100ನೇ ವಯಸ್ಸಿನಲ್ಲೂ ಕಪ್ಪು ಕೋಟು ತೊಟ್ಟು ಕೋರ್ಟ್ ಮೆಟ್ಟಿಲೇರುವ ಪಿ.ಬಿ. ಮೆನನ್: ನಿವೃತ್ತಿಯೇ ಇಲ್ಲದ ಗಿನ್ನೆಸ್ ಸಾಧನೆ
ಪಾಲಕ್ಕಾಡ್: ವಕೀಲ ವೃತ್ತಿ ಎಂದರೆ ಅದೊಂದು ಕೇವಲ ಉದ್ಯೋಗವಲ್ಲ, ಅದೊಂದು ಜವಾಬ್ದಾರಿ ಹಾಗೂ ಕಕ್ಷಿದಾರರು ಇಡುವ ಅಪಾರ ನಂಬಿಕೆ ಎಂಬುದನ್ನ ಕೇರಳದ ಪಾಲಕ್ಕಾಡ್‌ನ ಪಿ.ಬಿ. ಮೆನನ್ ಸಾಬೀತುಪಡಿಸಿದ್ದಾರೆ. 100 ವರ್ಷ ವಯಸ್ಸಾದರೂ ನಿವೃತ್ತಿ ಎಂಬ ಪದ ಅವರ ಡಿಕ್ಷನರಿಯಲ್ಲಿಯೇ ಇಲ್ಲ.
ಎಂಟು ದಶಕಗಳ ಹಿಂದೆ ಕಪ್ಪು ಕೋಟು ತೊಟ್ಟಿದ್ದ ಅವರು ಇಂದಿಗೂ ತಮ್ಮ ವಕೀಲ ವೃತ್ತಿಯನ್ನ ಅದೇ ಹುಮ್ಮಸ್ಸಿನಿಂದ ಮುಂದುವರಿಸಿದ್ದಾರೆ. ಅವರ ಈ ಅಸಾಧಾರಣ ಬದ್ಧತೆ ಇಂದಿನ ಯುವ ಪೀಳಿಗೆಗೆ ದೊಡ್ಡ ಮಾದರಿ.

ಸುದೀರ್ಘ ವಕೀಲ ವೃತ್ತಿಯ ದಾಖಲೆ
ಗಿನ್ನೆಸ್ ದಾಖಲೆಯ ವಕೀಲ ಪಿ.ಬಿ. ಮೆನನ್ ಅವರು ವಿಶ್ವದಲ್ಲೇ ಅತಿ ಹೆಚ್ಚು ಕಾಲ ವಕೀಲರಾಗಿ ಸೇವೆ ಸಲ್ಲಿಸಿದ ಕೀರ್ತಿಗೆ ಭಾಜನರಾಗಿದ್ದಾರೆ. ಮೂರು ವರ್ಷಗಳ ಹಿಂದೆಯೇ ಅವರು 73 ವರ್ಷ, 60 ದಿನಗಳ ಕಾಲ ವೃತ್ತಿ ನಡೆಸಿ ದಾಖಲೆ ಬರೆದಿದ್ದರು.
ಈ ಮೂಲಕ ಜಿಬ್ರಾಲ್ಟರ್‌ನ ವಕೀಲ ಲೂಯಿಸ್ ಟ್ರಿಯಾಯ್ (70 ವರ್ಷ 311 ದಿನಗಳು) ಅವರ ದಾಖಲೆಯನ್ನ ಮುರಿದಿದ್ದರು. ಅಂದಿನಿಂದ ಇಂದಿನವರೆಗೂ ಅವರು ತಮ್ಮ ಕಾನೂನು ಸೇವೆಯನ್ನ ನಿರಂತರವಾಗಿ ಮಾಡುತ್ತಲೇ ಬಂದಿದ್ದು, ತಮ್ಮದೇ ಆದ ದಾಖಲೆಯನ್ನ ಮತ್ತಷ್ಟು ಎತ್ತರಕ್ಕೆ ಕೊಂಡೊಯ್ದಿದ್ದಾರೆ.
