ವಯಸ್ಸು 42, ಜಾಣ್ಮೆ ಶೂನ್ಯ. ಆದ್ರೂ ಕ್ಲಾಸ್ 12 ಎಕ್ಸಾಂನಲ್ಲಿ ಟಾಪರ್!
ಮದುವೆಯಾಗಿ ಇಬ್ಬರು ಮಕ್ಕಳ ತಂದೆಯಾಗಿರುವ ಬಿಹಾರದ ಗಣೇಶ್ ಕುಮಾರ್ ಎಂಬಾತ ಇತ್ತೀಚೆಗೆ ಪ್ರಕಟಗೊಂಡ 12ನೇ ತರಗತಿ ಪರೀಕ್ಷಾ ಫಲಿತಾಂಶದಲ್ಲಿ ಟಾಪರ್ ಆಗಿದ್ದಾನೆ. ಆದರೆ, ಈತನಿಗೆ ತಾನು ಓದಿದ ವಿಷಯಗಳ ಗಂಧ ಗಾಳಿಯೇ ಗೊತ್ತಿಲ್ಲ!
ಪಾಟ್ನಾ, ಜೂನ್ 3: ನಿಮಗೆ ನೆನಪಿರಬಹುದು. ಕಳೆದ ವರ್ಷ ಬಿಹಾರದ 12ನೇ ತರಗತಿ ಪರೀಕ್ಷೆಯಲ್ಲಿ ರಾಜ್ಯಕ್ಕೇ ಮೊದಲ ಸ್ಥಾನ ಗಳಿಸಿದ್ದ ರೂಬಿ ರಾಯ್ ಎಂಬ ವಿದ್ಯಾರ್ಥಿಯು ಮಾಧ್ಯಮಗಳ ಮುಂದೆ ಅತೀ ಸುಲಭ ಪ್ರಶ್ನೆಗೂ ತಪ್ಪು ಉತ್ತರಗಳನ್ನು ಕೊಟ್ಟು ಸಿಕ್ಕಿಹಾಕಿಕೊಂಡಿದ್ದಳು. ಪೊಲಿಟಿಕಲ್ ಸೈನ್ಸ್ ಎಂದರೇನು ಎಂದು ಕೇಳಿದ್ದಕ್ಕೆ ಅದು ಅಡುಗೆ ಮಾಡುವ ಬಗೆಗಿನ ಪಠ್ಯ ಎಂದು ಹೇಳಿ ದೇಶಾದ್ಯಂತ ಸುದ್ದಿಯಾಗಿದ್ದಳು.
ಇಂಥದ್ದೇ ಪ್ರಕರಣ ಈಗ ಮತ್ತೆ ಬಿಹಾರದಲ್ಲಿ ಮರುಕಳಿಸಿದೆ. ಈ ಬಾರಿ, ಗಣೇಶ್ ಕುಮಾರ್ ಎಂಬಾತ ಇತ್ತೀಚೆಗಷ್ಟೇ ಪ್ರಕಟಣೆಗೊಂಡ 12ನೇ ತರಗತಿ ಪರೀಕ್ಷೆಯಲ್ಲಿ ಮೊದಲ ಶ್ರೇಯಾಂಕ ಪಡೆದಿದ್ದ. ಆದರೆ, ಈತನನ್ನು ಸಂದರ್ಶನ ಮಾಡಲು ಹೋಗಿದ್ದ ಮಾಧ್ಯಮಗಳಿಗೆ ಈತನ ಸಾಚಾತನ ಗೊತ್ತಾಗಿದೆ. ಹಾಗಾಗಿ, ಆತ ಈಗ ಪೊಲೀಸರ ಅತಿಥಿಯಾಗಿದ್ದಾನೆ. ಅತ್ತ, ಪರೀಕ್ಷಾ ಮಂಡಳಿಯೂ ಈತನ ಫಲಿತಾಂಶವನ್ನು ರದ್ದುಗೊಳಿಸಿದೆ.

ಸಮಷ್ಠಿಪುರದ ಛಕಾಕೀಬ್ ಎಂಬ ಹಳ್ಳಿಯಲ್ಲಿ ರಾಮನಂದನ್ ಸಿಂಗ್ ಜಗದೀಪ್ ನಾರಾಯಣ್ ಹೈ ಸ್ಕೂಲಿನಲ್ಲಿ ಬಿಹಾರ 12ನೇ ತರಗತಿ ಪರೀಕ್ಷಾ ಮಂಡಳಿಯ ಪರೀಕ್ಷೆ ತೆಗೆದುಕೊಂಡಿದ್ದ ಈತ ಶೇ. 82.6 ರಷ್ಟು ಅಂಕ ಗಳಿಸುವ ಮೂಲಕ ರಾಜ್ಯಕ್ಕೇ ಮೊದಲ ಶ್ರೇಯಾಂಕ ಪಡೆದಿದ್ದ. ಈ ಹಿನ್ನೆಲೆಯಲ್ಲಿ, ಈತನನ್ನು ಸಂದರ್ಶನ ಮಾಡಲು ಬಂದಿದ್ದ ಟಿವಿ ಮಾಧ್ಯಮವೊಂದು ಬಂದಿತ್ತು. ಆಗ, ಈತನ ಸಾಚಾತನ ಬಯಲಾಗಿದೆ.
