Bihar Caste Census: ಜಾತಿ ಗಣತಿಯಿಂದ ಬಿಹಾರದಲ್ಲಿ ಸಾಮಾಜಿಕ ಬದಲಾವಣೆ ಸಾಧ್ಯವೇ? ವರದಿ, ವಿಶ್ಲೇಷಣೆ
ಭಾರತದಲ್ಲಿ ಸಂಕೀರ್ಣ ರಾಜ್ಯವೆಂದೇ ಬಿಹಾರವನ್ನು ಪರಿಗಣಿಸಲಾಗುತ್ತದೆ. ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಸರ್ಕಾರವು ಇಲ್ಲಿ ಜಾತಿ ಗಣತಿ ವರದಿಯನ್ನು ಬಹಿರಂಗಗೊಳಿಸಿದೆ. ಜಾತಿ ಗಣತಿ ವರದಿಯು ಬಿಹಾರದಲ್ಲಿ ಸಾಮಾಜಿಕ ಹಾಗೂ ರಾಜಕೀಯ ಬದಲಾವಣೆಗಳನ್ನು ತರಬಲ್ಲದೇ ಎಂಬ ಪ್ರಶ್ನೆಯೊಂದು ಮುನ್ನೆಲೆಗೆ ಬಂದಿದೆ.
ಬಿಹಾರದ ಸಾಮಾಜಿಕ ರಚನೆಯು ಪ್ರಾಬಲ್ಯ ಜಾತಿಗಳ ಪ್ರಭಾವವನ್ನು ಪ್ರತಿನಿಧಿಸುತ್ತಲೇ ಬಂದಿದೆ. ಐತಿಹಾಸಿಕವಾಗಿ ನೋಡುವುದಾದರೆ, ಇಲ್ಲಿನ ಮೇಲ್ವರ್ಗದ ಸಮುದಾಯಗಳ ಜನರು ರಾಜಕೀಯ ಹಾಗೂ ಸಾಮಾಜಿಕವಾಗಿ ಬಲಿಷ್ಠರಾಗಿಯೇ ಉಳಿದಿದ್ದಾರೆ.

ಬಿಹಾರದಲ್ಲಿನ ಜಾತಿ ತಾರತಮ್ಯವನ್ನು ಶಮನಗೊಳಿಸುವ ನಿಟ್ಟಿನಲ್ಲಿ 1917ರಲ್ಲಿ ಮಹಾತ್ಮಾ ಗಾಂಧಿ ಮತ್ತು ರಾಜೇಂದ್ರ ಪ್ರಸಾದ್ ಅವರು ಚಂಪಾರಣ್ ಸತ್ಯಾಗ್ರಹವನ್ನು ಕೈಗೊಂಡರು. ಜಗಜೀವನ್ ರಾಮ್ ಅವರು ಸಾಮಾಜಿಕ ನ್ಯಾಯಕ್ಕಾಗಿ ಹೋರಾಟವನ್ನು ಮಾಡಿದರು. ಆದರೆ, ಬಿಹಾರ ಮಾತ್ರ ಜಾತಿ ತಾರತಮ್ಯದಲ್ಲಿ ಬೆಂಕಿಯಲ್ಲಿ ನರಳುತ್ತಲೇ ಇದೆ.
ಈ ಹಿಂದಿನ ಅಂಕಿಅಂಶಗಳ ಪ್ರಕಾರ, ಶೇಕಡಾ 14.2 ರಷ್ಟಿದ್ದ ಯಾದವರು ಬಹುಸಂಖ್ಯಾತ ಜಾತಿಯವರಾಗಿದ್ದರು. ಶೇ 10.5 ರಷ್ಟು ಮೇಲ್ಜಾತಿಗಳ ಬಲವಿತ್ತು. ಅದರಲ್ಲಿ ಬ್ರಾಹ್ಮಣರು ಶೇ. 3.6 ರಷ್ಟಿದ್ದರು. ರಜಪೂತರು ಶೇ. 3.4 ರಷ್ಟಿದ್ದರು. ಭೂಮಿಹಾರ್ ಸಮುದಾಯಕ್ಕೆ ಸೇರಿದವರು ಶೇ. 2.8 ರಷ್ಟಿದ್ದರು. ಕಾಯಸ್ಥರು ಶೇ. 0.6 ರಷ್ಟಿದ್ದರು. ಆದರೆ, ಈ ಅಂಕಿಅಂಶಗಳು ಬಿಹಾರದಲ್ಲಿ ಸಾರ್ವಜನಿಕ ಪ್ರಾತಿನಿಧ್ಯಗಳಿಗೆ ತಾಳೆಯಾಗುವುದೇ ಇಲ್ಲ.
ಉದಾಹರಣೆಗೆ ಭೂಮಿಹಾರ್ ಸಮುದಾಯದ ರಣವೀರ್ ಸೇನೆಯು ದಲಿತ ಗ್ರಾಮಗಳನ್ನು ಧ್ವಂಸಗೊಳಿಸಿತು. 1996 ಬಥಾನಿ ತೋಲಾದಲ್ಲಿ 21 ಜನರನ್ನು ಕೊಂದುಹಾಕಿತು. 1997 ರಲ್ಲಿ ಲಕ್ಷ್ಮಣಪುರ ಬಾಥೆಯಲ್ಲಿ 61 ಜನರ ಸಾಮೂಹಿಕ ಹತ್ಯೆ ಮಾಡಿತು. 1999ರಲ್ಲಿ ಶಂಕರ್ ಬಿಘಾದಲ್ಲಿ 22 ದಲಿತರನ್ನು ಕೊಂದಿತು. ಈ ಕೊಲೆಗಾರರಲ್ಲಿ ಅನೇಕರನ್ನು ನಂತರ ದೋಷಮುಕ್ತಗೊಳಿಸಲಾಯಿತು.
