Doctor Protest: 40 ದಿನಗಳ ಬೃಹತ್ ಪ್ರತಿಭಟನೆ ಅಂತ್ಯಗೊಳಿಸಿದ ಬಂಗಾಳ ವೈದ್ಯರು
ಕೋಲ್ಕತ್ತಾದ ಆರ್ ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ವೈದ್ಯೆಯ ಮೇಲೆ ನಡೆದ ಅತ್ಯಾಚಾರ ಮತ್ತು ಕೊಲೆಗೆ ಸಂಬಂಧಪಟ್ಟಂತೆ 40 ದಿನಗಳಿಂದ ನಡೆಸುತ್ತಿದ್ದ ಪ್ರತಿಭಟನೆಯನ್ನು ಕೈಬಿಡಲು ಬಂಗಾಳದ ಕಿರಿಯ ವೈದ್ಯರು ನಿರ್ಧರಿಸಿದ್ದಾರೆ. ಶನಿವಾರದಿಂದ ಕೆಲಸಕ್ಕೆ ಹಾಜರಾಗುವುದಾಗಿ ಹೇಳಿದ್ದಾರೆ. ಆದರೆ ಒಪಿಡಿ ಸೇವೆಗಳನ್ನು ನೀಡುವುದಿಲ್ಲ ಎಂದು ಷರತ್ತು ಹಾಕಿದ್ದಾರೆ.
ವೈದ್ಯರ ಸುರಕ್ಷತೆ ಬಗ್ಗೆ ಕ್ರಮ ತೆಗೆದುಕೊಳ್ಳುವುದಾಗಿ ರಾಜ್ಯ ಸರ್ಕಾರ ಭರವಸೆ ನೀಡಿದ ಬಳಿಕ ಸೇವೆಗಳಿಗೆ ಮರಳುವುದಾಗಿ ಕಿರಿಯ ವೈದ್ಯರು ಒಪ್ಪಿಕೊಂಡಿದ್ದಾರೆ. ರಾಜ್ಯ ಸರ್ಕಾರ ವೈದ್ಯರ ಬೇಡಿಕೆಗಳನ್ನು ಈಡೇರಿಸುವ ಭರವಸೆ ಕೊಟ್ಟಿದೆ. ದಕ್ಷಿಣ ಬಂಗಾಳದಲ್ಲಿ ಭಾರಿ ಪ್ರವಾಹ ಉಂಟಾಗಿದ್ದು, ತುರ್ತಾಗಿ ವೈದ್ಯಕೀಯ ಸೇವೆಗಳು ಬೇಕಾಗಿದ್ದು, ವೈದ್ಯರು ಸೇವೆ ಒದಗಿಸಲು ಒಪ್ಪಿಕೊಂಡಿದ್ದಾರೆ.

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ನ್ಯಾನರ್ಜಿ ಬುಧವಾರದಿಂದ ಪ್ರವಾಹ ಪೀಡಿದ ಪ್ರದೇಶಗಳಲ್ಲಿ ಪ್ರವಾಸ ಕೈಗೊಂಡಿದ್ದು, ಪರಿಸ್ಥಿತಿಯನ್ನು ಅವಲೋಕಿಸಿದ್ದಾರೆ. ಬುಧವಾರ ವೈದ್ಯರ ಜೊತೆ ನಡೆದ ಕೊನೆಯ ಸಭೆಯಲ್ಲಿ ಹಾಜರಾದ ಮುಖ್ಯ ಕಾರ್ಯದರ್ಶಿ ಭದ್ರತೆಗೆ ಸಂಬಂಧಿಸಿದಂತೆ ವೈದ್ಯರ ಬೇಡಿಕೆಗಳು ಮತ್ತು ಸಲಹೆಗಳನ್ನು ಸ್ವೀಕರಿಸಿದರು.
