ಮೂವರಿಗೆ ಭಾರತ ರತ್ನ ಪ್ರಶಸ್ತಿ ಘೋಷಿಸಿದ ನರೇಂದ್ರ ಮೋದಿ
ಬೆಂಗಳೂರು, ಫೆಬ್ರವರಿ 09: ಭಾರತದ ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಮೂವರು ಗಣ್ಯರಿಗೆ ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿ ಭಾರತ ರತ್ನ ಘೋಷಣೆ ಮಾಡಿದ್ದಾರೆ. ಇಬ್ಬರು ಮಾಜಿ ಪ್ರಧಾನಿಗಳಿಗೆ ಪ್ರಶಸ್ತಿ ಪ್ರಕಟಿಸಲಾಗಿದೆ.
ನರೇಂದ್ರ ಮೋದಿ ಟ್ವೀಟ್ ಮಾಡಿದ್ದು ಮಾಜಿ ಪ್ರಧಾನಿಗಳಾದ ಪಿ. ವಿ. ನರಸಿಂಹರಾವ್, ಚೌಧರಿ ಚರಣ್ ಸಿಂಗ್‌ಗೆ ಭಾರತ ರತ್ನ ಘೋಷಣೆ ಮಾಡಿದರು. ಭಾರತದ ಹಸಿರು ಕ್ರಾಂತಿಯ ಹರಿಕಾರ ಎಂ. ಎಸ್. ಸ್ವಾಮಿನಾಥನ್‌ಗೆ ಸಹ ಭಾರತ ರತ್ನ ಘೋಷಿಸಿದರು.

ಕೆಲವು ದಿನಗಳ ಹಿಂದೆ ಬಿಹಾರದ ಮಾಜಿ ಮುಖ್ಯಮಂತ್ರಿ ದಿವಂಗತ ಕರ್ಪೂರಿ ಠಾಕೂರ್‌ಗೆ ಮತ್ತು ಬಿಜೆಪಿಯ ಹಿರಿಯ ನಾಯಕ ಎಲ್. ಕೆ. ಅಡ್ವಾಣಿ ಅವರಿಗೆ ಭಾರತ ರತ್ನ ನೀಡುವುದಾಗಿ ಕೇಂದ್ರ ಸರ್ಕಾರ ಘೋಷಣೆ ಮಾಡಿತ್ತು.
ಪಿ. ವಿ. ನರಸಿಂಹ ರಾವ್: ಭಾರತದ ಮಾಜಿ ಪ್ರಧಾನಿ ಪಿ. ವಿ. ನರಸಿಂಹ ರಾವ್‌ಗೆ ಭಾರತ ರತ್ನ ಪ್ರಶಸ್ತಿ ಘೋಷಣೆ ಮಾಡಲಾಗಿದೆ. ಪಿ. ರಂಗರಾವ್ ಅವರ ಪುತ್ರ ಪಿ. ವಿ. ನರಸಿಂಹ ರಾವ್ ಜೂನ್ 28, 1921ರಲ್ಲಿ ಕರೀಂನಗರದಲ್ಲಿ ಜನಿಸಿದರು. ಅವರು ಹೈದರಾಬಾದ್‌ನ ಓಸ್ಮಾನಿಯಾ ವಿಶ್ವವಿದ್ಯಾಲಯ, ಬಾಂಬೆ ವಿಶ್ವವಿದ್ಯಾಲಯ ಮತ್ತು ನಾಗ್ಪುರ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡಿದ್ದಾರೆ.
Delighted to share that our former Prime Minister, Shri PV Narasimha Rao Garu, will be honoured with the Bharat Ratna.
— Narendra Modi (@narendramodi) February 9, 2024
As a distinguished scholar and statesman, Narasimha Rao Garu served India extensively in various capacities. He is equally remembered for the work he did as… pic.twitter.com/lihdk2BzDU
ಕೃಷಿಕರು ಮತ್ತು ವಕೀಲರಾಗಿದ್ದ ಅವರು ಬಳಿಕ ರಾಜಕೀಯ ಪ್ರವೇಶಿಸಿದರು. ಆಂಧ್ರ ಪ್ರದೇಶ ಸರ್ಕಾರದಲ್ಲಿ 1962-64ರವರೆಗೆ ಕಾನೂನು ಮತ್ತು ವಾರ್ತಾ ಇಲಾಖೆ, 1964-67ರವರೆಗೆ ಕಾನೂನು ಮತ್ತು ದತ್ತಿಗಳ ಇಲಾಖೆ, 1967ರವರೆಗೆ ಆರೋಗ್ಯ ಮತ್ತು ಔಷಧಿ ಮತ್ತು 1968-71ರವರೆಗೆ ಶಿಕ್ಷಣ ಸಚಿವರಾಗಿ ಕಾರ್ಯ ನಿರ್ವಹಣೆ ಮಾಡಿದರು. 1971-73ರವರೆಗೆ ಅವರು ಆಂಧ್ರ ಪ್ರದೇಶದ ಮುಖ್ಯಮಂತ್ರಿಯಾಗಿದ್ದರು.
1975-76ರ ವರೆಗೆ ಅಖಿಲ ಭಾರತ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿಯಾಗಿ, 1968-74ರವರೆಗೆ ಆಂಧ್ರ ಪ್ರದೇಶದ ತೆಲುಗು ಅಕಾಡೆಮಿ ಅಧ್ಯಕ್ಷರಾಗಿ, 1972ರಿಂದ ಮದ್ರಾಸ್ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭೆಯ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದರು. 1957-77ರವರೆಗೆ ಆಂಧ್ರ ಪ್ರದೇಶ ವಿಧಾನಸಭೆಯ ಸದಸ್ಯರಾಗಿದ್ದರು. 1977-84ರವರೆಗೆ ಲೋಕಸಭಾ ಸದಸ್ಯರಾಗಿದ್ದರು ಹಾಗೂ 1984ರ ಡಿಸೆಂಬರ್‌ನಲ್ಲಿ 8ನೇ ಲೋಕಸಭೆಗೆ ಚುನಾಯಿತರಾಗಿದ್ದರು.
