NDA Government: ಮೋದಿಗೆ ಹೊಸ ಟೆನ್ಷನ್; ಈ ಖಾತೆಗಾಗಿ ಮಿತ್ರಪಕ್ಷಗಳಿಂದ ಹಗ್ಗ ಜಗ್ಗಾಟ
ನರೇಂದ್ರ ಮೋದಿ ಮೂರನೇ ಬಾರಿ ಪ್ರಧಾನಿಯಾಗಲು ಸಜ್ಜಾಗಿದ್ದಾರೆ. ಭಾನುವಾರ ನಡೆಯುವ ಅದ್ಧೂರಿ ಸಮಾರಂಭದಲ್ಲಿ ಪ್ರಧಾನಿ ಮತ್ತು ಸಂಪುಟ ಸಚಿವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಆದರೆ ಈಗ ಖಾತೆ ಹಂಚಿಕೆ ಈಗ ದೊಡ್ಡ ತಲೆನೋವಾಗಿದೆ.
2014 ಮತ್ತು 2019ರಲ್ಲಿ ಬಿಜೆಪಿ ಸ್ಪಷ್ಟ ಬಹುಮತ ಪಡೆದು ಸರ್ಕಾರ ರಚನೆ ಮಾಡಿತ್ತು, ಆಗ ಬಿಜೆಪಿ ಮಾತಿನಂತೆ ಎಲ್ಲವೂ ನಡೆಯುತ್ತಿತ್ತು. ಮಿತ್ರ ಪಕ್ಷಗಳು ಪಟ್ಟು ಹಿಡಿಯುವ ಪರಿಸ್ಥಿತಿಯಲ್ಲಿ ಇರಲಿಲ್ಲ, ಆದರೆ ಈಗ ಹಾಗಿಲ್ಲ, ಮಿತ್ರ ಪಕ್ಷಗಳ ಬೆಂಬಲದ ಮೂಲಕವೇ ಬಿಜೆಪಿ ಸರ್ಕಾರ ರಚನೆ ಮಾಡಿದ್ದು, ಖಾತೆ ಹಂಚಿಕೆ ಕಸರತ್ತು ನಡೆಯುತ್ತಿದೆ.

ಉನ್ನತ ಖಾತೆಗಳನ್ನು ಬಿಜೆಪಿ ಇಟ್ಟುಕೊಳ್ಳುವ ಸಾಧ್ಯತೆ ಇದೆ. ಗೃಹ, ಹಣಕಾಸು, ರಕ್ಷಣೆ, ವಿದೇಶಾಂಗ ವ್ಯವಹಾರಗಳು, ರಸ್ತೆ ಸಾರಿಗೆ, ರೈಲ್ವೆ, ಐಟಿ ಮತ್ತು ಶಿಕ್ಷಣ ಖಾತೆಗಳು ಸೇರಿವೆ. ಆದರೆ ಮಿತ್ರ ಪಕ್ಷಗಳು ಕೆಲವು ಪ್ರಮುಖ ಖಾತೆಗಳಿಗಾಗಿ ಪಟ್ಟು ಹಿಡಿದಿವೆ. ಜೆಡಿಯು ರೈಲ್ವೆ ಇಲಾಖೆಯನ್ನು ಕೇಳಿದ್ದು ಅದಕ್ಕಾಗಿ ಒತ್ತಾಯ ಮಾಡುತ್ತಿದೆ. ಟಿಡಿಪಿ ಮಾಹಿತಿ ತಂತ್ರಜ್ಞಾನ ಖಾತೆಯನ್ನು ಕೇಳಿದೆ.
ಮಾಜಿ ಸಚಿವರಿಗೆ ಇಲ್ಲ ಅವಕಾಶ
ಜೆಡಿಯು ಮತ್ತು ಟಿಡಿಪಿಗೆ ಒಂದೇ ಸಂಖ್ಯೆಯ ಮಂತ್ರಿ ಸ್ಥಾನಗಳು ಸಿಗುವ ನಿರೀಕ್ಷೆಯಿದೆ ಎಂದು ಉತ್ತಮ ಮೂಲಗಳು ತಿಳಿಸಿವೆ. ಟಿಡಿಪಿ 16 ಜೆಡಿಯು 12 ಕ್ಕಿಂತ ಹೆಚ್ಚು ಲೋಕಸಭಾ ಸ್ಥಾನಗಳನ್ನು ಗೆದ್ದಿವೆ.
