ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೊ ಯಾತ್ರೆಯಲ್ಲಿ ಪಾಲ್ಗೊಂಡ ನಟಿ ಸ್ವರಾ ಭಾಸ್ಕರ್
ಉಜ್ಜಯಿನಿ: ಭಾರತ್ ಜೋಡೊ ಯಾತ್ರೆಯಲ್ಲಿ ನಟಿ ಸ್ವರಾ ಭಾಸ್ಕರ್ ಅವರು ಇಂದು ಪಾಲ್ಗೊಂಡರು.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೊ ಯಾತ್ರೆಯು ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ಸಾಗುತ್ತಿದೆ.
|
ರಾಹುಲ್ ಜೊತೆ ಜೊತೆ ಹೆಜ್ಜೆ ಹಾಕಿದ ನಟಿ ಸ್ವರಾ ಭಾಸ್ಕರ್
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಲ್ಲಿ ರಾಹುಲ್ ಗಾಂಧಿಯವರೊಂದಿಗೆ ಸ್ವರಾ ಭಾಸ್ಕರ್ ಅವರು ಹೆಜ್ಜೆ ಹಾಕುತ್ತಿರುವ ಚಿತ್ರವನ್ನು ಹಂಚಿಕೊಳ್ಳಲಾಗಿದೆ.
'ಪ್ರಸಿದ್ಧ ನಟಿ ಸ್ವರಾ ಭಾಸ್ಕರ್ ಭಾರತ್ ಜೋಡೊ ಯಾತ್ರೆಯಲ್ಲಿ ಭಾಗಿಯಾಗಿದ್ದಾರೆ. ಸಮಾಜದ ಪ್ರತಿಯೊಂದು ವರ್ಗದ ಉಪಸ್ಥಿತಿಯು ಈ ಯಾತ್ರೆಯನ್ನು ಯಶಸ್ವಿಗೊಳಿಸಿದೆ' ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.
ಸಾಮಾಜಿಕ ವಿಚಾರಗಳ ಕುರಿತು ತಮ್ಮದೇ ಆದ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿರುವ ಸ್ವರಾ ಭಾಸ್ಕರ್ ಅವರು ಕಾಂಗ್ರೆಸ್ ಟ್ವೀಟ್ ಅನ್ನು ರೀಟ್ವಿಟ್ ಮಾಡಿದ್ದಾರೆ.

ಭಾರತ್ ಜೋಡೊ ಯಾತ್ರೆಯಲ್ಲಿ ಚಿತ್ರರಂಗದ ಹಲವರು ಭಾಗಿ
ಈ ಹಿಂದೆ ಅಮೋಲ್ ಪಾಲೇಕರ್, ಸಂಧ್ಯಾ ಗೋಖಲೆ, ಪೂಜಾ ಭಟ್, ರಿಯಾ ಸೇನ್, ಸುಶಾಂತ್ ಸಿಂಗ್, ಮೋನಾ ಅಂಬೇಗಾಂವ್ಕರ್, ರಶ್ಮಿ ದೇಸಾಯಿ, ಮತ್ತು ಆಕಾಂಕ್ಷಾ ಪುರಿ ಮುಂತಾದ ಚಿತ್ರರಂಗದ ಪ್ರಮುಖರು ಯಾತ್ರೆಯಲ್ಲಿ ಭಾಗವಹಿಸಿದ್ದರು.
ಟ್ವಿಟರ್‌ನಲ್ಲಿ ಹಾಲಿವುಡ್ ತಾರೆ ಜಾನ್ ಕುಸಾಕ್ ಅವರು ಸೆಪ್ಟೆಂಬರ್ ಅಂತ್ಯದಲ್ಲಿ ಭಾರತ್ ಜೋಡೊ ಯಾತ್ರೆಗೆ ಬೆಂಬಲವನ್ನು ನೀಡಿದ್ದರು.