100ನೇ ವರ್ಷದ ಸಂಭ್ರಮ ಹಾಗೂ ಪ್ರಧಾನಿ ಮೋದಿ ಶುಭಾಶಯ
ಅಕ್ಟೋಬರ್ 10, 2026 ರಂದು ಪಿ.ಬಿ. ಮೆನನ್ ಅವರು ತಮ್ಮ 100ನೇ ಹುಟ್ಟುಹಬ್ಬವನ್ನ ಕುಟುಂಬಸ್ಥರು ಹಾಗೂ ಸ್ನೇಹಿತರೊಂದಿಗೆ ಅದ್ಧೂರಿಯಾಗಿ ಆಚರಿಸಿಕೊಂಡರು. ಈ ವಿಶೇಷ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮೆನನ್ ಅವರಿಗೆ ವಿಶೇಷ ಶುಭಾಶಯ ಪತ್ರ ಕಳುಹಿಸಿದ್ದಾರೆ.
"ನೂರು ವರ್ಷಗಳು ಒಂದು ಅದ್ಭುತ ಮೈಲಿಗಲ್ಲು. ಇಷ್ಟು ದೀರ್ಘಕಾಲದವರೆಗೆ ಜನರ ಸೇವೆಗಾಗಿ ತಮ್ಮ ಸಮಯ ಮತ್ತು ಶಕ್ತಿಯನ್ನ ಮುಡಿಪಾಗಿಡುವುದು ಅತ್ಯಂತ ಸ್ಪೂರ್ತಿದಾಯಕ" ಎಂದು ಪ್ರಧಾನಿ ಬಣ್ಣಿಸಿದ್ದಾರೆ. ನೂರಾರು ಜನರಿಗೆ ನ್ಯಾಯ ಒದಗಿಸಿದ ಅವರ ಅನುಭವವು ಭವಿಷ್ಯದ ವಕೀಲರ ಪೀಳಿಗೆಗೆ ಉತ್ತಮ ಮಾರ್ಗದರ್ಶನ ನೀಡಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಸಿವಿಲ್ ಕಾನೂನಿನತ್ತ ಒಲವು
1947ರಲ್ಲಿ ಪಾಲಕ್ಕಾಡ್‌ನ ಸರ್ಕಾರಿ ವಿಕ್ಟೋರಿಯಾ ಕಾಲೇಜಿನಲ್ಲಿ ಪದವಿ ಪಡೆದ ಮೆನನ್, ಚೆನ್ನೈನ ಮದ್ರಾಸ್ ಕಾನೂನು ಕಾಲೇಜಿನಲ್ಲಿ (ಈಗಿನ ಡಾ. ಅಂಬೇಡ್ಕರ್ ಸರ್ಕಾರಿ ಕಾನೂನು ಕಾಲೇಜು) ತಮ್ಮ ಕಾನೂನು ಅಧ್ಯಯನ ಮಾಡಿದರು. ಮದ್ರಾಸ್ ಹೈಕೋರ್ಟ್‌ನಲ್ಲಿ ಕೇವಲ ಎರಡು ವರ್ಷಗಳ ಕಾಲ ಪ್ರಾಕ್ಟೀಸ್ ಮಾಡಿ, ನಂತರ ತಮ್ಮ ತವರೂರಾದ ಪಾಲಕ್ಕಾಡ್‌ಗೆ ಮರಳಿದರು.
