ಮೇಘಾಲಯ ಸಿಎಂ ಕಚೇರಿ ಮೇಲೆ ದಾಳಿ, ಬಿಜೆಪಿ ಪದಾಧಿಕಾರಿಗಳು ಸೇರಿ 18 ಮಂದಿ ಬಂಧನ
ತುರಾ, ಜುಲೈ. 25: ಪಶ್ಚಿಮ ಮೇಘಾಲಯದ ತುರಾ ಪಟ್ಟಣದಲ್ಲಿ ಮುಖ್ಯಮಂತ್ರಿ ಕಚೇರಿಯ ಮೇಲೆ ನಡೆದ ದಾಳಿಯಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಇಬ್ಬರು ಬಿಜೆಪಿ ಮಹಿಳಾ ಮೋರ್ಚಾ ಪದಾಧಿಕಾರಿಗಳು ಸೇರಿದಂತೆ ಕನಿಷ್ಠ 18 ಜನರನ್ನು ಬಂಧಿಸಲಾಗಿದೆ. ಘಟನೆಯಲ್ಲಿ ಐವರು ಪೊಲೀಸರಿಗೆ ಗಾಯವಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದ್ದಾರೆ.
ಸೋಮವಾರ ರಾತ್ರಿ ಮುಖ್ಯಮಂತ್ರಿ ಕಚೇರಿಯ ಮೇಲೆ ದಾಳಿ ಮಾಡಲು ಗುಂಪನ್ನು ಪ್ರಚೋದಿಸಿದ ಆರೋಪದ ಮೇಲೆ ಇಬ್ಬರು ತೃಣಮೂಲ ಕಾಂಗ್ರೆಸ್ ನಾಯಕರ ಪತ್ತೆಗೆ ಪೊಲೀಸರು ಶೋಧ ನಡೆಸಿದ್ದಾರೆ. ಮುಖ್ಯಮಂತ್ರಿ ಕಾನ್ರಾಡ್ ಸಂಗ್ಮಾ ಅವರ ಕಚೇರಿ ಮೇಲೆ ಗುಂಪೊಂದು ದಾಳಿ ನಡೆಸಿದ್ದರು. ಕಾನ್ರಾಡ್ ಸಂಗ್ಮಾ ಅವರಿಗೆ ಯಾವುದೇ ಗಾಯಗಳಾಗಿಲ್ಲ. ಸಿಎಂ ಕಚೇರಿಯೊಳಗಡೆ ಇದ್ದಾಗಲೆ ಘಟನೆ ನಡೆದಿತ್ತು.

ತುರಾ ಪಟ್ಟಣವನ್ನು ಈಶಾನ್ಯ ರಾಜ್ಯದ ಚಳಿಗಾಲದ ರಾಜಧಾನಿಯನ್ನಾಗಿ ಮಾಡುವಂತೆ ಒತ್ತಾಯಿಸಿ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಅಚಿಕ್ ಕಾನ್ಷಿಯಸ್ ಹೋಲಿಸ್ಟಿಕಲಿ ಇಂಟಿಗ್ರೇಟೆಡ್ ಕ್ರಿಮಾ (ACHIK) ಮತ್ತು ಗಾರೊ ಹಿಲ್ಸ್ ಸ್ಟೇಟ್ ಮೂವ್‌ಮೆಂಟ್ ಕಮಿಟಿ (GHSMC) ಯ ಮುಖಂಡರೊಂದಿಗೆ ಮುಖ್ಯಮಂತ್ರಿ ಕಾನ್ರಾಡ್ ಕೆ ಸಂಗ್ಮಾ ಸಭೆ ನಡೆಸುತ್ತಿದ್ದಾಗ ಘಟನೆ ನಡೆದಿದೆ. ದಾಳಿ ನಡೆಸಿದ್ದ ಗುಂಪು ಬೆಂಕಿ ಹಚ್ಚುವಿಕೆ ಮತ್ತು ವಿಧ್ವಂಸಕ ಕೃತ್ಯಗಳನ್ನು ನಡೆಸಿತ್ತು.
"ಸೋಮವಾರ ರಾತ್ರಿ ತುರಾದಲ್ಲಿರುವ ಸಿಎಂ ಕಚೇರಿಯಲ್ಲಿ ಧ್ವಂಸ ಮತ್ತು ಬೆಂಕಿ ಹಚ್ಚಿದ ಆರೋಪದಲ್ಲಿ ಇಬ್ಬರು ಮಹಿಳೆಯರು ಸೇರಿದಂತೆ 18 ಜನರನ್ನು ಬಂಧಿಸಲಾಗಿದೆ. ಘಟನೆಯಲ್ಲಿ ಕನಿಷ್ಠ 21 ವಾಹನಗಳಿಗೆ ಹಾನಿಯಾಗಿದೆ. ಆರೋಪಿಗಳ ವಿರುದ್ಧ ಪ್ರಕರಣಗಳನ್ನು ದಾಖಲಿಸಲಾಗಿದೆ" ಎಂದು ಅಧಿಕಾರಿ ಪಿಟಿಐಗೆ ತಿಳಿಸಿದ್ದಾರೆ.
ಬಿಜೆಪಿ ಮಹಿಳಾ ಮೋರ್ಚಾದ ಇಬ್ಬರು ಪದಾಧಿಕಾರಿಗಳನ್ನು ಬೆಲಿನಾ ಎಂ ಮರಕ್ ಮತ್ತು ದಿಲ್ಚೆ ಚ್ ಮರಕ್ ಎಂದು ಗುರುತಿಸಲಾಗಿದೆ. ಜನಸಮೂಹವನ್ನು ಹಿಂಸಾಚಾರಕ್ಕೆ ಪ್ರೇರೇಪಿಸಿದ ಆರೋಪದ ಮೇಲೆ ಇಬ್ಬರು ತೃಣಮೂಲ ಕಾಂಗ್ರೆಸ್ (ಟಿಎಂಸಿ ) ನಾಯಕರಿಗಾಗಿ ಶೋಧ ನಡೆಸಲಾಗಿದೆ ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ.