ಬಿಜೆಪಿ ಆಡಳಿತದ ಮಧ್ಯಪ್ರದೇಶದಲ್ಲಿ ಯಾತ್ರೆಗೆ ಮಹತ್ವ
ಇದು ಒಂದು ದಿನದ ವಿರಾಮದ ನಂತರ ಗುರುವಾರ ಬೆಳಿಗ್ಗೆ ಉಜ್ಜಯಿನಿಯಿಂದ ಭಾರತ್ ಜೋಡೊ ಯಾತ್ರೆ ಪುನರಾರಂಭವಾಯಿತು. ಮಧ್ಯಪ್ರದೇಶದ ಕೊನೆಯ ಜಿಲ್ಲೆಯಾದ ಅಗರ್ ಮಾಲ್ವಾಕ್ಕೆ ಯಾತ್ರೆ ತೆರಳಿತು.
ಭಾರತೀಯ ಜನತಾ ಪಕ್ಷ (ಬಿಜೆಪಿ) ಆಡಳಿತವಿರುವ ಮಧ್ಯಪ್ರದೇಶದಲ್ಲಿ ಮುಂದಿನ ವರ್ಷ ವಿಧಾನಸಭೆ ಚುನಾವಣೆ ನಡೆಯಲಿದೆ. ಹೀಗಾಗಿ, ಯಾತ್ರೆಯು ಮಹತ್ವ ಪಡೆದುಕೊಂಡಿದೆ.
ಮಧ್ಯಪ್ರದೇಶದಿಂದ ಡಿಸೆಂಬರ್ 4 ರಂದು ಯಾತ್ರೆ ರಾಜಸ್ಥಾನಕ್ಕೆ ಪ್ರವೇಶಿಸಲಿದೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.
ರಾಹುಲ್ ಗಾಂಧಿ ನೇತೃತ್ವದ ಪಾದಯಾತ್ರೆ ನವೆಂಬರ್ 23 ರಂದು ನೆರೆಯ ಮಹಾರಾಷ್ಟ್ರದಿಂದ ಮಧ್ಯಪ್ರದೇಶದ ಬುರ್ಹಾನ್‌ಪುರ ಜಿಲ್ಲೆಯನ್ನು ಪ್ರವೇಶಿಸಿತು.
ಇದು ಇಲ್ಲಿಯವರೆಗೆ ಬುರ್ಹಾನ್‌ಪುರ, ಖಾಂಡ್ವಾ, ಖಾರ್ಗೋನ್ ಮತ್ತು ಎಂಪಿಯ ಇಂದೋರ್ ಜಿಲ್ಲೆಗಳ ಮೂಲಕ ಹಾದುಹೋಗಿದೆ.

