ಮದುವೆಯಾದ್ರೆ ದೂರ ಆಗ್ತೀವಿ ಅಂತ ಒಂದೇ ಗಂಡನ ಕಟ್ಟಿಕೊಂಡ ಮೂವರು ಅಕ್ಕ-ತಂಗಿಯರು

ಲಕ್ನೋ: ಮದುವೆಯೆಂದರೆ ಸಾಮಾನ್ಯವಾಗಿ ಒಬ್ಬ ವರ ಹಾಗೂ ಒಬ್ಬ ವಧುವಿನ ನಡುವಿನ ಒಂದು ಪವಿತ್ರ ಬಂಧ. ಆದರೆ, ಉತ್ತರ ಪ್ರದೇಶದ ಅಮ್ರೋಹಾ ಜಿಲ್ಲೆಯಲ್ಲಿ ತೀರಾ ವಿಚಿತ್ರ ಹಾಗೂ ಅಚ್ಚರಿಯ ಘಟನೆಯೊಂದು ನಡೆದಿದೆ. ಮದುವೆಯ ನಂತರ ಮೂವರು ಸಹೋದರಿಯರು ಬೇರೆ ಬೇರೆಯಾಗಿ ವಾಸಿಸಲು ಇಷ್ಟಪಡದೆ, ಒಂದೇ ಮಂಟಪದಲ್ಲಿ ಒಬ್ಬ ಯುವಕನನ್ನ ಮೂವರೂ ಸೇರಿ ವಿವಾಹವಾಗಿದ್ದಾರೆ. ಇದೀಗ ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದ್ದು, ಪರ-ವಿರೋಧ ಚರ್ಚೆಗಳಿಗೆ ಗ್ರಾಸವಾಗಿದೆ.

ಹೌದು, ಉತ್ತರ ಪ್ರದೇಶದ ಹಸನ್‌ಪುರ ತಾಲೂಕಿನ ಧೌರಿಯಾ ಗ್ರಾಮದ ಸರೋಜ (20), ಸಾವಿತ್ರಿ (19) ಮತ್ತು ಸಂತೋಷ (18) ಎಂಬ ಮೂವರು ಅಕ್ಕ-ತಂಗಿಯರೇ ಈ ವಿಚಿತ್ರ ನಿರ್ಧಾರ ತೆಗೆದುಕೊಂಡವರು ನೋಡಿ. ಇಲ್ಲದೇ ಈ ಮೂವರು ಸಾಮಾಜಿಕ ಜಾಲತಾಣಗಳಲ್ಲಿ ಕಂಟೆಂಟ್ ಕ್ರಿಯೇಟರ್‌ಗಳಾಗಿ ಗುರುತಿಸಿಕೊಂಡಿದ್ದಾರೆ. ವಿಶೇಷವೆಂದರ, ತಮ್ಮದೇ ವಿಡಿಯೋಗಳಿಗೆ ಕ್ಯಾಮೆರಾಮ್ಯಾನ್ ಆಗಿದ್ದ ವಿಕಾಸ್ ಎಂಬಾತನ ಜೊತೆ ಈ ಮೂವರೂ ಸಹೋದರಿಯರು ಜುಲೈ 17 ರಂದು ಚಾಮುಂಡಾ ಮಾತಾ ದೇವಾಲಯದಲ್ಲಿ ಹಸೆಮಣೆ ಏರಿದ್ದಾರೆ.

