ವಿಧಾನಸಭೆ ಚುನಾವಣೆ ಸಮಯದಲ್ಲಿಯೇ ಬಿಜೆಪಿಗೆ ಮಹಾರಾಷ್ಟ್ರದಲ್ಲಿ ಹಿನ್ನಡೆ
ಮುಂಬೈ, ಸೆಪ್ಟೆಂಬರ್ 14: ಮಹಾರಾಷ್ಟ್ರ ವಿಧಾನಸಭೆ ಚುನಾವಣೆ 2024ರ ಸಮಯದಲ್ಲಿಯೇ ಬಿಜೆಪಿಗೆ ಹಿನ್ನಡೆ ಉಂಟಾಗಿದೆ. ಹಿರಿಯ ಹಾಗೂ ವಿದರ್ಭ ಪ್ರಾಂತ್ಯದ ಪ್ರಭಾವಿ ನಾಯಕರೊಬ್ಬರು ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರಿದ್ದಾರೆ. ಈ ವರ್ಷದ ಅಂತ್ಯದಲ್ಲಿ 288 ಸದಸ್ಯ ಬಲದ ವಿಧಾನಸಭೆಗೆ ನಡೆಯಲಿರುವ ಚುನಾವಣೆ ದೇಶಾದ್ಯಂತ ಕುತೂಹಲವನ್ನು ಮೂಡಿಸಿದೆ. ಬಿಜೆಪಿ 'ಮಹಾಯುತಿ' ಮೈತ್ರಿಕೂಟದ ಭಾಗವಾಗಿ ಚುನಾವಣೆ ಎದುರಿಸುತ್ತಿದೆ.
ವಿದರ್ಭ ಪ್ರಾಂತ್ಯದ ಪ್ರಭಾವಿ ನಾಯಕ ಗೋಪಾಲ್‌ದಾಸ್ ಎಸ್. ಅಗರ್‌ವಾಲ್ ಬಿಜೆಪಿ ತೊರೆದು ಕಾಂಗ್ರೆಸ್‌ಗೆ ವಾಪಸ್ ಆಗಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿಯಾಗಿ ಗೊಂಡಿಯಾ ಕ್ಷೇತ್ರದಿಂದ 2004, 2009, 2014ರಲ್ಲಿ ಅವರು ಜಯಗಳಿಸಿದ್ದರು. ಆದರೆ 2019ರ ಲೋಕಸಭೆ ಚುನಾವಣೆಗೂ ಮೊದಲು ಅವರು ಬಿಜೆಪಿ ಸೇರಿ, ಪಕ್ಷೇತರ ಅಭ್ಯರ್ಥಿ ವಿನೋದ್ ಎಸ್. ಅಗರ್‌ವಾಲ್ ವಿರುದ್ಧ ಸೋಲು ಕಂಡಿದ್ದರು.

ಗೊಂಡಿಯಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪ್ರಾಬಲ್ಯವನ್ನು ಹೊಂದಿದೆ. 1952ರ ಬಳಿಕ 12 ಬಾರಿ ಕ್ಷೇತ್ರದಲ್ಲಿ ಕಾಂಗ್ರೆಸ್ ಜಯಗಳಿಸಿದೆ. 2019, 1995 ಮತ್ತು 1999ರಲ್ಲಿ ಮಾತ್ರ ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಗಳು ಗೆದ್ದಿಲ್ಲ. 73 ವರ್ಷದ ಗೋಪಾಲ್‌ದಾಸ್ ಎಸ್. ಅಗರ್‌ವಾಲ್ ಕೆಲವು ದಿನಗಳ ಹಿಂದೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ. ಪಿ. ನಡ್ಡಾಗೆ ರಾಜೀನಾಮೆ ಪತ್ರವನ್ನು ರವಾನಿಸಿದ್ದರು.
ವಿದರ್ಭ ಪ್ರಾಂತ್ಯದಲ್ಲಿ ಹಿನ್ನಡೆ: ಗೋಪಾಲ್‌ದಾಸ್ ಎಸ್. ಅಗರ್‌ವಾಲ್ ಕಾಂಗ್ರೆಸ್‌ಗೆ ಮರಳಿರುವುದು ವಿದರ್ಭ ಪ್ರಾಂತ್ಯದಲ್ಲಿ ಬಿಜೆಪಿಗೆ ಹಿನ್ನಡೆ ಉಂಟು ಮಾಡಿದೆ. 2024ರ ಲೋಕಸಭೆ ಚುನಾವಣೆಯಲ್ಲಿಯೂ ಪ್ರಾಂತ್ಯದಲ್ಲಿ ಬಿಜೆಪಿಗೆ ಭಾರೀ ಹಿನ್ನಡೆಯಾಗಿತ್ತು. 10 ಸೀಟುಗಳ ಪೈಕಿ ಕೇವಲ ಒಂದರಲ್ಲಿ ಬಿಜೆಪಿ ಗೆಲುವು ಸಾಧಿಸಿತ್ತು.
