ಕೆನಡಾದಲ್ಲಿ ಹಿಂದೂಗಳಿಗೆ ಬೆದರಿಕೆ ಹಾಕಿದ ಖಲಿಸ್ಥಾನಿ ಉಗ್ರನ ಮನೆ, ಆಸ್ತಿ ಜಪ್ತಿ: ಚಂಡೀಗಢ, ಪಂಜಾಬ್‌ನಲ್ಲಿ ಎನ್‌ಐಎ ಸೇಡಿನ ಶಪಥ
ಚಂಡೀಗಢ, ಸೆಪ್ಟೆಂಬರ್ 23: ಕೆನಡಾದಲ್ಲಿನ ಹಿಂದೂಗಳಿಗೆ ಬೆದರಿಕೆ ಹಾಕಿದ್ದ ಖಲಿಸ್ತಾನಿ ಭಯೋತ್ಪಾದಕ ಗುರುಪತ್‌ವಂತ್ ಸಿಂಗ್ ಪನ್ನುನ್ ಮನೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಶನಿವಾರ ವಶಪಡಿಸಿಕೊಂಡಿದೆ. ಭಯೋತ್ಪಾದನೆ ನಿಗ್ರಹ ಸಂಸ್ಥೆಯಾಗಿರುವ ಎನ್‌ಐಎ ಅಮೃತಸರದಲ್ಲಿ ಆತನಿಗೆ ಸೇರಿದ ಆಸ್ತಿಯನ್ನು ಕೂಡ ಮುಟ್ಟುಗೋಲು ಹಾಕಿಕೊಂಡಿದೆ.
ನಿಷೇಧಿತ ಸಂಘಟನೆಯಾಗಿರುವ ಸಿಖ್ಸ್ ಫಾರ್ ಜಸ್ಟಿಸ್ (ಎಸ್‌ಎಫ್‌ಜೆ) ನಾಯಕನಾಗಿ ಪನ್ನುನ್ ಗುರುತಿಸಿಕೊಂಡಿದ್ದಾನೆ. ಖಲಿಸ್ತಾನ್ ಪರ ಸಂಘಟನೆಯಾದ ಎಸ್‌ಎಫ್‌ಜೆ ಅನ್ನು 2019 ರಲ್ಲಿ ಕೇಂದ್ರ ಸರ್ಕಾರ ಭಾರತದಲ್ಲಿ ನಿಷೇಧಿಸಿದೆ. ಭಾರತ ವಿರೋಧಿ ಚಟುವಟಿಕೆ ನಡೆಸಿರುವ ಆರೋಪ ಈ ಸಂಘಟನೆ ಮೇಲಿದೆ.

ಚಂಡೀಗಢದಲ್ಲಿರುವ ಪನ್ನುನ್ ನಿವಾಸದ ಹೊರಗೆ ಜಪ್ತಿ ನೋಟೀಸ್ ಅನ್ನು ಹಾಕಲಾಗಿದೆ. '1/4 ಮನೆ ನಂ. 2033, ಸೆಕ್ಟರ್ 15-ಸಿ, ಚಂಡೀಗಢ, ಗುರುಪತ್‌ವಂತ್ ಸಿಂಗ್ ಪನ್ನು ಒಡೆತನದ ಮನೆಯನ್ನು ವಶಪಡಿಸಿಕೊಳ್ಳಲಾಗಿದೆ' ಎಂದು ಹೇಳಲಾಗಿದೆ.
ಎನ್‌ಐಎ ಪ್ರಕರಣದಲ್ಲಿ ಫನ್ನುನ್ ಘೋಷಿತ ಅಪರಾಧಿಯಾಗಿದ್ದಾನೆ. ಎನ್‌ಐಎ ವಿಶೇಷ ನ್ಯಾಯಾಲಯದ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯಿದೆ ಅಡಿಯಲ್ಲಿ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ತಿಳಿದುಬಂದಿದೆ.
ಜಲಂಧರ್ ಜಿಲ್ಲೆಯ ಭರಸಿಂಗ್ ಪುರ ಗ್ರಾಮದಲ್ಲಿ ಖಲಿಸ್ತಾನಿ ಉಗ್ರ ಹರ್ದೀಪ್ ಸಿಂಗ್ ನಿಜ್ಜರ್ ಮನೆಯನ್ನು ಎನ್ಐಎ ವಶಪಡಿಸಿಕೊಂಡಿದೆ. ಕೆನಡಾದ ಪ್ರಜೆ ನಿಜ್ಜರ್ ಹತ್ಯೆಗೆ ಸಂಬಂಧಿಸಿದಂತೆ ಭಾರತ ಮತ್ತು ಕೆನಡಾ ನಡುವೆ ಬಿಕ್ಕಟ್ಟು ತಲೆದೋರಿದೆ.

