ಬಾಂಬ್ ಸ್ಫೋಟ ಬೆದರಿಕೆ : ವಿಮಾನ ನಿಲ್ದಾಣಗಳಲ್ಲಿ ಹೈಅಲರ್ಟ್
ಮುಂಬೈ/ಕೊಚ್ಚಿ, ಅ. 24 : ವಿಮಾನದಲ್ಲಿ ಬಾಂಬ್ ಇಟ್ಟು ಸ್ಫೋಟಿಸುವುದಾಗಿ ಶಂಕಿತ ಭಯೋತ್ಪಾದಕರಿಂದ ಬೆದರಿಕೆ ಪತ್ರ ಬಂದಿರುವ ಕಾರಣ ಕೊಚ್ಚಿ, ಮುಂಬೈ ಮತ್ತು ಅಹ್ಮದಾಬಾದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಶುಕ್ರವಾರ ಹೈ ಅಲರ್ಟ್ ಘೋಷಿಸಲಾಗಿದೆ.
ಕೊಚ್ಚಿಯಿಂದ ಮುಂಬೈಗೆ ಮತ್ತು ಮುಂಬೈನಿಂದ ಅಹ್ಮದಾಬಾದಿಗೆ ಹೊರಡಲಿದ್ದ ಏರ್ ಇಂಡಿಯಾ ವಿಮಾನಗಳಲ್ಲಿ ಬಾಂಬ್ ಸ್ಫೋಟಿಸುವುದಾಗಿ ಶಂಕಿತ ಉಗ್ರಗಾಮಿಯಿಂದ ಬೆದರಿಕೆ ಪತ್ರ ಬಂದ ಕಾರಣ, ಎಲ್ಲ ವಿಮಾನ ಹಾರಾಟಗಳನ್ನು ಸ್ಥಗಿತಗೊಳಿಸಲಾಗಿದ್ದು, ಬಾಂಬ್ ನಿಷ್ಕ್ರಿಯ ದಳ, ಶ್ವಾನ ದಳಗಳಿಂದ ತಪಾಸಣೆ ನಡೆಸಲಾಗುತ್ತಿದೆ.
ಈ ಮೊದಲು ಕೊಚ್ಚಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಾತ್ರ ಏರ್ ಇಂಡಿಯಾ ವಿಮಾನದಲ್ಲಿ ಬಾಂಬ್ ಸ್ಫೋಟಿಸುವುದಾಗಿ ಎಚ್ಚರಿಕೆ ನೀಡಲಾಗಿತ್ತು. ಆದರೆ, ಮುಂಬೈನಲ್ಲಿಯೂ ಇದೇ ಬಗೆಯ ಎಚ್ಚರಿಕೆ ನೀಡಲಾಗಿದ್ದು, ಶುಕ್ರವಾರ ರಾತ್ರಿ ವಿಮಾನ ಅಪಹರಿಸಿ ಆತ್ಮಹತ್ಯಾ ದಳದಿಂದ ವಿಧ್ವಂಸಕ ಕೃತ್ಯ ಎಸಗಬಹುದೆಂಬ ಎಚ್ಚರಿಕೆ ಜಾಗೃತ ದಳದಿಂದ ನೀಡಲಾಗಿದೆ.

ಓರ್ವ ಪ್ರಯಾಣಿಕನ ಬಳಿ ಬಾಂಬ್ ಇರುವುದಾಗಿ ಅಪರಿಚಿತ ವ್ಯಕ್ತಿ ಪತ್ರ ರವಾನಿಸಿದ್ದ. ಈ ಹಿನ್ನೆಲೆಯಲ್ಲಿ ಬಾಂಬ್ ನಿಷ್ಕ್ರಿಯ ದಳ ವಿಮಾನ ನಿಲ್ದಾಣಕ್ಕೆ ಧಾವಿಸಿದ್ದು, ಎಲ್ಲ ಪ್ರಯಾಣಿಕರನ್ನು, ವಿಮಾನವನ್ನು ತಪಾಸಣೆ ಮಾಡುತ್ತಿದ್ದಾರೆ. ವಿಮಾನ ನಿಲ್ದಾಣದಲ್ಲಿ ನಿಲ್ಲಿಸಲಾಗಿರುವ ಇತರ ವಾಹನಗಳನ್ನು ಕೂಡ ತಪಾಸಣೆ ಮಾಡುತ್ತಿದ್ದಾರೆ.
ರಾಷ್ಟ್ರೀಯ ಭದ್ರತಾ ದಳದ ಆಂಟಿ-ಹೈಜ್ಯಾಕಿಂಗ್ ದಳವನ್ನು ಕಟ್ಟೆಚ್ಚರದಿಂದ ಇರುವಂತೆ ಸೂಚಿಸಲಾಗಿದೆ. ಭಾರತೀಯ ವಿಮಾನ ಪ್ರಾಧಿಕಾರದ ನಿರ್ದೇಶಕರಿಗೆ ಬೆದರಿಕೆ ಪತ್ರ ಬಂದಿತ್ತು. ಶುಕ್ರವಾರ ರಾತ್ರಿ ಬಾಂಬ್ ಇಟ್ಟು ವಿಮಾನ ಸ್ಫೋಟಿಸುವುದಾಗಿ ಪತ್ರದಲ್ಲಿ ಬರೆಯಲಾಗಿದೆ. ಈ ಹಿನ್ನೆಲೆಯಲ್ಲಿ ಏರ್ಪೋರ್ಟ್ ಅಧಿಕಾರಿಗಳು ಮತ್ತು ಭದ್ರತಾ ಸಿಬ್ಬಂದಿಗಳು ಸಭೆಯನ್ನು ಕೂಡ ಕರೆಯಲಾಗಿದೆ.












Click it and Unblock the Notifications