Bengaluru Property: 2ನೇ ವಿಮಾನ ನಿಲ್ದಾಣ ನಿರ್ಮಾಣ ನಿಧಾನ: ರಿಯಲ್ ಎಸ್ಟೇಟ್‌ನಲ್ಲಿ ಸಿಲಿಕಾನ್ ಸಿಟಿಗೆ ಲಾಸ್: ನೋಯ್ಡಾ ಫಸ್ಟ್!
Bengaluru Property: ಬೆಂಗಳೂರಿನ ವಿವಿಧ ಪ್ರದೇಶಗಳಲ್ಲಿ ಮೊದಲಿನಿಂದಲೂ ಭೂಮಿಗೆ ಬಂಗಾರದ ಬೆಲೆ ಇದೆ. ಇತ್ತೀಚಿನ ದಿನಗಳಲ್ಲಿ ವಿವಿಧ ಕಾರಣಕ್ಕೆ ಪ್ರಾಪರ್ಟಿ ಹಾಗೂ ಭೂಮಿ ಬೆಲೆಯು ಬೆಂಗಳೂರಿನ ವಿವಿಧ ಭಾಗದಲ್ಲಿ ಹೆಚ್ಚಾಗುತ್ತಿದೆ. ಆದರೆ, ಇದೀಗ ಬೆಂಗಳೂರಿಗೆ ರಿಯಲ್ ಎಸ್ಟೇಟ್ ವಿಚಾರದಲ್ಲಿ ಪೈಪೋಟಿ ನೀಡುವುದಕ್ಕೆ ದಕ್ಷಿಣ ಭಾರತದ ನಗರಗಳೊಂದಿಗೆ ಉತ್ತರ ಭಾರತದ ನಗರಗಳು ಸಹ ಪೈಪೋಟಿ ನಡೆಸಲು ಪ್ರಾರಂಭಿಸಿವೆ.
ಕರ್ನಾಟಕದಲ್ಲಿ ಆಸ್ತಿಗಳಿಗೆ ಸಂಬಂಧಿಸಿದಂತೆ ಕೆಲವೊಂದು ನಿಯಮಗಳ ಬದಲಾವಣೆ ಹಾಗೂ ಇ ಖಾತಾದಲ್ಲಿ ಸೃಷ್ಟಿಯಾಗಿದ್ದ ಗೊಂದಲವೂ ಸಹ ಇದಕ್ಕೆ ಕಾರಣವಾಗಿರುವ ಸಾಧ್ಯತೆ ಇದೆ. ದೆಹಲಿ - ಎನ್‌ಸಿಆರ್ ಪ್ರದೇಶವು ಸಹ ರಿಯಲ್ ಎಸ್ಟೇಟ್ ವಿಚಾರದಲ್ಲಿ ಬೆಂಗಳೂರು ನಗರವನ್ನು ಹಿಂದಿಕ್ಕಿದೆ. ಎಲ್ಲ ಪ್ರದೇಶಗಳಿಗಿಂತ ಇದೀಗ ಉತ್ತರ ಪ್ರದೇಶದ ನೋಯ್ಡಾ ರಿಯಲ್ ಎಸ್ಟೇಟ್‌ನಲ್ಲಿ ಮುಂಚೂಣಿಯಲ್ಲಿದೆ!

ರಿಯಲ್ ಎಸ್ಟೇಟ್ ವಿಚಾರದಲ್ಲಿ ದೆಹಲಿ-ಎನ್‌ಸಿಆರ್, ನೋಯ್ಡಾ ಪ್ರದೇಶವು ಇದೀಗ ಬೆಂಗಳೂರು ನಗರಕ್ಕೆ ಭಾರೀ ಪೈಪೋಟಿ ನೀಡಿದೆ. ಭೂಮಿ ಹಾಗೂ ಪ್ರಾಪರ್ಟಿಗಳ ವಿಚಾರದಲ್ಲಿ ದೇಶದಲ್ಲಿಯೇ ಬೆಂಗಳೂರು ನಗರವು ಮುಂಚೂಣಿಯಲ್ಲಿತ್ತು. ಬೆಂಗಳೂರಿನಲ್ಲಿ ಮನೆಗಳು, ಪ್ರಾಪರ್ಟಿಗೆ ಬಂಗಾರದ ಬೆಲೆ ಇತ್ತು. ಅಲ್ಲದೆ ಬೆಂಗಳೂರು ನಗರದಲ್ಲಿ ಮನೆಗಳ ಬಾಡಿಗೆ ಬೆಲೆಯು ಮುಂಬೈ ಹಾಗೂ ದೆಹಲಿಗೆ ಪೈಪೋಟಿ ನೀಡುವಂತೆ ಇದ್ದವು. ಇದೀಗ ಆಸ್ತಿ ವಿಷಯದಲ್ಲಿ ನೋಯ್ಡಾ ಮುಂಚೂಣಿಯಲ್ಲಿದೆ. ಆಸ್ತಿ ಬೆಲೆ ಬೆಳವಣಿಗೆಯಲ್ಲಿ ಬೆಂಗಳೂರು ಮತ್ತು ಗುರುಗ್ರಾಮ್‌ನಂತಹ ಪ್ರಮುಖ ರಿಯಲ್ ಎಸ್ಟೇಟ್ ಪ್ರದೇಶಗಳನ್ನೇ ನೋಯ್ಡಾ ಹಿಂದಿಕ್ಕಿದೆ ಎಂದು ವರದಿ ಮಾಡಿದೆ.
