Kamareddy: ಸಿಎಂ ಕೆಸಿಆರ್, ರೇವಂತ್ ರೆಡ್ಡಿ ಇಬ್ಬರನ್ನೂ ಸೋಲಿಸಿದ ಬಿಜೆಪಿ ಅಭ್ಯರ್ಥಿ ರಮಣ ರೆಡ್ಡಿ
ತೆಲಂಗಾಣ ವಿಧಾನಸಭೆ ಚುನಾವಣೆ ಮತ ಎಣಿಕೆ ಮುಕ್ತಾಯದ ಹಂತದಲ್ಲಿದೆ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರ ಹಿಡಿಯುವುದು ಖಚಿತವಾಗಿದೆ. ಈಗಾಗಲೇ ಕಾಂಗ್ರೆಸ್ ಸಂಭ್ರಮಾಚರಣೆ ಆಚರಿಸುತ್ತಿದೆ.
ರಾಜ್ಯದಲ್ಲಿ ಬಿಜೆಪಿ ಈಗೀಗ ನೆಲೆ ಕಂಡುಕೊಳ್ಳುತ್ತಿದೆ. ಬಿಜೆಪಿ ಕೇವಲ 9 ಸ್ಥಾನಗಳಲ್ಲಿ ಮುನ್ನಡೆ ಪಡೆದುಕೊಂಡಿದೆ. ಈಗ ಬಿಜೆಪಿ ಆತ್ಮವಿಶ್ವಾಸ ಹೆಚ್ಚಿಸುವ ಸುದ್ದಿ ತೆಲಂಗಾಣದಿಂದ ಬಂದಿದೆ. ಹಾಲಿ ಸಿಎಂ ಕೆ. ಚಂದ್ರಶೇಖರ್ ರಾವ್ ಮತ್ತು ಭವಿಷ್ಯದ ಸಿಎಂ ಎಂದೇ ಬಿಂಬಿಸಲಾಗಿರುವ ರೇವಂತ್ ರೆಡ್ಡಿ ಇಬ್ಬರೂ ಕೂಡ ಕಾಮಾರೆಡ್ಡಿ ಕ್ಷೇತ್ರದಲ್ಲಿ ಸೋಲನುಭವಿಸಿದ್ದಾರೆ. ಇಲ್ಲಿ ಬಿಜೆಪಿ ಅಭ್ಯರ್ಥಿ ಕೆ. ವೆಂಕಟ ರಮಣ ರೆಡ್ಡಿ ಗೆಲುವು ಸಾಧಿಸಿದ್ದಾರೆ.

ಕಾಮಾರೆಡ್ಡಿ ಕ್ಷೇತ್ರದ ಮತ ಎಣಿಕೆ ಆರಂಭವಾದಾಗಿನಿಂದ ಕೂಡ ತ್ರಿಕೋನ ಸ್ಪರ್ಧೆ ಏರ್ಪಟ್ಟಿತ್ತು. ಆರಂಭದ ಸುತ್ತಿನ ಮತ ಎಣಿಕೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ರೇವಂತ್ ರೆಡ್ಡಿ ಮುನ್ನಡೆ ಕಾಯ್ದುಕೊಂಡಿದ್ದರು, ನಂತರ ಬಿಜೆಪಿ ಅಭ್ಯರ್ಥಿ ವೆಂಕಟ ರಮಣ ರೆಡ್ಡಿ ಮುನ್ನಡೆ ಪಡೆದುಕೊಳ್ಳುವ ಮೂಲಕ ಕುತೂಹಲ ಹೆಚ್ಚಿಸಿದ್ದರು.
ಅಂತಿಮ ಸುತ್ತಿನಲ್ಲಿ ಅಂತರವನ್ನು ಹೆಚ್ಚಿಸಿಕೊಂಡ ರಮಣ ರೆಡ್ಡಿ 5156 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಆರಂಭದಲ್ಲಿ ಮುನ್ನಡೆ ಪಡೆದುಕೊಂಡಿದ್ದ ರೇವಂತ್ ರೆಡ್ಡಿ ಅಂತಿಮವಾಗಿ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟರೆ ಹಾಲಿ ಸಿಎಂ ಕೆಸಿಆರ್ ಎರಡನೇ ಸ್ಥಾನ ಪಡೆದುಕೊಂಡಿದ್ದಾರೆ.
ಇನ್ನು ಕಾಮಾರೆಡ್ಡಿ ಕ್ಷೇತ್ರದಲ್ಲಿ ಕೆಸಿಆರ್ ಮತ್ತು ರೇವಂತ್ ರೆಡ್ಡಿ ಸೋಲನುಭವಿಸಿದ್ದರೂ ತಮ್ಮ ಸ್ವಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದಾರೆ. ಪ್ರತಿಷ್ಠೆಗಾಗಿ ಇಬ್ಬರೂ ಕೂಡ ಎರಡು ಕಡೆಗಳಲ್ಲಿ ಸ್ಪರ್ಧೆ ಮಾಡಿದ್ದರು.
ರೇವಂತ್ ರೆಡ್ಡಿ ತಮ್ಮ ಸ್ವಕ್ಷೇತ್ರ ಕೊಡಂಗಲ್‌ನಲ್ಲಿ ಭರ್ಜರಿ ಗೆಲುವು ಸಾಧಿಸಿದ್ದರೆ, ಗಜ್ವೆಲ್‌ನಲ್ಲಿ ಕೆ. ಚಂದ್ರಶೇಖರ್ ರಾವ್ ಗೆಲುವಿನ ನಗೆ ಬೀರಿದ್ದಾರೆ.












Click it and Unblock the Notifications