ಹೇಗೆ ಗೊತ್ತಾಯಿತು ಅಸಲೀಯತ್ತು?
12ನೇ ತರಗತಿಯ ವಿಷಯಗಳಲ್ಲೊಂದಾದ ಸಂಗೀತ ವಿಷಯದ ಪ್ರಾಕ್ಟಿಕಲ್ ನಲ್ಲಿ ಆತ 70ಕ್ಕೆ 65 ಅಂಕ ಗಳಿಸಿದ್ದಾನೆ. ಹೀಗಾಗಿ, ಸಂದರ್ಶಕರು ಆತನನ್ನು ಲತಾ ಮಂಗೇಶ್ಕರ್ ಬಗ್ಗೆ ಕೇಳಿದ್ದಾರೆ.
ಇದಕ್ಕೆ ಉತ್ತರಿಸಿರುವ ಆತ, ಲತಾ ಮಂಗೇಶ್ಕರ್ ಅವರು ತಮ್ಮ ಊರಿನ ಹೆಂಗಸಾಗಿದ್ದು ಅವರನ್ನು ಮೈಥಿಲಿ ಕೋಕಿಲಾ ಎಂದೂ ಗುರುತಿಸುತ್ತಾರೆ ಎಂದು ಹೇಳಿದ್ದಾನೆ. ಅಸಲಿಗೆ, ಈ ಮೈಥಿಲಿ ಕೋಕಿಲಾ ಎಂಬ ಬಿರುದು ಆತನು ಕಲಿತ ಶಾಲೆಯಿರುವ ಸಮಷ್ಟಿಪುರದಲ್ಲಿರುವ ಜಾನಪದ ಹಾಡುಗಾರ್ತಿ ಶಾರದಾ ಸಿನ್ಹಾ ಅವರದ್ದಾಗಿದೆ.
ಅಷ್ಟೇ, ಅಲ್ಲ.... ಸಂಗೀತದಲ್ಲಿ ಪ್ರಾವೀಣ್ಯತೆ ಗಳಿಸಿದ್ದಾಗಿ ಈತನ ಅಂಕಪಟ್ಟಿ ಹೇಳುತ್ತಿದೆ. ಆದರೆ, ಈತನಿಗೆ ಸ್ವರ, ಲಯ ಹಾಗೂ ಮಾತ್ರೆಗಳ ಬಗ್ಗೆ ಒಂದಿಷ್ಟೂ ಗೊತ್ತಿಲ್ಲ. ಯಾವುದಾದರೂ ಶಾಸ್ತ್ರೀ ಸಂಗೀತ ಹೇಳಪ್ಪಾ ಅಂದ್ರೆ, ಈತ ಹಾಡಿದ್ದು ಒಂದೆರಡು ಬಾಲಿವುಡ್ ಹಾಡುಗಳನ್ನು!
ಇದು ಇಷ್ಟಕ್ಕೇ ನಿಂತಿಲ್ಲ. ಇನ್ನೂ ಇದೇ ಕೇಳಿ ಈತನ ಕರ್ಮಕಾಂಡ. ಮಾರ್ಕ್ ಕಾರ್ಡ್ ಪ್ರಕಾರ, ಈತನ ವಯಸ್ಸು 24. ಆದರೆ, ಈತನ ನಿಜವಾದ ವಯಸ್ಸು 42 ! ಮದುವೆಯಾಗಿ ಇಬ್ಬರು ಮಕ್ಕಳ ತಂದೆಯೂ ಆಗಿದ್ದಾನೆ.
ತನ್ನ ಜನ್ಮದಿನಾಂಕದ ಬಗ್ಗೆ ನಕಲಿ ದಾಖಲೆಗಳನ್ನು ನೀಡಿ, ತನ್ನ ಹಳ್ಳಿಗೆ ಹತ್ತಿರದಲ್ಲಿರುವ ಸಮಷ್ಠಿಪುರದ ಶಾಲೆಯೊಂದರಲ್ಲಿ ದಾಖಲಾತಿ ಮಾಡಿಸಿ, ಇದೀಗ ರಾಜ್ಯಕ್ಕೆ ಟಾಪರ್ ಆಗಿಯೂ ಬಂದಿರುವುದು ಬೆಳಕಿಗೆ ಬಂದಿದೆ.











Click it and Unblock the Notifications