ಹೈನುಗಾರಿಗೆ, ಗೋ ವ್ಯಾಪಾರದಿಂದ ಮುಸ್ಲಿಮರು ದೂರವಿರಿ: ಅಜಂ ಖಾನ್ ಸಲಹೆ
ರಾಮಪುರ, ಜುಲೈ 25: ತಮ್ಮ ಮುಂದಿನ ಪೀಳಿಗೆಯ ಸುರಕ್ಷತೆಯಾಗಿ ಮುಸ್ಲಿಮರು ಡೇರಿ ಉದ್ಯಮ ಹಾಗೂ ಗೋವುಗಳ ವ್ಯಾಪಾರದಿಂದ ದೂರವಿರುವಂತೆ ಉತ್ತರ ಪ್ರದೇಶದ ಸಮಾಜವಾದಿ ಪಕ್ಷದ ಮುಖಂಡ ಅಜಂ ಖಾನ್ ಮಂಗಳವಾರ ಸಲಹೆ ನೀಡಿದ್ದಾರೆ.
ಗೋವುಗಳ ಕಳ್ಳಸಾಗಣೆ ಅನುಮಾನದಲ್ಲಿ ಜನಸಮೂಹ ಹತ್ಯೆ ಘಟನೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅವರು ಈ ಹೇಳಿಕೆ ನೀಡಿದ್ದಾರೆ.
'ಡೇರಿ ಉದ್ಯಮ ಮತ್ತು ಹಸುಗಳ ಮಾರಾಟ ವೃತ್ತಿಯಲ್ಲಿ ತೊಡಗಿರುವ ಮುಸ್ಲಿಮರು ತಮ್ಮ ಮುಂದಿನ ಪೀಳಿಗೆಯ ಸುರಕ್ಷತೆಯ ದೃಷ್ಟಿಯಿಂದ ಅವುಗಳನ್ನು ನಿಲ್ಲಿಸುವಂತೆ ಮನವಿ ಮಾಡುತ್ತೇನೆ.

ಗೋವುಗಳನ್ನು ಸುಮ್ಮನೆ ಮುಟ್ಟಿದರೂ ಅದರ ಪರಿಣಾಮ ನೆಟ್ಟಗಿರುವುದಿಲ್ಲ ಎಂದು ಕೆಲವು ರಾಜಕಾರಣಿಗಳು ಹೇಳುತ್ತಿದ್ದಾರೆ ಹೀಗಿರುವಾಗ ಅಂತಹ ವ್ಯಾಪಾರದಿಂದ ಮುಸ್ಲಿಮರು ದೂರ ಇರುವುದೇ ಒಳಿತು' ಎಂದು ಅಜಂ ಖಾನ್ ತಿಳಿಸಿದ್ದಾರೆ.
ದೇಶದಲ್ಲಿ ಗೋಸಾಗಾಣಿಕೆ ಮಾಡುವವರನ್ನು ಗೋರಕ್ಷಕರು ಅಡ್ಡಗಟ್ಟಿ ಹೊಡೆದು ಕೊಲ್ಲುವ ಪ್ರಕರಣಗಳು ಹೆಚ್ಚಾಗುತ್ತಿದೆ. ರಾಜಸ್ಥಾನದ ಅಲ್ವಾರ್ ಎಂಬಲ್ಲಿ ಜುಲೈ 20-21ರ ಮಧ್ಯರಾತ್ರಿ ಗೋವು ಸಾಗಿಸುತ್ತಿದ್ದ ಇಬ್ಬರನ್ನು ಅಡ್ಡಗಟ್ಟಿದ್ದ ಸ್ಥಳೀಯರು ಒಬ್ಬನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದರು.
ಹಲ್ಲೆಗೊಳಗಾದ ವ್ಯಕ್ತಿಯನ್ನು ಪೊಲೀಸರು ತಡವಾಗಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಆತ ಆಗಲೇ ಮೃತಪಟ್ಟಿದ್ದ. ಈ ಘಟನೆ ದೇಶದಾದ್ಯಂತ ಸಂಚಲನ ಸೃಷ್ಟಿಸಿದೆ.












Click it and Unblock the Notifications