ಬಾಂಗ್ಲಾದೇಶ ಪ್ರಧಾನಿ ಶೇಖ್ ಹಸೀನಾ ಮಗ ಸಜೀಬ್ ವಾಝೇದ್‌ಗೆ ಇದೆ ಬೆಂಗಳೂರಿನ ನಂಟು!
ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ದಂಗೆ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಪ್ರಧಾನಿ ಶೇಖ್ ಹಸೀನಾ ಈಗ ಭಾರತಕ್ಕೆ ಪಲಾಯನ ಮಾಡಿದ್ದಾರೆ. ಬಾಂಗ್ಲಾದೇಶದಲ್ಲಿ ಸದ್ಯ ಮಿಲಿಟರಿ ಆಡಳಿತ ಜಾರಿಯಾಗಿದ್ದು ದಂಗೆಯನ್ನು ಹತ್ತಿಕ್ಕಲು ಪ್ರಯತ್ನಿಸಲಾಗುತ್ತಿದೆ. ಶೇಖ್ ಹಸೀನಾ ಅವರು ದೇಶ ತೊರೆದು ಭಾರತಕ್ಕೆ ಬಂದಿದ್ದಾರೆ, ಆದರೆ ಅವರ ಪುತ್ರನಿಗೆ ಈ ಮೊದಲನೇ ಬೆಂಗಳೂರಿನ ನಂಟು ಇತ್ತು ಎನ್ನುವುದು ಸಾಕಷ್ಟು ಜನರಿಗೆ ಗೊತ್ತಿಲ್ಲದ ವಿಚಾರವಾಗಿದೆ.
ಬಾಂಗ್ಲಾದೇಶ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರ ಮಗ ಸಜೀಬ್ ವಾಝೆದ್ ಜಾಯ್ ಭಾರತದ ಜೊತೆ ನಂಟು ಹೊಂದಿದ್ದಾರೆ. ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ಅವರು ಕಂಪ್ಯೂಟರ್ ವಿಜ್ಞಾನವನ್ನು ಅಧ್ಯಯನ ಮಾಡಿದ್ದಾರೆ. ಬಳಿಕ ಅವರು ಯುನೈಟೆಡ್ ಸ್ಟೇಟ್ಸ್‌ನ ಆರ್ಲಿಂಗ್ಟನ್‌ನಲ್ಲಿರುವ ಟೆಕ್ಸಾಸ್ ವಿಶ್ವವಿದ್ಯಾಲಯಕ್ಕೆ ವರ್ಗಾವಣೆಯಾದರು. ಕಂಪ್ಯೂಟರ್ ಎಂಜಿನಿಯರಿಂಗ್‌ನಲ್ಲಿ ಬ್ಯಾಚುಲರ್ ಆಫ್ ಸೈನ್ಸ್ ಪಡೆದ ಅವರು, ಪ್ರತಿಷ್ಠಿತ ಹಾರ್ವರ್ಡ್ ಕೆನಡಿ ಸ್ಕೂಲ್‌ನಲ್ಲಿ ಮಾಸ್ಟರ್ ಆಫ್ ಪಬ್ಲಿಕ್ ಅಡ್ಮಿನಿಸ್ಟ್ರೇಷನ್ ಅನ್ನು ಪೂರ್ಣಗೊಳಿಸಿದ್ದಾರೆ.

ಬಾಂಗ್ಲಾದೇಶದ ದಂಗೆಯ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಜೀಬ್ ವಾಝೆದ್ ಫೇಸ್‌ಬುಕ್ ಮೂಲಕ ದೇಶದ ಜನತೆಗೆ ಮನವಿ ಮಾಡಿದ್ದಾರೆ. ಜನರಿಗೆ ಸುರಕ್ಷತೆಗೆ ಆದ್ಯತೆ ನೀಡಬೇಕು ಮತ್ತು ಸಂವಿಧಾನವನ್ನು ಎತ್ತಿಹಿಡಿಯಬೇಕು ಎಂದು ಮಿಲಿಟರಿಗೆ ಒತ್ತಾಯ ಮಾಡಿದ್ದಾರೆ. ಇಂತಹ ಪ್ರಕ್ಷುಬ್ದ ಸ್ಥಿತಿಯಲ್ಲಿ ಪ್ರಜಾಸತ್ತಾತ್ಮಕ ತತ್ವಗಳ ಅನುಸರಣೆ ಅಗತ್ಯವೆಂದು ಹೇಳಿದ್ದಾರೆ.
