Bharat Taxi: 4 ಲಕ್ಷ ದಾಟಿದ 'ಭಾರತ್ ಟ್ಯಾಕ್ಸಿ' ಆಪ್ ಬಳಕೆದಾರರು
ಕೇಂದ್ರ ಸರ್ಕಾರದ ಸಹಕಾರಿ ಆಧಾರಿತ ಟ್ಯಾಕ್ಸಿ ಸೇವೆಯಾದ ಭಾರತ್ ಟ್ಯಾಕ್ಸಿ ಹೊಸ ಮೈಲಿಗಲ್ಲನ್ನು ಸಾಧಿಸಿದೆ. ಭಾರತದಾದ್ಯಂತ ಇದರ ಬಳಕೆದಾರರ ನೋಂದಣಿಯಲ್ಲಿ ತ್ವರಿತ ಏರಿಕೆ ಕಾಣುತ್ತಿದ್ದು, ಕೆಲವೇ ದಿನಗಳಲ್ಲಿ ದಿನಕ್ಕೆ ಹತ್ತಾರು ಸಾವಿರಕ್ಕೂ ಹೆಚ್ಚು ಹೊಸ ಬಳಕೆದಾರರನ್ನು ಆಕರ್ಷಿಸುತ್ತಿದೆ. ಭಾರತ ಸರ್ಕಾರದ ಸಹಕಾರ ಸಚಿವಾಲಯದ ಮಾಹಿತಿ ಪ್ರಕಾರ ಭಾರತ್ ಟ್ಯಾಕ್ಸಿ ಇಲ್ಲಿಯವರೆಗೆ ನಾಲ್ಕು ಲಕ್ಷ ನೋಂದಾಯಿತ ಗ್ರಾಹಕರನ್ನು ದಾಟಿದೆ. ಕಳೆದ ಎರಡು ದಿನಗಳಿಂದ ಪ್ರತಿದಿನ ಸುಮಾರು 45,000ಕ್ಕೂ ಹೆಚ್ಚು ಬಳಕೆದಾರರನ್ನು ಹೊಂದುತ್ತಿದೆ ಎಂದು ತಿಳಿಸಿದೆ.
ಸಚಿವಾಲಯದ ಪ್ರಕಾರ, ಅಪ್ಲಿಕೇಶನ್ ಪ್ರಸ್ತುತ ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಒಂಬತ್ತನೇ ಸ್ಥಾನದಲ್ಲಿದೆ ಮತ್ತು ಆಪಲ್‌ನ ಆಪ್ ಸ್ಟೋರ್‌ನಲ್ಲಿ ಹದಿಮೂರನೇ ಸ್ಥಾನದಲ್ಲಿದೆ. ಆದರೆ ಡ್ರೈವರ್-ಕೇಂದ್ರಿತ ಆವೃತ್ತಿಯ ಅಪ್ಲಿಕೇಶನ್ ಪ್ಲೇ ಸ್ಟೋರ್‌ನಲ್ಲಿ ಇಪ್ಪತ್ತನೇ ಸ್ಥಾನದಲ್ಲಿದೆ. ಈಗಾಗಲೇ 4 ಲಕ್ಷಕ್ಕೂ ಹೆಚ್ಚು ಗ್ರಾಹಕರನ್ನು ನೋಂದಾಯಿಸಿಕೊಂಡಿದ್ದು, ಕಳೆದ ಎರಡು ದಿನಗಳಿಂದ 40 ಸಾವಿರಕ್ಕೂ ಹೆಚ್ಚು ಹೊಸ ಬಳಕೆದಾರರು ಸೇರ್ಪಡೆಯಾಗಿದ್ದಾರೆ.

ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಭಾರತ ಸರ್ಕಾರದ ಸಹಕಾರ ಸಚಿವಾಲಯವು ಭಾರತ್ ಟ್ಯಾಕ್ಸಿ ದೇಶವ್ಯಾಪಿಯಾಗಿ ಭಾರೀ ಸ್ಪಂದನೆ ಪಡೆಯುತ್ತಿದೆ. ಬಿಡುಗಡೆಗೆ ಸಿದ್ಧತೆ ನಡೆಯುತ್ತಿರುವ ಈ ಸಮಯದಲ್ಲಿ ಈಗಾಗಲೇ 4 ಲಕ್ಷಕ್ಕೂ ಹೆಚ್ಚು ನೋಂದಾಯಿತ ಗ್ರಾಹಕರಿದ್ದು, ಕಳೆದ 2 ದಿನಗಳಲ್ಲಿ ಪ್ರತಿದಿನ 40-45 ಸಾವಿರ ಹೊಸ ನೋಂದಣಿಗಳು ಆಗಿವೆ ಎಂದು ವಿವರ ನೀಡಿದೆ.
ಭಾರತ್ ಟ್ಯಾಕ್ಸಿಯು ಚಾಲಕರಿಗೆ ಶಕ್ತಿ ನೀಡುತ್ತಿದೆ. ಪ್ರಯಾಣಿಕರಿಗೆ ಪಾರದರ್ಶಕ ಮತ್ತು ವಿಶ್ವಾಸಾರ್ಹ ಸಂಚಾರ ಸೇವೆ ಒದಗಿಸುತ್ತಿದೆ. "ಆತ್ಮನಿರ್ಭರ ಭಾರತ" ದೃಷ್ಟಿಯನ್ನು ಮತ್ತಷ್ಟು ಬಲಪಡಿಸುತ್ತಿದೆ. ಮಾನ್ಯ ಕೇಂದ್ರ ಗೃಹ ಹಾಗೂ ಸಹಕಾರ ಸಚಿವ ಅಮಿತ್ ಶಾ ಅವರ ನಾಯಕತ್ವದಲ್ಲಿ, "ಸಹಕಾರ್ ಸೆ ಸಮೃದ್ಧಿ" ದೃಷ್ಟಿಯನ್ನು ಮುಂದುವರೆಸುತ್ತಾ,
ಭಾರತ್ ಟ್ಯಾಕ್ಸಿ ಚಾಲಕರನ್ನು ಸಬಲಗೊಳಿಸಿ, ಪ್ರಯಾಣಿಕರಿಗೆ ನಂಬಿಕೆಯನ್ನು ತರುತ್ತಿದೆ. ಅಧಿಕೃತ ಆಪ್ ಅನ್ನು ಮಾತ್ರವೇ ಡೌನ್‌ಲೋಡ್ ಮಾಡಿ, ನಕಲಿ ಆಪ್‌ಗಳಿಂದ ಎಚ್ಚರಿಕೆ ವಹಿಸಿ ಎಂದು ಎಕ್ಸ್‌ನಲ್ಲಿ ಬರೆದುಕೊಂಡಿದೆ.
ಏನಿದು ಭಾರತ್ ಟ್ಯಾಕ್ಸಿ?
