Delhi New CM: ದೆಹಲಿ ನೂತನ ಸಿ.ಎಂ ಆಗಿ ರೇಖಾ ಗುಪ್ತಾ ಆಯ್ಕೆ!
ದೆಹಲಿ ವಿಧಾನಸಭೆ ಚುನಾವಣೆಯ ಫಲಿತಾಂಶ ಪ್ರಕಟವಾಗಿ ಬರೋಬ್ಬರಿ 11 ದಿನಗಳ ನಂತರ ದೆಹಲಿ ಮುಖ್ಯಮಂತ್ರಿಯ ಘೋಷಣೆ ಆಗಿದೆ. ದೆಹಲಿಯಲ್ಲಿ ಬಿಜೆಪಿ ಬರೋಬ್ಬರಿ 27 ವರ್ಷಗಳ ನಂತರ ಅಧಿಕಾರಕ್ಕೆ ಬಂದಿದೆ. ದೆಹಲಿಯಲ್ಲಿ ಅಧಿಕಾರಕ್ಕೆ ಬರುವುದಕ್ಕೆ ಬಿಜೆಪಿ ಮಾಸ್ಟರ್ ಪ್ಲಾನ್ ಮಾಡಿಕೊಂಡಿತ್ತು. ಅಲ್ಲದೆ ಹ್ಯಾಟ್ರಿಕ್ ಸಾಧನೆ ಮಾಡುವ ಕನಸಿನಲ್ಲಿದ್ದ ಆಮ್ ಆದ್ಮಿ ಪಾರ್ಟಿಗೆ ಮಣ್ಣು ಮುಕ್ಕಿಸಿತ್ತು. ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಸೇರಿದಂತೆ ವಿದೇಶಿ ಪ್ರವಾಸದಲ್ಲಿದ್ದ ಕಾರಣ ದೆಹಲಿ ಮುಖ್ಯಮಂತ್ರಿ ಆಯ್ಕೆ ಪ್ರಕ್ರಿಯೆ ಮುಕ್ತಾಯವಾಗಿರಿಲಿಲ್ಲ. ಇದೀಗ ದೆಹಲಿ ಮುಖ್ಯಮಂತ್ರಿ ಘೋಷಣೆ ಮಾಡಲಾಗಿದೆ.
ದೆಹಲಿಯ ನೂತನ ಮುಖ್ಯಮಂತ್ರಿಯಾಗಿ ರೇಖಾ ಗುಪ್ತಾ ಅವರನ್ನು ಘೋಷಣೆ ಮಾಡಲಾಗಿದೆ. ದೆಹಲಿಯಲ್ಲಿ ಬಿಜೆಪಿ ಈ ಬಾರಿ ಅಚ್ಚರಿಯ ಮುಖ್ಯಮಂತ್ರಿಯನ್ನು ಆಯ್ಕೆ ಮಾಡಿದೆ. ಸಾಮಾನ್ಯವಾಗಿ ಬಿಜೆಪಿ ಚುನಾವಣೆಗೂ ಮುಂಚೆ ಯಾವುದೇ ರಾಜ್ಯದ ಮುಖ್ಯಮಂತ್ರಿಯ ಹೆಸರನ್ನು ಘೋಷಣೆ ಮಾಡುವುದಿಲ್ಲ. ಇದೇ ಮಾದರಿಯನ್ನು ಕೇಂದ್ರಾಡಳಿತ ಹಾಗೂ ರಾಷ್ಟ್ರ ರಾಜಧಾನಿ ದೆಹಲಿಯಲ್ಲೂ ಇದೇ ಮಾದರಿಯನ್ನು ಅನುಸರಿಸಲಾಗಿತ್ತು.
30 ವರ್ಷಗಳಿಂದ ಬಿಜೆಪಿಯಲ್ಲಿ: ಇನ್ನು ರೇಖಾ ಗುಪ್ತಾ ಅವರು ಕಳೆದ 30 ವರ್ಷಗಳಿಂದ ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದಾರೆ. ಮೂರು ಬಾರಿ ಅವರು ಕೌನ್ಸಿಲರ್ ಆಗಿ ಆಯ್ಕೆಯಾಗಿದ್ದರು. ಆದರೆ ಅವರು ಇದೇ ಮೊದಲ ಬಾರಿ ಶಾಸಕಿಯಾಗಿ ಆಯ್ಕೆಯಾಗಿದ್ದಾರೆ. ಅಲ್ಲದೆ ಯಾವುದೇ ಸಚಿವ ಸ್ಥಾನವನ್ನು ನಿರ್ವಹಣೆ ಮಾಡಿರಲಿಲ್ಲ. ಇದೀಗ ಏಕಾಏಕಿ ಮುಖ್ಯಮಂತ್ರಿಯಂತಹ ಜವಾಬ್ದಾರಿಯುತ ಹಾಗೂ ಪ್ರಮುಖ ಹುದ್ದೆ ಸಿಕ್ಕಿದ್ದು ಇದನ್ನು ಅವರು ಹೇಗೆ ನಿರ್ವಹಿಸಲಿದ್ದಾರೆ ಎನ್ನುವ ಕುತೂಹಲ ಮೂಡಿದೆ.
