ಆಂಧ್ರ ಪ್ರದೇಶ; ಟಿಡಿಪಿ, ಜನಸೇನಾ, ಬಿಜೆಪಿ ಮೈತ್ರಿ, ಸೀಟು ಹಂಚಿಕೆ ಅಂತಿಮ
ನವದೆಹಲಿ, ಮಾರ್ಚ್ 08: ಆಂಧ್ರ ಪ್ರದೇಶದಲ್ಲಿ ಲೋಕಸಭೆ ಚುನಾವಣೆಯ ಜೊತೆಗೆ 175 ಸದಸ್ಯ ಬಲದ ವಿಧಾನಸಭೆಗೆ ಸಹ ಚುನಾವಣೆ ನಡೆಯಲಿದೆ. 2024ರ ಚುನಾವಣೆಯಲ್ಲಿ ಮುಖ್ಯಮಂತ್ರಿ ವೈ. ಎಸ್. ಜಗನ್ ಮೋಹನ್ ರೆಡ್ಡಿ ಸೋಲಿಸಲು ಮೈತ್ರಿಕೂಟ ರಚನೆಯಾಗಿದೆ.
ಶುಕ್ರವಾರದ ಮಾಹಿತಿ ಪ್ರಕಾರ ಆಂಧ್ರ ಪ್ರದೇಶದ ಮಾಜಿ ಮುಖ್ಯಮಂತ್ರಿ, ಟಿಡಿಪಿ ಮುಖ್ಯಸ್ಥ ಎನ್. ಚಂದ್ರಬಾಬು ನಾಯ್ಡು ಮತ್ತು ನಟ, ಜನಸೇನಾ ಪಕ್ಷದ ಪವನ್ ಕಲ್ಯಾಣ್ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿದ್ದು, ಸೀಟು ಹಂಚಿಕೆಯೂ ಅಂತಿಮವಾಗಿದೆ.

ಈ ಮೈತ್ರಿಕೂಟ ಆಂಧ್ರ ಪ್ರದೇಶ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಯಲ್ಲಿಯೂ ಮುಂದುವರೆಯಲಿದೆ. ರಾಜ್ಯದಲ್ಲಿ 25 ಲೋಕಸಭಾ ಸೀಟು, 175 ವಿಧಾನಸಭಾ ಸೀಟುಗಳಿವೆ. ಬಿಜೆಪಿ ಲೋಕಸಭೆಯಲ್ಲಿ 6-8 ಸೀಟುಗಳಲ್ಲಿ, ವಿಧಾನಸಭೆಯಲ್ಲಿ 10-12 ಕ್ಷೇತ್ರಗಳಲ್ಲಿ ಕಣಕ್ಕಿಳಿಯಲಿದೆ.
ಈಗಾಗಲೇ ನಟ ಪವನ್ ಕಲ್ಯಾಣ್ ಎನ್‌ಡಿಎ ಮೈತ್ರಿಕೂಟಕ್ಕೆ ಬೆಂಬಲ ಘೋಷಣೆ ಮಾಡಿದ್ದಾರೆ. ಜನಸೇನಾ ಪಕ್ಷ ಲೋಕಸಭೆಯಲ್ಲಿ 3, ವಿಧಾನಸಭೆಯಲ್ಲಿ 24 ಸೀಟುಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ.
ಜಗನ್ ಪಾರುಪತ್ಯ: 2019ರ ಲೋಕಸಭೆ, ವಿಧಾನಸಭೆ ಚುನಾವಣೆಯಲ್ಲಿ ವೈಎಸ್‌ಆರ್‌ಸಿಪಿ ಮುಖ್ಯಸ್ಥ ವೈ. ಎಸ್. ಜಗನ್ ಮೋಹನ್ ರೆಡ್ಡಿ ಪಾರುಪತ್ಯ ಸಾಧಿಸಿದ್ದರು. 175 ಕ್ಷೇತ್ರಗಳ ಪೈಕಿ 151ರಲ್ಲಿ ಜಯಗಳಿಸಿದ್ದರು. ಲೋಕಸಭೆಯಲ್ಲಿ 25ರಲ್ಲಿ 22 ಸೀಟು ಗೆದ್ದಿದ್ದರು.
ಕಳೆದ ಚುನಾವಣೆಯಲ್ಲಿ ಆಂಧ್ರ ಪ್ರದೇಶದಲ್ಲಿ ಲೋಕಸಭೆ, ವಿಧಾನಸಭೆಗೆ ಏಕಾಂಗಿಯಾಗಿ ಸ್ಪರ್ಧಿಸಿದ್ದ ಬಿಜೆಪಿ ಒಂದು ಸೀಟು ಸಹ ಗೆಲ್ಲಲು ಸಾಧ್ಯವಾಗದೇ ಮುಖಭಂಗ ಅನುಭವಿಸಿತ್ತು. ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ 400 ಸೀಟುಗಳನ್ನು ಗೆಲ್ಲುವ ಗುರಿ ಹೊಂದಿರುವ ಬಿಜೆಪಿ ಮೈತ್ರಿ ಮಾಡಿಕೊಂಡಿದೆ.
