'ಹರೀಶ್ ರಾವತ್ ವಿಶ್ರಾಂತಿ ಪಡೆಯುವ ಸಮಯ': ಬಿಜೆಪಿ ನಾಯಕ ವ್ಯಂಗ್ಯ
ನವದೆಹಲಿ, ಡಿಸೆಂಬರ್ 23: ಕಾಂಗ್ರೆಸ್ ನಾಯಕ ಹರೀಶ್ ರಾವತ್ ತನ್ನ ಪಕ್ಷದ ನಾಯಕತ್ವದ ವಿರುದ್ಧ ಟ್ವೀಟ್ ಮೂಲಕ ವಾಗ್ದಾಳಿ ನಡೆಸಿದ ಬೆನ್ನಲ್ಲೇ, "ಇದು ಹರೀಶ್ ರಾವತ್ ವಿಶ್ರಾಂತಿ ತೆಗೆದುಕೊಳ್ಳುವ ಸಮಯ," ಎಂದು ಬಿಜೆಪಿ ನಾಯಕ, ಉತ್ತರಾಖಂಡದ ಮಾಜಿ ಮುಖ್ಯಮಂತ್ರಿ ತೀರಥ್ ಸಿಂಗ್ ರಾವತ್ ಹೇಳಿದ್ದಾರೆ.
"ಅವರು ಚುನಾವಣೆಯಲ್ಲಿ ಬಿಟ್ಟು ಕೊಡುವುದಿಲ್ಲ," ಎಂದು ಹೇಳುವ ಮೂಲಕ ಕಾಂಗ್ರೆಸ್ ನಾಯಕ ಹರೀಶ್ ರಾವತ್‌ರನ್ನು ತರಾಟೆಗೆ ತೆಗೆದುಕೊಂಡ, ತೀರಥ್ ಸಿಂಗ್ ರಾವತ್, "ಅವರು ಚುನಾವಣೆಯನ್ನು ಬಿಟ್ಟು ಕೊಡುವುದಿಲ್ಲ. ಏಕೆಂದರೆ ಅದು ಅವರ ಆದ್ಯತೆಯಾಗಿದೆ. ಆದರೆ ಹರೀಶ್ ರಾವತ್ ಈಗ ಸ್ವಲ್ಪ ವಿಶ್ರಾಂತಿ ತೆಗೆದುಕೊಳ್ಳಬೇಕು," ಎಂದು ವ್ಯಂಗ್ಯವಾಡಿದ್ದಾರೆ.
ಉತ್ತರಾಖಂಡ ವಿಧಾನಸಭೆ ಚುನಾವಣೆಗೆ ಇನ್ನು ಕೆಲವು ಸಮಯವಷ್ಟೇ ಇದೆ, ಈ ನಡುವೆ ಉತ್ತರಾಖಂಡ ಕಾಂಗ್ರೆಸ್‌ನಲ್ಲಿ ಬಿರುಕು ಕಾಣುವ ಲಕ್ಷಣಗಳು ಕಂಡು ಬಂದಿದೆ. ಉತ್ತರಾಖಂಡದ ಮಾಜಿ ಮುಖ್ಯಮಂತ್ರಿ ಹರೀಶ್ ರಾವತ್ ಶೀಘ್ರವೇ ಪಕ್ಷದ ನಾಯಕತ್ವದ ವಿರುದ್ಧವಾಗಿ ಬಂಡಾಯವೇಳುವ ಸುಳಿವನ್ನು ನೀಡಿದ್ದಾರೆ. ಸರಣಿ ಟ್ವೀಟ್‌ಗಳನ್ನು ಮಾಡಿರುವ ಹರೀಶ್ ರಾವತ್ ಗಾಂಧಿ ಕುಟುಂಬದ ವಿರುದ್ಧ ಸಿಡಿದೆದ್ದಿದ್ದಾರೆ.