ಈ ಮೂಲಕ ದೆಹಲಿಗೆ ಮತ್ತೊಮ್ಮೆ ಮಹಿಳಾ ಮುಖ್ಯಮಂತ್ರಿ ಆಯ್ಕೆ ಮಾಡಿದಂತೆ ಆಗಿದೆ. ಈ ಹಿಂದೆ ದೆಹಲಿಯಲ್ಲಿ ಸುಷ್ಮಾ ಸ್ವರಾಜ್ ಅವರು ಬಿಜೆಪಿಯಿಂದ ದೆಹಲಿ ಮುಖ್ಯಮಂತ್ರಿಯಾಗಿದ್ದರು. ಇದೀಗ ಬಿಜೆಪಿ ದೆಹಲಿಯಲ್ಲಿ ಮತ್ತೆ ಮಹಿಳಾ ಅಭ್ಯರ್ಥಿಗೆ ಮಣೆ ಹಾಕಿದೆ. ದೆಹಲಿಯಲ್ಲಿ ಮಹಿಳಾ ಮುಖ್ಯಮಂತ್ರಿಗಳಿಗೆ ದೊಡ್ಡ ಇತಿಹಾಸವೇ ಇದೆ.

ದೆಹಲಿವಿಧಾನಸಭೆಯಲ್ಲಿ ಒಟ್ಟು 70 ಸ್ಥಾನಗಳಿದ್ದು. 2025ನೇ ಸಾಲಿನ ಫೆಬ್ರವರಿಯಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯು 48 ಸ್ಥಾನಗಳಲ್ಲಿ ಭರ್ಜರಿ ಗೆಲುವು ಸಾಧಿಸಿತ್ತು. ದೆಹಲಿ ವಿಧಾನಸಭೆಯ ಮ್ಯಾಜಿಕ್ ಸಂಖ್ಯೆ 36 ಆಗಿದೆ. ಇನ್ನು ಕಳೆದ ಎರಡು ಅವಧಿಯಿಂದ ಅಧಿಕಾರದಲ್ಲಿದ್ದ ಎಎಪಿಗೆ ಈ ಬಾರಿ ಮುಖಭಂಗವಾಗಿತ್ತು.
ಫೆಬ್ರವರಿ 20ರಂದು ಪ್ರಮಾಣ ವಚನ ಸ್ವೀಕಾರ ಸಮಾರಂಭ: ಇನ್ನು ದೆಹಲಿಯ ನೂತನ ಮುಖ್ಯಮಂತ್ರಿ ಹಾಗೂ ಸಚಿವರು ಫೆಬ್ರವರಿ 20ಕ್ಕೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಬಿಜೆಪಿ ಹೈಕಮಾಂಡ್ ಹೇಳಿದೆ. ಫೆಬ್ರವರಿ 20ಕ್ಕೆ ಅಂದರೆ ಗುರುವಾರ ದೆಹಲಿಯ ರಾಮಲೀಲಾ ಮೈದಾನದಲ್ಲಿ ದೆಹಲಿ ನೂತನ ಮುಖ್ಯಮಂತ್ರಿ ಹಾಗೂ ಸಚಿವರ ಪ್ರಮಾಣವಚನ ಸಮಾರಂಭ ನಡೆಯಲಿದೆ. ಈಗಾಗಲೇ ಇದಕ್ಕೆ ಬೇಕಾದ ಎಲ್ಲಾ ಭರ್ಜರಿ ಸಿದ್ಧತೆಗಳನ್ನು ಸಹ ಮಾಡಿಕೊಳ್ಳಲಾಗಿದೆ.
