ಗುಜರಾತ್‌ನಲ್ಲಿ ಅಬ್ಬರಿಸಿದ 'ಬಿಪರ್‌ಜಾಯ್' ತುಸು ದುರ್ಬಲ, ಶನಿವಾರ ಈ ರಾಜ್ಯದಲ್ಲಿ ಭಾರೀ ಮಳೆ: IMD
ನವದೆಹಲಿ, ಜೂನ್ 16: ಗುಜರಾತ್ ಕರಾವಳಿ ತೀರಕ್ಕೆ ಅಪ್ಪಳಿಸಿರುವ ಬಿಪರ್‌ಜಾಯ್ ಚಂಡಮಾರುತದಿಂದಾಗಿ ಸೌರಾಷ್ಟ್ರ, ಕಚ್ ಮತ್ತು ಉತ್ತರ ಗುಜರಾತ್‌ನ ಪಕ್ಕದ ಪ್ರದೇಶಗಳು ಪ್ರಸ್ತುತದಲ್ಲಿ ಅತ್ಯಧಿಕ ಮಳೆ ಸುರಿಯುತ್ತಿದೆ. ಈ ಸೈಕ್ಲೋನ್ ಚಂಡಮಾರುತವು ಸಂಜೆಯಿಂದ ರಾಜಸ್ಥಾನದ ಪಕ್ಕದ ಭಾಗಗಳತ್ತ ಸಾಗಲಿದೆ. ದಕ್ಷಿಣ ರಾಜಸ್ಥಾನ ಸೇರಿದಂತೆ ವಿವಿಧೆಡೆ ಮುಂದಿನ 24 ಗಂಟೆ ಭಾರೀ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಗುರುವಾರ ರಾತ್ರಿ ಗುಜರಾತ್‌ಗೆ ಅಪ್ಪಳಿಸಿದ 'ಅತ್ಯಂತ ತೀವ್ರ' ಚಂಡಮಾರುತ ಬಿಪರ್‌ಜೋಯ್ ಈಗ 'ಸೈಕ್ಲೋನಿಕ್' ಚಂಡಮಾರುತವಾಗಿ ದುರ್ಬಲಗೊಂಡಿದೆ. ಇಲ್ಲಿನ ಕರಾವಳಿ ಭಾಗದ ಭುಜ್‌ನಿಂದ ಪಶ್ಚಿಮ-ವಾಯುವ್ಯಕ್ಕೆ 30 ಕಿಲೋ ಮೀಟರ್ ದೂರದಲ್ಲಿ ಕೇಂದ್ರೀಕೃತವಾಗಿದೆ ಎಂದು ಐಎಂಡಿ ನಿರ್ದೇಶಕ ಡಾ. ಮೃತ್ಯುಂಜಯ್ ಮಹಾಪಾತ್ರ ವಿವರಿಸಿದ್ದಾರೆ.

ಇಂದು ಬೆಳಗ್ಗೆ ಚಂಡಮಾರುತದ ವೇಗ ಪ್ರತಿ ಗಂಟೆಗೆ 80-90 ಕಿಲೋಮೀಟರ್ ವೇಗದಲ್ಲಿತ್ತು. ಪೂರ್ವ ಈಶಾನ್ಯ ಧಿಕ್ಕಿನಲ್ಲಿ ನೆನ್ನೆಯಿಂದಲೇ ಜೋರಾಗಿ ಬೀಸುತ್ತಿತ್ತು. ಅದರ ಗಾಳಿ ವೇಗ ಇಂದು ಸಂಜೆ ಹೊತ್ತಿಗೆ ಪ್ರತಿ ಹೊತ್ತಿಗೆ ಪ್ರತಿ ಗಂಟೆಗೆ 50-60 ಗೆ ಇಳಿಕೆಯಾಗಲಿದೆ. ಕೆಲವೊಮ್ಮೆ 70 ಕಿಲೋ ಮೀಟರ್ ವೇಗದಲ್ಲಿ ಬೀಸುವ ಸಾಧ್ಯತೆ ಇದೆ. ಈ ಮೂಲಕ ಚಂಡಮಾರುತವು ಸ್ವಲ್ಪ ಮಟ್ಟಿಗೆ ದುರ್ಬಲವಾಗಿ 'ಸೈಕ್ಲೋನಿಕ್ ಸ್ಟಾರ್ಮ್' ಹಂತದಲ್ಲಿದೆ ಎಂದು ಅವರು ಹೇಳಿದರು.
ಸದ್ಯ ಕಳೆದ 24 ಗಂಟೆಗಳಲ್ಲಿ ಗುಜರಾತ್ ಕರಾವಳಿ, ಸೌರಾಷ್ಟ್ರದ ಉತ್ತರ ಭಾಗಗಳು, ಕಚ್ ಮತ್ತು ಉತ್ತರ ಗುಜರಾತ್‌ನ ಪಕ್ಕದ ಪ್ರದೇಶಗಳು ಪ್ರಸ್ತುತ ಭಾರಿ ಮಳೆ-ಗಾಳಿಯಿಂದ ಸಾಕಷ್ಟು ಹಾನಿ ಉಂಟಾಗಿದೆ. ದೈತ್ಯ ಅಲೆಗಳು ತೀರಕ್ಕೆ ಬಂದು ಅಪ್ಪಳಿಸುತ್ತಿವೆ. ಸರ್ಕಾರ ಅಗತ್ಯ ಮುಂಜಾಗೃತೆ ವಹಿಸಿದೆ.

