ಭಯೋತ್ಪಾದಕರಿಗೆ ನೆರವು ಕೊಟ್ಟ ಸಂಸ್ಥೆಯಿಂದ ಕೋಟ್ಯಂತರ ಹಣ ಪಡೆದ ಬಿಜೆಪಿ
ನವದೆಹಲಿ, ನವೆಂಬರ್ 22: ಭಯೋತ್ಪಾದಕರಿಗೆ ಹಣ ಸಹಾಯ ಮಾಡಿದ ಆರೋಪ ಎದುರಿಸುತ್ತಿರುವ ಸಂಸ್ಥೆಯೊಂದರಿಂದ ಕೋಟ್ಯಂತರ ರೂಪಾಯಿ ದೇಣಿಗೆಯನ್ನು ಬಿಜೆಪಿ ಪಡೆದಿದೆ.
ಬಿಜೆಪಿ ಪಕ್ಷವೇ ಚುನಾವಣಾ ಆಯೋಗಕ್ಕೆ ನೀಡಿರುವ ಮಾಹಿತಿಯಲ್ಲಿ ಆರ್‌ಕೆಡಬ್ಲು ಡೆವೆಲೆಪರ್ಸ್ ಸಂಸ್ಥೆಯಿಂದ 10 ಕೋಟಿ ಹಣವನ್ನು ದೇಣಿಗೆಯಾಗಿ ಪಡೆದಿರುವುದಾಗಿ ಹೇಳಿದೆ.
ಆದರೆ ಇದೇ ಆರ್‌ಕೆಡಬ್ಲು ಡೆವೆಲಪರ್ಸ್ ಸಂಸ್ಥೆಯು ಭಯೋತ್ಪಾದಕರಿಗೆ ಹಣ ಸಹಾಯ ಮಾಡಿದ ಆರೋಪ ಇದೆ. ಇದರ ಬಗ್ಗೆ ಕೇಂದ್ರ ಅಧೀನದ ಇಡಿ (ಜಾರಿ ನಿರ್ದೇಶನಾಲಯ) ಸಂಸ್ಥೆಯು ತನಿಖೆ ನಡೆಸುತ್ತಿದೆ.

1993 ರ ಮುಂಬೈ ಬ್ಲಾಸ್ಟ್ ಆರೋಪಿಗಳೊಂದಿಗೆ ಹಣದ ವ್ಯವಹಾರ ಮತ್ತು ಹಣ ಸಹಾಯದ ಬಗ್ಗೆ ಈ ಸಂಸ್ಥೆಯ ವಿರುದ್ಧ ಪ್ರಕರಣ ದಾಖಲಾಗಿತ್ತು. ಈ ಸಂಸ್ಥೆಗೂ ಮಾಫಿಯಾ ಡಾನ್ ದಾವೂದ್ ಇಬ್ರಾಹಿಂ ಗೂ ಸಂಬಂಧ ಇರುವ ಬಗ್ಗೆಯೂ ತನಿಖೆ ನಡೆಯುತ್ತಿದೆ.
ಅಂಡರ್‌ವರ್ಲ್ಡ್ ಪರವಾಗಿ ಒಪ್ಪಂದಗಳು, ವ್ಯವಹಾರ, ಹಣ ವ್ಯವಸ್ಥೆ ಮಾಡುತ್ತಿದ್ದ ಆರೋಪದ ಮೇಲೆ ಆರ್‌ಕೆಡಬ್ಲು ಡೆವೆಲಪರ್ಸ್ ಸಂಸ್ಥೆಯ ಮಾಜಿ ಸಿಇಓ ಅನ್ನು ಬಂಧಿಸಲಾಗಿತ್ತು.
ಇಂಥಹಾ ಅಪರಾಧ ಹಿನ್ನೆಲೆ ಇರುವ ಸಂಸ್ಥೆಯಿಂದ ದೇಣಿಗೆ ಪಡೆದಿರುವ ಬಗ್ಗೆ ಬಿಜೆಪಿ ಮೇಲೆ ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳು ವಾಗ್ದಾಳಿ ನಡೆಸಿವೆ. ಅಷ್ಟೆ ಅಲ್ಲದೆ ಟ್ವಿಟ್ಟರ್‌ನಲ್ಲಿ #pakistanfundsBJP (ಬಿಜೆಪಿಗೆ ಪಾಕಿಸ್ತಾನ ದೇಣಿಗೆ ನೀಡುತ್ತಿದೆ) ಹ್ಯಾಷ್‌ಟ್ಯಾಗ್ ಟ್ರೆಂಡ್ ಆಗುತ್ತಿದೆ.
ಬಿಜೆಪಿಯು 2018-19 ನೇ ಸಾಲಿನಲ್ಲಿ 800 ಕೋಟಿ ಹಣವನ್ನು ದೇಣಿಗೆ ರೂಪದಲ್ಲಿ ಪಡೆದಿದೆ. ಟಾಟಾ ಗ್ರೂಫ್ ಒಂದೇ 356 ಕೋಟಿ ಹಣವನ್ನು ಬಿಜೆಪಿಗೆ ದೇಣಿಗೆಯಾಗಿ ನೀಡಿದೆ. ಇದೇ ಸಾಲಿನಲ್ಲಿ ಕಾಂಗ್ರೆಸ್ 146 ಕೋಟಿ ಹಣವನ್ನು ದೇಣಿಗೆಯಾಗಿ ಪಡೆದಿದೆ.












Click it and Unblock the Notifications