ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲ್ಲ ಎಂದ ಬಿಜೆಪಿ ಸಂಸದ, ನಟ ಸನ್ನಿ ಡಿಯೋಲ್- ಇಲ್ಲಿದೆ ಮಹತ್ವದ ಕಾರಣ
ನವದೆಹಲಿ, ಆಗಸ್ಟ್ 22: ನಾನು ಇನ್ನು ಮುಂದೆ ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸಲು ಬಯಸುವುದಿಲ್ಲ ಎಂದು ಬಾಲಿವುಡ್ ನಟ ಹಾಗೂ ಗುರುದಾಸ್‌ಪುರ ಸಂಸದ ಸನ್ನಿ ಡಿಯೋಲ್ ಹೇಳಿದ್ದಾರೆ. ಈ ವಿಚಾರದ ಕುರಿತು ಹಿಂದಿ ಸುದ್ದಿ ವಾಹಿನಿ ಆಜ್ ತಕ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದಾರೆ. ಸಂಸತ್ತಿನಲ್ಲಿ ಅವರ ಕಡಿಮೆ ಹಾಜರಾತಿಯ ಬಗ್ಗೆ ಕೇಳಿದಾಗ ಬಿಜೆಪಿ ಸಂಸದ ತಮ್ಮ ಮನದ ಮಾತುಗಳನ್ನು ಆಡಿದ್ದಾರೆ.
ಚುನಾವಣೆಯಲ್ಲಿ ಸ್ಪರ್ಧಿಸಲು ಬಯಸುವುದಿಲ್ಲ
'ನಾನು ಸದ್ಯಕ್ಕೆ ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸಲು ಬಯಸುವುದಿಲ್ಲ. ನನ್ನ ಚುನಾವ್ ( ಚುನಾವಣೆ ) ನಟನೆಯಾಗಿರಲಿದೆ ಎಂಬುದಾಗಿ ನಾನು ಭಾವಿಸುತ್ತೇನೆ. ನಟನಾಗಿ ದೇಶ ಸೇವೆಯನ್ನು (ರಾಷ್ಟ್ರ ಸೇವೆ) ಮಾಡಬಹುದೆಂದು ನಾನು ನಂಬಿದ್ದೇನೆ' ಎಂದು ಹೇಳಿದ್ದಾರೆ.

ನಾನು ಯುವಕರಿಗೆ, ಈ ದೇಶಕ್ಕೆ ಏನು ನೀಡಬಲ್ಲೆ ಎಂಬುದು ನನಗೆ ತಿಳಿದಿದೆ. ಉತ್ತಮ ನಟನಾಗಿದ್ದೇನೆ. ಹಾಗೆಯೇ ಉತ್ತಮ ಕೆಲಸಗಳನ್ನು ಮಾಡುತ್ತೇನೆಂಬ ವಿಶ್ವಾಸ ನನಗಿದೆ ಎಂದು ತಿಳಿಸಿದ್ದಾರೆ.
ಒಂದು ವೇಳೆ, ಚುನಾವಣೆಯಲ್ಲಿ ಸ್ಪರ್ಧಿಸಲು ಬಿಜೆಪಿ ನನಗೆ ಒತ್ತಾಯಿಸಿದರೂ ನಾನು ಒಪ್ಪುವುದಿಲ್ಲ. ಅದಕ್ಕೆ, ನಾನು ಏನು ಮಾಡಲು ಸಾಧ್ಯವಿಲ್ಲ. ನಟನೆಯನ್ನು ಮೀರಿ ಏನನ್ನೂ ಮಾಡಲು ನಾನು ಬಯಸುವುದಿಲ್ಲ. ಅದು ನನ್ನ ಇಚ್ಛೆ ಎಂದು ಸನ್ನಿ ತಿಳಿಸಿದ್ದಾರೆ.

