ಯೂಟರ್ನ್ ಬಳಿಕ ಬಾಬಾ ರಾಮದೇವ್‌ಗೆ ಆಯುಷ್ ಸಚಿವಾಲಯದಿಂದ ಬಿಗ್ ಶಾಕ್! ಪತಂಜಲಿ ವಿರುದ್ಧ ಕ್ರಮಕ್ಕೆ ಸೂಚನೆ
ಪತಂಜಲಿ ಆಯುರ್ವೇದ ಉತ್ಪನ್ನಗಳ ಬಗ್ಗೆ ಜನರನ್ನು ತಪ್ಪು ದಾರಿಗೆಳೆಯುವ ಜಾಹೀರಾತುಗಳ ವಿರುದ್ಧ ಕ್ರಮ ಕೈಗೊಳ್ಳಲು ಆಯುಷ್ ಸಚಿವಾಲಯ ಹಸಿರು ನಿಶಾನೆ ತೋರಿದೆ.
ನವದೆಹಲಿ, ಫೆ 24: ಆರ್‌ಟಿಐ ಅರ್ಜಿಗಳನ್ನು ನಿರ್ಲಕ್ಷಿಸಿ, ಯೂಟರ್ನ್ ತೆಗೆದುಕೊಂಡ ಬಳಿಕ ಆಯುಷ್ ಸಚಿವಾಲಯ ಕೊನೆಗೂ ದೊಡ್ಡ ನಿರ್ಧಾರವೊಂದನ್ನು ತೆಗೆದುಕೊಂಡಿದೆ. ಬಾಬಾ ರಾಮದೇವ್ ಅವರ ಪತಂಜಲಿ ಆಯುರ್ವೇದ ಉತ್ಪನ್ನಗಳ ವಿರುದ್ಧ ಕ್ರಮ ತೆಗೆದುಕೊಳ್ಳಲು ಉತ್ತರಾಖಂಡ ಸರ್ಕಾರಕ್ಕೆ ಅನುಮತಿಯನ್ನು ನೀಡಿದೆ. ಪತಂಜಲಿ ಆಯುರ್ವೇದ ಉತ್ಪನ್ನಗಳ ಬಗ್ಗೆ ಜನರನ್ನು ತಪ್ಪು ದಾರಿಗೆಳೆಯುವ ಜಾಹೀರಾತುಗಳ ವಿರುದ್ಧ ಕ್ರಮ ಕೈಗೊಳ್ಳಲು ಆಯುಷ್ ಸಚಿವಾಲಯ ಹಸಿರು ನಿಶಾನೆ ತೋರಿದೆ.
ಕಾಂಗ್ರೆಸ್ ಸಂಸದ ಕಾರ್ತಿ. ಪಿ. ಚಿದಂಬರಂ ಅವರ ದೂರಿನ ಹಿನ್ನೆಲೆಯಲ್ಲಿ ಈ ನಿರ್ದೇಶನವನ್ನು ನೀಡಲಾಗಿದೆ. ಕಾರ್ತಿ ಅವರಿಗೆ ಬರೆದ ಪತ್ರದಲ್ಲಿ ಆಯುಷ್ ಸಚಿವ ಸರ್ಬಾನಂದ ಸೋನೊವಾಲ್ ಅವರು, 1954 ರ ಡ್ರಗ್ಸ್ ಮತ್ತು ಮ್ಯಾಜಿಕಲ್ ರೆಮಿಡೀಸ್ (ಆಕ್ಷೇಪಾರ್ಹ ಜಾಹೀರಾತುಗಳು) ಕಾಯಿದೆ ಮತ್ತು ಅದರ ಅಡಿಯಲ್ಲಿನ ನಿಯಮಗಳನ್ವಯ ರಾಜ್ಯ ಪರವಾನಗಿ ಪ್ರಾಧಿಕಾರಕ್ಕೆ (ಎಸ್‌ಎಲ್‌ಎ) ಕ್ರಮ ಕೈಗೊಳ್ಳಲು ನಿರ್ದೇಶಿಸಿದೆ.

ಪತಂಜಲಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಚಿವಾಲಯವು ಎಸ್‌ಎಲ್‌ಎಗೆ ನಿರ್ದೇಶನ ನೀಡಿರುವುದು ಇದೇ ಮೊದಲಲ್ಲ. ಆದರೆ, ಡಿಎಂಆರ್ ಆಕ್ಟ್ 1954ರ 170ನೇ ನಿಯಮವನ್ನು ಮುಂಬೈ ಕೋರ್ಟ್‌ನಲ್ಲಿ ಪ್ರಶ್ನಿಸಿದ್ದ ವೇಳೆ ಡ್ರಗ್ಸ್ ಮತ್ತು ಮ್ಯಾಜಿಕ್ ರೆಮಿಡೀಸ್ (ಆಕ್ಷೇಪಾರ್ಹ ಜಾಹೀರಾತುಗಳು) 1954ರ ಅಡಿಯಲ್ಲಿ ಕ್ರಮ ತೆಗೆದುಕೊಳ್ಳಲು ಆಗುವುದಿಲ್ಲ ಎಂದು ಫೆಬ್ರವರಿ 10ರಂದು ಆಯುಷ್ ಸಚಿವಾಲಯ ಸ್ಪಷ್ಟಪಡಿಸಿತ್ತು. ಅದಲ್ಲದೇ ಪತಂಜಲಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಕಣ್ಣೂರು ಮೂಲದ ಆರ್‌ಟಿಐ ಕಾರ್ಯಕರ್ತ ಕೆವಿ ಬಾಬು ಸಲ್ಲಿಸಿದ್ದ ಅರ್ಜಿಯನ್ನು ಕೂಡ ತಿರಸ್ಕರಿಸಲಾಗಿತ್ತು.
ಆದರೆ, ಈಗ ಈ ವಿಷಯವನ್ನು ತನಿಖೆ ಮಾಡಿ ಕ್ರಮ ಕೈಗೊಳ್ಳಬೇಕು ಎಂದು ಸಚಿವಾಲಯ ಉತ್ತರಾಖಂಡ ಸರ್ಕಾರದ ಎಸ್‌ಎಲ್‌ಎಗೆ ಸೂಚಿಸಿದೆ. ರಾಜ್ಯ ಪರವಾನಗಿ ಪ್ರಾಧಿಕಾರ ಮತ್ತು ಆಯುಷ್ ಸಚಿವಾಲಯ ಎರಡು ಡಿಎಂಆರ್ ಆಕ್ಟ್ 1954ರ ಸಂಬಂಧವಿಲ್ಲದ 170ನೇ ನಿಯಮದಿಂದ ನುಣುಚಿಕೊಂಡಿದ್ದರು. ಆದರೆ, ಈಗ ಮಹತ್ವದ ಬೆಳವಣಿಗೆಯಾಗಿದೆ ಎಂದು ಡಾ.ಕೆ.ವಿ.ಬಾಬು ಹೇಳಿದ್ದಾರೆ. ಈಗ ಪತಂಜಲಿ ವಿರುದ್ಧ ಕ್ರಮ ಕೈಗೊಳ್ಳಲು ಎಸ್‌ಎಲ್‌ಎಗೆ ಆಯುಷ್ ಸಚಿವಾಲಯ ಸ್ಪಷ್ಟ ನಿರ್ದೇಶನ ನೀಡಿದೆ. ನಾನು ಈ ನಿರ್ಧಾರವನ್ನು ಸ್ವಾಗತಿಸುತ್ತೇನೆ ಎಂದು ಹೇಳಿದ್ದಾರೆ.
2022ರ ಏಪ್ರಿಲ್‌ನಲ್ಲಿಯೂ ಡಾ.ಬಾಬು ಅವರು ಸಲ್ಲಿಸಿದ ಆರ್‌ಟಿಐ ಬಳಿಕ ಆಯುಷ್ ಸಚಿವಾಲಯ ಪತಂಜಲಿ ವಿರುದ್ಧ ಕ್ರಮಕೈಗೊಳ್ಳಲು ಸೂಚಿಸಿತ್ತು. ಆದರೆ, ಎಸ್‌ಎಲ್‌ಎ ಡ್ರಗ್ಸ್ ಮತ್ತು ಕಾಸ್ಮೆಟಿಕ್ ಆಕ್ಟ್ ಅಡಿಯಲ್ಲಿ ನಿಯಮ 170 ಅನ್ನು ಉಲ್ಲೇಖಿಸಿ ಕ್ರಮ ತೆಗೆದುಕೊಳ್ಳಲು ಆಗುವುದಿಲ್ಲ ಎಂದು ಯೂ ಟರ್ನ್ ತೆಗೆದುಕೊಂಡಿತ್ತು. ಇದರಿಂದ ಪತಂಜಲಿ ವಿರುದ್ಧ ಯಾವುದೇ ಕ್ರಮ ಆಗಿರಲಿಲ್ಲ.












Click it and Unblock the Notifications