ಶೀಘ್ರದಲ್ಲೇ ಭಾರತದಲ್ಲಿ ಬಹುದೊಡ್ಡ ಬದಲಾವಣೆ.! ಹಿಂಡನ್‌ಬರ್ಗ್ ಟ್ವೀಟ್ ಪೋಸ್ಟರ್ ಭಾರೀ ವೈರಲ್
ಎಲೆನ್ ಮಸ್ಕ್ ಮಾಲೀಕತ್ವದ ಟ್ವಿಟರ್‌ನ Hindenburg Research ಎಂಬ ಖಾತೆಯಲ್ಲಿ ಶೀಘ್ರದಲ್ಲೇ ಭಾರತದಲ್ಲಿ ಏನೋ ಬಹುದೊಡ್ಡ ಬದಲಾವಣೆ ನಡೆಯಲಿದೆ (Something big soon India) ಎಂಬ ಪೋಸ್ಟ್‌ವೊಂದನ್ನು ಶೇರ್ ಆಗಿದೆ. ಹಾಗಾದರೆ ಇದರ ಅರ್ಥ ಏನು ಹಾಗೂ ಇದರ ಹಿಂದಿರುವ ರಹಸ್ಯ ಎಂಥಹದ್ದು ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಗೌತಮ್ ಅದಾನಿ ನೇತೃತ್ವದ ಅದಾನಿ ಗ್ರೂಪ್ ಅಕ್ರಮ ಎಸಗಿದೆ ಎಂದು ಅಮೆರಿಕದ ಹಿಂಡನ್‌ಬರ್ಗ್ ಸಂಸ್ಥೆಯು 2023ರ ಜನವರಿಯಲ್ಲಿ ವರದಿ ಪ್ರಕಟಿಸಿದ್ದು, ಇದು ದೇಶಾದ್ಯಂತ ಸಂಚಲ ಸೃಷ್ಟಿಸಿತ್ತು. ಇದೀಗ ಮತ್ತೆ ಶನಿವಾರ ಸಾಮಾಜಿಕ ಜಾಲತಾಣ ಟ್ವಿಟ್ಟರ್ ಖಾತೆಯಲ್ಲಿ "ಶೀಘ್ರದಲ್ಲೇ ಭಾರತದಲ್ಲಿ ಏನೋ ಬಹುದೊಡ್ಡ ಬದಲಾವಣೆ ನಡೆಯಲಿದೆ" ಎಂದು ಸಂಸ್ಥೆ ಬರೆದುಕೊಂಡಿದೆ.

ಅದಾನಿ ಗ್ರೂಪ್ ಆಂತರಿಕ ವ್ಯಾಪಾರ ಮತ್ತು ಷೇರು ಮಾರುಕಟ್ಟೆಯಲ್ಲಿ ನಿಯಮ ಉಲ್ಲಂಘನೆಗಳನ್ನು ಮಾಡುತ್ತಿದೆ ಎಂದು ಆರೋಪಿಸಿ ಹಿಂಡನ್‌ಬರ್ಗ್ ವರದಿ ಪ್ರಕಟಿಸಿದ ಸುಮಾರು ಒಂದೂವರೆ ವರ್ಷದ ಬಳಿಕ ಮತ್ತೊಂದು ಸ್ಫೋಟಕ ಮಾಹಿತಿಯನ್ನು ಹೊರಹಾಕಲು ಸಜ್ಜಾಗಿದೆ. 2023ರ ಜನವರಿಯಲ್ಲಿ ಅದಾನಿ ಗ್ರೂಪ್ ಕುರಿತ ವರದಿ ಪ್ರಕಟದ ಬಳಿಕ ಅದರ ಷೇರುಗಳ ಮೌಲ್ಯ ಗಣನೀಯವಾಗಿ ಕುಸಿದಿದ್ದವು. ಇನ್ನು ಅದಾನಿ ಗ್ರೂಪ್ ಈ ಆರೋಪಗಳನ್ನು ತಳ್ಳಿಹಾಕಿತ್ತು.