ಬಾಂಗ್ಲಾದೇಶದ ಗಲಭೆಗೆ ಕಾರಣವೇನು?
ಶೇಖ್ ಹಸೀನಾ ಅವರ ಆಡಳಿತದಲ್ಲಿ ಆಗಿರುವ ಅಧಿಕಾರ ದುರುಪಯೋಗದ ಆರೋಪ, ರಾಜಖಿಯ ಭಿನ್ನಾಭಿಪ್ರಾಯಗಳು ಸರ್ಕಾರದ ವಿರುದ್ಧ ಜನರು ದಂಗೆ ಏಳುವಂತೆ ಮಾಡಿವೆ ಎಂದು ವರದಿಯಾಗಿದೆ. ಗಲಭೆ ಕೈಮೀರಿದ ನಂತರ ಪ್ರಧಾನಿ ಶೇಖ್ ಹಸೀನಾ ದೇಶವನ್ನು ಬಿಟ್ಟು ಭಾರತಕ್ಕೆ ಪರಾರಿಯಾಗಿದ್ದಾರೆ. ಮಿಲಿಟರಿ ಅಧಿಕಾರವನ್ನು ಕೈಗೆತ್ತಿಕೊಂಡಿದ್ದು, ದಂಗೆಯನ್ನು ಹತ್ತಿಕ್ಕಲು ಕ್ರಮ ತೆಗೆದುಕೊಳ್ಳುತ್ತಿದೆ.
ರೈಲು ಸೇವೆ ಸ್ಥಗಿತ
ಬಾಂಗ್ಲಾದೇಶದಲ್ಲಿ ಗಲಭೆ ಕೈಮೀರುತ್ತಿದ್ದಂತೆ ಭಾರತೀಯ ರೈಲ್ವೆ ಬಾಂಗ್ಲಾದೇಶಕ್ಕೆ ರೈಲು ಸೇವೆಯನ್ನು ಸ್ಥಗಿತಗೊಳಿಸಿದೆ. ವಿದ್ಯಾರ್ಥಿಗಳ ಪ್ರತಿಭಟನಾ ಕಿಚ್ಚಿಗೆ ಇಡೀ ದೇಶವೇ ನಲುಗಿಹೋಗಿದ್ದು, ಅರಾಜಕತೆ ಉಂಟಾಗಿದೆ. ಮುಂಜಾಗ್ರತಾ ಕ್ರಮವಾಗಿ ಭಾರತೀಯ ರೈಲ್ವೆ ಢಾಕಾಗೆ ರೈಲು ಸೇವೆಯನ್ನು ನಿಲ್ಲಿಸಿದೆ.
ಕೋಲ್ಕತ್ತಾ-ಢಾಕಾ-ಕೋಲ್ಕತ್ತಾ ಮೈತ್ರೀ ಎಕ್ಸ್‌ಪ್ರೆಸ್ (13109/13110), ಕೋಲ್ಕತ್ತಾ-ಢಾಕಾ-ಕೋಲ್ಕತ್ತಾ ಮೈತ್ರೀ ಎಕ್ಸ್‌ಪ್ರೆಸ್ (13107/13108), ಕೋಲ್ಕತ್ತಾ-ಖುಲ್ನಾ-ಕೋಲ್ಕತ್ತಾ ಬಂಧನ್ ಎಕ್ಸ್‌ಪ್ರೆಸ್ ಮತ್ತು ಢಾಕಾ-ನ್ಯೂ ಜಲ್ಪೈಗುರಿ-ಢಾಕಾ ಮಿತಾಲಿ ಎಕ್ಸ್‌ಪ್ರೆಸ್ ಸೇರಿದಂತೆ ಎಲ್ಲಾ ರೈಲುಗಳನ್ನು ಜೂನ್ 21 ರಿಂದ ನಿಲ್ಲಿಸಲಾಗಿದೆ.












Click it and Unblock the Notifications