ನಮ್ಮ ಕುಟುಂಬಕ್ಕೆ ರಾಜಕೀಯ ಸರಿಹೊಂದುವುದಿಲ್ಲ
ಇದು (ರಾಜಕೀಯ) ನಮ್ಮ ಕುಟುಂಬಕ್ಕೆ ಸರಿಹೊಂದುವುದಿಲ್ಲ ಎಂಬುದಾಗಿ ನಾನು ಭಾವಿಸುತ್ತೇನೆ ಎಂದು ಸನ್ನಿ ಹೇಳಿದ್ದಾರೆ. ಇದೇ ವೇಳೆ, ಅವರ ತಂದೆ ಧರ್ಮೇಂದ್ರ ಅವರು ರಾಜಕೀಯದಲ್ಲಿ ಸಫಲತೆ ಹೊಂದಲಿಲ್ಲ ಎಂಬುದರ ಕುರಿತು ಸನ್ನಿ ಡಿಯೋಲ್ ಮಾತನಾಡಿದ್ದಾರೆ.
ಧರ್ಮೇಂದ್ರ ಅವರು ಬಿಕಾನೇರ್ ಕ್ಷೇತ್ರದಿಂದ ಸಂಸದರಾಗಿದ್ದರು. 2004 ರ ಲೋಕಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದರು. ಆ ನಂತರ ರಾಜಕೀಯದಿಂದ ದೂರ ಉಳಿದರು.
ಲೋಕಸಭೆಯಲ್ಲಿ ಕಡಿಮೆ ಹಾಜರಾತಿ
'ಇದು ನನಗೆ ಹಾಜರಾತಿ ಬಗ್ಗೆ ಅಲ್ಲ. ಅಲ್ಲಿಗೆ ಹೋದಾಗ ನಾನು ಗಮನಿಸುತ್ತೇನೆ. ಲೋಕಸಭೆಯಲ್ಲಿ ದೇಶವನ್ನು ನಡೆಸುವ ಜನರಿದ್ದಾರೆ. ಎಲ್ಲಾ ಪಕ್ಷಗಳ ಜನರು ಇಲ್ಲಿ ಕುಳಿತಿದ್ದಾರೆ. ಈ ಜನರು ಹೇಗೆ ವರ್ತಿಸುತ್ತಾರೆ? ಆದರೆ, ಇತರರಿಗೆ ಹಾಗೆ ವರ್ತಿಸಬೇಡಿ ಎಂದು ಅವರು ಹೇಳುತ್ತಾರೆ' ಎಂದು ಸನ್ನಿ ಡಿಯೋಲ್ ಹೇಳಿದ್ದಾರೆ.

ಕನಿಷ್ಠ ನಾವು ಕೆಲಸವನ್ನು ಹೇಗೆ ಮಾಡುತ್ತೇವೆ ಮತ್ತು ಏನು ಮಾಡುತ್ತೇವೆ ಎಂಬ ಶಿಷ್ಟಾಚಾರವನ್ನಾದರೂ ಹೊಂದಿರಬೇಕು. ಆದರೆ, ಅಲ್ಲಿ ಯಾವುದೇ ಶಿಷ್ಟಾಚಾರವಿಲ್ಲ. ಅವರಂತೆ ನಾನಲ್ಲ ಎಂಬುದು ಬಹಳಷ್ಟು ಸಾರಿ ಅನಿಸುತ್ತದೆ ಎಂದು ತಿಳಿಸಿದ್ದಾರೆ.
ನಟನೆಯನ್ನು ನಾನು ಆನಂದಿಸುತ್ತೇನೆ. ನನಗೆ ಬೇಕಾದುದನ್ನು ನೋಡುತ್ತೇನೆ. ಕಲಿಯುತ್ತೇನೆ ಎಂದು ಸಂದರ್ಶನದಲ್ಲಿ ಸನ್ನಿ ಡಿಯೋಲ್ ಹೇಳಿದ್ದಾರೆ.












Click it and Unblock the Notifications