ಈ ವಿಚಾರಕ್ಕೆ ಸಂಬಂಧಿಸಿದಂತೆ ವಿಡಿಯೊ ಬಿಡುಗಡೆ ಮಾಡಿರುವ ಪನ್ನುನ್ ಕೆನಡಾದಲ್ಲಿ ವಾಸವಾಗಿರುವ ಹಿಂದೂಗಳಿಗೆ ಬೆದರಿಕೆ ಹಾಕಿದ್ದಾನೆ. ಹಿಂದೂಗಳು ಕೆನಡಾವನ್ನು ಬಿಟ್ಟು ಭಾರತಕ್ಕೆ ತೆರಳಬೇಕು. ಇಲ್ಲದಿದ್ದರೆ ಪರಿಸ್ಥಿತಿ ನೆಟ್ಟಗಿರುವುದಿಲ್ಲವೆಂದು ಹೇಳಿದ್ದಾನೆ.
'ಖಾಲಿಸ್ತಾನ್ ಪರ ಸಿಖ್ಖರು ಯಾವಾಗಲೂ ಕೆನಡಾಕ್ಕೆ ನಿಷ್ಠರಾಗಿದ್ದಾರೆ. ಅವರು ಯಾವಾಗಲೂ ಕೆನಡಾದ ಪರವಾಗಿದ್ದಾರೆ ಮತ್ತು ಅವರು ಯಾವಾಗಲೂ ಕಾನೂನುಗಳು ಮತ್ತು ಸಂವಿಧಾನವನ್ನು ಎತ್ತಿಹಿಡಿದಿದ್ದಾರೆ' ಎಂದು ಆತ ತಿಳಿಸಿದ್ದಾನೆ.
ಭಯೋತ್ಪಾಕ ನಿಜ್ಜರ್ ಹತ್ಯೆಯಲ್ಲಿ ಭಾರತದ ಕೈವಾಡವಿದೆ ಎಂದು ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋ ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಭಾರತ ಸರ್ಕಾರ ಜಸ್ಟಿನ್ ಟ್ರುಡೊ ಇಲ್ಲಸಲ್ಲದ ಅಸಂಬದ್ಧ ಆರೋಪ ಮಾಡುತ್ತಿದ್ದಾರೆ. ಇದಕ್ಕೆ ಅವರ ಸಾಕ್ಷ್ಯ ಒದಗಿಸಿ ಮಾತನಾಡಬೇಕು ಎಂದು ಭಾರತ ತಿರುಗೇಟು ನೀಡಿದೆ.
'ಕೆನಡಾ ಸೇರಿದಂತೆ ವಿವಿಧ ದೇಶಗಳಿಂದ ಕಾರ್ಯಾಚರಿಸುತ್ತಿರುವ ಭಯೋತ್ಪಾದನೆ ಮತ್ತು ಪ್ರತ್ಯೇಕತಾವಾದಿ ಸಂಘಟನೆಗಳ ಜಾಲವನ್ನು ನಿರ್ಮೂಲನೆ ಮಾಡಬೇಕಿದೆ. ಈ ಕ್ರಮವು ಮುಂದಿನ ಕಾರ್ಯಗಳಿಗೆ ಉತ್ತೇಜನವಾಗಿದೆ' ಎಂದು ಎನ್‌ಐಎ ಹೇಳಿಕೆಯಲ್ಲಿ ತಿಳಿಸಿದೆ.












Click it and Unblock the Notifications