಿದ್ದೇವೆ. ಏಕೆಂದರೆ ಬಿಜೆಪಿ ಮತ್ತು ಆರೆಸ್ಸೆಸ್ ಮುಖಂಡರು ಅಂವಿಧಾನ ಶಿಲ್ಪಿ ಡಾ.ಬಿ ಆರ್ ಅಂಬೇಡ್ಕರ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಅದನ್ನು ಅಪವಿತ್ರ ಮಾಡಿದ್ದಾರೆ. ದಲಿತರ ಉದ್ಧಾರಕ್ಕಾಗಿ ಹೋರಾಡಿದ ಅಂಬೇಡ್ಕರ್ ಅವರೆಲ್ಲಿ, ದಲಿತರ ಮೇಲೆ ದೌರ್ಜನ್ಯ ಎಸಗುವ ಬಿಜೆಪಿಯವರೆಲ್ಲ? ಆದ್ದರಿಂದ ನಾವು ಈ ಪ್ರತಿಮೆಯನ್ನು ಶುದ್ಧೀಕರಿಸುತ್ತಿದ್ದೇವೆ' ಎಂದರು.
ಅಂಬೇಡ್ಕರ್ ಜಯಂತಿ(ಏ.14)ಯ ಸಂದರ್ಭದಲ್ಲೂ ಬಿಜೆಪಿ ನಾಯಕಿ ಮನೇಕಾ ಗಾಂಧಿಯವರು ಅಂಬೇಡ್ಕರ್ ಪ್ರತಿಮೆಗೆ ಪುಷ್ಪಾರ್ಪಣೆ ಮಾಡಿದ್ದಕ್ಕಾಗಿ ಪ್ರತಿಮೆಯನ್ನು ಶುದ್ಧೀಕರಣಗೊಳಿಸಲಾಗಿತ್ತು.












Click it and Unblock the Notifications