ಮೊದಲೇ ಸೋಲೊಪ್ಪಿಕೊಂಡ ನಿತೀಶ್: ಚಿದಂಬರಂ ವ್ಯಂಗ್ಯ
ನವದೆಹಲಿ, ನವೆಂಬರ್ 6: ಈ ಬಾರಿಯ ಬಿಹಾರ ವಿಧಾನಸಭೆ ಚುನಾವಣೆಯೇ ತಮ್ಮ ಅಂತಿಮ ಚುನಾವಣೆ ಎಂದು ಘೋಷಿಸುವ ಮೂಲಕ ಮುಖ್ಯಮಂತ್ರಿ ನಿತೀಶ್ ಕುಮಾರ್ ಸೋಲನ್ನು ಒಪ್ಪಿಕೊಂಡಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಪಿ ಚಿದಂಬರಂ ವ್ಯಂಗ್ಯವಾಡಿದ್ದಾರೆ.
ಸುಮಾರು 15 ವರ್ಷ ಬಿಹಾರದ ಆಡಳಿತ ನಡೆಸಿದ್ದ ನಿತೀಶ್ ತಮ್ಮ ವೈಫಲ್ಯಗಳಿಗಾಗಿ ಜನರಿಂದ ಅನುಕಂಪ ಗಿಟ್ಟಿಸಿಕೊಳ್ಳುವ ಯಾಚನೆಗಾಗಿ 'ಕೊನೆಯ ಚುನಾವಣೆ' ತಂತ್ರವನ್ನು ಪ್ರಯೋಗಿಸಿದ್ದಾರೆ ಎಂದು ಚಿದಂಬರಂ ಟೀಕಿಸಿದ್ದಾರೆ.
'ಯಾವಾಗ ನಿತೀಶ್ ಕುಮಾರ್ ಅವರು ಇದು ತಮ್ಮ ಕೊನೆಯ ಚುನಾವಣೆಯಾಗಲಿದೆ ಎಂದು ಘೋಷಿಸಿದರೋ ಆಗಲೇ ಅವರು ಸೋಲನ್ನು ಅನುಭವಿಸಿದಂತಾಗಿದೆ' ಎಂದು ಕೇಂದ್ರದ ಮಾಜಿ ಸಚಿವರೂ ಆಗಿರುವ ಪಿ. ಚಿದಂಬರಂ ಟ್ವೀಟ್ ಮಾಡಿದ್ದಾರೆ.

'ಕೊನೆಯ ಚುನಾವಣೆ ಎಂಬ ತಂತ್ರವು ಅವರ ಕಾರ್ಯಕ್ಷಮತೆಯ ಆಧಾರದಲ್ಲಿ ಬೆಂಬಲ ನೀಡುವ ಮನವಿಯಲ್ಲ. ಆದರೆ ತಮ್ಮ ಆಡಳಿತ ವೈಫಲ್ಯದ ಆಧಾರದಲ್ಲಿ ಮಾಡಿಕೊಂಡಿರುವ ಕ್ಷಮಾದಾನ ಕೋರಿಕೆ' ಎಂದು ವ್ಯಂಗ್ಯವಾಡಿದ್ದಾರೆ.
'ಆಯ್ಕೆಯಾದರೆ ಮೊದಲ ದಿನದಿಂದಲೇ ಕಾರ್ಯಕ್ಷಮತೆ ತೋರಿಸದ ವ್ಯಕ್ತಿಗೆ ಬಿಹಾರದ ಜನತೆ ಏಕೆ ಮತಹಾಕಬೇಕು?' ಎಂದು ಅವರು ಪ್ರಶ್ನಿಸಿದ್ದಾರೆ.
ಬಿಹಾರ ಚುನಾವಣೆಯ ಮೂರನೇ ಹಂತದ ಕೊನೆಯ ದಿನದ ಪ್ರಚಾರ ನಡೆಸಿದ್ದ ನಿತೀಶ್ ಕುಮಾರ್, ಪ್ರಸ್ತುತ ನಡೆಯಲಿರುವ ಚುನಾವಣೆಯೇ ತಮ್ಮ ಅಂತಿಮ ಚುನಾವಣೆ ಎನ್ನುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಸೋಲುವ ಭಯದಿಂದ ನಿತೀಶ್ ಈ ರಿತಿ ಹೇಳಿಕೊಂಡಿದ್ದಾರೆ ಎಂದು ವಿರೋಧಪಕ್ಷಗಳು ಟೀಕಿಸಿವೆ.












Click it and Unblock the Notifications