ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಶಿಯಾ ಮುಸ್ಲಿಮರ ಬೆಂಬಲ
ನವದೆಹಲಿ, ಡಿಸೆಂಬರ್ 05: ಬಾಬ್ರಿ ಮಸೀದಿ ಧ್ವಂಸ ಪ್ರಕರಣ ನಡೆದು ಬುಧವಾರಕ್ಕೆ 25 ವರ್ಷವಾಗುತ್ತದೆ. ಇದರ ಮುನ್ನಾ ದಿನವೇ ಇಂದು ವಿವಾದದ ಅಂತಿಮ ವಿಚಾರಣೆ ನಡೆಯಿತು. ಅಗತ್ಯ ದಾಖಲೆಗಳ ತರ್ಜುಮೆ ಕೆಲಸಕ್ಕೆ ಹೆಚ್ಚಿನ ಕಾಲಾವಕಾಶ ನೀಡಬೇಕೆಂದು ಸುನ್ನಿ ಮುಸ್ಲಿಂ ಪಂಗಡದವರು ಕೋರಿದರು. ಫೆಬ್ರವರಿ 08, 2018ಕ್ಕೆ ವಿಚಾರಣೆಯನ್ನು ಮುಂದೂಡಲಾಗಿದೆ.
ಈ ನಡುವೆ ಶಿಯಾ ಮುಸ್ಲಿಂ ಸಂಘಟನೆಯೊಂದು ವಿವಾದಿತ ಸ್ಥಳದಲ್ಲಿ ರಾಮಮಂದಿರ ನಿರ್ಮಿಸಲು ನಮ್ಮ ಅಭ್ಯಂತರವೇನು ಇಲ್ಲ ಎಂದು ಕೋರ್ಟಿಗೆ ಹೇಳಿರುವುದು ಎಲ್ಲರ ಹುಬ್ಬೇರಿಸಿದೆ.

ಮುಖ್ಯ ನ್ಯಾಯಮೂರ್ತಿಗಳಾದ ದೀಪಕ್ ಮಿಶ್ರಾ, ಜಸ್ಟೀಸ್ ಅಶೋಕ್ ಭೂಷಣ್ ಹಾಗೂ ಅಬ್ದುಲ್ ನಜೀರ್ ಅವರಿರುವ ತ್ರಿಸದಸ್ಯ ಪೀಠ ಆಯೋಧ್ಯಾ ವಿವಾದಿತ ತಾಣದ ವಿಚಾರಣೆಯನ್ನು ಆಲಿಸಿದರು.
2010ರಲ್ಲಿ ವಿವಾದದ ಸಂಬಂಧ ಅಲಹಾಬಾದ್ ಹೈಕೋರ್ಟ್ ನೀಡಿದ್ದ ತೀರ್ಪು ಪ್ರಶ್ನಿಸಿ ಸಲ್ಲಿಕೆಯಾಗಿರುವ 13 ಅರ್ಜಿಗಳ ವಿಚಾರಣೆಯನ್ನು ಕೋರ್ಟ್ ನಡೆಸುತ್ತಿದೆ.
ಉತ್ತರಪ್ರದೇಶದ ಶಿಯಾ ಕೇಂದ್ರ ವಕ್ಫ್ ಮಂಡಳಿಯ ಸದಸ್ಯರು, ವಿವಾದಕ್ಕೆ ಅಂತ್ಯ ಹಾಡಲು ಯತ್ನಿಸಿದ್ದು, ಈ ಕುರಿತಂತೆ ಕೋರ್ಟಿನ ಮುಂದೆ ಅರ್ಜಿ ಸಲ್ಲಿಸಿದ್ದಾರೆ. ರಾಮಜನ್ಮಭೂಮಿಯ ವಿವಾದಿತ ಸ್ಥಳದಿಂದ ಅನತಿ ದೂರದಲ್ಲಿ ಮಸೀದಿ ನಿರ್ಮಿಸಲು ಸಿದ್ಧ. ಆ ಸ್ಥಳದಲ್ಲಿ ರಾಮಮಂದಿರ ನಿರ್ಮಾಣಕ್ಕೆ ನಮ್ಮ ಅಭ್ಯಂತರವೇನು ಇಲ್ಲ ಎಂದು ಅರ್ಜಿಯಲ್ಲಿ ಹೇಳಿದ್ದಾರೆ.

2010ರಲ್ಲಿ ಅಲಹಾಬಾದ್ ಹೈಕೋರ್ಟ್ ವಿವಾದಿತ ಬಾಬ್ರಿ ಮಸೀದಿ ಜಾಗ(2.77 ಎಕರೆ)ವನ್ನು ಹಿಂದೂ ಮಹಾಸಭಾ, ನಿರ್ಮೋಹಿ ಅಖಾಡ ಮತ್ತು ಸುನ್ನಿ ಸಮಿತಿಗೆ 2:1 ಅನುಪಾತದಂತೆ ಹಂಚಿಕೆ ಮಾಡಿತ್ತು.
'Hawan' organised in #Ayodhya for construction of Ram temple pic.twitter.com/GadKFXVXZF
— ANI UP (@ANINewsUP) December 5, 2017
ರಾಮಜನ್ಮ ಭೂಮಿ ವಿವಾದವನ್ನು ಕೋರ್ಟ್ ನ ಹೊರಗೆ ಬಗೆಹರಿಸಿಕೊಳ್ಳುವುದಾದರೆ ಬಗೆಹರಿಸಿಕೊಳ್ಳಿ ಎಂದು ಸುಪ್ರೀಂಕೋರ್ಟ್ ಈ ಹಿಂದೆ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.
ಸುನ್ನಿ ಮುಸ್ಲಿಮರ ಪಂಗಡದ ಪರ ವಾದಿಸಿದ ಹಿರಿಯ ವಕೀಲ ಕಪಿಲ್ ಸಿಬಲ್ ಅವರು 19 ಸಾವಿರಕ್ಕೂ ಅಧಿಕ ಪುಟಗಳ ದಾಖಲೆಗಳನ್ನು ಕೋರ್ಟಿಗೆ ಸಲ್ಲಿಸಲು ಕಾಲಾವಕಾಶ ಕೋರಿದರು. ಮುಂದಿನ ವಿಚಾರಣೆಯನ್ನು ಲೋಕಸಭೆ ಚುನಾವಣೆ 2019ಗೂ ಮುನ್ನ ನಡೆಸಬೇಕು ಎಂದು ಕೋರಿದರು.












Click it and Unblock the Notifications