Breaking: 2024ರ ಜನವರಿಯಲ್ಲಿ ಭಕ್ತರಿಗೆ ತೆರೆಯಲಿದೆ ಅಯೋಧ್ಯೆ ರಾಮ ಮಂದಿರ
ನವದೆಹಲಿ, ಅಕ್ಟೋಬರ್ 25: ಉತ್ತರ ಪ್ರದೇಶದ ಅಯೋಧ್ಯೆಯಲ್ಲಿರುವ ರಾಮ ಮಂದಿರದಲ್ಲಿ ರಾಮಲಲ್ಲಾನ ವಿಗ್ರಹಗಳನ್ನು ಪ್ರತಿಷ್ಠಾಪಿಸಿದ ನಂತರ 2024ರ ಜನವರಿ ತಿಂಗಳಿನಲ್ಲಿ ಭಕ್ತರಿಗೆ ತೆರೆದಿರುತ್ತದೆ ಎಂದು ದೇಗುಲದ ನಿರ್ಮಾಣದ ಮೇಲ್ವಿಚಾರಣಾ ಟ್ರಸ್ಟ್‌ನ ಸದಸ್ಯರು ತಿಳಿಸಿದ್ದಾರೆ.
ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರದಲ್ಲಿ ಶೇ.50ರಷ್ಟು ದೇವಾಲಯದ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ. ಒಟ್ಟಾರೆ ಪ್ರಗತಿ ತೃಪ್ತಿಕರವಾಗಿದೆ ಎಂದು ಮಂಗಳವಾರ ಹೇಳಿದ್ದಾರೆ.
ಮಕರ ಸಂಕ್ರಾಂತಿ ಹಬ್ಬದಂದು ದೇಗುಲದ ಗರ್ಭಗುಡಿಯಲ್ಲಿ ರಾಮಲಲ್ಲಾನ ವಿಗ್ರಹಗಳನ್ನು ಪ್ರತಿಷ್ಠಾಪಿಸಿದ ನಂತರ 2024ರ ಜನವರಿಯಲ್ಲಿ ದೇವಾಲಯವನ್ನು ಭಕ್ತರಿಗೆ ತೆರೆಯಲಾಗುವುದು ಎಂದು ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಚಂಪತ್ ರೈ ತಿಳಿಸಿದ್ದಾರೆ. ಮುಂದಿನ ವರ್ಷ ಡಿಸೆಂಬರ್ ವೇಳೆಗೆ ದೇಗುಲದ ನೆಲ ಮಹಡಿ ಸಿದ್ಧಗೊಳ್ಳಲಿದ್ದು, 2024ರ ಜನವರಿ 14ರ ಸುಮಾರಿಗೆ ರಾಮನ ವಿಗ್ರಹಗಳನ್ನು ಪ್ರತಿಷ್ಠಾಪಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.

1,800 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ:
ಉತ್ತರ ಪ್ರದೇಶದ ಅಯೋಧ್ಯೆ ರಾಮ ಮಂದಿರ ನಿರ್ಮಾಣಕ್ಕೆ ಅಂದಾಜು 1,800 ಕೋಟಿ ರೂಪಾಯಿ ವೆಚ್ಚ ಮಾಡಲಾಗುವುದು ಎಂದು ಚಂಪತ್ ರೈ ಹೇಳಿದರು. ಪ್ರಮುಖ ಹಿಂದೂ ಧರ್ಮದರ್ಶಿಗಳ ವಿಗ್ರಹಗಳಿಗೆ ಸ್ಥಳಾವಕಾಶ ಕಲ್ಪಿಸಲಾಗುವುದು ಎಂದು ಉಲ್ಲೇಖಿಸಿದರು.
ದೇವಾಲಯದ ನಿರ್ಮಾಣ ಹೇಗಿರಲಿದೆ?:
ರಾಮ ಮಂದಿರ ದೇವಾಲಯದ ನಿರ್ಮಾಣದ ಉಸ್ತುವಾರಿ ಹೊತ್ತ ರಾಮಜನ್ಮಭೂಮಿ ಟ್ರಸ್ಟ್ ಪ್ರಕಾರ ರಾಜಸ್ಥಾನದ ಮಕ್ರಾನಾ ಬೆಟ್ಟಗಳಿಂದ ಬಿಳಿ ಅಮೃತಶಿಲೆಗಳನ್ನು ಗರ್ಭಗುಡಿಯಲ್ಲಿ ಬಳಸಲಾಗುವುದು ಎಂದು ಹೇಳಿದೆ. ದೇವಾಲಯದ ಯೋಜನೆಗೆ 8 ರಿಂದ 9 ಲಕ್ಷ ಕ್ಯೂಬಿಕ್ ಅಡಿ ಕೆತ್ತಿದ ಮರಳುಗಲ್ಲು, 6.37 ಲಕ್ಷ ಕ್ಯೂಬಿಕ್ ಅಡಿ ಕೆತ್ತಿದ ಗ್ರಾನೈಟ್, 4.70 ಲಕ್ಷ ಕ್ಯೂಬಿಕ್ ಅಡಿ ಕೆತ್ತಿದ ಗುಲಾಬಿ ಮರಳುಗಲ್ಲು ಮತ್ತು 13,300 ಕ್ಯೂಬಿಕ್ ಅಡಿ ಮಕ್ರಾನ ಬಿಳಿ ಕೆತ್ತಿದ ಅಮೃತಶಿಲೆಯನ್ನು ದೇವಾಲಯದ ಯೋಜನೆಗೆ ಬಳಸಲಾಗುವುದು ಎಂದು ದೇವಾಲಯದ ಟ್ರಸ್ಟ್ ತಿಳಿಸಿದೆ.












Click it and Unblock the Notifications