ಗಾಯಗೊಂಡಿರುವ ಪೊಲೀಸರಿಗೆ 50 ಸಾವಿರ ಪರಿಹಾರ ನೀಡುವುದಾಗಿ ಸಿಎಂ ಘೋಷಿಸಿದ್ದಾರೆ. ಗಾಯಾಳುಗಳು ಆಸ್ಪತ್ರೆಗೆ ದಾಖಲಾಗಿ ಸದ್ಯ ಅಪಾಯದಿಂದ ಪಾರಾಗಿದ್ದಾರೆ. ಪ್ರತಿಭಟನಾಕಾರರು ಮೇಲ್ನೋಟಕ್ಕೆ ಚಳಿಗಾಲದ ರಾಜಧಾನಿಯ ಬೇಡಿಕೆಯಿಟ್ಟಿರುವುದು ಕಂಡು ಬರುತ್ತಿದೆ. ಆದರೆ, ಹೆಚ್ಚಿನ ಸಂಖ್ಯೆಯ ಹೊರಗಿನವರು ಪ್ರತಿಭಟನಾಕಾರರೊಂದಿಗೆ ಬೆರೆತು ಮುಖ್ಯಮಂತ್ರಿ ಕಚೇರಿಗೆ ಕಲ್ಲು ಎಸೆಯಲು ಪ್ರಾರಂಭಿಸಿದರು. ನಂತರ ಪೊಲೀಸರು ಗುಂಪನ್ನು ಚದುರಿಸಲು ಅಶ್ರುವಾಯು ಮತ್ತು ಲಾಠಿ ಚಾರ್ಜ್ ನಡೆಸಿದರು ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಯ ನಂತರ ಸೋಮವಾರ ರಾತ್ರಿ ತುರಾ ಪಟ್ಟಣದಲ್ಲಿ ಜಿಲ್ಲಾ ಉಪ ಆಯುಕ್ತ ಜಗದೀಶ್ ಚೆಲಾನಿ ರಾತ್ರಿ ಕರ್ಫ್ಯೂ ವಿಧಿಸಿದ್ದು, ಜಿಲ್ಲಾಡಳಿತ ಪ್ರಸ್ತುತ ಕಾನೂನು ಸುವ್ಯವಸ್ಥೆಯನ್ನು ಪರಿಶೀಲಿಸುತ್ತಿದೆ ಎಂದು ಇನ್ನೊಬ್ಬ ಅಧಿಕಾರಿ ತಿಳಿಸಿದ್ದಾರೆ. ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಮುಂಜಾಗ್ರತಾ ಕ್ರಮವಾಗಿ ತುರಾ ಪುರಸಭೆ ವ್ಯಾಪ್ತಿಯ ಶಿಕ್ಷಣ ಸಂಸ್ಥೆಗಳನ್ನು ಹಗಲಿನಲ್ಲಿ ಮುಚ್ಚುವಂತೆ ಸೂಚಿಸಲಾಗಿದೆ ಎಂದು ಹೇಳಿದ್ದಾರೆ.












Click it and Unblock the Notifications