ಚೌಧರಿ ಚರಣ್ ಸಿಂಗ್; ಚೌಧರಿ ಚರಣ್ ಸಿಂಗ್ ಉತ್ತರ ಪ್ರದೇಶದ ಮೀರತ್ ಜಿಲ್ಲೆಯಲ್ಲಿ ಮಧ್ಯಮ ವರ್ಗದ ರೈತಾಪಿ ಕುಟುಂಬವೊಂದರಲ್ಲಿ 1902ರಲ್ಲಿ ಜನಿಸಿದರು. 1929ರಲ್ಲಿ ಮೀರತ್‌ಗೆ ತೆರಳಿ ಅಲ್ಲಿ ಕಾಂಗ್ರೆಸ್ ಪಕ್ಷವನ್ನು ಸೇರಿದರು. 1937ರಲ್ಲಿ ಉತ್ತರ ಪ್ರದೇಶದ ಛಪ್ರೌಲಿ ವಿಧಾನಸಭಾ ಕ್ಷೇತ್ರದಿಂದ ಮೊದಲ ಬಾರಿಗೆ ಚುನಾಯಿತರಾದರು ಮತ್ತು 1946, 1952, 1962 ಮತ್ತು 1967ರಲ್ಲಿ ಕ್ಷೇತ್ರವನ್ನು ಪ್ರತಿನಿಧಿಸಿದ್ದರು.
1946ರಲ್ಲಿ ಪಂಡಿತ್ ಗೋವಿಂದ್ ಭಲ್ಲಭ್ ಪಂತರ ಸರ್ಕಾರದಲ್ಲಿ ಅವರು ಸಂಸದೀಯ ಕಾರ್ಯದರ್ಶಿಯಾಗಿದ್ದರು. ಕಂದಾಯ, ವೈದ್ಯಕೀಯ ಮತ್ತು ಸಾರ್ವಜನಿಕ ಆರೋಗ್ಯ, ನ್ಯಾಯ, ವಾರ್ತೆ ಹೀಗೆ ಹಲವಾರು ವಿಭಾಗಗಳಲ್ಲಿ ಕಾರ್ಯ ನಿರ್ವಹಿಸಿದರು. ಜೂನ್ 1951ರಲ್ಲಿ ಅವರಿಗೆ ರಾಜ್ಯ ಮಂತ್ರಿಮಂಡಲದಲ್ಲಿ ಸಚಿವ ಸ್ಥಾನವನ್ನು ನೀಡಿ ನ್ಯಾಯ ಮತ್ತು ವಾರ್ತಾ ಖಾತೆಗಳ ಹೊಣೆಯನ್ನು ನೀಡಲಾಯಿತು. 1960ರಲ್ಲಿ ಸಿ. ಬಿ. ಗುಪ್ತಾ ಅವರ ಮಂತ್ರಿಮಂಡಲದಲ್ಲಿ ಗೃಹ ಮತ್ತು ಕೃಷಿ ಸಚಿವರಾಗಿದ್ದರು. ಕಾಂಗ್ರೆಸ್ ವಿಭಜನೆಗೊಂಡ ಬಳಿಕ ಫೆಬ್ರವರಿ 1970ರಲ್ಲಿ ಚರಣ್ ಸಿಂಗ್ ಅವರು ಎರಡನೇಯ ಬಾರಿಗೆ ಉತ್ತರ ಪ್ರದೇಶದ ಮುಖ್ಯ ಮಂತ್ರಿಯಾಗಿದ್ದರು.
ಎಂ. ಎಸ್. ಸ್ವಾಮಿನಾಥನ್; ಭಾರತದ ಹಸಿರು ಕ್ರಾಂತಿಯ ಹರಿಹಾರ ಎಂ. ಎಸ್. ಸ್ವಾಮಿನಾಥನ್. ಅಧಿಕ ಇಳುವರಿಯ ಭತ್ತದ ತಳಿ ಅಭಿವೃದ್ಧಿಯಿಂದ ದೇಶದ ಆಹಾರ ಭದ್ರತೆಯಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ. ಎಂ. ಎಸ್. ಸ್ವಾಮಿನಾಥನ್ ಪೂರ್ಣ ಹೆಸರು ಮೊಂಕೊಂಬು ಸಾಂಬಶಿವನ್ ಸ್ವಾಮಿನಾಥನ್. 1925ರ ಆ.7ರಂದು ತಮಿಳುನಾಡಿನ ತಂಜಾವೂರು ಜಿಲ್ಲೆಯಲ್ಲಿ ಜನಿಸಿದರು. ಹವಾಮಾನ ತಜ್ಞ, ಕೃಷಿ ವಿಜ್ಞಾನಿ, ಸಸ್ಯ ತಳಿಗಳ ವಿಜ್ಞಾನಿಯಾಗಿದ್ದರು. ವಿಶ್ವ ಸಂಸ್ಥೆಯ ಪರಿಸರ ಕಾರ್ಯಕ್ರಮ ಸ್ವಾಮಿನಾಥನ್ ಅವರನ್ನು'ಆರ್ಥಿಕ ಪರಿಸರ ವಿಜ್ಞಾನದ ಪಿತಮಹ' ಎಂದು ಬಣ್ಣಿಸಿದೆ.












Click it and Unblock the Notifications