Madhya Pradesh Election Result: ಈ ಐದು ಕಾರಣಗಳಿಂದಲೇ ಮಧ್ಯಪ್ರದೇಶದಲ್ಲಿ ಅರಳಿದೆ ಕಮಲ
ಮಧ್ಯಪ್ರದೇಶದಲ್ಲಿ ಬಿಜೆಪಿ ಮತ್ತೊಮ್ಮೆ ಅಧಿಕಾರದ ಗದ್ದುಗೆ ಹಿಡಿದಿದೆ. ಅಧಿಕಾರ ವಿರೋಧಿಯನ್ನು ಧಿಕ್ಕರಿಸಿ, ಮಧ್ಯಪ್ರದೇಶದ ಜನ ಮತ್ತೊಮ್ಮೆ ಬಿಜೆಪಿ ಕೈಯಲ್ಲಿ ಅಧಿಕಾರದ ಚುಕ್ಕಾಣಿಯನ್ನು ನೀಡಿದ್ದಾರೆ. 230 ವಿಧಾನಸಭಾ ಸ್ಥಾನಗಳನ್ನು ಹೊಂದಿರುವ ಮಧ್ಯಪ್ರದೇಶದಲ್ಲಿ, ಕಮಲ ಪಡೆ ಸುಲಭವಾಗಿ ಮ್ಯಾಜಿಕ್ ನಂಬರ್ ಪಾರು ಮಾಡಿದೆ. ಮಧ್ಯಪ್ರದೇಶದಲ್ಲಿ ಬಿಜೆಪಿ ಭರ್ಜರಿ ಜಯ ಸಾಧಿಸಲು ಪ್ರಮುಖ ಕಾರಣಗಳು ಇಲ್ಲವೆ ನೋಡಿ..
ಮೋದಿ ಕೇಂದ್ರೀಕೃತ ಪ್ರಚಾರ
ಮಧ್ಯಪ್ರದೇಶ ತಮ್ಮ ಪಕ್ಷದ ಕೈ ತಪ್ಪುತ್ತದೆ ಎಂಬ ವಾಸನೆ ಬಡೆದಾಗಿನಿಂದಲೂ, ಕಮಲ ಪಡೆ ಆಕ್ಟಿವ್ ಆಗಿ ಕಾರ್ಯ ಆರಂಭಿಸಿತು. ಮಧ್ಯ ಪ್ರದೇಶ ವಿಧಾನಸಭೆಯ ಗದ್ದುಗೆ ಏರಲು ಬಿಜೆಪಿ ಮಾಸ್ಟರ್ ಪ್ಲ್ಯಾನ್ ರೂಪಿಸಿಕೊಂಡಿತು. ಅದರಂತೆ ಪ್ರಧಾನಿ ನರೇಂದ್ರ ಮೋದಿ ಅವರು ಸತತ ಪ್ರಚಾರ ಸಭೆಗಳನ್ನು ನಡೆಸಿದರು.

ಬಹಿರಂಗ ಪ್ರಚಾರಕ್ಕೆ 10 ದಿನಗಳ ಮುನ್ನ ಮೋದಿ 15 ಬಹಿರಂಗ ಸಭೆ ನಡೆಸಿದರು. ಕಳೆದ ಚುನಾವಣೆಯಲ್ಲಿ ಕೈ ತಪ್ಪಿದ್ದ ಕ್ಷೇತ್ರಗಳನ್ನು ಗೆಲ್ಲಲು, ಬಿಜೆಪಿ ಕೇಂದ್ರ ನಾಯಕರು ಸತತ ಪ್ರಚಾರ ಮಾಡಿದರು.
ಅಮಿತ್ ಶಾ 21, ಜೆ.ಪಿ ನಡ್ಡಾ 14, ರಾಜನಾಥ್ ಸಿಂಗ್ 12 ಪ್ರಚಾರ ಸಭೆಗಳಲ್ಲಿ ಭಾಗಿಯಾಗಿದ್ದರು. ಇನ್ನು ಶಿವರಾಜ್ ಸಿಂಗ್ ಚೌಹಣ್ ರಾಜ್ಯದ ಎಲ್ಲಕಡೆ ಸಂಚರಿಸಿ ಸುಮಾರು 165 ಸಮಾವೇಶಗಳನ್ನು ಮಾಡಿ ಸೈ ಎನಿಸಿಕೊಂಡರು.
ಜನಪ್ರೀಯ ಯೋಜನೆಗಳು
ಮಧ್ಯಪ್ರದೇಶದ ಚುನಾವಣಾ ಪ್ರಚಾರವು ಜನಪ್ರೀಯ ಕಲ್ಯಾಣ ಕಾರ್ಯಕ್ರಮಗಳ ಸಮರದಂತೆ ಕಾಣಿಸಿಕೊಂಡಿತ್ತು. ಆಡಳಿತ ಪಕ್ಷದ ಲಾಡ್ಲಿ ಬೆಹ್ನಾ ಮತ್ತು ಕಿಸಾನ್ ಸಮ್ಮಾನ್ ನಿಧಿ ಕಾರ್ಯಕ್ರಮಗಳು ಸಾರ್ವಜನಿಕ ವಿಶ್ವಾಸವನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸಿವೆ.

