Maharashtra: ಮಹಾರಾಷ್ಟ್ರ ಸಿಎಂ ಆಯ್ಕೆ ಬಗ್ಗೆ ಮಹತ್ವದ ಸುಳಿವು ಕೊಟ್ಟ ಬಿಜೆಪಿ ನಾಯಕ
ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಮಹಾಯುತಿ ಒಕ್ಕೂಟ ಸರ್ಕಾರ ರಚನೆ ಕಸರತ್ತು ಆರಂಭಿಸಿದೆ. ಮುಂದಿನ ಸಿಎಂ ಯಾರು ಎನ್ನುವ ಪ್ರಶ್ನೆ ಎದುರಾಗಿದ್ದು, ಏಕನಾಥ್ ಶಿಂಧೆ ಮತ್ತು ದೇವೇಂದ್ರ ಫಡ್ನವಿಸ್ ಹೆಸರುಗಳು ಮುಂಚೂಣಿಯಲ್ಲಿವೆ. ಆದರೆ ಏಕನಾಥ್ ಶಿಂಧೆ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಡಲು ತಯಾರಿಲ್ಲ ಎನ್ನುವ ಸೂಚನೆಯಿದ್ದು, ಮನವೊಲಿಕೆ ಕಸರತ್ತು ನಡೆಸಲಾಗುತ್ತಿದೆ ಎನ್ನಲಾಗಿದೆ.
ಮಹಾರಾಷ್ಟ್ರ ಮುಖ್ಯಮಂತ್ರಿ ಆಯ್ಕೆ ಮಾಡಲು ಇನ್ನಷ್ಟು ಸಮಯ ಬೇಕಾಗುತ್ತದೆ ಆದರೆ ಯಾವುದೇ ಅಸಮಾಧಾನ ಇಲ್ಲದೆ ಮುಖ್ಯಮಂತ್ರಿ ಆಯ್ಕೆ ಮಾಡಲಾಗುತ್ತದೆ ಎಂದು ಬಿಜೆಪಿ ಉತ್ತನ ಮೂಲಗಳು ತಿಳಿಸಿವೆ ಎಂದು ಎನ್‌ಡಿಟಿವಿ ವರದಿ ಮಾಡಿದೆ. ರಾಜ್ಯ ಬಿಜೆಪಿ ಕಾರ್ಯಕರ್ತರ ಭಾವನೆಗಳನ್ನು ಪರಿಗಣನೆಗೆ ತೆಗೆದುಕೊಳ್ಳಬೇಕಿದ್ದು, ಬಳಿಕ ಈ ಬಗ್ಗೆ ನಿರ್ಧಾರ ಮಾಡಲಾಗುತ್ತದೆ ಎಂದು ಹೇಳಿದ್ದಾರೆ.

2022 ರಲ್ಲಿ ದೇವೇಂದ್ರ ಫಡ್ನವಿಸ್ ಮುಖ್ಯಮಂತ್ರಿಯಾಗಬೇಕು ಎನ್ನುವ ಬೇಡಿಕೆಯನ್ನು ಬಿಜೆಪಿ ಬೆಂಬಲಿಗರು ಮುಂದಿಟ್ಟಿದ್ದರು. ಆದರೆ ಬಿಜೆಪಿಗೆ ಶಾಸಕರನ್ನು ಕರೆತಂದು ಮೈತ್ರಿ ಸರ್ಕಾರ ರಚಿಸುವಲ್ಲಿ ಮುಂದಾಳತ್ವ ವಹಿಸಿದ್ದ ಏಕನಾಥ್ ಶಿಂಧೆ ಅವರನ್ನು ಸಿಎಂ ಮಾಡಿತ್ತು.