ಹರೀಶ್ ರಾವತ್ ಗಾಂಧಿಯವರಿಗೆ ಹತ್ತಿರವಾಗಿದ್ದರೂ ಕಾಂಗ್ರೆಸ್ ನಾಯಕತ್ವ ಅವರನ್ನು ಕೈಬಿಟ್ಟಿದೆ ಎಂದು ಆರೋಪಿಸಿದ್ದಾರೆ. "ನಾವು ಈ ಚುನಾವಣೆಯ ಸಮುದ್ರದಲ್ಲಿ ಈಜಬೇಕು. ಆದರೆ ನನ್ನನ್ನು ಬೆಂಬಲಿಸುವ ಬದಲು ಸಂಘಟನೆಯು ನನಗೆ ಬೆನ್ನು ತಿರುಗಿಸಿದೆ ನಿಂತಿದೆ. ಕೆಟ್ಟ ಪಾತ್ರವನ್ನು ವಹಿಸುತ್ತಿದೆ," ಎಂದು ಹರೀಶ್ ರಾವತ್ ಬರೆದಿದ್ದಾರೆ.
"ತನ್ನ ವರ್ಚಸ್ಸು ಕಾಪಾಡಿಕೊಳ್ಳಲು ಹರೀಶ್ ರಾವತ್ ಈ ರೀತಿ ಮಾಡಿದ್ದು"
ಈ ವಿಚಾರದಲ್ಲಿ ಪಂಜಾಬ್ ಉಸ್ತುವಾರಿಯೂ ಆಗಿರುವ ಹರೀಶ್ ರಾವತ್‌ರನ್ನು ಟೀಕೆ ಮಾಡಿರುವ ತೀರಥ್, "ಹರೀಶ್ ತನ್ನ ವರ್ಚಸ್ಸು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಈ ರೀತಿ ಮಾಡುತ್ತಿದ್ದಾರೆ," ಎಂದು ಹೇಳಿದ್ದಾರೆ. "ಹರೀಶ್ ರಾವತ್ ಅವರು ಯಾವುದೇ ವಿಶ್ರಾಂತಿ ತೆಗೆದುಕೊಳ್ಳುವುದಿಲ್ಲ. ಬದಲಾಗಿ ಪಕ್ಷದಲ್ಲಿ ತಮ್ಮ ವರ್ಚಸ್ಸನ್ನು ಖಚಿತಪಡಿಸಿಕೊಳ್ಳಲು ಈ ರೀತಿಯಾಗಿ ಮಾಡುತ್ತಿದ್ದಾರೆ ಎಂದು ನನ್ನ ಭಾವನೆ. ಚುನಾವಣೆಯನ್ನು ಬಿಟ್ಟು ಅವರು ಹೋಗಲ್ಲ, ಯಾಕೆಂದರೆ ಚುನಾವಣೆಯೇ ಅವರ ಮೊದಲ ಆದ್ಯತೆ ಆಗಿದೆ," ಎಂದಿದ್ದಾರೆ. "ಅವರು ತಮ್ಮ ನೋವನ್ನು ಈ ರೀತಿ ಹೇಳಿಕೊಳ್ಳುವ ಬದಲು ಸ್ವಲ್ಪ ವಿಶ್ರಾಂತಿ ತೆಗೆದುಕೊಳ್ಳಬೇಕು ಎಂದು ನಾನು ಭಾವಿಸುತ್ತೇನೆ," ಎಂದು ಟಾಂಗ್ ನೀಡಿದ್ದಾರೆ.