ಇದೇ ನವೆಂಬರ್‌ನಲ್ಲಿ, ಎರಡೂ ಯೋಜನೆಗಳ ಫಲಾನುಭವಿಗಳು ತಮ್ಮ ಖಾತೆಗಳಲ್ಲಿ ಕ್ರಮವಾಗಿ ₹ 1,250 ಮತ್ತು ₹ 10,000 ಪಡೆದರು. ಈ ಮೂಲಕ ಬಿಜೆಪಿ ಮತದಾರರ ವಿಶ್ವಾಸ ಗೆದ್ದಿತು. ಮಹಿಳೆಯರು, ಬಡ ಮತದಾರರು ಮತ್ತು ದಲಿತರು ಮತ್ತು ಬುಡಕಟ್ಟು ಜನರಿಗೆ ಸಹಾಯ ಮಾಡುವ ಇಮೇಜ್ ಅನ್ನು ನಿರ್ಮಿಸುವಲ್ಲಿ ಬಿಜೆಪಿ ಯಶಸ್ವಿಯಾಗಿದೆ.
ಡಬಲ್ ಇಂಜಿನ್ ಭರವಸೆ
ರಾಜ್ಯ ಮತ್ತು ಕೇಂದ್ರ ನಾಯಕರ ಆಕ್ರಮಣಕಾರಿ ಪ್ರಚಾರವು ಡಬಲ್ ಇಂಜಿನ್ ಸರ್ಕಾರ ರಾಜ್ಯದ ನಿವಾಸಿಗಳಿಗೆ ಉತ್ತಮ ಫಲಿತಾಂಶಗಳನ್ನು ನೀಡುತ್ತದೆ, ಎಂಬ ಸಂದೇಶವನ್ನು ರವಾನಿಸಲು ಸಾಧ್ಯವಾಯಿತು. ಡಬಲ್ ಇಂಜಿನ್ ಸರ್ಕಾರದ ಲಾಭವನ್ನು ಕಳೆದ ಒಂಬತ್ತು ವರ್ಷಗಳಲ್ಲಿ ರಾಜ್ಯದ ಜನ ಅನುಭವಿಸಿದ್ದು, ಮತ್ತೊಮ್ಮೆ ಬಿಜೆಪಿ ಕೈ ಹಿಡಿಯಿತು.

ಕಾಂಗ್ರೆಸ್ ಪ್ರಚಾರ ವಿಫಲ
ಮಧ್ಯ ಪ್ರದೇಶ ಚುನಾವಣೆಯಲ್ಲಿ ಕಾಂಗ್ರೆಸ್ ಪ್ರಚಾರವೂ ಉತ್ತಮವಾಗಿತ್ತು. ಅಲ್ಲದೆ ಕೈ ನಾಯಕರು ಹೆಚ್ಚಾಗಿ ಸಾಮಾಜಿಕ ಮಾಧ್ಯಮದ ಮೊರೆ ಹೋಗಿದ್ದರು. ಇನ್ನು ಮತದಾರರನ್ನು ಸೆಳೆಯಲು ಕಾಂಗ್ರೆಸ್ ಪಕ್ಷವು ತನ್ನ ಅಭ್ಯರ್ಥಿಗಳನ್ನೇ ಬಹುವಾಗಿ ನಂಬಿಕೊಂಡಿತ್ತು.
ತಾನು ಹಾಕಿಕೊಂಡ ಗುರಿಯನ್ನು ಮುಟ್ಟುವಲ್ಲಿ ಕಾಂಗ್ರೆಸ್ ಎಡವಿತು. ರಾಜ್ಯದ ಅಭಿವೃದ್ಧಿಗೆ ಕಾಂಗ್ರೆಸ್ 1290 ಅಂಶಗಳ ಪ್ರಣಾಳಿಕೆ ಬಿಡುಗಡೆ ಮಾಡಿತು. ಈ ಅಂಶಗಳನ್ನು ಜನರಿಗೆ ಮನದಟ್ಟು ಮಾಡಿಕೊಡುವಲ್ಲಿ ನಾಯಕರು ವಿಫಲರಾದರು.
ಮೊದಲೇ ಅಭ್ಯರ್ಥಿಗಳ ಹೆಸರು ಘೋಷಣೆ
ಬಿಜೆಪಿ ಒಂದು ವರ್ಷಕ್ಕೂ ಮುನ್ನವೇ ವಿಧಾನಸಭಾ ಚುನಾವಣೆಯ ರಣತಂತ್ರ ರೂಪಿಸಿತು. ಮತ್ತು ಹಿಂದಿನ ವಿಧಾನಸಭಾ ಚುನಾವಣೆಯಲ್ಲಿ ಸೋತ ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಮೊದಲೇ ಘೋಷಿಸಿತು.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ರಾಜ್ಯದ ಪ್ರತಿ ಮಂಡಲಗಳಲ್ಲಿ ಕಾರ್ಯಕರ್ತರೊಂದಿಗೆ ಸಭೆ ನಡೆಸಿದರು. ಅಮಿತ್ ಶಾ ತಂಡವು ನಾಯಕರು ನೀಡಿದ ಸೂಚನೆಗಳನ್ನು ಅಚ್ಚು ಕಟ್ಟಾಗಿ ಕಾರ್ಯರುಪಕ್ಕೆ ತಂದಿತು. ಇದು ಬಿಜೆಪಿ ವಿರುದ್ಧದ ಆಡಳಿತ ವಿರೋಧಿ ಅಲೆಯನ್ನು ಮೆಟ್ಟಿನಿಲ್ಲಲು ನೆರವಾಯಿತು.












Click it and Unblock the Notifications