ಬಿಜೆಪಿ ಸಿಎಂಗೆ ಹೆಚ್ಚಿದ ಒತ್ತಾಯ
ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಹೆಚ್ಚಿನ ಸೀಟುಗಳಲ್ಲಿ ಗೆಲುವು ಸಾಧಿಸಿದ್ದು ಬೆಂಬಲಿಗರು, ಕಾರ್ಯಕರ್ತರು ಸಿಎಂ ಹುದ್ದೆಗೆ ಬೇಡಿಕೆ ಇಟ್ಟಿದ್ದಾರೆ. ಆದರೆ ಏಕನಾಥ್ ಶಿಂಧೆ ಬಣ ಎರಡನೇ ಬಾರಿ ಸಿಎಂ ಸ್ಥಾನಕ್ಕೆ ಬೇಡಿಕೆ ಇಟ್ಟಿದ್ದು ಬಿಕ್ಕಟ್ಟಿಗೆ ಕಾರಣವಾಗಿದೆ. ಚುನಾವಣೆಯಲ್ಲಿ ಬಿಜೆಪಿ ಉತ್ತಮ ಸಾಧನೆ ತೋರಿದರೂ ನಿತೀಶ್ ಕುಮಾರ್ ಅವರು ಪ್ರಬಲ ಪಾತ್ರ ವಹಿಸುವ ಮಹಾರಾಷ್ಟ್ರದಲ್ಲಿ ಬಿಹಾರದಂತೆ ಏಕೆ ಆಗಬಾರದು ಎಂದು ಹಲವು ನಾಯಕರು ಪ್ರಶ್ನಿಸಿದ್ದಾರೆ.
ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 132 ಶಾಸಕರನ್ನು ಹೊಂದಿದೆ, ಶಿವ ಸೇನೆಯು 57 ಮತ್ತು ಎನ್‌ಸಿಪಿ 41 ಸದಸ್ಯರ ಬಲವನ್ನು ಹೊಂದಿದೆ. 288 ಸದಸ್ಯರ ಬಲ ಹೊಂದಿರುವ ಮಹಾರಾಷ್ಟ್ರದಲ್ಲಿ ಸರಳ ಬಹುಮತಕ್ಕೆ 145 ಸ್ಥಾನಗಳು ಬೇಕಾಗಿದೆ. ಬಿಜೆಪಿಗೆ ಎರಡರಲ್ಲಿ ಒಂದು ಮಿತ್ರಪಕ್ಷ ಬೆಂಬಲ ನೀಡಿದರೂ ಸರ್ಕಾರ ರಚನೆ ಮಾಡಲು ಅವಕಾಶವಿದೆ. ಆದ್ದರಿಂದಲೇ ಶಿಂಧೆ ಅವರ ಬೇಡಿಕೆಯನ್ನು ಒಪ್ಪಿಕೊಳ್ಳುವ ಸಾಧ್ಯತೆ ಕಡಿಮೆ ಇದೆ ಎನ್ನಲಾಗಿದೆ.
ಮುಖ್ಯಮಂತ್ರಿ ಆಯ್ಕೆ ಪ್ರಕ್ರಿಯೆಯ ಉಸ್ತುವಾರಿ ನೋಡಿಕೊಳ್ಳುವ ವೀಕ್ಷಕರ ಹೆಸರನ್ನು ಇನ್ನೆರಡು ದಿನಗಳಲ್ಲಿ ಘೋಷಿಸಲಾಗುವುದು ಎಂದು ಮೂಲಗಳು ತಿಳಿಸಿವೆ. ಮುಂಬೈನಲ್ಲಿ ವೀಕ್ಷಕರ ಸಮ್ಮುಖದಲ್ಲಿ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ನಡೆಯಲಿದ್ದು, ಶಾಸಕರೊಂದಿಗೆ ಚರ್ಚಿಸಿ ನಾಯಕನನ್ನು ಆಯ್ಕೆ ಮಾಡಲಾಗುವುದು ಎಂದು ಹೇಳಲಾಗಿದೆ.












Click it and Unblock the Notifications