Uttar Pradesh: ಉತ್ತರ ಪ್ರದೇಶ ಸಿಎಂ ಯೋಗಿ ಆಡಳಿತದಲ್ಲಿ ಏನಾಗುತ್ತಿದೆ?
ಪ್ರಯಾಗ್ ರಾಜ್: ಅತೀಕ್ ಅಹ್ಮದ್ (Atiq Ahmad), ಅಶ್ರಫ್ ಹತ್ಯೆ ನಂತರ ಉತ್ತರ ಪ್ರದೇಶ ಪೊಲೀಸರ ಕಾರ್ಯವೈಖರಿ ಬಗ್ಗೆ ಚರ್ಚೆ ಶುರುವಾಗಿದೆ. ಪ್ರಮುಖವಾಗಿ 'ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಆಡಳಿತದಲ್ಲಿ ಏನಾಗುತ್ತಿದೆ, ಪೊಲೀಸರು ಆರೋಪಿಗಳ ವಿರುದ್ಧ ಗುಂಡು ಹಾರಿಸಲಿಲ್ಲ ಏಕೆ' ಎಂಬ ಪ್ರಶ್ನೆ ಮೂಡಿದ್ದು, ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ಯೋಗಿ ಆದಿತ್ಯನಾಥ್ ಅಧಿಕಾರಕ್ಕೆ ಬಂದ ಮರುಕ್ಷಣದಿಂದಲೇ ಸದ್ದು ಮಾಡುತ್ತಿದ್ದಾರೆ. ಅದರಲ್ಲೂ ಯೋಗಿ ಉತ್ತರ ಪ್ರದೇಶದ ಗೂಂಡಾ ವ್ಯವಸ್ಥೆ ವಿರುದ್ಧ ಎನ್‌ಕೌಂಟರ್ ಅಸ್ತ್ರ ಪ್ರಯೋಗಿಸುತ್ತಿದ್ದಾರೆ ಎಂಬುದು ಅವರ ಬೆಂಬಲಿಗರಿಗೆ ಖುಷಿಯ ವಿಚಾರ. ಆದರೆ ಯೋಗಿ ಆದಿತ್ಯನಾಥ್ ಕೈಗೊಳ್ಳುತ್ತಿರುವ ಎನ್‌ಕೌಂಟರ್ ನಿರ್ಧಾರದಿಂದ ಉ.ಪ್ರದೇಶ ಕಾನೂನು ಸುವ್ಯವಸ್ಥೆ ಹಾಳಾಗ್ತಿದೆ ಎಂಬ ಆರೋಪ ವಿಪಕ್ಷಗಳದ್ದು. ಈ ಕಾರಣಕ್ಕೆ ಅತೀಕ್ ಅಹ್ಮದ್, ಅಶ್ರಫ್ ಹತ್ಯೆ ಕೂಡ ಭಾರಿ ಚರ್ಚೆಗೆ ಗ್ರಾಸವಾಗಿದೆ.