ದೇಶದಲ್ಲಿ ಮುಚ್ಚಿಹೋದ ಪ್ರಜಾಸತ್ತಾತ್ಮಕ ಹಾದಿಗಳು
ಮಧ್ಯಪ್ರದೇಶದ ಉಜ್ಜಯನಿಯಲ್ಲಿ ಮಾತನಾಡಿದ್ದ ರಾಹುಲ್ ಗಾಂಧಿ, ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದಿದ್ದರು.
'ದೇಶದಲ್ಲಿ ಎಲ್ಲಾ ಪ್ರಜಾಸತ್ತಾತ್ಮಕ ಮಾರ್ಗಗಳು ಮುಚ್ಚಲ್ಪಟ್ಟಿವೆ. ಈ ಕಾರಣಕ್ಕಾಗಿಯೇ ಭಾರತ್ ಜೋಡೊ ಯಾತ್ರೆಯನ್ನು ನಾವು ಹಮ್ಮಿಕೊಂಡಿದ್ದೇವೆ. ಲೋಕಸಭೆ, ಚುನಾವಣಾ ಮಾರ್ಗ, ಪತ್ರಿಕಾ ರಂಗ ಸೇರಿದಂತೆ ಎಲ್ಲ ಮಾರ್ಗಗಳು ಮುಚ್ಚಿಹೋಗಿವೆ. ಎಲ್ಲಾ ಸಂಸ್ಥೆಗಳನ್ನು ಆರ್‌ಎಸ್‌ಎಸ್ ಹಾಗೂ ಬಿಜೆಪಿ ಮೂಲೆಗುಂಪು ಮಾಡಿದೆ. ಎಲ್ಲ ಸಂಸ್ಥೆಗಳ ಉನ್ನತ ಸ್ಥಾನಗಳಲ್ಲಿ ಆರ್‌ಎಸ್‌ಎಸ್ ಹಾಗೂ ಬಿಜೆಪಿಯವರೇ ತುಂಬಿಹೋಗಿದ್ದಾರೆ' ಎಂದು ಟೀಕಿಸಿದರು.
'ನ್ಯಾಯಾಂಗ ಒತ್ತಡದಲ್ಲಿದೆ. ನ್ಯಾಯಾಲಯಗಳ ಮೇಲೆ ಸಿದ್ದಾಂತವನ್ನು ಹೇರಲಾಗುತ್ತಿದೆ. ನಮಗಿರುವುದು ಇದೊಂದೇ ಮಾರ್ಗ. ಇದೊಂದೇ ಆಯ್ಕೆ. ನಾವು ರಸ್ತೆಗೆ ಇಳಿಯುವುದು. ಜನರನ್ನು ಅಪ್ಪಿಕೊಳ್ಳುವುದು. ರೈತರ ಮಾತುಗಳನ್ನು ಆಲಿಸುವುದು. ಕೂಲಿ ಕಾರ್ಮಿಕರು, ಸಣ್ಣ ವ್ಯಾಪಾರಿಗಳೊಂದಿಗೆ ಬೆರೆಯುವುದು..' ಎಂದು ರಾಹುಲ್ ಹೇಳಿದರು.

ಕಾಶ್ಮೀರದ ಶ್ರೀನಗರದವರೆಗೆ ಸಾಗಲಿದೆ ಭಾರತ್ ಜೋಡೊ ಯಾತ್ರೆ
ಭಾರತ್ ಜೋಡೊ ಯಾತ್ರೆಯು ತಮಿಳುನಾಡಿನ ಕನ್ಯಾಕುಮಾರಿಯಲ್ಲಿ ಆರಂಭಗೊಂಡಿದೆ. ಈಗಾಗಲೇ ದೇಶದ ಆರು ರಾಜ್ಯಗಳಲ್ಲಿ ಸಾಗಿರುವ ಯಾತ್ರೆಯು ಪ್ರಸ್ತುತ ಮಧ್ಯಪ್ರದೇಶವನ್ನು ಪ್ರವೇಶಿಸಿದೆ. ತಮಿಳುನಾಡು, ಕೇರಳ, ಕರ್ನಾಟಕ, ತೆಲಂಗಾಣ, ಆಂಧ್ರಪ್ರದೇಶ ಹಾಗೂ ಮಹಾರಾಷ್ಟ್ರಗಳಲ್ಲಿ ಕ್ರಮಿಸಿರುವ ಯಾತ್ರೆಗೆ ಭಾರೀ ಜನಬೆಂಬಲ ದೊರೆತಿದೆ. ಕಾಂಗ್ರೆಸ್ ಕಾರ್ಯಕರ್ತರು, ಸಾಮಾಜಿಕ ಹೋರಾಟಗಾರರು, ಕಲಾವಿದರು, ವ್ಯಾಪಾರಿಗಳು, ಕಾರ್ಮಿಕರು ಭಾರತ್ ಜೋಡೊ ಯಾತ್ರೆಯಲ್ಲಿ ಭಾಗವಹಿಸಿದ್ದಾರೆ. ಯಾತ್ರೆಯು 3500 ಕಿಮೀ ಕ್ರಮಿಸಲಿದೆ.












Click it and Unblock the Notifications