Fastest Route ಎಂದು ಅಪೂರ್ಣ ಸೇತುವೆ ತೋರಿದ ಗೂಗಲ್ ಮ್ಯಾಪ್, ಕಾರಲ್ಲಿದ್ದ ಮೂವರ ಕಥೆ ಏನಾಯ್ತು?
ಇಂದು ಎಷ್ಟೋ ಜನರಿಗೆ ಬದುಕಲು ದಾರಿ ಕೊಟ್ಟಿರುವುದು ಗೂಗಲ್ ಮ್ಯಾಪ್ ಎಂದರೆ ತಪ್ಪಾಗದು. ಇ-ಕಾಮರ್ಸ್ ವಲಯಕ್ಕೆ ಬೆನ್ನೆಲುಬಾಗಿ ನಿಂತಿರುವುದೇ ಈ ಮ್ಯಾಪ್ ತಂತ್ರಜ್ಞಾನ. ಟೆಕ್ ಯುಗ ಎಷ್ಟೇ ಮುಂದುವರಿದರೂ ತಂತ್ರಜ್ಞಾನದಿಂದ ಆಗಾಗ ಜೀವಕ್ಕೇ ಕುತ್ತು ತರುವ ಘಟನೆಗಳು ವರದಿಯಾಗುತ್ತಲೇ ಇವೆ. ಇಂತದ್ದೇ ಘಟನೆಯೊಂದು ಉತ್ತರಪ್ರದೇಶದಲ್ಲಿ ನಡೆದಿದೆ.
ತಂತ್ರಜ್ಞಾನ ಬಳಕೆ ತಪ್ಪಾದಾಗ ಅಥವಾ ಅದನ್ನು ತೀರಾ ನಂಬಿದಾಗ ಪ್ರತಿ ಸಲವೂ ಯಶಸ್ಸು ಕೈಹಿಡಿಯುವುದಿಲ್ಲ ಎಂಬುದಕ್ಕೆ ಇದೊಂದು ತಾಜಾ ಉದಾಹರಣೆ ಎಂದೇ ಹೇಳಲಾಗುತ್ತಿದೆ. ಇನ್ನು ಗೂಗಲ್ ಮ್ಯಾಪ್ ತಂತ್ರಜ್ಞಾನವನ್ನು ನಂಬಿ ಕಾರಿನಲ್ಲಿ ಹೊರಟ ಮೂವರು ಪ್ರಾಣ ಬಿಡುವಂತೆ ಮಾಡಿದೆ.

ಹೌದು ಉತ್ತರಪ್ರದೇಶದ ಬರೇಲಿ ಬಳಿ ಈ ಧಾರುಣ ಘಟನೆ ನಡೆದಿದ್ದು, ಗೂಗಲ್ ಮ್ಯಾಪ್ ಹಾಕಿಕೊಂಡು ಮೂವರು ಕಾರಿನಲ್ಲಿ ಬೇರೆ ಕಡೆಗೆ ಸಂಚರಿಸುತ್ತಿದ್ದರು. ಆದರೆ, ಗೂಗಲ್ ತಪ್ಪಾದ ಮಾರ್ಗವನ್ನು ತೋರಿದ ಪರಿಣಾಮ ಮೂವರೂ ಪ್ರಾಣ ಕಳೆದುಕೊಂಡಿದ್ದಾರೆ. ಇನ್ನು ಬರೇಲಿ ಬಳಿ ಸೇತುವೆಯೊಂದರ ನಿರ್ಮಾಣ ಅರ್ಧಕ್ಕೆ ನಿಂತಿತ್ತು. ಆದರೆ, ಗೂಗಲ್ ಮ್ಯಾಪ್ ಇದೇ ಮಾರ್ಗವನ್ನು ತೋರಿಸಿದ್ದು, ಅದನ್ನು ನಂಬಿ ಮೂವರೂ ಇದೇ ಮಾರ್ಗದಲ್ಲಿ ಪ್ರಯಾಣಿಸಿದ್ದಾರೆ.
ಇನ್ನು ಈ ಮಾರ್ಗದಲ್ಲಿ ದಟ್ಟವಾದ ಮಂಜು ಆವರಿಸಿದ್ದರಿಂದ ಕಾರಿನಲ್ಲಿದ್ದವರಿಗೂ ಮುಂದೆ ಸೇತುವೆ ಮಾರ್ಗ ಇಲ್ಲ ಎಂಬುದು ಕಣ್ಣಿಗೆ ಕಾಣಿಸಲಿಲ್ಲ. ಮ್ಯಾಪ್ ದಾರಿ ತೋರಿಸಿದ್ದರಿಂದ ನೇರವಾಗಿ ಅದನ್ನು ಅನುಸರಿಸಿದ್ದರಿಂದ ಕಾರು ಅಲ್ಲಿನ ರಾಮಗಂಗಾ ನದಿಗೆ ಉರುಳಿದೆ. ಇನ್ನು ಈ ಘಟನೆಯಲ್ಲಿ ಮೂವರು ಪ್ರಯಾಣಿಕರು ಸಹ ಕಾರಿನಲ್ಲೇ ಪ್ರಾಣ ಬಿಟ್ಟಿದ್ದಾರೆ.

