ಮಗ ಸತ್ತಿರುವ ಸುದ್ದಿ ಕೇಳುತ್ತಿದ್ದಂತೆ ಬಿಕ್ಕಳಿಸಿ ಅತ್ತ ಡಾನ್!
ಲಖನೌ: ಆತ ಒಬ್ಬ ಡಾನ್.. ಕೆಲ ವರ್ಷಗಳ ಹಿಂದೆ ಅವನ ಹೆಸರು ಕೇಳಿದರೆ ಸಾಕು ಜನ ಬೆಚ್ಚಿಬೀಳ್ತಿದ್ರು. ವ್ಯವಸ್ಥೆಯನ್ನೇ ತನ್ನ ಕೈಯಲ್ಲಿ ಹಿಡಿದು ಆಡಿಸುತ್ತಿದ್ದ ಆತ. ಆದರೆ ಕಾಲ ಬದಲಾಗಿದೆ, ಆತ ಕುಸಿದು ಬಿದ್ದು ಬಿಕ್ಕಿಬಿಕ್ಕಿ ಅತ್ತಿದ್ದಾನೆ. ಅಷ್ಟಕ್ಕೂ ತನ್ನ ಪುತ್ರ ಎನ್‌ಕೌಂಟರ್‌ನಲ್ಲಿ ಮೃತಪಟ್ಟ ಸುದ್ದಿ ಕೇಳಿ ಸಮಾಜವಾದಿ ಪಕ್ಷದ ರಾಜಕಾರಣಿ ಅತೀಕ್ ಅಹ್ಮದ್ ಗಳಗಳನೆ ಅತ್ತಿದ್ದಾನಂತೆ.
ಉಮೇಶ್ ಪಾಲ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿಯಾಗಿದ್ದ, ಸಮಾಜವಾದಿ ಪಕ್ಷದ ರಾಜಕಾರಣಿ ಅತೀಕ್ ಅಹ್ಮದ್ ಪುತ್ರ ಅಸಾದ್ ಅಹ್ಮದ್‌ನನ್ನು ಉತ್ತರ ಪ್ರದೇಶ ಪೊಲೀಸರು ಎನ್‌ಕೌಂಟರ್ ಮಾಡಿದ್ದಾರೆ. ತನ್ನ ಮಗ ಎನ್‌ಕೌಂಟರ್ ಆದ ಸುದ್ದಿ ಕೇಳಿ, ಕುಸಿದು ಬಿದ್ದು ಗಳಗಳನೇ ಅತ್ತಿದ್ದಾನಂತೆ ಗ್ಯಾಂಗ್‌ಸ್ಟರ್ ಅತೀಕ್. ಅಲ್ಲದೆ ಅತೀಕ್ ಅಹ್ಮದ್ ತನ್ನ ಮಗನ ಅಂತ್ಯಸಂಸ್ಕಾರದಲ್ಲಿ ಭಾಗವಹಿಸಲು ಅನುಮತಿ ನೀಡುವಂತೆ ಕೋರ್ಟ್‌ಗೆ ಮನವಿ ಮಾಡಿದ್ದಾನೆ ಎನ್ನಲಾಗಿದೆ. ಈ ಸುದ್ದಿ ಸದ್ಯ ಉತ್ತರ ಪ್ರದೇಶದಲ್ಲಿ ಸಂಚಲನ ಸೃಷ್ಟಿಸಿದೆ.

