ಮೇ 21ಕ್ಕೆ ಬಿಹಾರದಲ್ಲಿ ನಿತೀಶ್ ಸರಕಾರ ಪತನ?
ಪಾಟ್ನಾ, ಮೇ 7: ಲೋಕಸಭಾ ಚುನಾವಣೆಯ ಫಲಿತಾಂಶದ ನಂತರ ಮೇ 21ಕ್ಕೆ ನಿತೀಶ್ ಕುಮಾರ್ ನೇತೃತ್ವದ ಜೆಡಿಯು ಸರಕಾರ ಪತನಗೊಳ್ಳಲಿದೆ ಎಂದು ಬಿಹಾರದ ಮಾಜಿ ಉಪಮುಖ್ಯಮಂತ್ರಿ ಮತ್ತು ಬಿಜೆಪಿ ಮುಖಂಡ ಸುಶೀಲ್ ಕುಮಾರ್ ಮೋದಿ ಹೇಳಿದ್ದಾರೆ.
ಪಾಟ್ನಾದಲ್ಲಿ ಮಂಗಳವಾರ (ಮೇ 6) ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಮೋದಿ, ನಿತೀಶ್ ಕುಮಾರ್ ಸರಕಾರ ಜನರ ವಿಶ್ವಾಸ ಕಳೆದುಕೊಂಡಿದೆ. ಅಲ್ಲದೇ ಆಡಳಿತ ಪಕ್ಷದ ಐವತ್ತು ಶಾಸಕರು ಪಕ್ಷ ತೊರೆಯಲು ಸಿದ್ದರಾಗಿದ್ದಾರೆ. ಹಾಗಾಗಿ, ನಿತೀಶ್ ಸರಕಾರ ಮೇ 21ಕ್ಕೆ ಪತನಗೊಳ್ಳಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಜೆಡಿಯು ಪಕ್ಷದ ಐವತ್ತು (ಈವರೆಗಿನ ಲೆಕ್ಕಾಚಾರದ ಪ್ರಕಾರ) ಶಾಸಕರು ನಮ್ಮ ಜೊತೆ ಸಂಪರ್ಕದಲ್ಲಿದ್ದಾರೆ. ಜೆಡಿಯು ಪಕ್ಷದ ಬಹುತೇಕ ಶಾಸಕರು ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ಮಾಡುತ್ತಿದ್ದಾರೆ ಎಂದು ಮೋದಿ, ಸಿಎಂ ನಿತೀಶ್ ಕುಮಾರ್ ಅವರಿಗೆ ಟಾಂಗ್ ನೀಡಿದ್ದಾರೆ.
ನಾವಾಗಿ ಜೆಡಿಯು ಪಕ್ಷದ ಯಾವ ಶಾಸಕರನ್ನು ಬಿಜೆಪಿಗೆ ಕರೆಯುತ್ತಿಲ್ಲ. ಅವರಾಗಿಯೇ ನಮ್ಮ ಪಕ್ಷದ ಸಿದ್ದಾಂತವನ್ನು ಒಪ್ಪಿ ಬರುವುದಕ್ಕೆ ಸಿದ್ದರಾಗಿದ್ದಾರೆ. ಸರಕಾರ ಬೀಳಿಸುವ ಕೆಲಸಕ್ಕೆ ನಾವು ಮುಂದಾಗುವುದಿಲ್ಲ ಎನ್ನುವ ರಾಜಕೀಯದ ಮಾಮೂಲು ಡೈಲಾಗನ್ನು ಮೋದಿ ಹೊಡೆದಿದ್ದಾರೆ.
ಮುಂದೆ ಓದಿ...
(Photos: PTI)

ಜೆಡಿಯು ಆಂತರಿಕ ವಿಚಾರ
ಐವತ್ತು ಶಾಸಕರು ಯಾವ ಕಾರಣಕ್ಕಾಗಿ ಪಕ್ಷ ತೊರೆಯಲು ಮುಂದಾಗಿದ್ದಾರೆ ಎನ್ನುವ ವಿಚಾರ ನನಗೆ ತಿಳಿದಿಲ್ಲ. ಅದು ಆ ಪಕ್ಷದ ಆಂತರಿಕ ವಿಚಾರ. ನಾವು ತೆಗೆದು ಕೊಳ್ಳಬೇಕಾದ ಮುಂದಿನ ಕ್ರಮಗಳನ್ನು ನಮ್ಮ ಪಕ್ಷದ ವರಿಷ್ಠರ ಜೊತೆ ಚರ್ಚಿಸಿ ನಿರ್ಧರಿಸುತ್ತೇವೆ - ಸುಶೀಲ್ ಕುಮಾರ್ ಮೋದಿ.