ಇನ್ನು ಕಾಮಗಾರಿ ಅರ್ಧಕ್ಕೆ ನಿಂತಿದ್ದ ಸೇತುವೆ ಮಾರ್ಗವನ್ನೇ ಗೂಗಲ್ ಮ್ಯಾಪ್ Fastest Route ಎಂದು ತೋರಿಸಿತ್ತು. ಇದನ್ನು ನಂಬಿ ಪ್ರಯಾಣಿಸಿದ್ದರಿಂದಲೇ ಮೂವರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಎತ್ತರವಾಗಿದ್ದ ಸೇತುವೆ ಮೇಲಿಂದ ವೇಗವಾಗಿ ಬಂದು ಉರುಳಿದ್ದರಿಂದ ಮೂವರೂ ಕಾರಿನಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಮೃತರು ದೇವಸ್ಥಾನಕ್ಕೆ ತೆರಳುತ್ತಿದ್ದಾಗ ಕತ್ರಿ ಗ್ರಾಮದ ಬಳಿ ಈ ಘಟನೆ ಸಂಭವಿಸಿದೆ.
ಬರೇಲಿ ಪ್ರದೇಶದ ಫರೀದ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಿರ್ಮಾಣ ಹಂತದ ಸೇತುವೆಯಿಂದ ಕಾರು ಬಿದ್ದು ಕಾರಿನಲ್ಲಿ ಪ್ರಯಾಣಿಸುತ್ತಿದ್ದ 3 ಮಂದಿ ಮೃತಪಟ್ಟಿರುವ ಮಾಹಿತಿ ಮೇರೆಗೆ ಕ್ರಮ ಜರುಗಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಅಪೂರ್ಣ ಸೇತುವೆಯಲ್ಲಿ ಕಾರು ಆಳವಾದ ಕಂದಕಕ್ಕೆ ಬಿದ್ದಿದೆ. ಇನ್ನು ಈ ಅಪೂರ್ಣ ಸೇತುವೆ ಮಾರ್ಗದಲ್ಲಿ ಯಾವುದೇ ಬ್ಯಾರಿಕೇಡ್‌ಗಳು ಅಥವಾ ಚಾಲಕರನ್ನು ಎಚ್ಚರಿಸಲು ಸೂಚನಾ ಫಲಕಗಳು ಇರಲಿಲ್ಲ. ಈ ಸ್ಥಳದಲ್ಲಿ ಸೂಕ್ತ ಸುರಕ್ಷತಾ ಕ್ರಮಗಳಿಲ್ಲದ ಕಾರಣ ಹಲವಾರು ಅಪಘಾತಗಳು ಸಂಭವಿಸಿವೆ ಎಂದು ಸ್ಥಳೀಯರು ದೂರಿದ್ದಾರೆ.
ಸೇತುವೆಯ ಸ್ಥಿತಿ ಮತ್ತು ಘಟನೆಯಲ್ಲಿ ನ್ಯಾವಿಗೇಷನ್ ಉಪಕರಣಗಳ ಪಾತ್ರದ ಬಗ್ಗೆ ಅಧಿಕಾರಿಗಳು ತನಿಖೆ ಶುರು ಮಾಡಿದ್ದಾರೆ. ಇಂತಹ ಯಾವುದೇ ಘಟನೆಗಳು ಮರುಕಳಿಸಬಾರದು, ಇದಕ್ಕಾಗಿ ಇಂತಹ ದುರಂತಗಳನ್ನು ತಡೆಯಲು ಕಟ್ಟುನಿಟ್ಟಾದ ಕ್ರಮಗಳನ್ನು ತೆಗೆದುಕೊಳ್ಳುವಂತೆ ಮೃತರ ಕುಟುಂಬಗಳು ಒತ್ತಾಯಿಸಿವೆ. ರಸ್ತೆ ಪರಿಸ್ಥಿತಿಗಳನ್ನು ಪರಿಶೀಲಿಸದೆ ನ್ಯಾವಿಗೇಷನ್ ಅಪ್ಲಿಕೇಶನ್‌ಗಳನ್ನು ಅತಿಯಾಗಿ ಅವಲಂಬಿಸಿದರೆ ಆಗುವ ಅಪಾಯಗಳಿಗೂ ಈ ಘಟನೆ ಎಚ್ಚರಿಕೆಯ ಸಂದೇಶ ನೀಡಿದೆ.












Click it and Unblock the Notifications