Independence Day: ಬೆಂಗಳೂರಿಗರೇ ಈ ರಸ್ತೆಗಳಲ್ಲಿ ನಾಳೆ ಟ್ರಾಫಿಕ್ ಪಕ್ಕಾ!
ಭಾರತೀಯರಿಗೆ ನಾಳೆ ಹೆಮ್ಮೆಯ ದಿನ, ಶತಕೋಟಿ ಭಾರತೀಯರು ದೇಶಕ್ಕಾಗಿ ಮಡಿದಿರುವ ಮಹಾತ್ಮರನ್ನು ನೆನೆಯುವ ದಿನ. ಹೀಗೆ ನಾಳೆ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ರಜೆಯು ಸಿಗಲಿದೆ. ರಜೆ ಇರುವ ಕಾರಣಕ್ಕೆ ಬೆಂಗಳೂರಿನ ವಿವಿಧೆಡೆ ಟ್ರಾಫಿಕ್ ಜಾಮ್ ಉಂಟಾಗುವ ಸಾಧ್ಯತೆ ಇದೆ. ಅದ್ರಲ್ಲೂ ಪ್ರಮುಖವಾಗಿ ಈ ರಸ್ತೆಗಳಿಗೆ ನಾಳೆ ನೀವು ಹೋಗುವ ಮೊದಲು ಒಮ್ಮೆ ಯೋಚಿಸಿ ನೋಡಿ.
ಬೆಂಗಳೂರಿನಲ್ಲಿ ನಾಳೆ ಅದ್ಧೂರಿಯಾಗಿ ಸ್ವಾತಂತ್ರ್ಯ ದಿನಾಚರಣೆ ಆಚರಿಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಸ್ವಾತಂತ್ರ್ಯ ದಿನಾಚರಣೆ ರಾಜ್ಯಮಟ್ಟದ ಸಮಾರಂಭಕ್ಕೆ ಬೆಂಗಳೂರಿನ ಮಾಣಿಕ್ ಷಾ ಪರೇಡ್ ಮೈದಾನ ಸಜ್ಜಾಗಿದೆ. ಆಗಸ್ಟ್ 15 ರಂದು ಬೆಳಗ್ಗೆ 8.58 ಕ್ಕೆ ಸಮಾರಂಭ ಶುರುವಾಗಲಿದ್ದು 9 ಗಂಟೆಗೆ ಧ್ವಜಾರೋಹಣ ನೆರವೇರಲಿದೆ. ಆದರೆ ನಾಳೆ ಟ್ರಾಫಿಕ್ ಜಾಮ್ ಕಡಿಮೆ ಇರಬಹುದು ಅಂತಾ ಅಂದುಕೊಂಡಿದ್ದೀರಾ? ಇಲ್ಲ.. ಚಾನ್ಸೆ ಇಲ್ಲ.. ನಾಳೆ ರಜೆ ಇದ್ದರೂ ಕೆಲ ರಸ್ತೆಗಳಲ್ಲಿ ಪಕ್ಕಾ ಟ್ರಾಫಿಕ್ ಸಮಸ್ಯೆ ಎದುರಾಗಬಹುದು. ಇದಕ್ಕೆ ಕಾರಣ ತಿಳಿಯೋಣ ಬನ್ನಿ.

ಬೆಂಗಳೂರಿನಲ್ಲಿ ನಾಳೆ ಟ್ರಾಫಿಕ್ ಸಮಸ್ಯೆ?