ಕೊಚ್ಚಿಯ ಉಪ-ನ್ಯಾಯಾಲಯದಲ್ಲಿ ಹಿರಿಯ ನ್ಯಾಯಾಧೀಶರೊಬ್ಬರು ನೀಡಿದ ಸಲಹೆಯು ಇವರ ವೃತ್ತಿಜೀವನಕ್ಕೆ ದೊಡ್ಡ ತಿರುವು ನೀಡಿತು. ಕಿರಿಯ ವಕೀಲರಾಗಿ ಕ್ರಿಮಿನಲ್ ಪ್ರಕರಣವೊಂದರಲ್ಲಿ ಗೆಲುವು ಸಾಧಿಸಿದಾಗ, ಆ ನ್ಯಾಯಾಧೀಶರು ಸಿವಿಲ್ ಕಾನೂನಿನ ಮೇಲೆ ಗಮನಹರಿಸುವಂತೆ ಸೂಚಿಸಿದ್ದರು. ಅಂದಿನಿಂದ ಸಿವಿಲ್ ವಕೀಲರಾಗಿ ಅವರು ಅಪಾರ ಹೆಸರು ಗಳಿಸಿದರು.
ನ್ಯಾಯಕ್ಕಾಗಿ ಸಮರ್ಪಣೆ
ಯಾವುದೇ ಪ್ರಕರಣವಿರಲಿ, ಅದರ ಪೂರ್ಣ ಅಧ್ಯಯನ ಹಾಗೂ ನಿಖರವಾದ ವಾದ ಮಂಡನೆ ಮೆನನ್ ಅವರ ಶೈಲಿಯಾಗಿದೆ. "ಪ್ರಕರಣ ಎಷ್ಟೇ ಚಿಕ್ಕದಾಗಿದ್ದರೂ ಅವರು ಅದಕ್ಕೆ ಸಂಪೂರ್ಣ ಗಮನ ನೀಡುತ್ತಾರೆ" ಎಂದು ಅವರ ಪುತ್ರಿ ಸುಭದ್ರಾ ಮುರಳೀಧರನ್ ಹೇಳುತ್ತಾರೆ. ಪಾಲಕ್ಕಾಡ್‌ನ ಪುತ್ತೂರಿನಲ್ಲಿರುವ ಅವರ 'ರೋಸ್ ಲ್ಯಾಂಡ್' ನಿವಾಸವು ವಕೀಲರು ಮತ್ತು ಕಕ್ಷಿದಾರರ ಭೇಟಿಯ ಪ್ರಮುಖ ತಾಣವಾಗಿದೆ.
ಹಿಂದಿನ ಉಪ ಪ್ರಾಸಿಕ್ಯೂಷನ್ ನಿರ್ದೇಶಕ ಪಿ. ಪ್ರೇಮನಾಥ್ ಹಾಗೂ ಬಿಜೆಪಿ ರಾಜ್ಯ ಖಜಾಂಚಿ ಇ. ಕೃಷ್ಣದಾಸ್ ಅವರಂತಹ ಗಣ್ಯರು ಮೆನನ್ ಅವರ ಸೇವಾ ಬದ್ಧತೆಯನ್ನ ಕೊಂಡಾಡಿದ್ದಾರೆ. ಅವರ ಅನೇಕ ಸಮಕಾಲೀನರು ನ್ಯಾಯಾಧೀಶರಾಗಿ ಬಡ್ತಿ ಪಡೆದರೂ, ಮೆನನ್ ಅವರು ಕಕ್ಷಿದಾರರ ನಂಬಿಕೆ ಉಳಿಸಿಕೊಳ್ಳುವ ಸಾಮಾನ್ಯ ವಕೀಲರಾಗಿಯೇ ಉಳಿಯಲು ಇಷ್ಟಪಟ್ಟರು.
100ನೇ ವಯಸ್ಸಿನಲ್ಲೂ ಕೋರ್ಟ್ ಕಲಾಪಗಳಲ್ಲಿ ಉತ್ಸಾಹದಿಂದ ಪಾಲ್ಗೊಳ್ಳುವ ಪಿ.ಬಿ. ಮೆನನ್, ವಕೀಲ ವೃತ್ತಿ ಮೌಲ್ಯಗಳಿಗೆ ಉದಾಹರಣೆಯಾಗಿದ್ದಾರೆ.


Click it and Unblock the Notifications
