ಕೇಜ್ರಿವಾಲ್ ಸರಕಾರ ಉರುಳಿಸಲು 20 ಕೋಟಿ ಆಮಿಷ
ನವದೆಹಲಿ, ಫೆ 3: ದೆಹಲಿಯಲ್ಲಿನ ಅರವಿಂದ್ ಕೇಜ್ರಿವಾಲ್ ಸರಕಾರ ಬೀಳಿಸಲು ಭಾರತೀಯ ಜನತಾ ಪಕ್ಷ ಸಂಚು ರೂಪಿಸುತ್ತಿದೆ. ನಮ್ಮ ಪಕ್ಷದ ಶಾಸಕರಿಗೆ ಹಣದ ಆಮಿಷವನ್ನು ಬಿಜೆಪಿ ನಾಯಕರು ಒಡ್ಡುತ್ತಿದ್ದಾರೆಂದು ಆಮ್ ಆದ್ಮಿ ಪಕ್ಷದ ಶಾಸಕ ಮದನ್ ಲಾಲ್ ಗಂಭೀರ ಆರೋಪ ಮಾಡಿದ್ದಾರೆ.
ಬಿಜೆಪಿ ನಾಯಕ ಅರುಣ್ ಜೇಟ್ಲಿ ಸರಕಾರ ಉರುಳಿಸುವ ಕೆಲಸದ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಇದಕ್ಕೆ ನರೇಂದ್ರ ಮೋದಿ ಸಂಪೂರ್ಣ ಬೆಂಬಲ ನೀಡುತ್ತಿದ್ದಾರೆ. ಒಂಬತ್ತು ಮಂದಿ ಶಾಸಕರಿಗೆ ಇಪ್ಪತ್ತು ಕೋಟಿ ರೂಪಾಯಿಯ ಆಮಿಷವನ್ನು ಬಿಜೆಪಿ ನಾಯಕರು ಒಡ್ಡುತ್ತಿದ್ದಾರೆಂದು ಮದನ್ ಲಾಲ್ ಆರೋಪಿಸಿದ್ದಾರೆ. (ಕೇಜ್ರಿವಾಲ್ ವಿರುದ್ಧ ಮಾನನಷ್ಟ ಕೇಸ್ : ಅನಂತ್ ಕುಮಾರ್)

ಆಮ್ ಆದ್ಮಿ ಪಕ್ಷದ ಜನಪ್ರಿಯತೆಗೆ ಹೆದರಿ ಜೇಟ್ಲಿ, ಮೋದಿ ಮತ್ತು ಹರ್ಷವರ್ಧನ್ ಈ ಕೆಲಸಕ್ಕೆ ಮುಂದಾಗಿದ್ದಾರೆ. ದೆಹಲಿಯಲ್ಲಿ ನಮ್ಮ ಸರಕಾರವನ್ನು ಉರುಳಿಸಲು ಬಿಜೆಪಿ ಮತ್ತು ಕಾಂಗ್ರೆಸ್ ಮುಂದಾಗಿದೆ ಎಂದು ಆಮ್ ಆದ್ಮಿ ಪಕ್ಷದ ಮತ್ತೊಬ್ಬ ಶಾಸಕ ಸಂಜಯ್ ಸಿಂಗ್ ಕೂಡಾ ಆರೋಪಿಸಿದ್ದಾರೆ.
ಸಚಿವ ಸೋಮನಾಥ್ ಭಾರ್ತಿ ಸ್ಥಳೀಯರ ರಕ್ಷಣೆಗಾಗಿ ಮಧ್ಯರಾತ್ರಿ ದಾಳಿ ನಡೆಸಿದರು. ಆದರೆ ಇದರ ಬಗ್ಗೆ ಬಿಜೆಪಿ ಮತ್ತು ಕಾಂಗ್ರೆಸ್ ವ್ಯವಸ್ಥಿತವಾಗಿ ಅಪಪ್ರಚಾರ ನಡೆಸಿದರು ಎಂದು ಸಿಂಗ್ ಆರೋಪಿಸಿದ್ದಾರೆ. (ಕೇಜ್ರಿವಾಲ್ ಗೆ ತಿರುಗೇಟು ಕೊಟ್ಟ ಡಿವಿಎಸ್, ಎಚ್ಡಿಕೆ)
ವ್ಯಕ್ತಿಯೊಬ್ಬ ಕರೆ ಮಾಡಿ, ನಮ್ಮ ಪಕ್ಷದ ಒಂಬತ್ತು ಶಾಸಕರನ್ನು ಕೇಜ್ರಿವಾಲ್ ವಿರುದ್ದ ಬಂಡಾಯ ಎಬ್ಬಿಸಿ, ಆ ಮೂಲಕ ಸರಕಾರವನ್ನು ಪತನಗೊಳಿಸಿದರೆ ದುಡ್ಡಿನ ಜೊತೆಗೆ ಉಪಮುಖ್ಯಮಂತ್ರಿ ಹುದ್ದೆಯ ಆಮಿಷವನ್ನು ಒಡ್ಡಿದ್ದಾನೆಂದು ಮದನ್ ಲಾಲ್ ಆರೋಪಿಸಿದ್ದಾರೆ.
ಈ ಡೀಲ್ ನಿಮಗೆ ಒಪ್ಪಿಗೆ ಯಾಗಿದ್ದರೆ ಈ ಕೂಡಲೇ ಅರುಣ್ ಜೆಟ್ಲಿಯವರನ್ನು ಸಂಪರ್ಕಿಸಿ ಎಂದು ಕರೆ ಮಾಡಿದ ವ್ಯಕ್ತಿ ತಾಕೀತು ಮಾಡಿದ್ದಾನೆ. ನಾನು ಹೇಳುವ ಹೇಳಿಕೆಗೆ ನನ್ನ ಬಳಿ ಸಾಕ್ಷ್ಯಾಧಾರವಿಲ್ಲ, ಆದರೆ ನಾನು ಹೇಳುವುದು ನೂರಕ್ಕೆ ನೂರು ಸತ್ಯ ಎಂದು ಮದನ್ ಲಾಲ್ ಹೇಳಿದ್ದಾರೆ.












Click it and Unblock the Notifications