ಆರ್‌ಎಸ್‌ಎಸ್ ಬೆಂಬಲ: ಇನ್ನು ಪಕ್ಷದ ನಿಷ್ಠಾವಂತ ಕಾರ್ಯಕರ್ತೆಯಾಗಿರುವ ರೇಖಾ ಗುಪ್ತಾ ಅವರಿಗೆ ಆರ್‌ಎಸ್‌ಎಸ್ ಸಹ ಬೆಂಬಲ ಸೂಚಿಸಿದೆ ಎಂದು ಹೇಳಲಾಗಿದೆ. ಬುಧವಾರ ಸಂಜೆ ದೆಹಲಿಯಲ್ಲಿ ದೆಹಲಿ ಬಿಜೆಪಿ ಶಾಸಕರ ಸಭೆಯನ್ನು ಆಯೋಜಿಸಲಾಗಿತ್ತು. ಈ ವೇಳೆ ರೇಖಾ ಗುಪ್ತಾ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ.
ದೆಹಲಿ ಮಹಿಳಾ ಮುಖ್ಯಮಂತ್ರಿಗಳ ಹಿನ್ನೆಲೆ
ಇನ್ನು ದೆಹಲಿಯಲ್ಲಿ ಈ ಹಿಂದೆ ಬಿಜೆಪಿಯ ಮಹಿಳಾ ಮುಖ್ಯಮಂತ್ರಿ ಇದ್ದರು. ಹೌದು ದೆಹಲಿಯಲ್ಲಿ 1998ರಲ್ಲಿ ಸುಷ್ಮಾ ಸ್ವರಾಜ್ ಅವರು ದೆಹಲಿಯ ಮೊದಲ ಮಹಿಳಾ ಮುಖ್ಯಮಂತ್ರಿಯಾಗಿದ್ದರು. ಈ ಮೂಲಕ ಇತಿಹಾಸ ಸೃಷ್ಟಿಯಾಗಿತ್ತು. ಆದರೆ, ದೆಹಲಿಯಲ್ಲಿ ಅವರು ಅಧಿಕಾರ ನಡೆಸಿದ್ದು ಕೇವಲ 52 ದಿನಗಳು ಮಾತ್ರ. ದೆಹಲಿಯಲ್ಲಿ ಮಹಿಳಾ ಮುಖ್ಯಮಂತ್ರಿಗೆ ದೊಡ್ಡ ಇತಿಹಾಸವೇ ಇದೆ. ಕಾಂಗ್ರೆಸ್‌ನ ಶೀಲಾ ದೀಕ್ಷಿತ್ ಅವರು ದೆಹಲಿ ಮುಖ್ಯಮಂತ್ರಿಯಾಗಿ ಬರೋಬ್ಬರಿ ಮೂರು ಅವಧಿಯಲ್ಲೂ ಅಂದರೆ 15 ವರ್ಷಗಳ ಕಾಲ ಆಡಳಿತ ನಡೆಸಿದ್ದರು.

ದೆಹಲಿಯಲ್ಲಿ ದೇಶದ ಸ್ಟಾರ್ಟ್ ಅಪ್ ಪಾರ್ಟಿ ಅಂತಲೇ ಹೇಳಲಾಗುವ ಆಮ್ ಆದ್ಮಿ ಪಾರ್ಟಿಯು ಕಳೆದ ಎರಡು ಅವಧಿಯಿಂದ ಅಧಿಕಾರ ನಡೆಸಿತ್ತು. ಈ ಅವಧಿಯಲ್ಲಿ ಆಮ್ ಆದ್ಮಿ ಪಾರ್ಟಿಯ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರು ಒಂದು ಅವಧಿಗೆ ಪೂರ್ಣ ಪ್ರಮಾಣದ ಆಡಳಿತ ನಡೆಸಿದ್ದರೆ. ಮತ್ತೊಂದು ಅವಧಿಗೂ ಸಿ.ಎಂ ಆಗಿದ್ದರು. ಆದರೆ, ಮದ್ಯನೀತಿ ಹಗರಣದಲ್ಲಿ ಜೈಲು ಸೇರಿ ಜಾಮೀನಿನ ಮೇಲೆ ಬಿಡುಗಡೆಯಾದ ಮೇಲೆ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಿದ್ದರು. ಅತಿಶಿ ಸಿಂಗ್ ಅವರು ದೆಹಲಿಯಲ್ಲಿ ಕೊನೆಯ ಐದು ತಿಂಗಳು ಆಡಳಿತ ನಡೆಸಿದ್ದರು.












Click it and Unblock the Notifications