ಪ್ರಧಾನಿ ನರೇಂದ್ರ ಮೋದಿ ಅವರು ಸಚಿವಾಲಯಗಳ ಅಂತಿಮ ನಿರ್ಧಾರ ತೆಗೆದುಕೊಳ್ಳುವುದಾಗಿ ಶನಿವಾರ ಹೇಳಿದ್ದಾರೆ. ಕನಿಷ್ಠ 30 ಸದಸ್ಯರ ಬಲಿಷ್ಠ ಸಂಪುಟ ಆಗುವ ನಿರೀಕ್ಷೆಯಿದ್ದರೂ ಎಷ್ಟು ಸಚಿವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂಬ ಬಗ್ಗೆ ಇನ್ನೂ ಯಾವುದೇ ಸೂಚನೆ ಇಲ್ಲ.
ಹೊಸ ಸಚಿವ ಸಂಪುಟದಲ್ಲಿ ಸ್ಥಾನ ಗಿಟ್ಟಿಸುವ ನಿಟ್ಟಿನಲ್ಲಿ ಹಲವು ಬಿಜೆಪಿ ನಾಯಕರು ದೇವರ ಮೊರೆ ಹೋಗುತ್ತಿದ್ದಾರೆ ಎನ್ನಲಾಗಿದೆ. ಮೋದಿ ಸರ್ಕಾರದ ಎರಡನೇ ಅವಧಿಯ ಹಲವು ಸಚಿವರನ್ನು ಕೈಬಿಡುವ ಬಗ್ಗೆಯೂ ಬಿಜೆಪಿ ಯೋಚಿಸುತ್ತಿದೆ ಎಂದು ವರದಿಯಾಗಿದೆ.
ಮೋದಿ ಎರಡನೇ ಅವಧಿಯಲ್ಲಿ ಪ್ರಧಾನಿಯಾಗಿದ್ದಾಗ ಇದ್ದ ಸುಮಾರು 19 ಮಂತ್ರಿಗಳು ದೊಡ್ಡ ಮತಗಳ ಅಂತರದಿಂದ ಚುನಾವಣೆಯಲ್ಲಿ ಸೋತಿದ್ದಾರೆ. ಅವರಲ್ಲಿ ಪ್ರಮುಖರು ಸ್ಮೃತಿ ಇರಾನಿ, ರಾಜೀವ್ ಚಂದ್ರಶೇಖರ್, ಆರ್ ಕೆ ಸಿಂಗ್ ಮತ್ತು ಅರ್ಜುನ್ ಮುಂಡಾ, ಎಲ್ಲಾ ಕ್ಯಾಬಿನೆಟ್ ಮಂತ್ರಿಗಳು.
"ಹೊಸ ಮುಖಗಳನ್ನು ಕರೆತರುವ ಮೂಲಕ, ಪ್ರಮುಖ ಮಂತ್ರಿ ಖಾತೆಗಳಲ್ಲಿ ಕ್ರಿಯಾಶೀಲತೆಯನ್ನು ತುಂಬುವ ಗುರಿಯನ್ನು ಪಕ್ಷವು ಹೊಂದಿದೆ, ಪರಿಣಾಮಕಾರಿ ಆಡಳಿತವನ್ನು ಖಾತರಿಪಡಿಸುತ್ತದೆ ಮತ್ತು ಮತದಾರರಿಗೆ ನೀಡಿದ ಭರವಸೆಗಳನ್ನು ಪೂರೈಸುತ್ತದೆ" ಎಂದು ಪಕ್ಷದ ಮೂಲಗಳು ಹೇಳಿರುವುದಾಗಿ ವರದಿಯಾಗಿದೆ.












Click it and Unblock the Notifications