ಬಿಜೆಪಿ ಮುಖಂಡ
ಸ್ಥಳೀಯ ಬಿಜೆಪಿ ಮುಖಂಡ ಅಶ್ವನಿ ಚೌಬೆ ಮೇ 21ಕ್ಕೆ ನಿತೀಶ್ ಸರಕಾರ ಪತನಗೊಳ್ಳಲಿದೆ ಎಂದು ಎರಡು ದಿನಗಳ ಕೆಳಗೆ ಹೇಳಿಕೆ ನೀಡಿದ್ದರು. ಅವರ ಹೇಳಿಕೆಗೆ ಮತ್ತಷ್ಟು ಪುಷ್ಠಿ ನೀಡುವಂತೆ ಈಗ ಸುಶೀಲ್ ಮೋದಿ ಈ ಹೇಳಿಕೆ ನೀಡಿದ್ದಾರೆ.

ಜೆಡಿಯು ಶಾಸಕರ ಬೆಂಬಲ
ಜೆಡಿಯು ಲೋಕಸಭಾ ಅಭ್ಯರ್ಥಿಗಳಿಗೆ ನಿತೀಶ್ ಅವರಿಂದ ನಿರೀಕ್ಷಿತ ಪ್ರಚಾರ ಸಿಗುತ್ತಿಲ್ಲ. ಲಾಲೂ ಪ್ರಸಾದ್ ಯಾದವ್ ಮತ್ತೆ ಬಿಹಾರದಲ್ಲಿ ತನ್ನ ಆಧಿಪತ್ಯ ಸ್ಥಾಪಿಸ ಬಾರದೆನ್ನುವ ಉದ್ದೇಶಕ್ಕಾಗಿ ಜೆಡಿಯು ಶಾಸಕರು ಬಿಜೆಪಿಯತ್ತ ಒಲವು ತೋರುತ್ತಿದ್ದಾರೆ - ಸುಶೀಲ್ ಮೋದಿ.

ಜೆಡಿಯು ಹೇಳೋದೇ ಬೇರೆ
ಬಿಜೆಪಿಯ ಹನ್ನೆರಡು ಶಾಸಕರು ನಮ್ಮ ಪಕ್ಷಕ್ಕೆ ಬರಲು ಸಜ್ಜಾಗಿದ್ದಾರೆ. ಬಿಜೆಪಿ ಹತಾಶೆಯಿಂದ ಏನೇನೋ ಹೇಳಿಕೆ ನೀಡುತ್ತಿದೆ. ಸುಶೀಲ್ ಕುಮಾರ್ ಮೋದಿ RSS ಗರಡಿಯಿಂದ ಬಂದಿರುವುದರಿಂದ ಏನೇನೋ ಹೇಳಿಕೆ ನೀಡುತ್ತಿದ್ದಾರೆ - ಜೆಡಿಯು ವಕ್ತಾರ ಸಂಜಯ್ ಸಿಂಗ್.

ಒಂದಲ್ಲಾ ಒಂದು ಮುಜುಗರ
ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಜೊತೆ ಮುನಿಸಿಕೊಂಡು NDA ಮೈತ್ರಿಕೂಟದಿಂದ ಹೊರಬಂದ ನಂತರ ಸಿಎಂ ನಿತೀಶ್ ಒಂದಲ್ಲಾ ಒಂದು ಮುಜುಗರ ಎದುರಿಸುತ್ತಿದ್ದಾರೆ. ಎರಡು ದಿನದ ಹಿಂದೆ ಪಕ್ಷದ ಹಿರಿಯ ಮುಖಂಡ ಶರದ್ ಯಾದವ್ ಕೂಡ ಪಕ್ಷ ಮುಜುಗರಕ್ಕೀಡಾಗುವ ಹೇಳಿಕೆ ನೀಡಿದ್ದರು.












Click it and Unblock the Notifications