ಭಾರತ್ ಜೋಡೋ ರಾಹುಲ್‌ರನ್ನು ಪ್ರಧಾನಿ ಅಭ್ಯರ್ಥಿಯಾಗಿ ಬಿಂಬಿಸಲ್ಲ
ನವದೆಹಲಿ, ಜನವರಿ 7: ಭಾರತ್ ಜೋಡೋ ಯಾತ್ರೆಯು 2024ರ ಸಾರ್ವತ್ರಿಕ ಚುನಾವಣೆಗೆ ರಾಹುಲ್ ಗಾಂಧಿ ಅವರನ್ನು ಪ್ರಧಾನಿ ಅಭ್ಯರ್ಥಿಯನ್ನಾಗಿ ಬಿಂಬಿಸುವ ಪ್ರಯತ್ನ ಅಲ್ಲ ಎಂದು ಕಾಂಗ್ರೆಸ್ ಹಿರಿಯ ನಾಯಕ ಜೈರಾಮ್ ರಮೇಶ್ ಶನಿವಾರ ಹೇಳಿದ್ದಾರೆ.
"ಈ ಭಾರತ್ ಜೋಡೋ ಯಾತ್ರೆ ರಾಹುಲ್ ಗಾಂಧಿ ಅವರನ್ನು ಪ್ರಧಾನಿ ಅಭ್ಯರ್ಥಿ ಎಂದು ಬಿಂಬಿಸಲು ಅಲ್ಲ. ಇದು ಸೈದ್ಧಾಂತಿಕ ಯಾತ್ರೆಯಾಗಿದ್ದು, ಇದರ ಮುಖ್ಯ ಮುಖ ರಾಹುಲ್ ಗಾಂಧಿ. ಇದು ಒಬ್ಬ ವ್ಯಕ್ತಿಯ ಯಾತ್ರೆ ಅಲ್ಲ ಎಂದು ಅವರು ಪ್ರತಿಕ್ರಿಯಿಸಿದರು.
ಪ್ರಸ್ತುತ ಹರಿಯಾಣದ ಕರ್ನಾಲ್ ಮೂಲಕ ಸಾಗುತ್ತಿರುವ ಕನ್ಯಾಕುಮಾರಿ ಟು ಕಾಶ್ಮೀರ ಪಾದಯಾತ್ರೆ ಚುನಾವಣಾ ಯಾತ್ರೆಯಲ್ಲ ಎಂದು ಪ್ರತಿಪಾದಿಸಿದರು. ಯಾತ್ರೆಯಲ್ಲಿ ರಾಹುಲ್ ಗಾಂಧಿಯವರು ಆರ್ಥಿಕ ಅಸಮಾನತೆ, ಸಾಮಾಜಿಕ ಧ್ರುವೀಕರಣ ಮತ್ತು ರಾಜಕೀಯ ನಿರಂಕುಶಾಧಿಕಾರದ ಮೂರು ದೊಡ್ಡ ಸಮಸ್ಯೆಗಳನ್ನು ಎತ್ತಿದ್ದಾರೆ ಎಂದು ಹಿರಿಯ ನಾಯಕ ಜೈರಾಮ್ ರಮೇಶ್ ಹೇಳಿದರು.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆಯು ಶನಿವಾರ ಹರಿಯಾಣದ ಕರ್ನಾಲ್‌ನಲ್ಲಿ ಯಾತ್ರೆಯು ಮುಂದೆ ಸಾಗುತ್ತಿರುವಾಗ ವರ್ಣರಂಜಿತ ಮೆರವಣಿಗೆಗಳನ್ನು ನಡೆಸಿತು. ಜನರು ರಾಷ್ಟ್ರಧ್ವಜವನ್ನು ಬೀಸುತ್ತಾ ಹಾಡುಗಳಿಗೆ ಕುಣಿದು ಕುಪ್ಪಳಿಸುತ್ತಿದ್ದರು. ಡೊಳ್ಳು ಕುಣಿತದೊಂದಿಗೆ ಯಾತ್ರೆಯ ಪೋಸ್ಟರ್‌ಗಳನ್ನು ಹೊತ್ತ ಬೆಂಬಲಿಗರು ಹೆಜ್ಜೆಹಾಕಿದರು.
