ಬಿಹಾರದಲ್ಲಿ ಶಿಕ್ಷಕರ ಹುದ್ದೆಗೆ ನೇಮಕಾತಿ: ತೀವ್ರಗೊಂಡ ಪ್ರತಿಭಟನೆ, ಬಿಜೆಪಿ ಮುಖಂಡನ ಹತ್ಯೆ
ಪಾಟ್ನಾ, ಜುಲೈ. 13: ರಾಜ್ಯದಲ್ಲಿ ಶಿಕ್ಷಕರ ಹುದ್ದೆಗೆ ಸಂಬಂಧಿಸಿದಂತೆ ಬಿಹಾರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದವರ ಮೇಲೆ ಪಾಟ್ನಾ ಪೊಲೀಸರು ಲಾಠಿಚಾರ್ಜ್ ನಡೆಸಿದ್ದಾರೆ. ಈ ವೇಳೆ ಭಾರತೀಯ ಜನತಾ ಪಕ್ಷದ (ಬಿಜೆಪಿ) ನಾಯಕರೊಬ್ಬರು ಮೃತಪಟ್ಟಿದ್ದಾರೆ. ವಿವರಗಳ ಪ್ರಕಾರ, ಮೃತರನ್ನು ಬಿಜೆಪಿ ಮುಖಂಡ ವಿಜಯ್ ಕುಮಾರ್ ಸಿಂಗ್ ಎಂದು ಗುರುತಿಸಲಾಗಿದೆ.
ರಾಜ್ಯದಲ್ಲಿ ನಡೆಯುತ್ತಿರುವ ಪ್ರತಿಭಟನೆಗಳ ನಡುವೆ ನಗರದ ದಕ್ಬಂಗ್ಲಾ ಚೌರಾಹಾದಲ್ಲಿ ಸಾವನ್ನಪ್ಪಿದ್ದಾರೆ. ಲಾಠಿಚಾರ್ಜ್‌ನಲ್ಲಿ ಗಾಯಗೊಂಡಿದ್ದ ವಿಜಯ್ ಕುಮಾರ್ ಸಿಂಗ್ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ಅವರು ಸಾವನ್ನಪ್ಪಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಈ ಮಾಹಿತಿಯನ್ನು ರಾಜ್ಯಸಭಾ ಸಂಸದ ಸುಶೀಲ್ ಮೋದಿ ದೃಢಪಡಿಸಿದ್ದು, ಟ್ವಿಟರ್‌ನಲ್ಲಿ ಬಿಜೆಪಿ ನಾಯಕ ಮೃತಪಟ್ಟಿದ್ದಾರೆ ಎಂದು ಹೇಳಿದ್ದಾರೆ.

'ವಿಧಾನಸಭಾ ಮಾರ್ಚ್' ನಡೆಸುತ್ತಿದ್ದ ವೇಳೆ ಬಿಜೆಪಿ ಮುಖಂಡರ ಮೇಲೆ ಲಾಠಿಚಾರ್ಜ್ ಮಾಡಲಾಗಿದೆ. ಬಿಜೆಪಿ ಕಾರ್ಯಕರ್ತರನ್ನು ಚದುರಿಸಲು ಭದ್ರತಾ ಸಿಬ್ಬಂದಿ ಜಲಫಿರಂಗಿ ಮತ್ತು ಅಶ್ರುವಾಯು ಪ್ರಯೋಗಿಸಿದ್ದಾರೆ. ಘಟನೆಯ ನಂತರ ಬಿಜೆಪಿ ಮುಖ್ಯಸ್ಥ ಜೆಪಿ ನಡ್ಡಾ ಅವರು ಟ್ವಿಟರ್‌ನಲ್ಲಿ "ಪಾಟ್ನಾದಲ್ಲಿ ಬಿಜೆಪಿ ಕಾರ್ಯಕರ್ತರ ಮೇಲೆ ಲಾಠಿ ಚಾರ್ಜ್ ಮಾಡಿರುವುದು ರಾಜ್ಯ ಸರ್ಕಾರದ ವೈಫಲ್ಯ ಮತ್ತು ಅದಕ್ಷತೆಯ ಪರಿಣಾಮವಾಗಿದೆ" ಎಂದು ಹೇಳಿದ್ದಾರೆ.
#WATCH | Patna: Security personnel use several rounds of tear gas shells to disperse BJP workers protesting against Bihar govt pic.twitter.com/4zKcFh0TH7
— ANI (@ANI) July 13, 2023
"ಭ್ರಷ್ಟಾಚಾರದ ಕೋಟೆಯನ್ನು ರಕ್ಷಿಸುವ ಸಲುವಾಗಿ ಮಹಾಘಟಬಂಧನ್ (ಮಹಾಮೈತ್ರಿಕೂಟ) ಸರ್ಕಾರವು ಪ್ರಜಾಪ್ರಭುತ್ವದ ಮೇಲೆ ದಾಳಿ ಮಾಡುತ್ತಿದೆ. ಬಿಹಾರದ ಮುಖ್ಯಮಂತ್ರಿ ಆರೋಪ ಎದುರಿಸುತ್ತಿರುವ ವ್ಯಕ್ತಿಯನ್ನು ರಕ್ಷಿಸಲು ಸ್ವಂತ ನೈತಿಕತೆಯನ್ನು ಮರೆತಿದ್ದಾರೆ" ಎಂದು ಜೆಪಿ ನಡ್ಡಾ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.

ಇದೇ ವೇಳೆ ಬಿಹಾರ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದ್ದು, ಮುಂದಿನ ವಾರದವರೆಗೆ ಶಿಕ್ಷಣ ಇಲಾಖೆ ಅಧಿಕಾರಿಗಳ ರಜೆಗಳ ಮೇಲೆ ನಿಷೇಧ ಹೇರಿ ಆದೇಶ ಹೊರಡಿಸಿದ್ದಾರೆ. ಜಿಲ್ಲಾ ಶಿಕ್ಷಣಾಧಿಕಾರಿಗಳು, ಜಿಲ್ಲಾ ಕಾರ್ಯಕ್ರಮ ಅಧಿಕಾರಿಗಳು ಮತ್ತು ಇತರ ಅಧಿಕಾರಿಗಳ ರಜೆಗಳನ್ನು ಅಮಾನತುಗೊಳಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಇದಲ್ಲದೆ, ಶಿಕ್ಷಣ ಇಲಾಖೆಯ ಅಧಿಕಾರಿಗಳು ವಿಶೇಷ ಸಂದರ್ಭಗಳಲ್ಲಿ ರಜೆ ಪಡೆಯಲು ಉಪ ಕಾರ್ಯದರ್ಶಿ ಕೆಕೆ ಪಾಠಕ್ ಅವರಿಂದ ಅನುಮತಿ ಪಡೆಯಬೇಕು ಎಂದು ಸೂಚಿಸಲಾಗಿದೆ.












Click it and Unblock the Notifications