ಟಿಡಿಪಿ ಮುಖ್ಯಸ್ಥ ಎನ್. ಚಂದ್ರಬಾಬು ನಾಯ್ಡು ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ನಡುವಿನ ಎರಡು ಸುತ್ತಿನ ಮಾತುಕತೆಯ ಬಳಿಕ ರಾಜ್ಯದಲ್ಲಿ ಸೀಟು ಹಂಚಿಕೆ ಅಂತಿಮಗೊಳಿಸಲಾಗಿದೆ ಎಂದು ರಾಜ್ಯಸಭಾ ಸದಸ್ಯ ಮತ್ತು ಡಿಡಿಪಿ ನಾಯಕ ಕೆ. ರವೀಂದ್ರ ಕುಮಾರ್ ಹೇಳಿದ್ದಾರೆ.
2018ರ ತನಕ ಎನ್. ಚಂದ್ರಬಾಬು ನಾಯ್ಡು ಎನ್‌ಡಿಎ ಮೈತ್ರಿಕೂಟ ಪ್ರಮುಖ ನಾಯಕರಾಗಿದ್ದರು. ಆದರೆ ಚುನಾವಣೆಗೂ ಮೊದಲೇ ಮೈತ್ರಿಕೂಟದಿಂದ ಹೊರಬಂದರು. ಈ ಬಾರಿ ಚುನಾವಣೆ ಎದುರಾಗುತ್ತಿರುವಾಗ ಮತ್ತೆ ಬಿಜೆಪಿ ಜೊತೆ ಕೈ ಜೋಡಿಸಿದ್ದಾರೆ. ಇದಕ್ಕೆ ಜನಸೇನಾ ಸಹ ಸೇರಿಕೊಂಡಿದೆ.
ಮೈತ್ರಿ ಮಾತುಕತೆಯ ವೇಳೆ ಬಿಜೆಪಿ ವೈಜಾಕ್, ವಿಜಯವಾಡ, ರಾಜಂಪೇಟ್, ರಾಜಮಂಡ್ರಿ ಮತ್ತು ತಿರುಪತಿ ಕ್ಷೇತ್ರಕ್ಕಾಗಿ ಬೇಡಿಕೆ ಇಟ್ಟಿದೆ ಎಂಬ ಸುದ್ದಿಗಳು ಹಬ್ಬಿವೆ. ಜನಸೇನಾ ಪಕ್ಷಕ್ಕೆ ಮಚಲಿಪಟ್ಟಣ ಸೇರಿ 3 ಲೋಕಸಭಾ ಕ್ಷೇತ್ರಗಳು ಸಿಗಲಿವೆ ಎಂದು ಅಂದಾಜಿಸಲಾಗಿದೆ.
ಗುರುವಾರ ಆಂಧ್ರ ಪ್ರದೇಶ ವಿಧಾನಸಭೆ ಚುನಾವಣೆ ಕುರಿತು ಚುನಾವಣಾ ಪೂರ್ವ ಸಮೀಕ್ಷೆಯೊಂದು ಪ್ರಕಟವಾಗಿದೆ. ಈ ಬಾರಿ ಜಗನ್ ನೇತೃತ್ವದ ವೈಎಸ್‌ಆರ್‌ಸಿಪಿ ಶೇ 48ರಷ್ಟು ಮತಗಳನ್ನು ಪಡೆದು, 106-110 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ. ಟಿಡಿಪಿ-ಜನಸೇನಾ ಮೈತ್ರಿಕೂಟ 64-68 ಸ್ಥಾನ ಮತ್ತು ಇತರರು 0 ಸ್ಥಾನಗಳಲ್ಲಿ ಜಯಗಳಿಸಲಿದ್ದಾರೆ ಎಂದು ಸಮೀಕ್ಷೆ ಹೇಳಿದೆ.
ಒಂದು ವೇಳೆ ಬಿಜೆಪಿ-ಟಿಡಿಪಿ-ಜನಸೇನಾ ಮೈತ್ರಿ ಮಾಡಿಕೊಂಡರೂ ಸಹ ವೈಎಸ್‌ಆರ್‌ಸಿಪಿ 115-122, ಟಿಡಿಪಿ-ಜೆಎಸ್‌ಪಿ-ಬಿಜೆಪಿ ಮೈತ್ರಿಕೂಟ 60-65 ಮತ್ತು ಇತರರು 0 ಸ್ಥಾನಗಳಲ್ಲಿ ಜಯಗಳಿಸಲಿದ್ದಾರೆ ಎಂದು ಸಮೀಕ್ಷೆ ಅಂದಾಜಿಸಿದೆ. ಇದು ಕೇವಲ ವಿಧಾನಸಭೆ ಚುನಾವಣೆ ಕುರಿತು ನಡೆದ ಸಮೀಕ್ಷೆಯಾಗಿದೆ.
ಕಾಂಗ್ರೆಸ್ ಪಕ್ಷ ಸಹ ತೆಲಂಗಾಣದಲ್ಲಿ ಗೆದ್ದ ಬಳಿಕ ಪಕ್ಕದ ಆಂಧ್ರ ಪ್ರದೇಶದ ಮೇಲೆ ಕಣ್ಣಿಟ್ಟಿದೆ. ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಸಹೋದರಿ ವೈ. ಎಸ್. ಶರ್ಮಿಳಾ ರಾಜ್ಯ ಕಾಂಗ್ರೆಸ್‌ನ ಅಧ್ಯಕ್ಷರು. ಆದರೆ ಈ ನಡೆ ಚುನಾವಣೆಯಲ್ಲಿ ಹೇಗೆ ಸಹಾಯಕವಾಗಲಿದೆ? ಎಂದು ಕಾದು ನೋಡಬೇಕಿದೆ.












Click it and Unblock the Notifications