ಇನ್ನು ನಾಳೆ ಧ್ವಜಾರೋಣದ ನಂತರ ಸಿಎಂ ತೆರೆದ ಜೀಪಿನಲ್ಲಿ ಪೆರೇಡ್ ಪರಿವೀಕ್ಷಣೆ ಮತ್ತು ಗೌರವ ರಕ್ಷೆ ಸ್ವೀಕರಿಸಿ ಸ್ವಾತಂತ್ರ್ಯೋತ್ಸವದ ಸಂದೇಶ ನೀಡಲಿದ್ದಾರೆ. ಆದರೆ ಇದೇ ಹೊತ್ತಲ್ಲಿ ರಜೆ ಇರುವ ಕಾರಣ ಅಲ್ಲಲ್ಲಿ ಸುತ್ತಾಡಲು ಜನ ಕೂಡ ಸಿದ್ಧತೆ ನಡೆಸಿದ್ದು, ಈ ರಸ್ತೆಗಳಲ್ಲಿ ಸಂಚಾರ ಬಂದ್ ಆಗಬಹುದು ಇಲ್ಲ ಭಾರಿ ಪ್ರಮಾಣದಲ್ಲಿ ಟ್ರಾಫಿಕ್ ಎದುರಾಗಬಹುದು. ಆ ಪೈಕಿ ಬೆಂಗಳೂರಿನ ಲಾಲ್‌ಬಾಗ್ ಸುತ್ತಮುತ್ತಲ ರಸ್ತೆಗಳು & ಸ್ವಾತಂತ್ರ್ಯ ದಿನಾಚರಣೆಯ ಕಾರ್ಯಕ್ರಮ ನಡೆಯಲಿರುವ ಮಾಣಿಕ್ ಷಾ ಪರೇಡ್ ಮೈದಾನದ ಸುತ್ತಮುತ್ತಲ ರಸ್ತೆಗಳಲ್ಲಿ ಟ್ರಾಫಿಕ್ ಕಾಟ ಎದುರಾಗಬಹುದು.
ಲಾಲ್‌ಬಾಗ್ ಫ್ಲವರ್ ಶೋ ನಾಳೆಗೆ ಅಂತ್ಯ!
ಪ್ರಮುಖವಾಗಿ ಇಡೀ ಜಗತ್ತಿನ ಗಮನ ಸೆಳೆದಿರುವ ಲಾಲ್‌ಬಾಗ್ ಫ್ಲವರ್ ಶೋ ನಾಳೆ ಅಂತ್ಯ ಕಾಣಲಿದೆ. ಹೀಗಾಗಿ ಕೊನೇ ದಿನ ಲಕ್ಷಾಂತರ ಜನರು ಫ್ಲವರ್ ಶೋ ಕಣ್ತುಂಬಿಕೊಳ್ಳಲು ಈ ಜಾಗಕ್ಕೆ ಬರುವ ಸಾಧ್ಯತೆ ಇದ್ದು, ಕುಟುಂಬ ಸಮೇತರಾಗಿ ಜನ ಬರಲಿರುವ ಹಿನ್ನೆಲೆಯಲ್ಲಿ ಟ್ರಾಫಿಕ್ ಕಿರಿಕಿರಿ ಪಕ್ಕಾ. ಈಗಾಗಲೇ ಟ್ರಾಫಿಕ್ ಪೊಲೀಸ್ರು ಕೂಡ ಲಾಲ್‌ಬಾಗ್ ಸುತ್ತಮುತ್ತ ಸಂಚಾರ ದಟ್ಟಣೆ ನಿಯಂತ್ರಿಸಲು ಕ್ರಮ ಕೈಗೊಂಡಿದ್ದಾರೆ. ಆದರೂ ನಾಳೆ ಜನರ ಆಗಮನ ಹೆಚ್ಚಳವಾಗುವ ಸಾಧ್ಯತೆ ಇದ್ದು ಲಾಲ್‌ಬಾಗ್ ಸುತ್ತಮುತ್ತಲ ಜಾಗದಲ್ಲಿ ತೆರಳದೇ ಬೇರೆಯ ರಸ್ತೆ ಆಯ್ಕೆ ಮಾಡಿಕೊಳ್ಳುವುದು ಉತ್ತಮ.
ಮಾಣಿಕ್ ಷಾ ಪರೇಡ್ ಮೈದಾನ
ಬೆಂಗಳೂರಿನ ಹೃದಯ ಭಾಗದಲ್ಲಿರುವ ಮಾಣಿಕ್ ಷಾ ಪರೇಡ್ ಮೈದಾನ ಕೂಡ ನಾಳೆಯ ಕೇಂದ್ರಬಿಂದು. ರಾಜ್ಯದಲ್ಲಿ ಸ್ವಾತಂತ್ರ್ಯ ಸಂಭ್ರಮ ಅಧಿಕೃತವಾಗಿ ಹಾಗೂ ಅದ್ಧೂರಿಯಾಗಿ ಈ ಮೈದಾನದಲ್ಲಿ ನಡೆಯಲಿದೆ. ಸಿಎಂ ಸಿದ್ದರಾಮಯ್ಯ ರಾಜ್ಯದ ಜನರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಹೀಗಾಗಿ ಮಾಣಿಕ್ ಷಾ ಪರೇಡ್ ಮೈದಾನ ಸುತ್ತಮುತ್ತಲೂ ಸಾಕಷ್ಟು ಸಂಚಾರ ಬದಲಾವಣೆ ಮಾಡಬಹುದು. ಅಕಸ್ಮಾತ್ ಸಂಚಾರ ಬದಲಾವಣೆ ಇಲ್ಲದಿದ್ದರೂ ಟ್ರಾಫಿಕ್ ಸಮಸ್ಯೆ ಎದುರಾಗಬಹುದು. ಇದೇ ಕಾರಣಕ್ಕಾಗಿ ನಾಳೆ ಮಾಣಿಕ್ ಷಾ ಪರೇಡ್ ಮೈದಾನದ ಸುತ್ತಮುತ್ತಲ ರಸ್ತೆಗಳನ್ನು ಸ್ವಲ್ಪ ಅವೈಡ್ ಮಾಡಿ.

