ಬಿಜೆಪಿ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾಗೆ ಕೊರೊನಾವೈರಸ್ ಪಾಸಿಟಿವ್
ನವದೆಹಲಿ, ಜನವರಿ 11: ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಮೂರೇ ಅಲೆಯ ಸಂದರ್ಭದಲ್ಲಿ ಹಲವಾರು ರಾಜಕೀಯ ನಾಯಕರಿಗೆ ಸೋಂಕು ಅಂಟಿಕೊಳ್ಳುತ್ತಿದೆ. ಕೊವಿಡ್-19 ಸೋಂಕಿತ ನಾಯಕರ ಪಟ್ಟಿಗೆ ಮತ್ತೊಂದು ಹೆಸರು ಸೇರ್ಪಡೆಯಾಗಿದೆ.
ಭಾರತೀಯ ಜನತಾ ಪಕ್ಷದ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾರಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ಪರೀಕ್ಷೆಯಲ್ಲಿ ದೃಢಪಟ್ಟಿದೆ. ಕೊವಿಡ್-19 ಸೋಂಕಿನ ಆರಂಭಿಕ ಲಕ್ಷಣಗಳು ಗೋಚರಿಸಿದ ಹಿನ್ನೆಲೆ ಅವರನ್ನು ಸೋಂಕಿನ ಪರೀಕ್ಷೆಗೊಳಪಡಿಸಲಾಯಿತು. ಈ ವೇಳೆ ಅವರಲ್ಲಿ ಸೋಂಕು ತಗುಲಿರುವುದು ಖಾತ್ರಿಯಾಗಿದೆ.
"ನಾನು ಆರೋಗ್ಯವಾಗಿದ್ದೇನೆ ಮತ್ತು ವೈದ್ಯರ ಸಲಹೆಯ ಮೇರೆಗೆ ನಾನು ಕ್ವಾರೆಂಟೇನ್ ಆಗಿದ್ದೇನೆ," ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ ಟ್ವೀಟ್‌ನಲ್ಲಿ ತಿಳಿಸಿದ್ದಾರೆ. ಕೊರೊನಾವೈರಸ್ ಮೂರನೇ ಅಲೆಯಲ್ಲಿ ಜೆಪಿ ನಡ್ಡಾ ಅಲ್ಲದೇ ಹಲವಾರು ನಾಯಕರಿಗೆ ಸೋಂಕು ತಗುಲಿದೆ.

ರಾಜಕಾರಣಿಗಳ ಬೆನ್ನು ಬಿದ್ದ ಕೊರೊನಾವೈರಸ್:
ದೇಶದಲ್ಲಿ ಈಗಾಗಲೇ ಹಲವು ರಾಜಕೀಯ ನಾಯಕರಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ಪರೀಕ್ಷೆಯಲ್ಲಿ ಪತ್ತೆಯಾಗಿದೆ. ಇತ್ತೀಚಿಗೆ ಕೇಂದ್ರ ಸಚಿವ ರಾಜನಾಥ್ ಸಿಂಗ್, ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್, ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಅರುಣಾಚಲ ಪ್ರದೇಶ ಉಪ ಮುಖ್ಯಮಂತ್ರಿ ಚೌವ್ಹಾಣ್ ಮೇನ್ ಮತ್ತು ನಟಿ ಹಾಗೂ ರಾಜಕಾರಣಿ ಖುಷ್ಬೂ ಸುಂದರ್ ಅವರಿಗೆ ಸೋಂಕು ತಗುಲಿರುವುದು ಗೊತ್ತಾಗಿದೆ. ಈ ಎಲ್ಲ ನಾಯಕರಲ್ಲಿ ಸೋಂಕಿನ ಆರಂಭಿಕ ಲಕ್ಷಣಗಳು ಗೋಚರಿಸಿದ್ದು, ಗೃಹ ದಿಗ್ಬಂಧನಕ್ಕೆ ಒಳಗಾಗಿದ್ದಾರೆ.
ಇದಕ್ಕೂ ಮೊದಲು ವರುಣ್ ಗಾಂಧಿ, ಮಹೇಂದ್ರ ನಾಥ್ ಪಾಂಡೆ, ರಾವ್ಸಾಹೇಬ್ ಪಾಟೀಲ್ ದಾನ್ವೆ, ಭಾರತಿ ಪವಾರ್, ನಿತ್ಯಾನಂದ ರೈ, ಮತ್ತು ಎಸ್.ಪಿ.ಸಿಂಗ್ ಬಾಘೇಲ್ ಮತ್ತು ರಾಜೀವ್ ಚಂದ್ರಶೇಖರ್ ಮತ್ತು ಮನೋಜ್ ತಿವಾರಿ. ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಸಮಾಜವಾದಿ ಪಕ್ಷದ ಮಾಜಿ ಸಂಸದೆ ಡಿಂಪಲ್ ಯಾದವ್, ಹರಿಯಾಣ ಉಪ ಮುಖ್ಯಮಂತ್ರಿ ಮತ್ತು ಜನನಾಯಕ್ ಜನತಾ ಪಕ್ಷದ ಮುಖ್ಯಸ್ಥ ದುಷ್ಯಂತ್ ಚೌಟಾಲಾ, ಬಿಹಾರ ಉಪ ಮುಖ್ಯಮಂತ್ರಿ ತಾರ್ಕಿಶೋರ್ ಪ್ರಸಾದ್ ಮತ್ತು ರೇಣು ದೇವಿ, ಗುಜರಾತ್ ರಾಜ್ಯ ಸಚಿವ ಜಿತುಭಾಯ್ ಚೌಧರಿ ಮತ್ತು ಪೂರ್ವ ದೆಹಲಿ ಮೇಯರ್ ಶ್ಯಾಮ್ ಸುಂದರ್ ಅಗರ್ವಾಲ್ ಸೇರಿದಂತೆ ಹಲವರಿಗೆ ಸೋಂಕು ದೃಢಪಟ್ಟಿದೆ.












Click it and Unblock the Notifications