Bihar Election 2025: ಬಿಹಾರದಲ್ಲಿ ಮತದಾನ ಪ್ರಮಾಣ ಶೇ. 64.66, ಗೆಲುವು & ಸೋಲಿನ ಲೆಕ್ಕಾಚಾರ ಶುರು!
ಬಿಹಾರ ವಿಧಾನಸಭೆ ಚುನಾವಣೆಯ ಮೊದಲ ಹಂತದ ಮತದಾನ ಪ್ರಕ್ರಿಯೆ ಮುಕ್ತಾಯವಾಗಿದೆ. ಬಿಹಾರ ಡಿಸಿಎಂ ಮೇಲೆ ಹಲ್ಲೆಗೆ ಯತ್ನ ಸೇರಿದಂತೆ ಹಲವು ಅಹಿತಕರ ಘಟನೆಗಳಿಗೆ ಬಿಹಾರ ಈ ಬಾರಿ ಕೂಡ ಸಾಕ್ಷಿಯಾಗಿತ್ತು. ಈ ಮೂಲಕ ಬಿಹಾರದಲ್ಲಿ ಒಂದಷ್ಟು ಹಿಂಸೆಯ ನಡುವೆ ಕೂಡ ಮತದಾನ ಮುಕ್ತಾಯವಾಗಿದ್ದು, ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ. ಆದರೆ ವೋಟ್ ಪರ್ಸಂಟೇಜ್ ಮಾತ್ರ ತೀವ್ರ ಹಿನ್ನಡೆ ಕಂಡಿದೆ ಎಂಬ ಚರ್ಚೆ ಶುರುವಾಗಿದೆ. ಮೊದಲ ಹಂತದಲ್ಲಿ ಕೇವಲ ಶೇಕಡಾ 64.66 ರಷ್ಟು ಮಾತ್ರ ಮತದಾನವಾಗಿದೆ.
ಲೋಕಸಭೆ ಚುನಾವಣೆಯ ನಂತರ ಅತಿಹೆಚ್ಚು ಕುತೂಹಲ ಕೆರಳಿಸಿರುವುದು ಬಿಹಾರದ ಎಲೆಕ್ಷನ್. ಬಿಹಾರದಲ್ಲಿ ಹಲವು ವರ್ಷಗಳಿಂದಲೂ ನಿತೀಶ್ ಕುಮಾರ್ ಮುಖ್ಯಮಂತ್ರಿ ಆಗಿದ್ದು, ಸಾಲು ಸಾಲು ಗೆಲುವು ಕಂಡಿದ್ದರೂ ಬಿಹಾರದಲ್ಲಿ ಆಡಳಿತ ವಿರೋಧಿ ಅಲೆ ಇದೆ ಎಂಬುದು ವಿಪಕ್ಷಗಳ ನಾಯಕರ ಆರೋಪ. ಅದ್ರಲ್ಲೂ ಕಾಂಗ್ರೆಸ್ ಮತ್ತು ಆರ್‌ಜೆಡಿ ನೇತೃತ್ವದಲ್ಲಿ ವಿರೋಧ ಪಕ್ಷಗಳ ಒಕ್ಕೂಟ ಬಿಜೆಪಿ & ಜೆಡಿಯು ನೇತೃತ್ವದ ಎನ್‌ಡಿಎ ವಿರುದ್ಧ ತೊಡೆತಟ್ಟಿದೆ. ಹೀಗಿದ್ದಾಗ ಸೋಲು & ಗೆಲುವಿನ ಬಗ್ಗೆ ಲೆಕ್ಕಾಚಾರ ಜೋರಾಗಿಯೇ ಇತ್ತು. ಆದರೆ ಮತದಾನ ಸಾಕಷ್ಟು ಕಡಿಮೆ ಪ್ರಮಾಣದಲ್ಲಿ ಆಗಿದ್ದು ಚರ್ಚೆಗೆ ವೇದಿಕೆ ಒದಗಿಸಿದೆ.

121 ಕ್ಷೇತ್ರಗಳಿಗೆ ಮತದಾನ ನಡೆದಿತ್ತು
2 ಹಂತಗಳಲ್ಲಿ ಬಿಹಾರ ವಿಧಾನಸಭೆ ಚುನಾವಣೆ ನಡೆಯುತ್ತಿದ್ದು, ಈಗ 18 ಜಿಲ್ಲೆಗಳ 121 ಕ್ಷೇತ್ರಗಳ ಮತದಾರರು ಮೊದಲ ಹಂತದಲ್ಲಿ ಹಕ್ಕು ಚಲಾಯಿಸಿದ್ದಾರೆ. ಹೀಗಾಗಿ ಬಿಹಾರದಲ್ಲಿ ಮತದಾನವು ನಡೆದ ಪ್ರದೇಶದಲ್ಲಿ ಭಾರಿ ಭದ್ರತೆ ಒದಗಿಸಲಾಗಿತ್ತು. ಹೀಗಿದ್ದರೂ ಬಿಹಾರದಲ್ಲಿ ಜನ ಡಿಸಿಎಂ ಕಾರ್ ಮೇಲೆ ಅಟ್ಯಾಕ್ ಮಾಡಿರುವ ಆರೋಪ ಕೇಳಿ ಬಂದಿದೆ. ದೇಶಾದ್ಯಂತ ಈ ಘಟನೆ ಬಗ್ಗೆ ಚರ್ಚೆಯು ಕೂಡ ನಡೆಯುತ್ತಿದೆ. ಮತ್ತೊಂದು ಕಡೆ ಮತದಾನ ಪ್ರಮಾಣ ಕೂಡ ಕಡಿಮೆ ಆಗಿರುವುದು ಈಗ ರಾಜಕೀಯ ನಾಯಕರ ಚಿಂತೆ ಹೆಚ್ಚು ಮಾಡಿದೆ.
ಮತದಾನ ಮಾಡಲು ಬಂದಿದ್ದೆಷ್ಟು ಜನ?
ಅಂದಹಾಗೆ ಬಿಹಾರದಲ್ಲಿ ಮೊದಲ ಹಂತದ ಮತದಾನ ಆರಂಭವಾದ ನಂತರ ಬೆಳಗ್ಗೆ 11 ಗಂಟೆ ತನಕ ಶೇ. 27.65 ರಷ್ಟು ಪ್ರಮಾಣದಲ್ಲಿ ಮತದಾನವಾಗಿತ್ತು. ಆ ನಂತರ ಕೂಡ ದೊಡ್ಡ ಮಟ್ಟದ ಚೇತರಿಕೆ ಕಂಡುಬರಲೇ ಇಲ್ಲ, ಮಧ್ಯಾಹ್ನ 3 ಗಂಟೆ ತನಕ ಶೇ. 53.77 ರಷ್ಟು ಮಾತ್ರ ಮತದಾನ ಆಗಿತ್ತು. ಅದೆಲ್ಲಾ ಮುಗಿದ ನಂತರ ಅಂತಿಮವಾಗಿ ಒಟ್ಟು ಮತದಾನ ಪ್ರಮಾಣ ಶೇಕಡಾ 64.66ಕ್ಕೆ ಕೊನೆಯಾಗಿದೆ.












Click it and Unblock the Notifications