ಅನರಾಕ್‌ನ ದತ್ತಾಂಶದ ಪ್ರಕಾರ, 2020 ಮತ್ತು 2025 ರ ನಡುವೆ, ನೋಯ್ಡಾದಲ್ಲಿ ಆಸ್ತಿ ಬೆಲೆಗಳು ಬರೋಬ್ಬರಿ ಶೇ.111 ರಷ್ಟು ಜಿಗಿತ ಕಂಡಿದೆ. ಈ ಪ್ರದೇಶದಲ್ಲಿ 2020ರಲ್ಲಿ ಪ್ರತಿ ಚದರ ಅಡಿಗೆ ಸುಮಾರು 6,300ರಿಂದ 2025ರ ವರೆಗೆ ಪ್ರತಿ ಚದರ ಅಡಿಗೆ ಬರೋಬ್ಬರಿ 13,300 ರೂಪಾಯಿಗೆ ಜಿಗಿತ ಕಂಡಿದೆ. ಬೆಂಗಳೂರು ಹಾಗೂ ಗುರುಗ್ರಾಮ್‌ಗಿಂತ ಈ ಪ್ರದೇಶದಲ್ಲಿ ಭೂಮಿ ಬೆಲೆಯು ಹೆಚ್ಚಾಗಿದೆ. ಈ ಪ್ರದೇಶಗಳಿಗೆ ಹೋಲಿಕೆ ಮಾಡಿದರೆ, ನೋಯ್ಡಾ ಪ್ರಮುಖ ರಿಯಲ್ ಎಸ್ಟೇಟ್ ಹಬ್ ಆಗಿ ಬದಲಾಗಿದೆ.
Bengaluru Property: ಬೆಂಗಳೂರನ್ನು ಹಿಂದಿಕ್ಕಿದ್ದು ಹೇಗೆ ನೋಯ್ಡಾ!
ನೋಯ್ಡಾದಲ್ಲಿ ಇತ್ತೀಚಿನ ವರ್ಷಗಳಲ್ಲಿ ಸ್ಥಿರವಾದ ಮೂಲಸೌಕರ್ಯ ಅಭಿವೃದ್ಧಿ ಆಗಿರುವುದು ಸಹ ಪ್ಲಸ್ ಪಾಯಿಂಟ್ ಆಗಿದೆ. ಈ ಭಾಗದಲ್ಲಿ ರಸ್ತೆಗಳು ಮತ್ತು ಎಕ್ಸ್‌ಪ್ರೆಸ್‌ವೇಗಳು ಸುಧಾರಿಸಿವೆ. ಅಲ್ಲದೆ ಮೆಟ್ರೋ ಸಂಪರ್ಕ ಜಾಲವು ಸಹ ವಿಸ್ತರಿಸಿದೆ. ನೋಯ್ಡಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ಮತ್ತೊಂದು ಪ್ರಮುಖ ಬೆಳವಣಿಗೆ ಆಗಿದೆ.
ಬೆಂಗಳೂರಿನಲ್ಲೂ ಬೆಂಗಳೂರಿನ ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣ ಮಾಡಬೇಕು ಎಂದು ಚರ್ಚೆ ಆಗುತ್ತಿದ್ದರೂ ಇದು ಕಾರ್ಯುರೂಪಕ್ಕೆ ಬಂದಿಲ್ಲ. ಒಂದೊಮ್ಮೆ ಬೆಂಗಳೂರಿನ ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವು ವೇಗ ಪಡೆದಿದ್ದರೆ ಬೆಂಗಳೂರು ಹಾಗೂ ಬೆಂಗಳೂರಿನ ಸುತ್ತಮುತ್ತಲಿನ ಪ್ರದೇಶದಲ್ಲೂ ಭೂಮಿ ಬೆಲೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇತ್ತು. ಆದರೆ, ಇದೀಗ ಬೆಂಗಳೂರು ನಗರವನ್ನು ವಿವಿಧ ನಗರಗಳು ರಿಯಲ್ ಎಸ್ಟೇಟ್ ವಿಚಾರದಲ್ಲಿ ಹಿಂದಿಕ್ಕಿವೆ.


Click it and Unblock the Notifications