ಹೇಗಿರಲಿದೆ ಕರ್ನಾಟಕದ ಸ್ವಾತಂತ್ರ್ಯ ಸಂಭ್ರಮ?
ಇನ್ನು ನಾಳೆ ಅದ್ಧೂರಿಯಾಗಿ ಸ್ವಾತಂತ್ರ್ಯ ದಿನಾಚರಣೆ ನಡೆಸೋಕೆ ಸರ್ಕಾರ ಸಕಲ ಸಿದ್ಧತೆ ನಡೆಸಿದೆ. ನಾಳಿನ ಪಂಥಸಂಚಲನದಲ್ಲಿ ಕೆಎಸ್‌ಆರ್‌ಪಿ, ಸಿಆರ್‌ಪಿಎಫ್ ಸೇರಿ ಬಿಎಸ್‌ಎಫ್, ಸಿಎಆರ್, ಕೆಎಸ್‌ಐಎಸ್‌ಎಫ್, ಟ್ರಾಫಿಕ್ ಪೊಲೀಸ್, ಮಹಿಳಾ ಪೊಲೀಸ್ ಹಾಗೂ ಟ್ರಾಫಿಕ್ ವಾರ್ಡನ್, ಅಗ್ನಿಶಾಮಕ ದಳ ಸಿಬ್ಬಂದಿ, ಡಾಗ್ ಸ್ಕ್ವಾಡ್ ಮತ್ತು ಬ್ಯಾಂಡ್ ನ ಹಾಗೂ ವಿವಿಧ ಶಾಲೆಗಳ ಮಕ್ಕಳ ಕವಾಯತು ಸೇರಿ 38 ತುಕಡಿಗಳಲ್ಲಿ 1,350 ಜನರು ಭಾಗವಹಿಸಲಿದ್ದಾರೆ.
ಬೆಂಗಳೂರು ಉತ್ತರ ವಲಯದ ಹೇರೋಹಳ್ಳಿಯ BBMP ಸಂಯುಕ್ತ ಪದವಿ ಪೂರ್ವ ಕಾಲೇಜಿನ 700 ಮಕ್ಕಳಿಂದ 'ವೀರ ಭೂಮಿ ವಿಧುರಾಶ್ವತ್ಥ ಧ್ವಜ ಸತ್ಯಾಗ್ರಹ' ಹಾಗೂ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ 50 ಮಕ್ಕಳಿಂದ 'ರೋಪ್ ಸ್ಕಿಪಿಂಗ್' ಕಾರ್ಯಕ್ರಮ ನಡೆಯಲಿದೆ. ಎಂಇಜಿ ಸೆಂಟರ್ ತಂಡ ಕಲಾರಿಪಯಟ್ಟು, ಎಎಸ್‌ಸಿ ತಂಡ ಟೆಂಟ್ ಪೆಗ್ಗಿಂಗ್ ಹಾಗೂ ಎಎಸ್‌ಸಿ ತಂಡ ಮೊಟರ್ ಸೈಕಲ್ ಸಹಾಸ ಪ್ರದರ್ಶನ ನಡೆಸಲಿದೆ.