Bizarre

ಮದುವೆಯಾದ್ರೆ ದೂರ ಆಗ್ತೀವಿ ಎಂಬ ಭಯ

ಈ ಮೂವರು ಸಹೋದರಿಯರು ಬಾಲ್ಯದಿಂದಲೂ ಒಂದೇ ಕಡೆ ಒಟ್ಟಿಗೆ ಬೆಳೆದವರು ಮತ್ತು ತುಂಬಾ ಅನ್ಯೋನ್ಯವಾಗಿದ್ದವರು. ಇತ್ತೀಚೆಗೆ ಇವರ ಕುಟುಂಬಸ್ಥರು ಮೂವರಿಗೂ ಬೇರೆ ಬೇರೆ ಕಡೆಗಳಲ್ಲಿ ಮದುವೆ ಮಾಡಲು ಸಿದ್ಧತೆ ನಡೆಸಿದ್ದರು. ಆದರೆ, ಮದುವೆಯಾದ ಬಳಿಕ ತಾವು ಬೇರೆ ಬೇರೆ ಮನೆಗಳಿಗೆ ಹೋಗಬೇಕು ಇದರಿಂದ ನಾವು ದೂರವಾಗಬೇಕಾಗುತ್ತದೆ ಎಂಬ ವಿಚಾರ ಇವರನ್ನು ತೀವ್ರವಾಗಿ ಕಾಡಿತ್ತು. "ಮದುವೆಯಾಗಿ ಮೂವರು ಬೇರೆ ಬೇರೆ ಕಡೆ ಹೋಗುವುದನ್ನ ನಮ್ಮಿಂದ ಊಹಿಸಿಕೊಳ್ಳಲೂ ಸಾಧ್ಯವಿರಲಿಲ್ಲ. ದೂರವಾಗುವ ಬದಲು ಒಟ್ಟಿಗೆ ಸಾಯೋಣ ಎಂದುಕೊಂಡಿದ್ದೆವು. ಆದರೆ ಕೊನೆಗೆ, ಸಾಯುವ ಬದಲು ಮೂವರೂ ಸೇರಿ ಒಬ್ಬನನ್ನೇ ಮದುವೆಯಾಗಿ ಒಟ್ಟಿಗೆ ಬದುಕೋಣ ಎಂದು ನಿರ್ಧರಿಸಿದೆವು. ನಾವೆಲ್ಲರೂ ವಯಸ್ಕರಾಗಿದ್ದು, ನಮ್ಮ ಸ್ವಂತ ಇಚ್ಛೆಯಿಂದ ಈ ನಿರ್ಧಾರ ತೆಗೆದುಕೊಂಡಿದ್ದೇವೆ" ಎಂದು ಸರೋಜ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಕ್ಯಾಮೆರಾಮ್ಯಾನ್ ಜೊತೆ ಸಹೋದರಿಯರ ವಿವಾಹ: ವಿಕಾಸ್ ಹೇಳಿದ್ದೇನು?

ಕಳೆದ ಆರು ತಿಂಗಳಿನಿಂದ ವಿಕಾಸ್ ಈ ಮದುವೆ ಹುಉಡಗ ಈ ಸಹೋದರಿಯರ ಬಳಿ ಕ್ಯಾಮೆರಾಮ್ಯಾನ್ ಆಗಿ ಕೆಲಸ ಮಾಡುತ್ತಿದ್ದ. ಕೆಲವು ವಿಡಿಯೋಗಳಲ್ಲಿ ಈತ ಇವರ ಪತಿಯ ಪಾತ್ರದಲ್ಲಿ ನಟಿಸುತ್ತಿದ್ದ. ಇದೇ ಪರಿಚಯ ಮುಂದೆ ಮದುವೆಗೆ ದಾರಿಯಾಗಿದೆ. ಮೂವರು ಅಕ್ಕ-ತಂಗಿಯರ ನಡುವಿನ ಬಾಂಧವ್ಯವನ್ನು ಅರಿತಿದ್ದ ವಿಕಾಸ್, ಅವರ ಪ್ರಸ್ತಾಪಕ್ಕೆ ಒಪ್ಪಿಕೊಂಡಿದ್ದಾನೆ. "ಅವರು ಎಷ್ಟೊಂದು ಅನ್ಯೋನ್ಯವಾಗಿದ್ದಾರೆ ಎಂಬುದು ನನಗೆ ತಿಳಿದಿತ್ತು. ಮದುವೆಯ ನಂತರ ಮೂವರು ಬೇರೆಯಾಗಿ ಬದುಕಲು ಇಷ್ಟವಿಲ್ಲ ಎಂದು ಅವರು ಪದೇ ಪದೇ ಹೇಳುತ್ತಿದ್ದರು. ಅವರ ಭಾವನೆಗಳನ್ನ ಗೌರವಿಸಿ ನಾನು ಈ ಮದುವೆಗೆ ಒಪ್ಪಿದೆ. ನಮ್ಮ ಈ ನಿರ್ಧಾರವನ್ನ ಸಮಾಜ ಕೂಡ ಗೌರವಿಸುತ್ತದೆ ಎಂಬ ಭರವಸೆ ನಮಗೆ ಇದೆ" ಎಂದು ವಿಕಾಸ್ ಹೇಳಿದ್ದಾನೆ.

ಹಿಂದೂ ವಿವಾಹ ಕಾಯ್ದೆ ಪ್ರಕಾರ ಮದುವೆಗೆ ಮಾನ್ಯತೆ ಇದೆಯೇ?

