Toys Seize : 18,600 ನಕಲಿ ಆಟಿಕೆ ವಶಪಡಿಸಿಕೊಂಡ ಬಿಎಸ್‌ಐ!
ನವದೆಹಲಿ, ಜನವರಿ.12: ನಕಲಿ ಆಟಿಕೆಗಳ ಮಾರಾಟಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ದೇಶಾದ್ಯಂತದ ಶಾಪಿಂಗ್ ಮಾಲ್ ಮತ್ತು ವಿಮಾನ ನಿಲ್ದಾಣಗಳಲ್ಲಿ ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ (ಬಿಐಎಸ್) ದಾಳಿ ನಡೆಸಿದೆ.
ಭಾರತಾದ್ಯಂತ ನಕಲಿ ಆಟಿಕೆಗಳನ್ನು ಮಾರಾಟ ಮಾಡುತ್ತಿದ್ದ 44 ಶಾಪಿಂಗ್ ಮಾಲ್ ಮತ್ತು ವಿಮಾನ ನಿಲ್ದಾಣ ಸೇರಿದಂತೆ ಅಂಗಡಿ ಮುಂಗಟ್ಟುಗಳ ಮೇಲೆ ದಾಳಿ ನಡೆಸಿರುವ ಅಧಿಕಾರಿಗಳು, ಕಾನೂನು ಬಾಹಿರವಾಗಿ ಆಮದು ಮಾಡಿಕೊಂಡಿರುವ ಮತ್ತು ಬಿಐಎಸ್ ಮಾರ್ಕ್‌ಗಳಿಲ್ಲದ 18,600 ಆಟಿಕೆಗಳನ್ನು ವಶಪಡಿಸಿಕೊಂಡು ಮುಂಗಟ್ಟುಗಳ ಮಾಲೀಕರಿಗೆ ನೋಟಿಸ್ ನೀಡಲಾಗಿದೆ ಎಂದು ಉನ್ನತ ಅಧಿಕಾರಿ ತಿಳಿಸಿದ್ದಾರೆ.
ಈ ಕುರಿತು ಬಿಐಎಸ್ ಮಹಾನಿರ್ದೇಶಕ ಪ್ರಮೋದ್ ಕುಮಾರ್ ತಿವಾರಿ ಅವರು ಮಾಹಿತಿ ನೀಡಿದ್ದು, ದೇಶೀಯ ತಯಾರಿಕರು ನೀಡಿದ ದೂರಿನ ಮೇರೆಗೆ ವಿವಿಧ ಪ್ರದೇಶಗಳಲ್ಲಿ ದಾಳಿ ನಡೆಸಲಾಗಿದೆ. ಮೊದಲ ಹಂತದಲ್ಲಿ ವಿಮಾನ ನಿಲ್ದಾಣಗಳು, ಪ್ರಮುಖ ಮಾಲ್‌ಗಳನ್ನು ಮಾತ್ರ ಗುರಿಯಾಗಿಸಿಕೊಂಡಿದ್ದೇವೆ. ದೇಶಾದ್ಯಂತ 44 ಕಡೆ ನಡೆಸಲಾದ ದಾಳಿಯಿಂದ 18,600 ಬಿಐಎಸ್ ಮಾರ್ಕ್‌ಗಳಿಲ್ಲದ ಮತ್ತು ಅಕ್ರಮವಾಗಿ ಆಮದು ಮಾಡಿಕೊಳ್ಳಲಾಗಿರುವ ಆಟಿಕೆಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಹೇಳಿದರು.