ಹರಿಯಾಣ ಸೇರಿದಂತೆ ಉತ್ತರ ಭಾರತದಾದ್ಯಂತ ಶೀತ ವಾತಾವರಣದ ಪರಿಸ್ಥಿತಿಗಳು ಮತ್ತು ದಟ್ಟವಾದ ಮಂಜಿನ ಹೊರತಾಗಿಯೂ ಬೆಂಬಲಿಗರು ತುಂಬಾ ಉತ್ಸುಕರಾಗಿದ್ದರು ಮತ್ತು ಉತ್ಸಾಹದಿಂದ ಕಾಣುತ್ತಿದ್ದರು. ಯಾತ್ರೆಯ ಕುರಿತು ಮಾತನಾಡಿದ ಕಾಂಗ್ರೆಸ್ ನಾಯಕಿ ಸೆಲ್ಜಾ ಕುಮಾರಿ, "ಹರ್ಯಾಣದ ಜನರು ತಮ್ಮ ಭವಿಷ್ಯಕ್ಕಾಗಿ ರಾಹುಲ್ ಗಾಂಧಿಯತ್ತ ಎದುರು ನೋಡುತ್ತಿರುವಾಗ ಅವರಲ್ಲಿ ಹೆಚ್ಚಿನ ಉತ್ಸಾಹವಿದೆ. ರಾಹುಲ್ ಗಾಂಧಿಯವರಿಂದ ಸ್ಫೂರ್ತಿ ಪಡೆದು ಹರಿಯಾಣದಲ್ಲಿ ಕಾಂಗ್ರೆಸ್ ಶ್ರಮಿಸುತ್ತದೆ. ಬಿಜೆಪಿ ಆತಂಕದಲ್ಲಿದೆ ಏಕೆಂದರೆ 'ಯಾತ್ರೆ' ಎಂದು ಪ್ರಾರಂಭವಾದದ್ದು ಈಗ 'ಜನ್ ಆಂದೋಲನ' ಆಗಿ ಮಾರ್ಪಟ್ಟಿದೆ ಎಂದು ಹೇಳಿದ್ದಾರೆ.

ಕಳೆದ ವರ್ಷ ಕನ್ಯಾಕುಮಾರಿಯಿಂದ ಆರಂಭವಾದ ಭಾರತ್ ಜೋಡೋ ಯಾತ್ರೆಗೆ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ನೇತೃತ್ವ ವಹಿಸಿದ್ದರು. ಭಾರತ್ ಜೋಡೋ ಯಾತ್ರೆ ಗುರುವಾರ ಸಂಜೆ ಹರಿಯಾಣವನ್ನು ಮರುಪ್ರವೇಶಿಸಿದೆ. ಜನವರಿ 5-10 ರ ನಡುವೆ ರಾಜ್ಯದ ನಾಲ್ಕು ಜಿಲ್ಲೆಗಳ ಮೂಲಕ ಹಾದುಹೋಗಲಿದೆ. ಶುಕ್ರವಾರ ಹರಿಯಾಣದ ಸನೋಲಿ-ಪಾಣಿಪತ್ ರಸ್ತೆಯಿಂದ ಯಾತ್ರೆ ಪುನರಾರಂಭವಾಯಿತು.
ಇಲ್ಲಿಯವರೆಗೆ, ಸೆಪ್ಟೆಂಬರ್ 7 ರಂದು ಕನ್ಯಾಕುಮಾರಿಯಿಂದ ಪ್ರಾರಂಭವಾದ ಯಾತ್ರೆಯು ತಮಿಳುನಾಡು, ಕೇರಳ, ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ಮಧ್ಯಪ್ರದೇಶ, ರಾಜಸ್ಥಾನ ಮತ್ತು ಮಹಾರಾಷ್ಟ್ರ ಮತ್ತು ಹರಿಯಾಣದ ಭಾಗಗಳನ್ನು ಒಳಗೊಂಡಿದೆ. ಇದು ಜಮ್ಮು ಮತ್ತು ಕಾಶ್ಮೀರದಲ್ಲಿ ಅಂತ್ಯಗೊಳ್ಳಲಿದೆ.












Click it and Unblock the Notifications