ಶನಿವಾರ ರಾಜಸ್ಥಾನದಲ್ಲಿ ಬಿಪರ್‌ಜಾಯ್ ಹಾವಳಿ?
ಇಂದು ಶುಕ್ರವಾರ ಸಂಜೆ ಹೊತ್ತಿಗೆ ರಾಜಸ್ಥಾನದತ್ತ ಸಾಗಲಿರುವ ಈ ಬಿಪರ್‌ಜಾಯ್ ಹಾವಳಿ ಮುಂದುವರಿಸಲಿದೆ. ರಾಜಸ್ಥಾನ ತಲುಪಿದಾಗ ಸೈಕ್ಲೋನ್ ಗಾಳಿಯ ವೇಗ ಪ್ರತಿ ಗಂಟೆಗೆ 40ರಿಂದ 50 ಕಿಲೋ ಮೀಟರ್ ಕೆಲವೊಮ್ಮೆ 60 ಕಿಲೋ ಮೀಟರ್ ನಷ್ಟಿರಲಿದೆ.
ಬಿಪರ್‌ಜಾಯ್ ಚಂಡಮಾರುತ ಕಳೆದ 24 ಗಂಟೆಗಳ ಹಿಂದೆ ಪ್ರತಿ ಗಂಟೆಗೆ 115 ರಿಂದ 120 ಕಿಲೋ ಮೀಟರ್ ವೇಗದಲ್ಲಿ ಸಂಚರಿಸಿತ್ತು. ಕಳೆದ ರಾತ್ರಿ 10.30 ರಿಂದ 11.30 ರ ಮಧ್ಯೆ ಜಖೌವನ್ನು ದಾಟಿತ್ತು. ಈ ವೇಳೆ ಅತ್ಯಧಿಕ ಮಳೆ ಮತ್ತು ಬಿರುಗಾಳಿ ಕರಾವಳಿ ತೀರ ಪ್ರದೇಶದ ಜನರ ನಿದ್ದೆಗೆಡಿಸಿತ್ತು.
ಇಂದು ಶುಕ್ರವಾರ ಮಧ್ಯಾಹ್ನದ ಹೊತ್ತಿಗೆ ಸೌರಾಷ್ಟ್ರದ ಕರಾವಳಿಯಲ್ಲಿ ಗಾಳಿಯ ವೇಗ ಪ್ರತಿ ಗಂಟೆಗೆ 35 ರಿಂದ 45 ಕಿಲೋ ಮೀಟರ್‌ಗೆ ಗೆ ಕಡಿಮೆ ಆಗಲಿದೆ. ಕಳೆದ ಕೆಲವು ದಿನಗಳಿಂದ ದೈತ್ಯ ಸ್ವರೂಪ ಪಡೆದ ಸಮುದ್ರ ಮತ್ತದರ ಅಲೆಗಳು ಇಂದು ಸಂಜೆ ವೇಳೆಗೆ ಕ್ಷುಬ್ಧ ಸ್ಥಿತಿ ತಲುಪಲಿದೆ. ಮೀನುಗಾರಿಕೆಗೆ ಇಳಿಯದಂತೆ ಕರಾವಳಿ ಮೀನುಗಾರರಿಗೆ ಐಎಂಡಿ ಎಚ್ಚರಿಕೆ ನೀಡಿದೆ ಎಂದು ಅವರು ತಿಳಿಸಿದರು.
ಧರೆಗೆ 300ಕ್ಕೂ ಹೆಚ್ಚು ವಿದ್ಯುತ್ ಕಂಬ
ಗುಜರಾತ್ ಕರಾವಳಿ ಭಾಗದಲ್ಲಿ ಬಿಪರ್‌ಜಾಯ್ ಅಬ್ಬರಕ್ಕೆ ಜನಜೀವನ ಅಸ್ತವೆಸ್ತವಾಗಿದೆ. ಇಲ್ಲಿ ಮೊರ್ಬಿ ಜಿಲ್ಲೆಯಲ್ಲಿ 300ಕ್ಕೂ ಹೆಚ್ಚು ವಿದ್ಯುತ್ ಕಂಬ ಹಾನಿಗೀಡಾಗಿವೆ. ಸುಮಾರು 45 ಹಳ್ಳಿಗಳಲ್ಲಿ ವಿದ್ಯುತ್ ಕಡಿತಗೊಂಡಿದೆ. ಗಾಳಿಗೆ ಮನೆ ಮೇಲಿನ ಶೀಟುಗಳು ಕಿತ್ತು ಹೋಗಿವೆ.
ಗುಜರಾತ್ ರಾಜ್ಯ ಪ್ರಧಾನಿ ನರೇಂದ್ರ ಮೋದಿ ಪ್ರತಿನಿಧಿಸುವ ರಾಜ್ಯ. ಹೀಗಾಗಿ ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರೊಂದಿಗೆ ಪ್ರಧಾನಿ ಅವರು ದೂರವಾಣಿ ಸಂಭಾಷಣೆ ನಡೆಸಿದ್ದಾರೆ. ಬಿಪರ್‌ಜಾಯ್ ಚಂಡಮಾರುತವು ಮಾಡಿದ ಹಾನಿ, ಜನರ ಸುರಕ್ಷಿತತೆ ಬಗ್ಗೆ ವಿಚಾರಿಸಿ ಸೂಕ್ತ ಮಾಹಿತಿ ಪಡೆದು, ಪರಿಸ್ಥಿತಿಯನ್ನು ಅವಲೋಕಿಸಿದ್ದಾರೆ.












Click it and Unblock the Notifications