ಗುರುವಾರ ಬೆಳಗ್ಗೆ ಮಮತಾ ಬ್ಯಾನರ್ಜಿ ಪ್ರಧಾನಿ ಕಾರ್ಯದರ್ಶಿಗೆ ಪತ್ರ ಬರೆದಿದ್ದು, ಸೇವಾ ವೈದ್ಯರಿಗೆ ರೂಮ್‌ಗಳು, ಸಿಸಿಟಿವಿಗಳು, ಪೊಲೀಸ್ ಮತ್ತು ಭದ್ರತಾ ಸಿಬ್ಬಂದಿಯ ನಿಯೋಜನೆ, ರಾತ್ರಿಯಲ್ಲಿ ಕಣ್ಗಾವಲುಗಾಗಿ ಮಹಿಳಾ, ಮೊಬೈಲ್ ಪೊಲೀಸ್ ತಂಡಗಳು, ಕೇಂದ್ರ ಸಹಾಯವಾಣಿ ಮತ್ತು ಪ್ಯಾನಿಕ್ ಬಟನ್‌ಗಳ ಸಮರ್ಪಕ ಲಭ್ಯತೆ ಒದಗಿಸಲು ಸೂಚನೆ ಕೊಟ್ಟಿದ್ದಾರೆ.
ನಮ್ಮ ಬಹುತೇಕ ಬೇಡಿಕೆಗಳನ್ನು ಈಡೇರಿಸಲಾಗುತ್ತಿದ್ದು, ಶುಕ್ರವಾರ ಆರೋಗ್ಯ ಇಲಾಖೆ ಎದುರು ಪ್ರತಿಭಟನೆ ಹಿಂಪಡೆಯುತ್ತೇವೆ. ಶನಿವಾರದಿಂದ ನಮ್ಮ ಸೇವೆಯನ್ನು ಮುಂದುವರೆಸುತ್ತೇವೆ, ಆದರೆ ಇತರ ಸಮಸ್ಯೆಗಳ ವಿರುದ್ಧ ನಮ್ಮ ಪ್ರತಿಭಟನೆ ಮುಂದುವರೆಯುತ್ತದೆ ಎಂದು ಹೇಳಿದ್ದಾರೆ. ಮುಂದಿನ ಏಳು ದಿನಗಳಲ್ಲಿ ಹೆದರಿಸುವ ಚಾಳಿಯನ್ನು ಬಿಡದೇ ಇದ್ದರೆ ದೊಡ್ಡ ಚಳವಳಿ ಆರಂಭಿಸುತ್ತೇವೆ ಎಂದು ತರಬೇತಿ ವೈದ್ಯರ ಒಕ್ಕೂಟ ಎಚ್ಚರಿಕೆ ಕೊಟ್ಟಿದೆ.
ಕಳೆದ ಒಂಬತ್ತು ದಿನಗಳಿಂದ ಸ್ವಾಸ್ಥ್ಯ ಭವನದ ಮುಂದೆ ವೈದ್ಯ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದು, ವೈದ್ಯಕೀಯ ವಿದ್ಯಾರ್ಥಿನಿ ಕೊಲೆ ಮತ್ತು ಅತ್ಯಾಚಾರ ಪ್ರಕರಣ ತನಿಖೆಯನ್ನು ಮುಗಿಸಲು ಸಿಬಿಐಗೆ ಇನ್ನೆಷ್ಟು ಸಮಯ ಬೇಕು ಎಂದು ಪ್ರಶ್ನೆ ಮಾಡಿದ್ದಾರೆ.
ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಧರಣಿ ನಿರತ ಕಿರಿಯ ವೈದ್ಯರ ಜೊತೆ ಸಭೆ ನಡೆಸಿದ್ದರು. ವೈದ್ಯರ ಬೇಡಿಕೆಯಂತೆ ಹಲವು ಅಧಿಕಾರಿಗಳು ಕೆಲಸದಿಂದ ವಜಾ ಮಾಡಲು ಒಪ್ಪಿಕೊಂಡಿದ್ದರು. ಅದರಂತೆ ವಿನೀತ್ ಗೋಯಲ್ ಬದಲಿಗೆ ಮನೋಜ್ ಕುಮಾರ್ ವರ್ಮಾ ಅವರನ್ನು ಹೊಸ ಕೋಲ್ಕತ್ತಾ ಪೊಲೀಸ್ ಮುಖ್ಯಸ್ಥರನ್ನಾಗಿ ನೇಮಿಸಲಾಯಿತು. ಇಬ್ಬರು ಹಿರಿಯ ಆರೋಗ್ಯ ಇಲಾಖೆಯ ಅಧಿಕಾರಿಗಳನ್ನು ಸೇವೆಯಿಂದ ವಜಾಗೊಳಿಸಲಾಗಿದೆ.












Click it and Unblock the Notifications