ಕಾಂಗ್ರೆಸ್ ಪಕ್ಷಕ್ಕೆ ಶುಕ್ರವಾರ ಗೋಪಾಲ್‌ದಾಸ್ ಎಸ್. ಅಗರ್‌ವಾಲ್ ಪಕ್ಷದ ರಾಜ್ಯಾಧ್ಯಕ್ಷ ನಾನಾ ಪಟೋಲೆ ನೇತೃತ್ವದಲ್ಲಿ ಸೇರ್ಪಡೆಗೊಂಡರು. ನಾವು ಗೋಪಾಲ್‌ದಾಸ್ ಅವರನ್ನು ಆತ್ಮೀಯವಾಗಿ ಪಕ್ಷಕ್ಕೆ ಸ್ವಾಗತಿಸುತ್ತೇವೆ. ವಿದರ್ಭ ಪ್ರಾಂತ್ಯದ ಜನರು ನಮಗೆ ಯಾವಾಗಲೂ ಬೆಂಬಲ ನೀಡಿದ್ದಾರೆ. ಮುಂದಿನ ವಿಧಾನಸಭೆ ಚುನಾವಣೆಯಲ್ಲಿಯೂ ಬೆಂಬಲ ನೀಡುತ್ತಾರೆ ಎಂಬ ಭರವಸೆ ಇದೆ ಎಂದು ಕಾಂಗ್ರೆಸ್ ನಾಯಕರು ಹೇಳಿದ್ದಾರೆ.
ಗೊಂಡಿಯಾವನ್ನು 'ಅಕ್ಕಿಯ ನಗರ' ಎಂದು ಕರೆಯಲಾಗುತ್ತಿತ್ತು. ದೇಶದಲ್ಲಿಯೇ ಅತ್ಯಧಿಕ ಅಕ್ಕಿಯ ಗಿರಣಿ ಹೊಂದಿರುವ ನಗರ ಇದಾಗಿತ್ತು. ಆದರೆ ಬಿಜೆಪಿ ತನ್ನ ತಪ್ಪು ವಾಣಿಜ್ಯ ನೀತಿಗಳ ಕಾರಣದಿಂದಾಗಿ ಇಲ್ಲಿನ ವ್ಯಾಪಾರ ವಹಿವಾಟನ್ನು ಹಾಳು ಮಾಡಿದೆ ಎಂದು ಕಾಂಗ್ರೆಸ್ ನಾಯಕರು ಆರೋಪಿಸಿದ್ದಾರೆ.
ವಿದರ್ಭ ಕಾಂಗ್ರೆಸ್‌ನ ನೆಲ, ವಿರೋಧ ಪಕ್ಷಗಳು ಮುಂದಿನ ಚುನಾವಣೆಯಲ್ಲಿ ಹೀನಾಯ ಸೋಲು ಕಾಣವಲಿವೆ. ಮಹಾವಿಕಾಸ್ ಅಘಾಡಿ ಮೈತ್ರಿಕೂಟದ ಸರ್ಕಾರ ರಚನೆಯಾಗಲಿದೆ. ಅದಕ್ಕೆ ವಿದರ್ಭದ ಗೆಲುವು ಕೊಡುಗೆ ನೀಡಲಿದೆ ಎಂದು ಕಾಂಗ್ರೆಸ್ ನಾಯಕರು ಘೋಷಣೆ ಮಾಡಿದ್ದಾರೆ.
ವಿಧಾನಸಭೆ ಚುನಾವಣೆ ಸೋಲಿನ ಭಯದಲ್ಲಿರುವ ಬಿಜೆಪಿ ಮತ್ತು ಮಹಾಯುತಿ ಮೈತ್ರಿಕೂಟದ ನಾಯಕರು ಕಾಂಗ್ರೆಸ್ ಪಕ್ಷ, ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ನಕಲಿ ಪ್ರಚಾರವನ್ನು ಕೈಗೊಂಡಿದ್ದಾರೆ. ಜನರು ಚುನಾವಣೆಯಲ್ಲಿ ಪಕ್ಷಕ್ಕೆ ಸರಿಯಾದ ಉತ್ತರ ನೀಡಲಿದ್ದಾರೆ ಎಂದು ಕಾಂಗ್ರೆಸ್ ನಾಯಕರು ಹೇಳಿದ್ದಾರೆ.
ಚುನಾವಣೆಯಲ್ಲಿ ಜಯಗಳಿಸಿ ಮಹಾವಿಕಾಸ್ ಅಘಾಡಿ ಮೈತ್ರಿಕೂಟದ ಸರ್ಕಾರ ರಚನೆಯಾದರೆ ವಿದರ್ಭ, ಗೊಂಡಿಯಾ ಕ್ಷೇತ್ರದ ಅಭಿವೃದ್ಧಿ ಮಾಡಲಾಗುತ್ತದೆ. ರೈತರಿಗೆ ಕನಿಷ್ಠ ಬೆಂಬಲ ಬೆಲೆಯನ್ನು ನೀಡಲಾಗುತ್ತದೆ ಎಂದು ಕಾಂಗ್ರೆಸ್ ನಾಯಕರು ಜನರಿಗೆ ಭರವಸೆಯನ್ನು ನೀಡಿದ್ದಾರೆ.












Click it and Unblock the Notifications