ಶೇ.2.8 ರಷ್ಟಿದ್ದ ಭೂಮಿಹಾರ್ ಸಮುದಾಯದವರು ರಾಜ್ಯದ ಜನಸಂಖ್ಯೆಯ ಶೇ.19.6 ರಷ್ಟಿದ್ದ ದಲಿತರ ಮೇಲೆ ಪ್ರಾಬಲ್ಯ ಸಾಧಿಸಲು ಹೇಗೆ ಸಾಧ್ಯ ಎಂಬ ಪ್ರಶ್ನೆ ಏಳುತ್ತದೆ. ಭಾರತದ ಜಾತಿ ವ್ಯವಸ್ಥೆಯಲ್ಲಿ ಭೂಮಿಹಾರ್‌ಗಳು ಮೇಲ್ವರ್ಗದಲ್ಲಿದ್ದಾರೆ. ಅವರು ಅನುಭವಿಸುವ ಸಾಮಾಜಿಕ ಪ್ರಾಬಲ್ಯವು ಕೆಳ ಜಾತಿಗಳ ಮೇಲೆ ದಬ್ಬಾಳಿಕೆ ಮಾಡಲು ಪ್ರೇರಿಪಿಸುತ್ತದೆ ಎಂದು ಸಾಮಾಜಿಕ ಚಿಂತಕರು ಅಭಿಪ್ರಾಯಪಟ್ಟಿದ್ದಾರೆ.
1990 ರಲ್ಲಿ ಬಿಹಾರದಲ್ಲಿ ಲಾಲೂ ಪ್ರಸಾದ್ ಯಾದವ್ ಅವರ ರಾಜಕೀಯ ಆರಂಭವಾದ ನಂತರ ಹಿಂದೂಳಿದ ವರ್ಗಗಳು ಮುನ್ನೆಲೆಗೆ ಬಂದರೂ ಸಾಮಾಜಿಕವಾಗಿ ಅಷ್ಟೇನೂ ಪರಿಣಾಮ ಬೀರಿಲ್ಲ.
ಈಗಿನ ಸಮೀಕ್ಷೆಯ ಅಂಕಿಅಂಶಗಳೇನು?
ಜಾತಿ ಗಣತಿಯ ಪ್ರಕಾರ, ಹಿಂದುಳಿದ ವರ್ಗ (ಒಬಿಸಿ) ಜನಸಂಖ್ಯೆಯು ಶೇ 27.1286 ರಷ್ಟಿದ್ದರೆ, ಅತ್ಯಂತ ಹಿಂದುಳಿದ ವರ್ಗ (ಇಬಿಸಿ) ಶೇ 36.0148 ರಷ್ಟಿದ್ದಾರೆ. ಬಿಹಾರದಲ್ಲಿ ಪರಿಶಿಷ್ಟ ಜಾತಿಯ ಜನಸಂಖ್ಯೆಯು ಶೇ 19.6518 ರಷ್ಟಿದ್ದರೆ, ಪರಿಶಿಷ್ಟ ಪಂಗಡದ ಜನಸಂಖ್ಯೆಯು ಶೇ 1.6824 ರಷ್ಟಿದ್ದಾರೆ. ಸಾಮಾನ್ಯ ಜಾತಿಯ ಜನಸಂಖ್ಯೆಯು ಶೇ 15.5224 ರಷ್ಟಿದೆ. ಹಿಂದೂಗಳು ಜನಸಂಖ್ಯೆಯ ಶೇ 81.9986 ರಷ್ಟಿದ್ದರೆ ಮುಸ್ಲಿಮರ ಪಾಲು ಶೇ 17.7088 ರಷ್ಟಿದೆ ಎಂದು ವರದಿ ಬಹಿರಂಗಪಡಿಸಿದೆ.
ಶತಮಾನಗಳ ಕಾಲ ಜಾತಿ ತಾರತಮ್ಯದಲ್ಲಿ ಬಳಲುತ್ತಿರುವ ಬಿಹಾರದಲ್ಲಿ ಈಗಲಾದರೂ ಸಾಮಾಜಿಕ ಬದಲಾವಣೆ ಆಗಲಿದೆಯಾ ಎಂಬುದನ್ನು ಕಾದುನೋಡಬೇಕಿದೆ. ಜನಸಂಖ್ಯೆಯ ಆಧಾರದಲ್ಲಿ ಕಾರ್ಯಕ್ರಮಗಳನ್ನು ರೂಪಿಸುವ ಮೂಲಕ ಸರ್ಕಾರಗಳು ಸಾಮಾಜಿಕ ನ್ಯಾಯವನ್ನು ಎತ್ತಿಹಿಡಿಯಲಿವೆಯಾ ಎಂಬುದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.












Click it and Unblock the Notifications