"ಹರೀಶ್ ರಾವತ್ ಒತ್ತಡದ ರಾಜಕೀಯಕ್ಕೆ ಹೆಸರುವಾಸಿಯಾಗಿದ್ದಾರೆ. ಅವರು ಏನು ಹೇಳುತ್ತಾರೆ ಹಾಗೂ ಏನು ಮಾಡುತ್ತಾರೆ ಎಂಬುವುದು ಯಾರಿಗೂ ತಿಳಿದಿಲ್ಲ. ಆದರೆ ಹಿಂದಿನ ಕಾರ್ಯಗಳ ಬಗ್ಗೆ ಜನರಿಗೆ ತಿಳಿದಿದೆ. ಹರೀಶ್ ಕಾಂಗ್ರೆಸ್‌ನ ಹಿರಿಯ ನಾಯಕರು. ಅವರು ಈಗ ಹೇಳಿರುವುದು ಪಕ್ಷದ ಬಗ್ಗೆ ಅವರಿಗೆ ಇರುವ ನೋವನ್ನು ಹೇಳುತ್ತದೆ. ಇಂದು ಅವರು ವ್ಯಕ್ತಪಡಿಸಿದ ಭಾವನೆಗೆ ತಕ್ಕಂತೆ ಬದುಕುತ್ತಾರೆ ಎಂದು ನಾನು ಭಾವಿಸುತ್ತೇನೆ," ಎಂದಿದ್ದಾರೆ.
"ಪಂಜಾಬ್‌ನಲ್ಲಿ ಆಂತರಿಕ ಕಲಹದ ಹಿನ್ನೆಲೆ ಕಾಂಗ್ರೆಸ್ ಧೀಮಂತ ನಾಯಕ (ನಿವೃತ್ತ) ಅಮರಿಂದರ್ ಸಿಂಗ್ ಪಕ್ಷವನ್ನು ತೊರೆಯಬೇಕಾಯಿತು.," ಎಂದು ಕೂಡಾ ತೀರಥ್ ಹೇಳಿದ್ದಾರೆ." ಇತ್ತೀಚೆಗೆ ಅವರು ಪಂಜಾಬ್‌ನಲ್ಲಿದ್ದರು. ಅಲ್ಲಿ ಏನಾಯಿತು ಎಂಬುದು ನಮಗೆ ತಿಳಿದಿದೆ. ಕಾಂಗ್ರೆಸ್ ತುಂಡು-ತುಂಡಾಗು ವಿಭಜನೆ ಆಯಿತು. ಪ್ರಮುಖ ನಾಯಕರು ಪಕ್ಷವನ್ನು ತೊರೆದರು. ಆ ಪರಿಸ್ಥಿತಿಯಲ್ಲಿ ಹರೀಶ್ ರಾವತ್ ಏನಾದರೂ ಕಲಿತಿರಬಹುದು ಎಂದು ನಾನು ಭಾವಿಸುತ್ತೇನೆ," ಎಂದು ಕೂಡಾ ತೀರಥ್ ಸಿಂಗ್ ರಾವರ್ ಹೇಳಿದ್ದಾರೆ.
ನಿನ್ನೆ ಟ್ವೀಟ್ ಮಾಡಿರುವ ಹರೀಶ್ ರಾವತ್, "ನಾನು ದುರ್ಬಲನಲ್ಲ ಅಥವಾ ಸವಾಲುಗಳಿಂದ ಓಡಿಹೋಗುವುದಿಲ್ಲ. ನಾನು ಗೊಂದಲದಲ್ಲಿದ್ದೇನೆ. ಹೊಸ ವರ್ಷವು ನನಗೆ ದಾರಿಯನ್ನು ತೋರಿಸುತ್ತದೆ ಎಂದು ನಾನು ಭಾವಿಸುತ್ತೇನೆ. ಭಗವಂತ ಕೇದಾರನಾಥ (ಶಿವನು) ನನಗೆ ದಾರಿ ತೋರಿಸುತ್ತಾನೆ ಎಂಬ ವಿಶ್ವಾಸವಿದೆ," ಎಂದು ಬರೆದುಕೊಂಡಿದ್ದ "ತನ್ನ ರಾಜೀಕೀಯ ಭವಿಷ್ಯದ ಬಗ್ಗೆ ನಿರ್ಧಾರ ಕೈಗೊಳ್ಳುತ್ತೇನೆ," ಎಂದು ಸ್ಪಷ್ಟಪಡಿಸಿದ್ದಾರೆ.
(ಒನ್‌ಇಂಡಿಯಾ ಸುದ್ದಿ)












Click it and Unblock the Notifications