'ಪೊಲೀಸರ ಬಂದೂಕು ಕೆಲಸ ಮಾಡಲಿಲ್ವಾ?'
ಹೌದು, ಏಪ್ರಿಲ್ 15ರಂದು ಉತ್ತರ ಪ್ರದೇಶದ ಪ್ರಯಾಗ್ ರಾಜ್‌ನಲ್ಲಿ ವೈದ್ಯಕೀಯ ಪರೀಕ್ಷೆಗೆ ಕರೆದೊಯ್ಯುತ್ತಿದ್ದಾಗ ದಿಢೀರ್ ರಾಕ್ಷಸರಂತೆ ಎರಗಿದ್ದ ಮೂವರು ಅತೀಕ್ ಅಹ್ಮದ್, ಆತನ ಸಹೋದರ ಅಶ್ರಫ್ ಮೇಲೆ ಗುಂಡಿನ ಮಳೆಗರೆದು ಹತ್ಯೆ ಮಾಡಿದ್ದರು. 'ಅತೀಕ್ ಅಹ್ಮದ್ ಮತ್ತು ಅಶ್ರಫ್ ಮೇಲೆ ದುಷ್ಕರ್ಮಿಗಳು ಗುಂಡು ಹಾರಿಸುವಾಗ 18 ಮಂದಿ ಪೊಲೀಸರು ಅಲ್ಲಿ ರಕ್ಷಣೆಗಾಗಿ ಇದ್ದರು. ಆದರೆ ಪೊಲೀಸರು ದುಷ್ಕರ್ಮಿಗಳ ವಿರುದ್ಧ ಗುಂಡು ಹಾರಿಸಲಿಲ್ಲ ಏಕೆ' ಎಂಬ ಬಗ್ಗೆ ಚರ್ಚೆ ಜೋರಾಗಿದೆ.
'ಉತ್ತರ ಪ್ರದೇಶದಲ್ಲಿ ಅರಾಜಕತೆ'
ಅತೀಕ್ ಅಹ್ಮದ್, ಆತನ ಸಹೋದರ ಅಶ್ರಫ್ ಹತ್ಯೆ ನಡೆದಿದ್ದೇ ತಡ ದೇಶಾದ್ಯಂತ ಈ ಸುದ್ದಿ ಸಂಚಲನ ಸೃಷ್ಟಿಸಿದೆ. ಅದರಲ್ಲೂ ವಿಪಕ್ಷಗಳು ಉತ್ತರ ಪ್ರದೇಶದ ಕಾನೂನು ಸುವ್ಯವಸ್ಥೆ ಬಗ್ಗೆ ಪ್ರಶ್ನೆ ಮಾಡುತ್ತಿವೆ. ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೂಡ ಉತ್ತರ ಪ್ರದೇಶ ಕಾನೂನು ಸುವ್ಯವಸ್ಥೆ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. 'ಉತ್ತರ ಪ್ರದೇಶದಲ್ಲಿನ ಅರಾಜಕತೆ ಮತ್ತು ಕಾನೂನು ಮತ್ತು ಸುವ್ಯವಸ್ಥೆಯ ಸಂಪೂರ್ಣ ಕುಸಿತದಿಂದ ನಾನು ಆಘಾತಕ್ಕೊಳಗಾಗಿದ್ದೇನೆ.' ಎಂದಿದ್ದಾರೆ.
I am shocked by the brazen anarchy and total collapse of law & order in Uttar Pradesh.
— Mamata Banerjee (@MamataOfficial) April 16, 2023
It is shameful that perpetrators are now taking the law in their own hands, unfazed by the police and media presence.
Such unlawful acts have no place in our constitutional democracy.
ಯೋಗಿ ಸರ್ಕಾರಕ್ಕೆ ತಲೆನೋವು!
ರೌಡಿ ಶೀಟರ್‌ಗಳನ್ನು ಎನ್‌ಕೌಂಟರ್ ಮಾಡುವುದು, ಅವರ ಮನೆ ಮೇಲೆ ಬುಲ್ಡೋಜರ್ ಹರಿಸೋದು. ಹೀಗೆ ಹಲವು ವಿಚಾರ ಪದೇಪದೆ ಚರ್ಚೆ ಬರುತ್ತವೆ. ಆದರೆ ಅತೀಕ್ ಅಹ್ಮದ್ & ಅಶ್ರಫ್ ಭೀಕರ ಹತ್ಯೆ ಬೇರೆಯದ್ದೇ ಚರ್ಚೆಗೆ ದಾರಿ ಮಾಡಿಕೊಟ್ಟಿದೆ. 'ಮಾಧ್ಯಮಗಳು ಹಾಗೂ ಪೊಲೀಸರ ಸಮ್ಮುಖದಲ್ಲೇ ಇಂತಹ ಘಟನೆ ನಡೆದರೂ ಪೊಲೀಸರ ಬಂದೂಕು ಸುಮ್ಮನೆ ಇದ್ದಿದ್ದು ಯಾಕೆ' ಎಂಬ ಪ್ರಶ್ನೆಯನ್ನ ವಿಪಕ್ಷ ನಾಯಕರು ಕೇಳುತ್ತಿರುವುದು ಯೋಗಿ ಸರ್ಕಾರಕ್ಕೆ ತಲೆನೋವು ತರಿಸಿದೆ.

ಪೊಲೀಸರ ಕ್ರಮದ ಬಗ್ಗೆ ಸಮರ್ಥನೆ
ಹೌದು, ಉತ್ತರ ಪ್ರದೇಶದ ನಿವೃತ್ತ ಡಿಜಿಪಿ ಎ.ಕೆ. ಜೈನ್ ಉತ್ತರ ಪ್ರದೇಶದ ಪೊಲೀಸರ ಕ್ರಮವನ್ನು ಸಮರ್ಥಿಸಿಕೊಂಡಿದ್ಧಾರೆ. 'ಪೊಲೀಸರು ದುಷ್ಕರ್ಮಿಗಳ ವಿರುದ್ಧ ಪ್ರತಿಕ್ರಿಯೆ ನೀಡಲು ಸಮಯ ಸಿಗಲಿಲ್ಲ, ಎಲ್ಲವೂ ದಿಢೀರ್ ನಡೆಯಿತು ಎಂಬ ಅಂಶ ಬಿಟ್ಟು ನೋಡುವುದಾದರೆ ಪೊಲೀಸರು ಗುಂಡು ಹಾರಿಸದೇ ಇರುವುದು ಒಳ್ಳೆಯ ನಿರ್ಧಾರ' ಎಂದಿದ್ದಾರೆ ಎ.ಕೆ. ಜೈನ್. ಈ ಮೂಲಕ ಉತ್ತರ ಪ್ರದೇಶದ ಪೊಲೀಸರ ಕ್ರಮ ಹಲವು ರೀತಿಯಲ್ಲಿ ಚರ್ಚೆಗೆ ಕಾರಣವಾಗುತ್ತಿದೆ.
ಒಟ್ನಲ್ಲಿ ಉತ್ತರಪ್ರದೇಶದಲ್ಲಿ ಪದೇಪದೆ ನೆತ್ತರು ಹರಿಯುತ್ತಿದೆ. ಇಷ್ಟುದಿನ ಗೂಂಡಾಗಳು ಅಮಾಯಕರ ಮೇಲೆ ಎರಗುತ್ತಿದ್ದರು, ಆದರೆ ಈಗ ರೌಡಿಗಳ ನಡುವೆಯೇ ರಕ್ತ ಹರಿಯುತ್ತಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲೂ ಈ ವಿಚಾರ ಚರ್ಚೆಗೆ ಗ್ರಾಸವಾಗಿದ್ದು ಮುಂದಿನ ದಿನಗಳಲ್ಲಿ ಉತ್ತರ ಪ್ರದೇಶದಲ್ಲಿ ಶಾಂತಿ ಮೂಡುವುದಾ? ಎಂಬುದನ್ನ ಕಾದು ನೋಡಬೇಕಿದೆ.












Click it and Unblock the Notifications