ಬೆಂಗಳೂರು ನಗರದಲ್ಲಿ ಬಿಗಿ ಬಂದೋಬಸ್ತ್
ಸ್ವಾತಂತ್ರ್ಯ ದಿನಾಚರಣೆಗೆ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ. 1,000ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ಭದ್ರತೆ ಕಾರ್ಯಕ್ಕೆ ನಿಯೋಜಿಸಲಾಗಿದೆ. ಬೆಂಗಳೂರಿನ ಎಲ್ಲ ವಿಭಾಗಗಳಿಂದ 9 ಡಿಸಿಪಿ, 15 ಎಸಿಪಿ, 43 ಪಿಐ, 110 ಪಿಎಸ್ ಐ/ ಮ.ಪಿಎಸ್ ಐ, 72 ಎ.ಎಸ್.ಐ, 554 ಎಚ್‌ಸಿ/ಪಿಸಿ ಮತ್ತು 70 ಮಹಿಳಾ ಸಿಬ್ಬಂದಿ ಜೊತೆ 157 ಸಿವಿಲ್ ಡ್ರೆಸ್ ಅಧಿಕಾರಿ & ಸಿಬ್ಬಂದಿ ಮತ್ತು 56 ಕ್ಯಾಮರಾ ಸಿಬ್ಬಂದಿಯನ್ನ ಈ ಬಂದೋಬಸ್ತ್ ಕಾರ್ಯಕ್ಕೆ ನಿಯೋಜಿಸಲಾಗಿದೆ. ಕಾರ್ಯಕ್ರಮ ನಡೆಯಲಿರುವ ಮೈದಾನದ ಬಂದೋಬಸ್ತ್ ಕರ್ತವ್ಯಕ್ಕಾಗಿ 10 ಕೆಎಸ್‌ಆರ್‌ಪಿ & ಸಿಎಆರ್ ತುಕಡಿ, 2 ಅಗ್ನಿ ಶಾಮಕ ವಾಹನ, 2 ಅಂಬುಲೆನ್ಸ್, 4 ಖಾಲಿ ವಾಹನ, 1 ಕ್ಷಿಪ್ರ ಕಾರ್ಯಾಚರಣೆ ಪಡೆ, 1 ಡಿ ಸ್ವಾಟ್, 1 ಆರ್‌ಐವಿ ಭದ್ರತಾ ವ್ಯವಸ್ಥೆಗೆ ನಿಯೋಜಿಸಲಾಗಿದೆ.

ಮೈದಾನದಲ್ಲೂ ಭಾರಿ ಭದ್ರತಾ ವ್ಯವಸ್ಥೆ
ಮಾಣಿಕ್ ಷಾ ಪರೇಡ್ ಮೈದಾನದ ಸುತ್ತ ಭದ್ರತೆ & ಸುರಕ್ಷತೆಗಾಗಿ 100 ಸಿಸಿ ಕ್ಯಾಮೆರಾ ವ್ಯವಸ್ಥೆ ಹಾಗೂ 3 ಬ್ಯಾಗೇಜ್ ಸ್ಕ್ಯಾನರ್, 20 ಡಿಎಫ್‌ಎಂಡಿ ಮತ್ತು 40 ಎಚ್‌ಹೆಚ್‌ಎಂಡಿ ಅಳವಡಿಸಿ ಅಗತ್ಯ ಮುನ್ನೆಚ್ಚರಿಕೆ ಕೈಗೊಳ್ಳಲಾಗಿದೆ. ಮತ್ತು ವ್ಯವಸ್ಥಿತ ಸಂಚಾರ ನಿಯಂತ್ರಣ ವ್ಯವಸ್ಥೆಯು ಕೂಡ ಜಾರಿಯಲ್ಲಿ ಇರಲಿದೆ. ಆಕಸ್ಮಿಕ ಬೆಂಕಿ ಅವಘಡಗಳನ್ನು ನಿಭಾಯಿಸಲು ಅಗ್ನಿ ಶಾಮಕ ವಾಹನಗಳೊಂದಿಗೆ ಸಾಕಷ್ಟು ಸಿಬ್ಬಂದಿ ನಿಯೋಜಿಸಲಾಗಿದೆ. ಕಾರ್ಯಕ್ರಮಕ್ಕೆ ಆಗಮಿಸುವ ಪ್ರತಿಯೊಬ್ಬರು ಪಾಸು ಮತ್ತು ಗುರುತಿನ ಚೀಟಿ ಹೊಂದಿರಬೇಕು. ಪರ್ಸ್ ಹಾಗೂ ಮೊಬೈಲ್‌ನ ಹೊರೆತುಪಡಿಸಿ ಬೇರೆ ಯಾವುದೇ ವಸ್ತುಗಳನ್ನು ಕಾರ್ಯಕ್ರಮಕ್ಕೆ ತರದಂತೆ ನಿಷೇಧಿಸಲಾಗಿದೆ.
