ರಾಜಸ್ಥಾನ ಬಿಕ್ಕಟ್ಟಿಗೆ ಕಾಂಗ್ರೆಸ್ ವಿರುದ್ಧ ಕಿಡಿಕಾರಿದ ಸಂಸದ ತೇಜಸ್ವಿ ಸೂರ್ಯ
ಜೈಪುರ, ಮೇ. 31: ಮುಂಬರುವ ವಿಧಾನಸಭಾ ಚುನಾವಣೆಗೆ ಸಿದ್ಧವಾಗುತ್ತಿರುವ ರಾಜಸ್ಥಾನ ಕಾಂಗ್ರೆಸ್ ಘಟಕದಲ್ಲಿನ ಬಿಕ್ಕಟ್ಟು ಭಾರೀ ಚರ್ಚೆಗೆ ಕಾರಣವಾಗಿದೆ. ಕಾಂಗ್ರೆಸ್ ನಾಯಕರು ಎಲ್ಲವೂ ಸರಿಯಾಗಿದೆ ಎಂದು ಹೇಳುತ್ತಿದ್ದರೂ, ಈ ಕುರಿತು ಬಿಜೆಪಿ ಸಂಸದ ತೇಜಸ್ವಿ ಸೂರ್ಯ, ಒಂದೇ ಪಕ್ಷದ ಇಬ್ಬರು ನಾಯಕರು ಒಟ್ಟಾಗಿ ಚುನಾವಣೆ ಎದುರಿಸಲಿದ್ದೇವೆ ಎನ್ನುತ್ತಿರುವುದಕ್ಕೆ ವ್ಯಂಗ್ಯವಾಡಿದ್ದಾರೆ.
ರಾಜ್ಯದಲ್ಲಿ ನಾಯಕತ್ವದ ಭಿನ್ನಮತದಲ್ಲಿ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಮತ್ತು ಅವರ ಮಾಜಿ ಉಪಮುಖ್ಯಮಂತ್ರಿ ಸಚಿನ್ ಪೈಲಟ್ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಒಗ್ಗಟ್ಟಿನಿಂದ ಹೋರಾಡಲು ಒಪ್ಪಿಕೊಂಡಿದ್ದಾರೆ ಎಂದು ಕಾಂಗ್ರೆಸ್ ಘೋಷಿಸಿದೆ. ಇದಾದ ಒಂದು ದಿನದ ನಂತರ ತೇಜಸ್ವಿ ಸೂರ್ಯ ಅವರ ಪ್ರತಿಕ್ರಿಯೆ ಬಂದಿದೆ. ಈ ವರ್ಷದ ಕೊನೆಯಲ್ಲಿ ರಾಜಸ್ಥಾನದಲ್ಲಿ ವಿಧಾನಸಭಾ ಚುನಾವಣೆಗಳು ನಡೆಯಲಿವೆ.

"ಕಾಂಗ್ರೆಸ್ ಪಕ್ಷದ ಸ್ಥಿತಿ ಹೇಗಿದೆ ಎಂದರೆ ಪಕ್ಷದೊಳಗಿನ ಇಬ್ಬರು ನಾಯಕರು ಒಟ್ಟಾಗಿ ಚುನಾವಣೆ ಎದುರಿಸುವುದಾಗಿ ಘೋಷಿಸುತ್ತಿದ್ದಾರೆ ಮತ್ತು ಅದು ಸುದ್ದಿಯಾಗಿದೆ. ನಾನು ಅವರಿಗೆ ಶುಭ ಹಾರೈಸುತ್ತೇನೆ. ಆದರೆ. ರಾಜಸ್ಥಾನದಲ್ಲಿ ದೊಡ್ಡ ಆಡಳಿತ ವಿರೋಧಿ ಅಲೆ ಇದೆ. ನಾವು ಅಲ್ಲಿ ಮೂರನೇ ಎರಡರಷ್ಟು ಬಹುಮತದೊಂದಿಗೆ ಸರ್ಕಾರ ರಚನೆ ಮಾಡುತ್ತೇನೆ" ಎಂದು ತೇಜಸ್ವಿ ಸೂರ್ಯ ಪಿಟಿಐಗೆ ತಿಳಿಸಿದ್ದಾರೆ.
ಕೇಂದ್ರದ ಬಿಜೆಪಿ ಸರ್ಕಾರ ಒಂಬತ್ತು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ರಾಜಸ್ಥಾನಕ್ಕೆ ತೆರಳಿದ್ದಾರೆ. ಅಜ್ಮೀರ್‌ನಲ್ಲಿ ಬುಧವಾರ ಪ್ರಧಾನಿ ನರೇಂದ್ರ ಮೋದಿ ಲೋಕಸಭಾ ಚುನಾವನೆ ಹಿನ್ನಲೆ ಒಂದು ತಿಂಗಳ ಬೃಹತ್ ಅಭಿಯಾನಕ್ಕೆ ಜಾಲನೆ ನೀಡಲಿದ್ದಾರೆ. ಇದಕ್ಕೆ ಮಹಾ ಜನ ಸಂಪರ್ಕ ಅಭಿಯಾನ ಎಂದು ಹೆಸರಿಡಲಾಗಿದೆ.
ಇನ್ನು, ರಾಜಸ್ಥಾನ ಘಟಕದಲ್ಲಿ ನಾಯಕತ್ವದ ಕಿತ್ತಾಟದ ಮಧ್ಯೆ, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಒಗ್ಗಟ್ಟಿನಿಂದ ಹೋರಾಡಲು ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಮತ್ತು ಅವರ ಮಾಜಿ ಉಪಮುಖ್ಯಮಂತ್ರಿ ಸಚಿನ್ ಪೈಲಟ್ ಒಪ್ಪಿಕೊಂಡಿದ್ದಾರೆ. ಎಲ್ಲಾ ಸಮಸ್ಯೆಗಳನ್ನು ಪಕ್ಷವೇ ಪರಿಹರಿಸಲು ಬಿಟ್ಟಿದ್ದಾರೆ ಎಂದು ಕಾಂಗ್ರೆಸ್ ಸೋಮವಾರ ಹೇಳಿದೆ.

