2019ರಲ್ಲಿ ಬಿಜೆಪಿಗೆ 100-110 ಸ್ಥಾನ ಖೋತಾ: ಶಿವಸೇನೆ ಭವಿಷ್ಯ
ಮುಂಬೈ, ಮಾರ್ಚ್ 16: ಇದೇ ಟ್ರೆಂಡ್ ಮುಂದುವರಿದರೆ 2019ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ 100-110 ಸ್ಥಾನಗಳು ಕಡಿಮೆಯಾಗಲಿವೆ ಎಂದು ಒಂದು ಕಾಲದ ಎನ್ಡಿಎ ಮಿತ್ರ ಪಕ್ಷ ಶಿವಸೇನೆ ಹೇಳಿದೆ.
"ಬಿಜೆಪಿ ಸಣ್ಣ ರಾಜ್ಯ ತ್ರಿಪುರಾದಲ್ಲಿ ಗೆದ್ದು ಬೀಗುತ್ತಿರುವಾಗಲೇ ಭದ್ರಕೋಟೆ ಗೋರಖಪುರ್ ಮತ್ತು ಫುಲ್ಪುರ್ ನಲ್ಲಿ ಸಮಾಜವಾದಿ ಪಕ್ಷ ಗೆದ್ದಿರುವುದು ಕೇಸರಿ ಪಕ್ಷದ ಪಾಳಯದಲ್ಲಿ ತಲ್ಲಣ ಸೃಷ್ಟಿಸಿದೆ," ಎಂದು ಶಿವಸೇನೆ ತನ್ನ ಮುಖವಾಣಿ ಸಾಮ್ನಾದಲ್ಲಿ ಹೇಳಿದೆ.
ಆದರೆ ಬಿಜೆಪಿ ಮಾತ್ರ ಉಪಚುನಾವಣೆಗಳ ಫಲಿತಾಂಶ ದೇಶದ ಮನಸ್ಥಿತಿಯನ್ನು ತೋರಿಸುತ್ತಿಲ್ಲ ಎಂದು ಹೇಳಿದೆ. ಪ್ರಧಾನ ಮಂತ್ರಿಯಾಗಿ ನರೇಂದ್ರ ಮೋದಿ ಅಧಿಕಾರ ಸ್ವೀಕರಿಸಿದ ನಂತರ ಬಿಜೆಪಿ ಒಟ್ಟು 10 ಲೋಕಸಭಾ ಸ್ಥಾನಗಳನ್ನು ಕಳೆದುಕೊಂಡಿದ್ದು ತನ್ನ ಬಲವನ್ನು 282ರಿಂದ 272ಕ್ಕೆ ಇಳಿಸಿಕೊಂಡಿದೆ. 543ಸದಸ್ಯರ ಲೋಕಸಭೆಯಲ್ಲಿ ಸರಳ ಬಹುಮತವವನ್ನಷ್ಟೇ ಹೊಂದಿದೆ.

ಇದೀಗ ಬಿಜೆಪಿ ಸೋಲಿಗೆ ಕಡಿಮೆ ಮತದಾನ, ಉತ್ಸಾಹದ ಕೊರತೆ, ಎಸ್ಪಿ ಮತ್ತು ಬಿಎಸ್ಪಿ ನಡುವೆ ಹೊಂದಾಣಿಕೆ ಎಂದೆಲ್ಲಾ ದೂರುತ್ತಿದೆ. "2014ರಿಂದ ಎಷ್ಟು ಡೀಲ್ ಗಳನ್ನು ಮಾಡಿ ಬಿಜೆಪಿ ಅಧಿಕಾರಕ್ಕೆ ಬಂದಿದೆ.. ತ್ರಿಪುರಾದಲ್ಲಿ ಭಾರೀ ಅಭಿಮಾನಿಗಳನ್ನು ಹೊಂದಿರುವ ನರೇಶ್ ಅಗರ್ವಾಲ್ ರನ್ನು ಬಿಜೆಪಿಗೆ ಸೇರಿಸಿಕೊಂಡಿದ್ದು ಯಾಕೆ? ತ್ರಿಪುರಾದಲ್ಲಿ ಕಾಂಗ್ರೆಸ್ ಮತ್ತು ಟಿಎಂಸಿಯ ಎಲ್ಲಾ ಶಾಸಕರನ್ನು ಬಿಜೆಪಿಗೆ ಸೇರಿಸಿಕೊಂಡಿದ್ದರಿಂದ ಮಾತ್ರ ಅಧಿಕಾರಕ್ಕೆ ಬಂತು ಎಂದು ಶಿವಸೇನೆ ಟೀಕಿಸಿದೆ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ
ಉಪಚುನಾವಣೆ ವೇಳೆ ಪ್ರತೀ ಬೂತ್ ಗಳಲ್ಲಿ ದೊಡ್ಡ ಮಟ್ಟಕ್ಕೆ ಜನರು ಬಿಜೆಪಿ ವಿರುದ್ಧ ಮತಚಲಾಯಿಸಿದ್ದಾರೆ. 2014ರಲ್ಲಿ 2-3 ಲಕ್ಷದಿಂದ ಗೋರಖಪುರ್ ಮತ್ತು ಫುಲ್ಪುರ್ ನಲ್ಲಿ ಗೆದ್ದ ಬಿಜೆಪಿಯನ್ನು ಸೋಲಿಸಲೆಂದೇ ಎಸ್ಪಿ ಅಭ್ಯರ್ಥಿಗಳಿಗೆ ಮತ ಹಾಕಲಾಗಿದೆ ಎಂದು ಶಿವಸೇನೆ ವಿಶ್ಲೇಷಿಸಿದೆ.
ಈ ಎಲ್ಲಾ ಕಾರಣಗಳಿಗೆ 2018ರಲ್ಲಿ ಬಿಜೆಪಿಯ ಸಂಖ್ಯೆ 280 ಇರುವುದಿಲ್ಲ. ಬದಲು 100 - 110 ಸ್ಥಾನ ಕಡಿಮೆಯಾಗಲಿವೆ. ಚುನಾವಣೆ ರಷ್ಯಾ, ಅಮೆರಿಕಾ, ಕೆನಡಾ, ಫ್ರಾನ್ಸ್ ಅಥವಾ ಇಸ್ರೇಲ್ ನಲ್ಲಿ ನಡೆಯುವುದಿಲ್ಲ. ನಡೆಯುವುದು ಭಾರತದಲ್ಲಿ ಹಾಗಾಗಿ ನಿಮ್ಮ ಹೆಜ್ಜೆಗಳನ್ನು ಇಲ್ಲಿ ಇಡಿ ಎಂದು ಶಿವಸೇನೆ ಎಚ್ಚರಿಸಿದೆ.












Click it and Unblock the Notifications