ಭಾರತ್ ಟ್ಯಾಕ್ಸಿ ಎನ್ನುವುದು ಓಲಾ ಮತ್ತು ಉಬರ್‌ನಂತಹ ಖಾಸಗಿ ಕಂಪನಿಗಳಿಗೆ ಪರ್ಯಾಯವಾಗಿ ಆರಂಭವಾಗಲಿರುವ ಸರ್ಕಾರಿ ಟ್ಯಾಕ್ಸಿ ಸೇವೆಯಾಗಿದೆ. ಇದಕ್ಕೆ ಅಮುಲ್, ಇಫ್ಕೋ, ನಬಾರ್ಡ್‌ನಂತಹ ದೊಡ್ಡ ಸಹಕಾರಿ ಸಂಸ್ಥೆಗಳ ಬೆಂಬಲವಿದೆ. ಇದು ಚಾಲಕರಿಗೆ ಶೂನ್ಯ ಕಮಿಷನ್ ಅಥವಾ ಕಡಿಮೆ ಶುಲ್ಕ, ಪಾರದರ್ಶಕ ದರ ಮತ್ತು ಚಾಲಕ-ಮಾಲೀಕತ್ವದ ಮಾದರಿಯನ್ನು ನೀಡುತ್ತದೆ. ಇದು ಚಾಲಕರಿಗೆ ಹೆಚ್ಚಿನ ಆದಾಯ ಮತ್ತು ಪ್ರಯಾಣಿಕರಿಗೆ ಕಡಿಮೆ ದರವನ್ನು ಒದಗಿಸುವ ಗುರಿ ಹೊಂದಿದ್ದು, ದೆಹಲಿಯಲ್ಲಿ ಪ್ರಾಯೋಗಿಕವಾಗಿ ಪ್ರಾರಂಭವಾಗಿದೆ.
ಭಾರತ್ ಟ್ಯಾಕ್ಸಿ ಯಾವುದೇ ಖಾಸಗಿ ಕಂಪನಿಯಲ್ಲ, ಬದಲಿಗೆ ಸಹಕಾರಿ ತತ್ವಗಳ ಮೇಲೆ ಆಧಾರಿತವಾಗಿದೆ. ಇದನ್ನು ಸಹಕಾರ ಟ್ಯಾಕ್ಸಿ ಕೋಆಪರೇಟಿವ್ ಲಿಮಿಟೆಡ್ ನಿರ್ವಹಿಸುತ್ತದೆ. ಓಲಾ ಅಥವಾ ಉಬರ್‌ಗೆ ಹೋಲಿಸಿದರೆ, ಚಾಲಕರು ಕಮಿಷನ್ ಪಾವತಿಸಬೇಕಾಗಿಲ್ಲ. ಬದಲಿಗೆ ಅವರು ನಿಗದಿತ ಚಂದಾದಾರಿಕೆ ಶುಲ್ಕ ಪಾವತಿಸಬಹುದು. ಆ ನಂತರ ಸಂಪೂರ್ಣ ಆದಾಯ ಅವರಿಗೇ ಸೇರುತ್ತದೆ. ಚಾಲಕರು ತಮ್ಮ ಗಳಿಕೆಯ ದೊಡ್ಡ ಭಾಗವನ್ನು ಉಳಿಸಿಕೊಳ್ಳಬಹುದು, ಇದು ಅವರಿಗೆ ಹೆಚ್ಚಿನ ಆದಾಯ ಮತ್ತು ಸ್ವಾತಂತ್ರ್ಯ ನೀಡುತ್ತದೆ.
ಪಾರದರ್ಶಕ ದರ, ಯಾವುದೇ ದಿಢೀರ್ ದರ ಹೆಚ್ಚಳ ಇಲ್ಲದೆ ಅಗ್ಗದ ಸೇವೆ ಒದಗಿಸುವುದು ಇದರ ಮೂಲ ಉದ್ದೇಶವಾಗಿದೆ. ಜನವರಿ 1ರಿಂದ ದೆಹಲಿಯಲ್ಲಿ ಪ್ರಾಯೋಗಿಕವಾಗಿ ಆರಂಭಗೊಂಡಿದೆ. ಮುಂದಿನ ದಿನಗಳಲ್ಲಿ ದೇಶದ ಇತರ ಪ್ರಮುಖ ನಗರಗಳಿಗೆ ವಿಸ್ತರಿಸುವ ಗುರಿ ಇದೆ. ಬೆಂಗಳೂರಿನಲ್ಲಿ ಏಪ್ರಿಲ್ ನಂತರ ಈ ಸೇವೆ ಆರಂಭವಾಗುವ ನಿರೀಕ್ಷೆಯಿದೆ.












Click it and Unblock the Notifications