Something big soon India
— Hindenburg Research (@HindenburgRes) August 10, 2024
ಗೌತಮ್ ಅದಾನಿ ನೇತೃತ್ವದ ಅದಾನಿ ಗ್ರೂಪ್ ಅಕ್ರಮ ಎಸಗಿದೆ ಎಂದು ಅಮೆರಿಕದ ಹಿಂಡನ್‌ಬರ್ಗ್ ಸಂಸ್ಥೆಯು 2023ರ ಜನವರಿಯಲ್ಲಿ ಪ್ರಕಟಿಸಿದ ವರದಿಯು ದೇಶದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿತ್ತು. "ಹೂಡಿಕೆದಾರರಿಗೆ ಅದಾನಿ ಗ್ರೂಪ್ ವಂಚನೆ ಮಾಡದೆ, ಷೇರು ಮಾರುಕಟ್ಟೆಯಲ್ಲಿ ಅದಾನಿ ಗ್ರೂಪ್ ಷೇರು ಮೌಲ್ಯಗಳನ್ನು ಹೆಚ್ಚು ತೋರಿಸಿರುವುದು ವಂಚನೆಯಾಗಿದೆ" ಎಂದು ವರದಿಯಲ್ಲಿ ಉಲ್ಲೇಖಿಸಲಾಗಿತ್ತು. ನಂತರ ಅದಾನಿ ಗ್ರೂಪ್ ಷೇರು ಮೌಲ್ಯವು ದಿಢೀರ್ ಕುಸಿದು ಭಾರಿ ನಷ್ಟ ಉಂಟಾಗಿದ್ದು, ಇದರಿಂದ ಅದಾನಿ ಗ್ರೂಪ್ ದಿವಾಳಿ ಆಗುತ್ತದೆ ಎಂಬ ಚರ್ಚೆಗಳು ನಡೆದಿದ್ದವು.
ಹಿಂಡನ್‌ಬರ್ಗ್ ವರದಿ ಕುರಿತು ತನಿಖೆ ಆಗಬೇಕೆಂದು ಸುಪ್ರೀಂಗೆ ಹಲವರು ಮೊರೆ ಹೋಗಿದ್ದರು. ಅಲ್ಲದೆ, ಅದಾನಿ ಗ್ರೂಪ್ ಅಕ್ರಮ ಪತ್ತೆಹಚ್ಚುವಲ್ಲಿ ಸೆಬಿ ವಿಫಲವಾಗಿದೆ. ಆದ್ದರಿಂದ ತನಿಖೆಗೆ ಎಸ್‌ಐಟಿ ರಚನೆ ಮಾಡಬೇಕೆಂದು ಅರ್ಜಿ ಸಲ್ಲಿಸಲಾಗಿತ್ತು. ಹಾಗಾಗಿ ಸರ್ವೋಚ್ಚ ನ್ಯಾಯಾಲಯವು 2023ರ ಮಾರ್ಚ್‌ನಲ್ಲಿ ಸೆಬಿ ತನಿಖೆ ಮೇಲೆ ನಿಗಾ ಇರಿಸಲು, ತನಿಖೆಯಲ್ಲಿ ದೋಷ ಪತ್ತೆಹಚ್ಚಲು 6 ಸದಸ್ಯರ ತನಿಖಾ ಸಮಿತಿ ರಚನೆ ಮಾಡಿತ್ತು. ಮತ್ತೆ ಎರಡು ತಿಂಗಳ ಬಳಿಕ ಸೆಬಿಯು ಸುಪ್ರೀಂ ಕೋರ್ಟ್‌ಗೆ ತನಿಖಾ ವರದಿ ಸಲ್ಲಿಸಿತ್ತು.
"ಅದಾನಿ ಗ್ರೂಪ್ ವಂಚನೆ ಮಾಡಿದೆ ಎಂಬುದನ್ನು ಸಾಬೀತುಪಡಿಸಲು ಈ ಹಂತದಲ್ಲಿ ಯಾವುದೇ ಸಾಕ್ಷ್ಯಾಧಾರಗಳು ಇಲ್ಲ" ಎಂದು ಉಲ್ಲೇಖಿಸಿತ್ತು. ಗೌತಮ್ ಅದಾನಿ-ಹಿಂಡನ್‌ಬರ್ಗ್ ವರದಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸೆಬಿ ನಡೆಸುತ್ತಿರುವ ತನಿಖೆಯ ವಿಷಯದಲ್ಲಿ ಮಧ್ಯಸ್ಥಿಕೆ ವಹಿಸುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟನೇ ನೀಡಿತ್ತು.
"ಸೆಬಿಯು ತನಿಖೆ ಹಾಗೂ ನಿಯಂತ್ರಕ ಸಂಸ್ಥೆ ಆಗಿರುವುದರಿಂದ ಅದರ ತನಿಖೆಯಲ್ಲಿ ಸುಪ್ರೀಂ ಕೋರ್ಟ್ ಹಸ್ತಕ್ಷೇಪ ಮಾಡಲು ಆಗುವುದಿಲ್ಲ" ಅಂತಾ ಸುಪ್ರೀಂ ಕೋರ್ಟ್ ತಿಳಿಸಿತ್ತು. ಇದರಿಂದಾಗಿ ಗೌತಮ್ ಅದಾನಿ ನೇತೃತ್ವದ ಗ್ರೂಪ್‌ಗೆ ತುಸು ನಿರಾಳ ಆದಂತಾಗಿತ್ತು.












Click it and Unblock the Notifications