ಕಾಂಗ್ರೆಸ್ ಪಕ್ಷದ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ ನೇತೃತ್ವದ ಕಾಂಗ್ರೆಸ್ ಉನ್ನತ ನಾಯಕತ್ವವು ಅಶೋಕ್ ಗೆಹ್ಲೋಟ್ ಸಚಿನ್ ಪೈಲಟ್ ಅವರೊಂದಿಗೆ ಸರಣಿ ಚರ್ಚೆಗಳನ್ನು ನಡೆಸಿತ್ತು. "ನಾವು ಚುನಾವಣೆಯಲ್ಲಿ ಒಗ್ಗಟ್ಟಿನಿಂದ ಹೋರಾಡಲು ನಿರ್ಧರಿಸಿದ್ದೇವೆ. ಕಾಂಗ್ರೆಸ್ ಪಕ್ಷವು ಒಟ್ಟಾಗಿ ಕೆಲಸ ಮಾಡಬೇಕು. ಖಂಡಿತವಾಗಿಯೂ ನಾವು ರಾಜಸ್ಥಾನದಲ್ಲಿ ಚುನಾವಣೆಯಲ್ಲಿ ಗೆಲ್ಲುತ್ತೇವೆ. ಕಾಂಗ್ರೆಸ್ ಪಕ್ಷಕ್ಕೆ ರಾಜಸ್ಥಾನ ಬಲಿಷ್ಠ ರಾಜ್ಯವಾಗಲಿದೆ ಎಂಬುದು ಸ್ಪಷ್ಟವಾಗಿದೆ. ಅಶೋಕ್ ಗೆಹ್ಲೋಟ್ ಜಿ ಮತ್ತು ಸಚಿನ್ ಜಿ ಇಬ್ಬರೂ ಒಟ್ಟಿಗೆ ಇರಲು ನಿರ್ಧರಿಸಿದ್ದಾರೆ" ಎಂದು ವೇಣುಗೋಪಾಲ್ ಹೇಳಿದ್ದರು.
ಪ್ರಧಾನಿ ನರೇಂದ್ರ ಮೋದಿ ಬುಧವಾರ ಎಲ್ಲಾ 543 ಲೋಕಸಭಾ ಕ್ಷೇತ್ರಗಳನ್ನು ಒಳಗೊಂಡಂತೆ ಒಂದು ತಿಂಗಳ ಪ್ರಚಾರ ಅಭಿಯಾನಕ್ಕೆ ರಾಜಸ್ಥಾನದ ಅಜ್ಮೀರ್‌ನಲ್ಲಿ ಚಾಲನೆ ನೀಡಲಿದ್ದಾರೆ. ಈ ಅಭಿಯಾನದ ಚಾಲನೆಗೆ ರಾಜಸ್ಥಾನವನ್ನು ಬಿಜೆಪಿ ಆಯ್ಕೆ ಮಾಡಿಕೊಂಡಿರುವುದು ಕೂಡ ಚುನಾವಣಾ ಉದ್ದೇಶಕ್ಕೆ. ರಾಜಸ್ಥಾನದ ವಿಧಾನಸಭಾ ಚುನಾವಣಾ ಪ್ರಚಾರಕ್ಕೂ ಈ ಕಾರ್ಯಕ್ರಮ ಮುನ್ನುಡಿಯಾಗಲಿದೆ.












Click it and Unblock the Notifications