ಮೂವರು ಅಕ್ಕ-ತಂಗಿಯರು ಒಬ್ಬನೇ ಯುವಕನನ್ನ ಮದುವೆಯಾಗಿರುವುದು ಕಾನೂನುಬದ್ಧವೇ ಎಂಬ ಪ್ರಶ್ನೆ ಈಗ ಎಲ್ಲೆಡೆ ಎದ್ದಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಅಲಹಾಬಾದ್ ಹೈಕೋರ್ಟ್‌ನ ವಕೀಲ ಅನುರಾಗ್ ಪಾಂಡೆ, "ಹಿಂದೂ ವಿವಾಹ ಕಾಯ್ದೆಯ ಅಡಿಯಲ್ಲಿ ಈ ಮದುವೆಗೆ ಯಾವುದೇ ಕಾನೂನು ಮಾನ್ಯತೆ ಇಲ್ಲ. ಹಿಂದೂ ಕಾನೂನಿನ ಪ್ರಕಾರ, ಒಬ್ಬ ವ್ಯಕ್ತಿ ಏಕಕಾಲದಲ್ಲಿ ಹಲವು ಮಹಿಳೆಯರನ್ನ ಮದುವೆಯಾಗುವಂತಿಲ್ಲ. ಕಾನೂನಿನ ದೃಷ್ಟಿಯಲ್ಲಿ ಇದು ಸರಿಯಲ್ಲ" ಎಂದು ಸ್ಪಷ್ಟಪಡಿಸಿದ್ದಾರೆ.

ಹಿಂದೂ ಸಂಘಟನೆಗಳ ವಿರೋಧ

ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಕೆಲವು ಹಿಂದೂ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿವೆ. ಧಾರ್ಮಿಕ ಸ್ಥಳದಲ್ಲಿ ಇಂತಹ ಮದುವೆ ನಡೆದಿರುವುದು ಸಾಮಾಜಿಕ ಮತ್ತು ಧಾರ್ಮಿಕ ನಿಯಮಗಳಿಗೆ ವಿರುದ್ಧವಾಗಿದೆ ಎಂದು ಆರೋಪಿಸಿವೆ. ಆದರೆ, ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡಿರುವ ಯುವತಿಯರು, "ಪ್ರಾಚೀನ ಕಾಲದಲ್ಲಿ ದಶರಥ ಮಹಾರಾಜನಿಗೆ ಮೂವರು ಪತ್ನಿಯರಿದ್ದರು. ಆಗ ಅದು ಅಪಮಾನವಾಗಿರಲಿಲ್ಲವೇ?" ಎಂದು ಪ್ರಶ್ನಿಸಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿರುವ ಹಸನ್‌ಪುರ ಪೊಲೀಸ್ ಅಧಿಕಾರಿ ಪಂಕಜ್ ತ್ಯಾಗಿ, "ನಾವು ವಿಡಿಯೋ ಗಮನಿಸಿದ ಬಳಿಕ ನಾಲ್ವರನ್ನೂ ಸಂಪರ್ಕಿಸಿ ಮಾತನಾಡಿದ್ದೇವೆ. ಅವರೆಲ್ಲರೂ ವಯಸ್ಕರಾಗಿದ್ದು, ತಮ್ಮ ಸ್ವಂತ ಇಚ್ಛೆಯಿಂದ ಮದುವೆಯಾಗಿದ್ದಾರೆ. ಅವರ ಪೋಷಕರಿಂದಾಗಲಿ ಅಥವಾ ಬೇರೆ ಯಾರಿಂದಲೂ ಈವರೆಗೆ ಯಾವುದೇ ಅಧಿಕೃತ ದೂರು ದಾಖಲಾಗಿಲ್ಲ. ದೂರು ಬಂದರೆ ಕಾನೂನು ಪ್ರಕಾರ ಸೂಕ್ತ ಕ್ರಮ ಕೈಗೊಳ್ಳಲಾಗುವುದು" ಎಂದು ತಿಳಿಸಿದ್ದಾರೆ. ಮದುವೆ ವೇಳೆ ದೇವಸ್ಥಾನದಲ್ಲಿ ಜೀರ್ಣೋದ್ಧಾರ ಕಾರ್ಯ ನಡೆಯುತ್ತಿದ್ದ ಕಾರಣ ಯಾವುದೇ ಅರ್ಚಕರು ಇರಲಿಲ್ಲ ಎಂದು ದೇವಸ್ಥಾನದ ವ್ಯವಸ್ಥಾಪಕರು ಸ್ಪಷ್ಟಪಡಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+