ಇ-ಕಾಮರ್ಸ್ ಕಂಪನಿಗಳಿಗೆ ನೋಟಿಸ್ !
ಬಿಐಎಸ್ ಪ್ರಮಾಣಪತ್ರವಿಲ್ಲದ ಆಟಿಕೆಗಳನ್ನು ಇ-ಕಾಮರ್ಸ್ ಕಂಪನಿ ಮತ್ತು ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳ ಮೂಲಕ ಮಾರಾಟ ಮಾಡಲಾಗುತ್ತಿರುವ ಕುರಿತು ದೂರುಗಳನ್ನು ನಾವು ಸ್ವೀಕರಿಸಿಲಾಗಿದೆ. ಈ ಕುರಿತು ಅಮೆಜಾನ್, ಫ್ಲಿಪ್‌ಕಾರ್ಟ್, ಸ್ನಾಪ್ ಡೀಲ್ ನಂತಹ ಸಂಸ್ಥೆಗಳಿಗೆ ನಿಯಮ ಉಲ್ಲಂಘಿಸದಂತೆ ಮತ್ತು ಆಟಿಕೆಗಳ ಗುಣಮಟ್ಟ ಕಾಯ್ದುಕೊಳ್ಳುವಂತೆ ಎಚ್ಚರಿಕೆ ನೋಟಿಸ್ ನೀಡಲಾಗಿದೆ.
ಬಿಐಎಸ್ ಗುರುತು ಇಲ್ಲದೆ ಆಟಿಕೆಗಳನ್ನು ಮಾರಾಟ ಮಾಡುತ್ತಿರುವ ವಿರುದ್ಧ ಬಿಐಎಸ್ ಕಾಯಿದೆಯ ಸೆಕ್ಷನ್ 17 ರ ಉಲ್ಲಂಘನೆಯ ಅಡಿಯಲ್ಲಿ ಸೂಕ್ತ ಕಾನೂನು ಕ್ರಮ ಜರುಗಿಸುತ್ತೇವೆ. ಮತ್ತು ಕಾಯಿದೆಯ ಸೆಕ್ಷನ್ 29 ರಲ್ಲಿ ಉಲ್ಲೇಖಿಸಲಾದ ದಂಡದ ನಿಬಂಧನೆಗಳ ಪ್ರಕಾರ ಅವರನ್ನು ಶಿಕ್ಷಿಸಲಾಗುವುದು ಎಂದು ತಿವಾರಿ ಹೇಳಿದರು.
ಗ್ರಾಹಕರ ಸಹಭಾಗಿತ್ವ ಅವಶ್ಯಕ !
ಅಧಿಕಾರಿಗಳು ಮಾತ್ರವಲ್ಲದೇ ಗ್ರಾಹಕರು ಸಹ ಎಚ್ಚರವಹಿಸಬೇಕಿದೆ. ಯಾವುದೇ ಸ್ಥಳದಲ್ಲಿ ಆಟಿಕೆಗಳನ್ನು ಖರೀದಿಸುವ ಮೊದಲ ಬಿಐಎಸ್ ಮಾರ್ಕ್ ಇರುವುದನ್ನು ಪರಿಶೀಲಿಸಬೇಕು. ಆನ್‌ಲೈನ್ ಸೇರಿದಂತೆ ಯಾವುದೇ ಮಾಲ್‌ಗಳಲ್ಲಿ ಬಿಐಎಸ್ ಮಾರ್ಕ್‌ಗಳಿಲ್ಲದ ಉತ್ಪನ್ನವನ್ನು ಸ್ವೀಕರಿಸಿದೇ ಹಿಂತಿರುಗಿಸಬೇಕು. ನಂತರ ಉತ್ಪನ್ನದ ಕುರಿತು ದೂರು ದಾಖಲಿಸಿದರೇ ಮಾರಾಟಗಾರ ಮೇಲೆ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಗ್ರಾಹಕ ವ್ಯವಹಾರಗಳ ಕಾರ್ಯದರ್ಶಿ ರೋಹಿತ್ ಕುಮಾರ್ ಸಿಂಗ್ ಹೇಳಿದರು.

ರಾಂಚಿ, ನೋಯ್ಡಾ, ದೆಹಲಿ ವಿಮಾನ ನಿಲ್ದಾಣ ಮತ್ತು ಕೋಲ್ಕತ್ತಾದ ಹ್ಯಾಮ್ಲೀಸ್ ಮಳಿಗೆಗಳಿಂದ ಅಕ್ರಮ ಆಟಿಕೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಮುಂಬರುವ ದಿನಗಳಲ್ಲಿ ವಿಶೇಷ ತಂಡಗಳನ್ನು ರಚಿಸುವ ಮೂಲಕ ವಿದೇಶದಿಂದ ಆಟಿಕೆಗಳನ್ನು ಹೊತ್ತು ತರುವ ಸರಕುಗಳನ್ನು ಸಂಪೂರ್ಣವಾಗಿ ಪರಿಶೀಲಿಸುವ ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದರು.












Click it and Unblock the Notifications