ಮೂಲೆ ಮೂಲೆಯಲ್ಲೂ ಹುಡುಕಾಟ
ಗೂಂಡಾಗಳ ಸಾಮ್ರಾಜ್ಯವಾಗಿರುವ ಉತ್ತರ ಪ್ರದೇಶದಲ್ಲಿ ರೌಡಿಸಂಗೆ ಬ್ರೇಕ್ ಹಾಕುವ ಕೆಲಸ ನಡೆಯುತ್ತಿದೆ. ಹೀಗಾಗಿ ಪೊಲೀಸರು ಮತ್ತು ಆರೋಪಿಗಳ ನಡುವೆ ವಾರ್ ಶುರುವಾಗಿದೆ. ಮತ್ತೊಂದ್ಕಡೆ ಉತ್ತರಪ್ರದೇಶದ ಝಾನ್ಸಿಯಲ್ಲಿ ಇವರ ಎನ್‌ಕೌಂಟರ್ ನಡೆದಿತ್ತು. ಘಟನೆಯಲ್ಲಿ ಅಸಾದ್ ಸಹಚರ ಗುಲಾಂ ಮೊಹಮ್ಮದ್ನನ್ನು ಕೂಡ ಹತ್ಯೆ ಮಾಡಲಾಗಿದೆ. ಉಮೇಶ್ ಪಾಲ್ ಹತ್ಯೆ ಪ್ರಕರಣದಲ್ಲಿ ಅಸಾದ್ ಮತ್ತು ಗುಲಾಂ ಪ್ರಮುಖ ಆರೋಪಿಗಳಾಗಿದ್ದರು. ಹೀಗಾಗಿ ಅವರ ಹುಡುಕಾಟಕ್ಕೆ ಉತ್ತರಪ್ರದೇಶ ಪೊಲೀಸರು ಬಲೆ ಬೀಸಿದ್ದರು.
₹5 ಲಕ್ಷ ಬಹುಮಾನ ಘೋಷಿಸಿದ್ದರು!
ಉಮೇಶ್ ಪಾಲ್ ಹತ್ಯೆ ಪ್ರಕರಣದಲ್ಲಿ ಅಸಾದ್ ಮತ್ತು ಗುಲಾಂ ಪ್ರಮುಖ ಆರೋಪಿಗಳಾಗಿದ್ದ ಹಿನ್ನೆಲೆಯಲ್ಲಿ ಇವರನ್ನು ಹಿಡಿಯಬೇಕಾದ ಒತ್ತಡದಲ್ಲಿ ಪೊಲೀಸರು ಇದ್ದರು. ಹೀಗಾಗಿ ಆರೋಪಿಗಳ ಬಗ್ಗೆ ಸುಳಿವು ಕೊಟ್ಟವರಿಗೆ ತಲಾ ₹5 ಲಕ್ಷ ಬಹುಮಾನ ಘೋಷಿಸಿ, ಸ್ಥಳೀಯರ ಬಳಿ ಮನವಿ ಮಾಡಲಾಗಿತ್ತು. ಮತ್ತೊಂದ್ಕಡೆ ಹುಡುಕಾಟ ಸಾಗಿರುವಾಗಲೇ ಆರೋಪಿಗಳನ್ನು ಉತ್ತರ ಪ್ರದೇಶದ ಎಸ್‌ಟಿಎಫ್ ತಂಡ ಎನ್‌ಕೌಂಟರ್ ಮಾಡಿದೆ. ಈ ಬಗ್ಗೆ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ವಿಶೇಷ ಹೆಚ್ಚುವರಿ ಮಹಾನಿರ್ದೇಶಕ ಪ್ರಶಾಂತ್ ಕುಮಾರ್ ಮಾಹಿತಿ ನೀಡಿದ್ದಾರೆ.

ಏನಿದು ಪ್ರಕರಣದ ಹಿನ್ನೆಲೆ?
ಅಂದಹಾಗೆ ಉಮೇಶ್ ಪಾಲ್ ಹತ್ಯೆ ಪ್ರಕರಣ ಉತ್ತರ ಪ್ರದೇಶದ ಇತಿಹಾಸದಲ್ಲೇ ಭಾರಿ ಸದ್ದು ಮಾಡಿತ್ತು. ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ 2005ರಲ್ಲಿ ನಡೆದಿದ್ದ ಬಿಎಸ್‌ಪಿ ಶಾಸಕ ರಾಜು ಪಾಲ್ ಹತ್ಯೆಯ ಪ್ರಮುಖ ಸಾಕ್ಷಿಯಾಗಿದ್ದ ಈ ಉಮೇಶ್ ಪಾಲ್. ಹೀಗೆ ಉಮೇಶ್ ಪಾಲ್ ಅಪಹರಣ ಪ್ರಕರಣದಲ್ಲಿ ಮಾಫಿಯಾ ಡಾನ್ ಹಾಗೂ ಮಾಜಿ ಸಂಸದ ಅತೀಕ್ ಅಹ್ಮದ್ ಅಪರಾಧಿ ಎಂದು ಸಾಬೀತು ಕೂಡ ಆಗಿತ್ತು. ಅವರಿಗೆ ಉತ್ತರ ಪ್ರದೇಶದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಇತ್ತೀಚೆಗೆ ಜೀವಾವಧಿ ಶಿಕ್ಷೆ ಕೂಡ ವಿಧಿಸಿದೆ.
ಪತ್ನಿ ರಿವೇಂಜ್, ಡಾನ್ ಅಂದರ್
ಮತ್ತೊಂದು ಕಡೆ ಉಮೇಶ್ ಪಾಲ್ ಅವರ ಪತ್ನಿ ಜಯಪಾಲ್ ನೀಡಿದ್ದ ದೂರಿನ ಹಿನ್ನೆಲೆ ಅತೀಕ್ ಅಹ್ಮದ್ ಸೇರಿದಂತೆ ಆತನ ಸಹೋದರ ಅಶ್ರಫ್ ಹಾಗೂ ಅಸಾದ್ ಮತ್ತು ಗುಲಾಂ ಸೇರಿದಂತೆ ಇತರರ ವಿರುದ್ಧ ಕೇಸ್ ದಾಖಲಾಗಿತ್ತು. ಆರೋಪಿಗಳ ವಿರುದ್ಧ ಪೊಲೀಸರು ಐಪಿಸಿ ಸೆಕ್ಷನ್ 147, 302 ಮತ್ತು 307ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರು. ಅಲ್ಲದೆ ಬೆದರಿಕೆ ಒಡ್ಡಿದ ಆರೋಪದಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿತ್ತು. ಐಪಿಸಿ ಸೆಕ್ಷನ್ 147 ಗಲಭೆಗೆ ಸಂಬಂಧಿಸಿದಂತೆ, 302 ಕೊಲೆ ಹಾಗೂ 307 ಕೊಲೆಗೆ ಯತ್ನ ಆರೋಪದಡಿ ಎಫ್‌ಐಆರ್ ದಾಖಲಾಗಿತ್ತು.












Click it and Unblock the Notifications