ಒಟ್ನಲ್ಲಿ ನಾಳೆ ಕರ್ನಾಟಕದ ರಾಜಧಾನಿ ಬೆಂಗಳೂರು ಏಳು ಸುತ್ತಿನ ಕೋಟೆಯಾಗಲಿದ್ದು, ಸ್ವಾತಂತ್ರ್ಯ ದಿನದ ಸಂಭ್ರಮಕ್ಕೆ ಅಡ್ಡಿ ಆತಂಕ ಎದುರಾಗದಂತೆ ಕ್ರಮ ಕೈಗೊಳ್ಳಲಾಗಿದೆ. ಈಗಾಗಲೇ ಹಲವು ರಸ್ತೆಗಳಲ್ಲಿ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದು, ಸೂಕ್ಷ್ಮ ಪ್ರದೇಶಗಳಲ್ಲೂ ಸಕಲ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಹೀಗಾಗಿ ಜನರ ದಟ್ಟಣೆ ಹೆಚ್ಚಿರುವ ಜಾಗದಲ್ಲಿ ಭಾರಿ ಭದ್ರತೆ ಕೈಗೊಳ್ಳಲಾಗಿದೆ. ಹೆಚ್ಚಿನ ಮಟ್ಟದಲ್ಲಿ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ.
-
Bagalkote: ಮನೆಗೆ ಯಾರನ್ನೂ ಸೇರಿಸದ ವೀರಣ್ಣ ಚರಂತಿಮಠ ಶಾಸಕರಾಗಲೂ ಲಾಯಕ್ಕಾ?: ಸಿದ್ದರಾಮಯ್ಯ -
GST: ಕಾಂಗ್ರೆಸ್ ಜನರ ಪರವೋ ಅಥವಾ ಹೆಚ್ಚಿನ ತೆರಿಗೆ ದರದ ಪರವೋ? ಮಾಜಿ ಸಿಎಂ ನೇರ ಪ್ರಶ್ನೆ -
ಸಿದ್ದರಾಮಯ್ಯ ವಿರುದ್ಧ ಆರ್. ಅಶೋಕ್ ತೀವ್ರ ವಾಗ್ದಾಳಿ: ರಾಜಕೀಯದಲ್ಲಿ ಹೊಸ ವಿವಾದ -
ಗ್ಯಾರಂಟಿ ಯೋಜನೆಗಳು ಕಾಂಗ್ರೆಸ್ ಕೈ ಹಿಡಿಯುತ್ತವೆ: ಸಿದ್ದರಾಮಯ್ಯ ಹೇಳಿಕೆ -
ಬಾಗಲಕೋಟೆಯಲ್ಲಿ ಕಾಂಗ್ರೆಸ್ಗೆ ಪೂರಕ ವಾತಾವರಣ: ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದ ಸಿಎಂ -
Rameshwaram Cafe: ರಾಮೇಶ್ವರಂ ಕೆಫೆ ಪಾರ್ಸಲ್ - ಬ್ಯಾಗ್ ತುಂಬಾ ದುಬಾರಿ ಕಣ್ರೀ: ಸೋಷಿಯಲ್ ಮೀಡಿಯಾ ವೈರಲ್ ಪೋಸ್ಟ್ -
ವೈಭವ್ ಸೂರ್ಯವಂಶಿ ಆಕ್ರಮಣಕಾರಿ ಆಟಕ್ಕೆ ಇಂಗ್ಲೆಂಡ್ ಮೈಕೆಲ್ ವಾಘನ್ ಫಿದಾ; ಬಿಸಿಸಿಐಗೆ ವಿಶೇಷ ಮನವಿ -
Viral Video: ವಿದೇಶಿ ಛಾಯಾಗ್ರಾಹಕರ ಫೋಟೋಗ್ರಫಿ ಹುಚ್ಚುತನಕ್ಕೆ ಜೀವ ಕಳೆದುಕೊಂಡಿತೇ ಭಾರತದ ಮುದ್ದಾದ ಆನೆ, ಏನಿದು ಚರ್ಚೆ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ











Click it and Unblock the Notifications